ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ಮುನಿಸು ಮರೆತು ಒಂದಾಗುವರೇ ಎಂ.ಸಿ.ಸುಧಾಕರ್ –ಕೆ.ಎಚ್.ಮುನಿಯಪ್ಪ

Published 28 ಫೆಬ್ರುವರಿ 2024, 4:16 IST
Last Updated 28 ಫೆಬ್ರುವರಿ 2024, 4:16 IST
ಅಕ್ಷರ ಗಾತ್ರ

ಚಿಂತಾಮಣಿ: ಲೋಕಸಭೆ ಚುನಾವಣೆಯ ಈ ಹೊತ್ತಿನಲ್ಲಿ ರಾಜಕೀಯ ಕಡುವಿರೋಧಿಗಳಾಗಿರುವ ಸಚಿವರಾದ ಡಾ.ಎಂ.ಸಿ.ಸುಧಾಕರ್ ಮತ್ತು ಕೆ.ಎಚ್‌.ಮುನಿಯಪ್ಪ ‘ಮುನಿಸು’ ಮರೆಯುವರೇ ಎನ್ನುವ ಬಗ್ಗೆ ತಾಲ್ಲೂಕಿನಲ್ಲಿ ಚರ್ಚೆಗಳು ನಡೆದಿವೆ. 

ಚಿಂತಾಮಣಿ ಮತ್ತು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಗಳು ಚಿಕ್ಕಬಳ್ಳಾಪುರ ಜಿಲ್ಲೆಗೆ ಒಳಪಟ್ಟಿದ್ದರೂ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಸೇರುತ್ತದೆ. ಚಿಂತಾಮಣಿ ಶಾಸಕರಾದ ಸಚಿವ ಡಾ.ಎಂ.ಸಿ.ಸುಧಾಕರ್ ಎರಡೂ ಜಿಲ್ಲೆಯಲ್ಲಿ ಪ್ರಭಾವ ಹೊಂದಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾಸರಿ ಸಚಿವರಾಗಿರುವ ಕಾರಣ ಈ ಲೋಕಸಭಾ ಕ್ಷೇತ್ರದಲ್ಲಿ ಅವರ ಪ್ರಭಾವ ಅಧಿಕವಾಗಿದೆ. ಚಿಂತಾಮಣಿ, ಕೋಲಾರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವುದರಿಂದ ಅಲ್ಲಿಯೂ ಅವರು ಪ್ರಭಾವವಿದೆ.

ದೇವನಹಳ್ಳಿ ಶಾಸಕ ಹಾಗೂ ಸಚಿವ ಕೆ.ಎಚ್.ಮುನಿಯಪ್ಪ ಕೋಲಾರದಿಂದ 7 ಬಾರಿ ಸಂಸದರಾಗಿದ್ದರು. ಕಳೆದ ಲೋಕಸಭಾ ಚುನಾವಣೆಯವರೆಗೂ ಅವಳಿ ಜಿಲ್ಲೆಯಲ್ಲಿ ಉನ್ನತ ನಾಯಕ ಎನಿಸಿದ್ದರು. ಈಗ ಕೆ.ಎಚ್‌.ಮುನಿಯಪ್ಪ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಗ್ರಾಮಾಂತರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಸೇರುತ್ತವೆ.

ಈ ಎಲ್ಲ ಕಾರಣದಿಂದ ಈ ಇಬ್ಬರು ನಾಯಕರು ಲೋಕಸಭೆ ಚುನಾವಣೆಯಲ್ಲಿ ಕೋಲಾರ, ಬೆಂಗಳೂರು ಗ್ರಾಮಾಂತರ  ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಬೇಕಾಗಿದೆ. ಆದರೆ ಹಾವು ಮುಂಗುಸಿಯ ರೀತಿ ಇರುವ ಈ ಇಬ್ಬರು ಮುಖಂಡರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವರೇ ಎನ್ನುವ ಕುತೂಹಲ ರಾಜಕೀಯ ವಲಯದಲ್ಲಿ ಇದೆ. 

ಕೆ.ಎಚ್.ಮುನಿಯಪ್ಪ ಮತ್ತು ಡಾ.ಎಂ.ಸಿ.ಸುಧಾಕರ್ ಒಂದೇ ಪಕ್ಷದಲ್ಲಿದ್ದರೂ ರಾಜಕೀಯವಾಗಿ ಕಡುವಿರೋಧಿಗಳು. ಎರಡು ದಶಕಗಳಿಂದ ಸದಾ ಹಾವು-ಮುಂಗಸಿಯಂತೆ ಮುಸುಕಿನ ಗುದ್ದಾಟ ನಡೆಸುತ್ತಿದ್ದಾರೆ. 2013, 2018 ವಿಧಾನಸಭಾ ಚುನಾವಣೆಯಲ್ಲಿ ಡಾ.ಎಂ.ಸಿ ಸುಧಾಕರ್ ಸೋಲಿಗೆ ಕೆ.ಎಚ್.ಮುನಿಯಪ್ಪ ಕೆಲಸ ಮಾಡಿದ್ದರು. 2019 ರ ಲೋಕಸಭಾ ಚುನಾವಣೆಯಲ್ಲಿ ಡಾ.ಎಂ.ಸಿ.ಸುಧಾಕರ್ ನೇರವಾಗಿ ಅಖಾಡಕ್ಕೆ ಇಳಿದು ಕೆ.ಎಚ್.ಮುನಿಯಪ್ಪ ಅವರನ್ನು ಸೋಲಿಸುವ ಮೂಲಕ ಸೇಡು ತೀರಿಸಿಕೊಂಡಿದ್ದರು.

ಒಂದು ವರ್ಷದಿಂದ ಇಬ್ಬರೂ ಮೌನಕ್ಕೆ ಜಾರಿದ್ದಾರೆ. ಈ ಹಿಂದೆ ಪರಸ್ಪರ ಆರೋಪ–ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದರು. 

ಎಐಸಿಸಿ ಯಲ್ಲಿ ತಮಗಿರುವ ಪ್ರಭಾವದಿಂದ ಕೆ.ಎಚ್. ಮುನಿಯಪ್ಪ ಮೇಲೈಗೈ ಸಾಧಿಸುತ್ತಿದ್ದರು. ಇದರಿಂದ ರೋಸಿದ ಡಾ.ಎಂ.ಸಿ.ಸುಧಾಕರ್ 2013 ಮತ್ತು 2018 ರ ಚುನಾವಣೆಯಲ್ಲಿ, ಕಾಂಗ್ರೆಸ್ ನಾಯಕರು ಎಷ್ಟೇ ಒತ್ತಾಯ ಮಾಡಿದರೂ ಬಿ-ಫಾರಂ ಪಡೆಯದೆ ಪಕ್ಷೇತರರಾಗಿ ಸ್ಪರ್ಧಿಸಿ ಸೋಲುಂಡರು. ಪಕ್ಷ ಲೆಕ್ಕಿಸದೆ ಸುಧಾಕರ್ ಅವರನ್ನು ಸೋಲಿಸಲೇಬೇಕು ಎಂದು ಎರಡು ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪ ಜೆಡಿಎಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದರು ಎಂದು ಸುಧಾಕರ್ ಬೆಂಬಲಿಗರು ದೂರುತ್ತಾರೆ.

2019ರ ‌ಲೋಕಸಭಾ ಚುನಾವಣೆಯಲ್ಲಿ ಮುನಿಯಪ್ಪ ವಿರೋಧಿಗಳು ಒಗ್ಗೂಡಿ ಅವರನ್ನು ಸೋಲಿಸಿದರು. ಡಾ.ಎಂ.ಸಿ.ಸುಧಾಕರ್ ಪಕ್ಷದ ಹೊರಹೋಗಿದ್ದರಿಂದ ನೇರವಾಗಿ ಅಖಾಡಕ್ಕೆ ಇಳಿದಿದ್ದರು.  2023ರ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಡಾ.ಎಂ.ಸಿ.ಸುಧಾಕರ್ ಮತ್ತು ಕೊತ್ತೂರು ಮಂಜುನಾಥ್ ಎಐಸಿಸಿ ನಾಯಕರ ಸಮ್ಮುಖದಲ್ಲೇ ಕಾಂಗ್ರೆಸ್ ಸೇರಿದರು. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆದ ಚುನಾವಣೆಯಲ್ಲಿ ಎಂ.ಎಲ್.ಅನಿಲ್ ಕುಮಾರ್ ಗೆ ಟಿಕೆಟ್ ನೀಡಿ ಗೆಲ್ಲಿಸಿಕೊಂಡರು.

ಡಾ.ಎಂ.ಸಿ.ಸುಧಾಕರ್ ವಿಧಾನಸಭೆ ಚುನಾವಣೆಯ ಫ್ಲೆಕ್ಸ್, ಬ್ಯಾನರ್‌ಗಳಲ್ಲಿ ಕೆ.ಎಚ್.ಮುನಿಯಪ್ಪ ಭಾವಚಿತ್ರವನ್ನು ಬಳಸಲಿಲ್ಲ. ಪ್ರಚಾರದಲ್ಲಿ ಎಲ್ಲಿಯೂ ಅವರ ಹೆಸರನ್ನೇ ಪ್ರಸ್ತಾಪಿಸಲಿಲ್ಲ. 

ಲೋಕಸಭಾ ಚುನಾವಣೆ ಎದುರಾಗಿರುವುದರಿಂದ ಮತ್ತೆ ಇಬ್ಬರು ನಾಯಕರು ಪರಸ್ಪರ ಎದುರಾಗಬೇಕಾಗಿದೆ. ಚುನಾವಣೆಯ ಹೊಸ್ತಿಲಿನಲ್ಲಿ ಈ ಇಬ್ಬರು ಸಚಿವರು ಪರಸ್ಪರ ಮುನಿಸು ಮರೆಯುವರೇ ಎನ್ನುವ ಚರ್ಚೆ ಮತ್ತು ಕುತೂಹಲ ಅವಳಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಮತ್ತು ರಾಜಕೀಯ ವಲಯದಲ್ಲಿ ಇದೆ.

‘ಒಟ್ಟಿಗೆ ಕೆಲಸ ಮಾಡಬೇಕಿದೆ’

ನಾವಿಬ್ಬರು ಎದುರು ಬದುರಾಗದಿದ್ದ ಕಾಲ ಕಳೆದುಹೋಗಿದೆ. ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಬೇಕಿದೆ ಎಂದು ಎರಡು ದಿನಗಳ ಹಿಂದೆ ಡಾ.ಎಂ.ಸಿ.ಸುಧಾಕರ್ ಚಿಂತಾಮಣಿಯಲ್ಲಿ ಹೇಳಿದ್ದಾರೆ. ಇದು ಒಗ್ಗೂಡುವ ಮುನ್ಸೂಚನೆ ಎಂದು ವಿಶ್ಲೇಷಿಸಲಾಗುತ್ತಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT