ಭಾನುವಾರ, ಫೆಬ್ರವರಿ 28, 2021
20 °C
ಸಾವಿಗೆ ಕಾರಣ ಇನ್ನೂ ನಿಗೂಢ

ಚಿಕ್ಕಬಳ್ಳಾಪುರ: ಕೊಕ್ಕರೆಗಳ ಸಾಮೂಹಿಕ ಅಂತ್ಯಸಂಸ್ಕಾರ

ಎ.ಎಸ್.ಜಗನ್ನಾಥ್ Updated:

ಅಕ್ಷರ ಗಾತ್ರ : | |

Prajavani

ಗೌರಿಬಿದನೂರು: ತಾಲ್ಲೂಕಿನ ಕಾದಲವೇಣಿ ಗ್ರಾಮದ ಕೆರೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಕೊಕ್ಕರೆಗಳ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿಯದೆ, ಸ್ಥಳೀಯ ‌ಜನತೆ ಆತಂಕದಲ್ಲಿದ್ದಾರೆ. ಈ ನಡುವೆ ಕೊಕ್ಕರೆಗಳನ್ನು ಸಾಮೂಹಿಕವಾಗಿ ಸಮಾಧಿ ಮಾಡಲಾಗಿದೆ.

ಗುರುವಾರ ಕಾದಲವೇಣಿ ಕೆರೆಯಲ್ಲಿ ಕೊಕ್ಕರೆಗಳ ಸಾಮೂಹಿಕ ಸಾವಿನ ಬಗ್ಗೆ ಆತಂಕಗೊಂಡ ಸ್ಥಳೀಯರನ್ನು ಅಧಿಕಾರಿಗಳು ಸಮಾಧಾನಪಡಿದಿದ್ದರು. ವಿಷಯ ಜಿಲ್ಲೆ ಹಾಗೂ ರಾಜ್ಯಮಟ್ಟದ ಅಧಿಕಾರಿಗಳ ಗಮನಕ್ಕೂ ಹೋಗಿದೆ. ಆದರೆ, ಕೊಕ್ಕರೆಗಳ ರಕ್ತ ಪರೀಕ್ಷೆಯ ವರದಿ ಬರುವವರೆಗೂ ಸಾವಿಗೆ ಕಾರಣ ತಿಳಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ಪಶು ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ತಿಪ್ಪೇಸ್ವಾಮಿ, ಉಪನಿರ್ದೇಶಕರಾದ ಡಾ.ಜನಾರ್ಧನ್, ತಾಲ್ಲೂಕು ‌ಸಹಾಯಕ ನಿರ್ದೇಶಕರಾದ ಡಾ.ಆರ್.ರಾಘವೇಂದ್ರ ಸೇರಿದಂತೆ ‌ಇನ್ನಿತರ ಇಲಾಖೆಯ ಅಧಿಕಾರಿಗಳು ಶುಕ್ರವಾರ ಬೆಳಿಗ್ಗೆ ಕೆರೆಯ ಬಳಿ ಬಂದು ಪರಿಶೀಲಿಸಿದರು. ಎರಡು–ಮೂರು ದಿನಗಳಿಂದ ಸತ್ತು‌ ನೀರು ಮತ್ತು ಜಾಲಿ ಮರಗಳಲ್ಲಿದ್ದ ಕೊಕ್ಕರೆಗಳನ್ನು ಹೊರತೆಗೆದು ಅವುಗಳಿಂದ ಯಾವುದೇ ಸೋಂಕು ಹರಡದಂತೆ ರಾಸಾಯನಿಕ ವಸ್ತುಗಳನ್ನು ಸಿಂಪಡಿಸಿ ಜೆಸಿಬಿ ಯಂತ್ರದ ಮೂಲಕ ಗುಂಡಿ ತೆಗೆದು ಅವುಗಳನ್ನು ಸಾಮೂಹಿಕವಾಗಿ ಮುಚ್ಚಿಸಿದ್ದಾರೆ.

ಕಾದಲವೇಣಿ ಗ್ರಾಮದಲ್ಲಿ ಪಶು ಇಲಾಖೆಯ ಅಧಿಕಾರಿಗಳು, ಗ್ರಾ.ಪಂ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ‘ಕೆರೆಯಲ್ಲಿ ಸತ್ತಿರುವ ಕೊಕ್ಕರೆಗಳಿಂದ ಗ್ರಾಮದ ಜನತೆಗೆ ಯಾವುದೇ ರೀತಿಯ ಸೋಂಕು ಅಥವಾ ತೊಂದರೆಯಾಗುವುದಿಲ್ಲ. ಯಾರೊಬ್ಬರೂ ಆತಂಕ ಪಡುವ ಅಗತ್ಯವಿಲ್ಲ’ ಎಂದು ಆಟೋದಲ್ಲಿ ಪ್ರಚಾರ ನಡೆಸಿ, ಅಧಿಕಾರಿಗಳ ಮೂಲಕ ಜನರಲ್ಲಿ ಜಾಗೃತಿ ಸಭೆ ನಡೆಸಿದ್ದಾರೆ.

ತಾಲ್ಲೂಕು ಸಹಾಯಕ ಪಶು ಇಲಾಖೆಯ ಅಧಿಕಾರಿ ಡಾ.ಆರ್.ರಾಘವೇಂದ್ರ ಪ್ರತಿಕ್ರಿಯಿಸಿ, ‘ಸತ್ತಿದ್ದ 3 ಕೊಕ್ಕರೆಗಳನ್ನು ಹೊರತೆಗೆದು ಅವುಗಳ ರಕ್ತದ ಮಾದರಿಯನ್ನು ಸಂಗ್ರಹಿಸಿ ಜೈವಿಕ ಸಂಶೋಧನಾ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅದರ ಒಂದು ಹಂತದ ವರದಿ ಲಭ್ಯವಾಗಿದ್ದು, ಮತ್ತೊಂದು ಅಂತಿಮ ವರದಿಯು ಬಂದ ಬಳಿಕ ಜಿಲ್ಲಾಧಿಕಾರಿಯವರ ಮೂಲಕ ಸ್ಪಷ್ಟ ಮಾಹಿತಿ ನೀಡಲಾಗುವುದು. ಪ್ರಸ್ತುತ ಕೆರೆಯಲ್ಲಿ ಸತ್ತಿದ್ದ ಸುಮಾರು 60 ಕೊಕ್ಕರೆಗಳನ್ನು ಹೊರ ತೆಗೆದು ಹೂಳಲಾಗಿದೆ. ಜನರಲ್ಲಿ ಯಾವುದೇ ಆತಂಕ ಬೇಡ’ ಎಂದರು.

ಕೋಳಿ ಫಾರಂ ಮಾಲೀಕರ ಆತಂಕ
ಕಾದಲವೇಣಿ ಗ್ರಾಮದ ಸುತ್ತಲಿನ ಪ್ರದೇಶದಲ್ಲಿ ಸಾಕಷ್ಟು ಕೋಳಿ ಫಾರಂಗಳಿದ್ದು, ಕೊಕ್ಕರೆಗಳ ಸಾಮೂಹಿಕ ಸಾವಿನಿಂದ ಫಾರಂ ಮಾಲೀಕರು ಆತಂಕಗೊಂಡಿದ್ದಾರೆ. ಲಕ್ಷಾಂತರ ಬೆಲೆಯ ಕೋಳಿ ಮರಿಗಳನ್ನು ಸಾಕಾಣಿಕೆ ಮಾಡುತ್ತಿದ್ದು, ಕೊಕ್ಕರೆಗಳ ಸಾವಿನಿಂದ ಹಕ್ಕಿ ಜ್ವರ ಬಂದರೆ ಸಾಕಷ್ಟು ನಷ್ಟ ಅನುಭವಿಸಬೇಕಾಗುತ್ತದೆ ಎನ್ನುತ್ತಿದ್ದಾರೆ. ‘ಫಲಿತಾಂಶದ ವರದಿ ಅಧಿಕಾರಿಗಳ ಕೈ ಸೇರಿ, ಅದರಿಂದ ಯಾವುದೇ ತೊಂದರೆ ಇಲ್ಲ ಎಂದು ಹೇಳುವವರೆಗೂ ನಮಗೆ ನೆಮ್ಮದಿ ಇಲ್ಲ’ ಎಂದು ಫಾರಂ ಮಾಲೀಕರೊಬ್ಬರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು