ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಚಿಮುಲ್‌ಗೆ ಶುಕ್ರದೆಸೆ

ಲಾಕ್‌ಡೌನ್‌ ಅವಧಿಯಲ್ಲಿ ಬಾಗಿಲು ಮುಚ್ಚಿದ ಬಹುಪಾಲು ಖಾಸಗಿ ಡೇರಿಗಳು
Last Updated 24 ನವೆಂಬರ್ 2020, 3:45 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಜಾರಿಗೊಳಿಸಿದ ಆರು ತಿಂಗಳ ಲಾಕ್‌ಡೌನ್‌ ಪರಿಣಾಮ ಅನೇಕ ಖಾಸಗಿ ಹಾಲಿನ ಕಂಪನಿಗಳು ಬಾಗಿಲು ಮುಚ್ಚಿದ್ದೇ ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಕ್ಕೆ (ಕೋಚಿಮುಲ್‌) ಶುಕ್ರದೆಸೆ ಶುರುವಾಗಿದೆ.

ಲಾಕ್‌ಡೌನ್‌ ಅವಧಿಯಲ್ಲಿ ಅಂತರರಾಜ್ಯ ಸಾರಿಗೆ ಬಂದ್‌ ಮಾಡಿದ್ದರಿಂದ ನೆರೆಯ ಆಂಧ್ರಪ್ರದೇಶ ಸೇರಿದಂತೆ ಜಿಲ್ಲೆಗೆ ವಿವಿಧ ರಾಜ್ಯಗಳಿಂದ ಬರುತ್ತಿದ್ದ ಮತ್ತು ಹೊರ ರಾಜ್ಯಗಳಿಗೆ ಸಾಗಣೆಯಾಗುತ್ತಿದ್ದ ಹಾಲು ನಿಂತುಹೋಯಿತು. ಇದರಿಂದ ಜಿಲ್ಲೆಯ ರೈತರ ಹಾಲಿಗೆ ಜಿಲ್ಲೆಯಲ್ಲೇ ಬೇಡಿಕೆ ಹೆಚ್ಚಳವಾಗಿದೆ ಎನ್ನಲಾಗಿದೆ.

ಕೋವಿಡ್‌ ಪೂರ್ವದಲ್ಲಿ ಜಿಲ್ಲೆಯಲ್ಲಿ ತಿರುಮಲ, ದೊಡ್ಲ, ಆರೋಗ್ಯ, ಶ್ರೀನಿವಾಸ್, ಹೇರಿಟೆಜ್‌, ಮುಕುಂದ, ಕಾವೇರಿ ಸೇರಿದಂತೆ ಹಲವು ಖಾಸಗಿ ಡೇರಿಗಳು ಹಾಲಿನ ಮಾರುಕಟ್ಟೆ ವಿಸ್ತರಿಸಿದ್ದವು. ಲಾಕ್‌ಡೌನ್‌ ಅವಧಿಯಲ್ಲಿ ಈ ಪೈಕಿ ಹಲವು ಡೇರಿಗಳು ಆರ್ಥಿಕ ಮುಗ್ಗಟ್ಟು ಎದುರಿಸಲಾಗದೆ ವಹಿವಾಟು ಸ್ಥಗಿತಗೊಳಿಸಿವೆ. ಸದ್ಯ ಕೆಲವೇ ಡೇರಿಗಳು ಅಲ್ಪ ಪ್ರಮಾಣದಲ್ಲಿ ಹಾಲು ಪೂರೈಕೆ ಮಾಡುತ್ತಿವೆ.

ಲಾಕ್‌ಡೌನ್‌ ಅವಧಿಯಲ್ಲಿ ಒಂದೆಡೆ ಹಾಲಿಗೆ ಬೇಡಿಕೆ ಕಡಿಮೆ ಆಗಿದ್ದರೆ ಮತ್ತೊಂದೆಡೆ ಲಾಕ್‌ಡೌನ್, ಕೊರೊನಾ ಕಾರಣದಿಂದ ಸ್ವಗ್ರಾಮಗಳಿಗೆ ಮರಳಿದ ಜನರು ಆರ್ಥಿಕ ಸ್ವಾವಲಂಬನೆಗೆ ಹೈನುಗಾರಿಕೆ ಅವಲಂಬಿಸಿದ ಕಾರಣಕ್ಕೆ ಹಾಲಿನ ಉತ್ಪಾದನೆ ಹೆಚ್ಚಳವಾಗಿತ್ತು. ಇದೇ ವೇಳೆ ಕೆಲವು ಖಾಸಗಿ ಡೇರಿಗಳು ಸಹ ಹಾಲು ಖರೀದಿ ನಿಲ್ಲಿಸಿದ ಕಾರಣದಿಂದ ಕೋಚಿಮುಲ್‌ಗೆ ಜಿಲ್ಲೆಯಲ್ಲಿ ನಿತ್ಯ ಸುಮಾರು 40 ಸಾವಿರ ಲೀಟರ್ ಹಾಲು ಸಂಗ್ರಹ ಹೆಚ್ಚಳವಾಯಿತು ಎನ್ನುತ್ತಾರೆ ಕೋಚಿಮುಲ್‌ ಅಧಿಕಾರಿಗಳು.

ಕೋವಿಡ್‌ ಕಾಣಿಸಿಕೊಳ್ಳುವ ಪೂರ್ವದಲ್ಲಿ ಜಿಲ್ಲೆಯಲ್ಲಿ ನಿತ್ಯ ಸುಮಾರು 60 ಸಾವಿರ ಲೀಟರ್‌ ಹಾಲು ಮಾರಾಟವಾಗುತ್ತಿತ್ತು. ಈ ಪೈಕಿ 15 ಸಾವಿರ ಲೀಟರ್‌ ಖಾಸಗಿ ಡೇರಿಗಳ ಪಾಲಿತ್ತು. ಸದ್ಯ ಆ ಮಾರುಕಟ್ಟೆ ಸಹ ಕೋಚಿಮುಲ್‌ ದೊರೆತಿದೆ. ಜತೆಗೆ, ಕೆಎಂಎಫ್‌ನಿಂದ ತಯಾರಿಸಲಾಗುವ ಹಾಲಿನ ಉಪ ಉತ್ಪನ್ನಗಳಾದ ಪೇಡಾ, ಪನೀರ್‌, ಬಿಸ್ಕತ್ತುಗಳಿಗೂ ಈಗ ಬೇಡಿಕೆ ಹೆಚ್ಚಾಗಿದೆ ಎನ್ನಲಾಗಿದೆ.

‘ಕೋವಿಡ್‌ ಉಲ್ಭಣಿಸಿದ ಬಳಿಕ ಜಿಲ್ಲೆಯಲ್ಲಿ ಖಾಸಗಿ ಡೇರಿಗಳು ಬದುಕಲು ಸಾಧ್ಯವಾಗದೆ ಸಾಕಷ್ಟು ಬಾಗಿಲು ಮುಚ್ಚಿವೆ. ಇದರಿಂದ ಕೋಚಿಮುಲ್‌ಗೆ ಜಿಲ್ಲೆಯಲ್ಲಿ ಸುಮಾರು 40 ಸಾವಿರ ಲೀಟರ್ ಹಾಲು ಹೆಚ್ಚುವರಿಯಾಗಿ ಸಂಗ್ರಹವಾಗುತ್ತಿದೆ. ಸದ್ಯ ಜಿಲ್ಲೆಯಲ್ಲಿ ನಿತ್ಯ 4.50 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಆ ಪೈಕಿ 2.50 ಲಕ್ಷ ಲೀಟರ್ ಪ್ಯಾಕೆಟ್‌ ಹಾಲು, 2 ಲಕ್ಷ ಲೀಟರ್ ಗುಡ್‌ಲೈಫ್‌ ಹಾಲು ಮಾರಾಟವಾಗುತ್ತಿದೆ’ ಎಂದು ಕೋಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್‌ ತಿಳಿಸಿದರು.

‘ಲಾಕ್‌ಡೌನ್‌ ಜಾರಿ ಬಳಿಕ ಏಪ್ರಿಲ್‌ನಿಂದ ಜಿಲ್ಲೆಯಲ್ಲಿ ಕೋಚಿಮುಲ್‌ನ ಹಾಲಿಗೆ ಬೇಡಿಕೆ ಹೆಚ್ಚಳವಾಗುತ್ತ ಬಂದಿದೆ. ಸಣ್ಣಪುಟ್ಟ ಕಂಪನಿಗಳ ಮಾರಾಟ ಸ್ಥಗಿತಗೊಳಿಸಿದ ಕಾರಣಕ್ಕೆ ಆ ಮಾರುಕಟ್ಟೆ ಕೋಚಿಮುಲ್‌ ಪಾಲಾಗಿದೆ. ಪರಿಣಾಮ ನಮ್ಮ ಗುಡ್‌ಲೈಫ್‌ ಮತ್ತು ಪ್ಯಾಕೆಟ್‌ ಹಾಲಿನ ಮಾರುಕಟ್ಟೆ ಚೆನ್ನಾಗಿ ಬೆಳವಣಿಗೆ ಹೊಂದಿದೆ’ ಎಂದು ಕೋಚಿಮುಲ್ ಮಾರುಕಟ್ಟೆ ವಿಭಾಗದ ಉಪ ನಿರ್ದೇಶಕ ಕೆ. ಲಕ್ಷ್ಮಿನಾರಾಯಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT