ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ | ಲೋಕಸಭೆ ಚುನಾವಣೆ: ಸ್ಪರ್ಧೆಗೆ ಸಜ್ಜಾಗುತ್ತಿವೆ ತೃತೀಯ ಶಕ್ತಿಗಳು

Published 27 ಫೆಬ್ರುವರಿ 2024, 6:04 IST
Last Updated 27 ಫೆಬ್ರುವರಿ 2024, 6:04 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳು ಮತ್ತು ಸ್ಪರ್ಧೆ ಬಗ್ಗೆಯೇ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಹೆಚ್ಚು ಚರ್ಚೆಗಳಾಗುತ್ತಿವೆ. ಈ ನಡುವೆ ಚುನಾವಣೆಯ ಕಣಕ್ಕೆ ಧುಮುಕಲು ತೃತೀಯ ಶಕ್ತಿಗಳು ಸಹ ವೇದಿಕೆ ಸಜ್ಜುಗೊಳಿಸುತ್ತಿವೆ. 

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಹೆಜ್ಜೆ ಗುರುತುಗಳನ್ನು ನೋಡಿದರೆ ಸಿಪಿಎಂ ಮತ್ತು ಬಿಎಸ್‌ಪಿ ಪ್ರತಿ ಚುನಾವಣೆಯಲ್ಲಿ ‘ಪ್ರತಿರೋಧ’ಕ್ಕಾಗಿ ಮತ್ತು ತಮ್ಮ ವಿಚಾರಗಳನ್ನು ಜನರಿಗೆ ಸ್ಪಷ್ಟಪಡಿಸುವ ಉದ್ದೇಶದಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತಿವೆ. ಈ ಬಾರಿಯೂ ಈ ‘ಪ್ರಯೋಗ’ ಮಾಡಲು ಪಕ್ಷಗಳು ಮುಂದಾಗಿವೆ. 

ಕ್ಷೇತ್ರದಲ್ಲಿ ಜನತಾದಳ, ಬಿಜೆಪಿ ಮತ್ತು ಕಾಂಗ್ರೆಸ್ ಹೊರತುಪಡಿಸಿ ಉಳಿದ ಯಾವ ಪಕ್ಷಗಳೂ ಗೆಲುವು ಸಾಧಿಸಿಲ್ಲ. ಆದರೆ ಈ ಮೂರು ಪಕ್ಷಗಳ ಅಭ್ಯರ್ಥಿಗಳ ನಂತರ ಗರಿಷ್ಠ ಮತಗಳನ್ನು ಪಡೆಯುತ್ತಿರುವುದು ಸಿಪಿಎಂ ಮತ್ತು ಬಿಎಸ್‌ಪಿ ಅಭ್ಯರ್ಥಿಗಳು. 

ತೃತೀಯ ಶಕ್ತಿಗಳ ಸ್ಪರ್ಧೆ ಪ್ರಮುಖ ಪಕ್ಷಗಳ ಅಭ್ಯರ್ಥಿಗಳನ್ನು ವಿಚಲಿತಗೊಳಿಸುವುದು ಸತ್ಯ. ಯಾರ ಮತ ಬುಟ್ಟಿಗೆ ಸಣ್ಣ ಪ್ರಮಾಣದಲ್ಲಿಯಾದರೂ ಕೈ ಹಾಕುವರು ಎನ್ನುವ ಚರ್ಚೆಗಳು ಚುನಾವಣೆ ಸಮಯದಲ್ಲಿ ಆರಂಭವಾಗುತ್ತದೆ.

2024ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಈಗಾಗಲೇ ಸಿಪಿಎಂ, ಬಿಎಸ್‌ಪಿ ಸಿದ್ಧತೆ ಮಾಡಿಕೊಂಡಿವೆ. ಈಗಾಗಲೇ ಪ್ರಾಥಮಿಕ ಹಂತದಲ್ಲಿ ಪಕ್ಷಗಳು ಸಭೆಗಳನ್ನು ಸಹ ನಡೆಸಿವೆ.  

2019ರ ಲೋಕಸಭೆ ಚುನಾವಣೆಯಲ್ಲಿ ಸಿಪಿಎಂನಿಂದ ಸ್ಪರ್ಧಿಸಿದ್ದ ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್.ವರಲಕ್ಷ್ಮಿ 18,648 ಮತಗಳು ಮತ್ತು ಬಿಸ್‌ಪಿಯಿಂದ ಸ್ಪರ್ಧಿಸಿದ್ದ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ದ್ವಾರಕಾನಾಥ್ 23,446 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್–ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಂ. ವೀರಪ್ಪ ಮೊಯಿಲಿ ಮತ್ತು ಬಿಜೆಪಿಯ ಬಿ.ಎನ್. ಬಚ್ಚೇಗೌಡ ಅವರ ತರುವಾಯ ಗರಿಷ್ಠ ಮತಗಳನ್ನು ಈ ಇಬ್ಬರು ಅಭ್ಯರ್ಥಿಗಳು ಪಡೆದಿದ್ದರು.

2014ರ ಲೋಕಸಭೆ ಚುನಾವಣೆಯಲ್ಲಿ ಸಿಪಿಎಂನಿಂದ ಸ್ಪರ್ಧಿಸಿದ್ದ ಬಾಗೇಪಲ್ಲಿಯ ಜಿ.ವಿ.ಶ್ರೀರಾಮರೆಡ್ಡಿ ಅವರು 26,071 ಮತ್ತು ಬಿಎಸ್‌ಪಿಯಿಂದ ಕಣಕ್ಕೆ ಇಳಿದಿದ್ದ ಚೈತ್ರಾ ಪ್ರಸಾದ್ 6,279 ಮತಗಳನ್ನು ಪಡೆದಿದ್ದರು. ಬಾಗೇಪಲ್ಲಿ ಶಾಸಕರಾಗಿದ್ದ ಜಿ.ವಿ.ಶ್ರೀರಾಮರೆಡ್ಡಿ ತಮ್ಮ ಜೀವಿತದ ಕೊನೆಯವರೆಗೂ ಆಡಳಿತಾರೂಢ ಪಕ್ಷಗಳಿಗೆ ಪ್ರತಿರೋಧದ ನಾಯಕ ಎನಿಸಿದ್ದರು.

1999ರ ಚುನಾವಣೆಯಲ್ಲಿ ಸಿಪಿಎಂನಿಂದ ಪ್ರಾಂತ ರೈತ ಸಂಘದ ರಾಜ್ಯ ಅಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಕಣಕ್ಕೆ ಇಳಿದಿದ್ದರು. ಅಂತಿಮವಾಗಿ ಜೆಡಿಎಸ್ ಮತ್ತು ಸಿಪಿಎಂ ಹೊಂದಾಣಿಕೆ ಆಯಿತು. ಆದರೆ ನಾಮಪತ್ರ ವಾಪಸ್ ಪಡೆಯುವ ಅವಧಿ ಅಷ್ಟರಲ್ಲಿ ಪೂರ್ಣವಾಗಿತ್ತು. ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದರೂ ಸಿಪಿಎಂ, ಜೆಡಿಎಸ್ ಬೆಂಬಲಿಸುವಂತೆ ಕೋರಿತು. ಆದರೂ ಜಿ.ಸಿ.ಬಯ್ಯಾರೆಡ್ಡಿ 17,434 ಮತಗಳನ್ನು ಪಡೆದರು.

2009ರ ಲೋಕಸಭೆ ಚುನಾವಣೆಯಲ್ಲಿ ಬಿಎಸ್‌ಪಿಯಿಂದ ಕಣಕ್ಕೆ ಇಳಿದಿದ್ದ ಹೆಣ್ಣೂರು ಲಕ್ಷ್ಮಿನಾರಾಯಣ್ 14,629, 1998ರ ಚುನಾವಣೆಯಲ್ಲಿ ಬಿಎಸ್‌ಪಿಯ ಎನ್‌.ಶಿವಣ್ಣ 6,037 ಮತಗಳನ್ನು ಪಡೆದಿದ್ದರು. 

ಹೀಗೆ ಪ್ರತಿ ಲೋಕಸಭೆ ಚುನಾವಣೆಯಲ್ಲಿ ಸಿಪಿಎಂ ಮತ್ತು ಬಿಎಸ್‌ಪಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತವೆ. ಸಿಪಿಎಂ ಮೂರು ಚುನಾವಣೆಗಳಲ್ಲಿ ಮತ್ತು ಬಿಎಸ್‌ಪಿ ನಾಲ್ಕು ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿವೆ. ಈ ಬಾರಿಯೂ ಅಭ್ಯರ್ಥಿಗಳನ್ನು ಈ ಎರಡೂ ಪಕ್ಷಗಳು ಕಣಕ್ಕೆ ಇಳಿಸಲಿವೆ.  

‘ಗೌರಿಬಿದನೂರು ಮತ್ತು ಬಾಗೇಪಲ್ಲಿ ಕ್ಷೇತ್ರದಲ್ಲಿ ಈಗಾಗಲೇ ಪಕ್ಷದ ಸಂಘಟನಾ ಚಟುವಟಿಕೆಗಳು ನಡೆಯುತ್ತಿವೆ. ಚಿಕ್ಕಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ದೊಡ್ಡಬಳ್ಳಾಪುರ, ನೆಲಮಂಗಲದಲ್ಲಿಯೂ ಕಾರ್ಮಿಕ ಸಂಘಟನೆಗಳು ಸಕ್ರಿಯವಾಗಿವೆ. ನಾವು ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸಂಘಟನೆ ನಡೆಸುತ್ತಿದ್ದೇವೆ’ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನಿವೆಂಕಟಪ್ಪ ತಿಳಿಸಿದರು.

ಮೂರು ಚುನಾವಣೆಯಲ್ಲಿ ಸಿಪಿಎಂ, ನಾಲ್ಕು ಚುನಾವಣೆಯಲ್ಲಿ ಬಿಎಸ್‌ಪಿ ಸ್ಪರ್ಧೆ ಪ್ರಮುಖ ಪಕ್ಷಗಳ ಅಭ್ಯರ್ಥಿಗಳನ್ನು ವಿಚಲಿತಗೊಳಿಸುತ್ತವೆಯೇ ಪಕ್ಷಗಳು
‘ಅಭ್ಯರ್ಥಿ ಕಣಕ್ಕೆ ಇಳಿಸುತ್ತೇವೆ’
ರಾಜ್ಯದಲ್ಲಿಯೇ ಸಿಪಿಎಂಗೆ ತನ್ನದೇ ಆದ ನೆಲೆ ಇರುವ ಲೋಕಸಭಾ ಕ್ಷೇತ್ರ ಚಿಕ್ಕಬಳ್ಳಾಪುರ. ಆದ್ದರಿಂದ ಈ ಕ್ಷೇತ್ರದ ವ್ಯಾಪ್ತಿಯಲ್ಲಿ  ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಚಿಂತಿಸಲಾಗಿದೆ. ಈ ಬಗ್ಗೆ ರಾಜ್ಯ ಪಾಲಿಟ್ ಬ್ಯುರೊ ಸಭೆಯಲ್ಲಿಯೂ ಪ್ರಸ್ತಾಪಿಸಲಾಗಿದೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.  ‘ಇಂಡಿಯಾ’ ಮೈತ್ರಿಕೂಟವು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಸಿಪಿಎಂಗೆ ಬಿಟ್ಟುಕೊಡಬೇಕು ಎಂದು ಮನವಿ ಸಹ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಪಕ್ಷದ ನಾಯಕರು ಈ ಬಗ್ಗೆ ತೀರ್ಮಾನಕೈಗೊಳ್ಳುವರು ಎಂದು ಹೇಳಿದರು. *** 11ರ ಸಭೆಯಲ್ಲಿ ಅಭ್ಯರ್ಥಿ ನಿರ್ಧಾರ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಮಾ.11ರಂದು ದೇವನಹಳ್ಳಿಯಲ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಅಭ್ಯರ್ಥಿ ಆಯ್ಕೆ ಬಗ್ಗೆ ತೀರ್ಮಾನಿಸಲಾಗುತ್ತದೆ. ಬಹುಜನ ಸಮಾಜ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದು ಖಚಿತ ಎನ್ನುತ್ತಾರೆ ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಪಿ.ವಿ.ನಾಗಪ್ಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT