ಶನಿವಾರ, ಫೆಬ್ರವರಿ 29, 2020
19 °C

ಶಿಡ್ಲಘಟ್ಟ: ನಂದಿಯ ಭೋಗನಂದೀಶ್ವರಸ್ವಾಮಿ ರಥಕಟ್ಟುವ ಶ್ರದ್ಧಾಳುಗಳು

ಡಿ.ಜಿ.ಮಲ್ಲಿಕಾರ್ಜುನ Updated:

ಅಕ್ಷರ ಗಾತ್ರ : | |

Prajavani

ಶಿಡ್ಲಘಟ್ಟ: ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಯ ಭೋಗನಂದೀಶ್ವರಸ್ವಾಮಿ ರಥೋತ್ಸವವೆಂದರೆ ಬಲು ಪ್ರಸಿದ್ಧಿ. ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳಿಂದ ಸಾವಿರಾರು ಮಂದಿ ಭಕ್ತರು ಮಹಾಶಿವರಾತ್ರಿ ಹಬ್ಬದ ಮರುದಿನ ನಡೆಯುವ ಈ ರಥೋತ್ಸವದಲ್ಲಿ ಭಾಗಿಯಾಗುತ್ತಾರೆ.

ದೇವರನ್ನು ಮೆರವಣಿಗೆ ಮಾಡುವ ಈ ರಥವು ಹಲವು ವಿಶೇಷಗಳಿಂದ ಕೂಡಿದೆ. ಸುಮಾರು 400 ವರ್ಷಗಳಿಗೂ ಹಳೆಯ ಕಲ್ಲಿನ ರಥ ಚಕ್ರಗಳು, ಒಂಭತ್ತು ಮತ್ತು ಏಳು ಅಂಕಣಗಳ ಎರಡು ರಥಗಳ ನಿರ್ಮಾಣ ಹಾಗೂ ತಲೆತಲಾಂತರಗಳಿಂದ ರಥ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ವಿವಿಧ ಕುಟುಂಬಗಳ ಶ್ರದ್ಧಾ ಭಕ್ತಿಯ ವಿಶೇಷಣಗಳು ಈ ರಥೋತ್ಸವದೊಂದಿಗೆ ಕೂಡಿಕೊಂಡಿವೆ.

‘ನನಗೆ ತಿಳಿದಿರುವಂತೆ ಸುಮಾರು ಐದು ತಲೆಮಾರುಗಳಿಂದ ನಮ್ಮ ಕುಟುಂಬ ಹಾಗೂ ನಮ್ಮ ಗವಿಗಾನಹಳ್ಳಿಯ ಗ್ರಾಮಸ್ಥರು ಈ ರಥದ ಆಯ ಪಾಯದ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದೇವೆ. ನಾಲ್ಕನೇ ತಾತನವರ ಕಾಲದಿಂದ ಇದು ಪ್ರಾರಂಭವಾಗಿರಬೇಕು. ನಾಲ್ಕು ತಾತನವರುಗಳು ಆಯ್ತು, ಆಮೇಲೆ ನಮ್ಮ ತಂದೆ, ನಾನು 48 ವರ್ಷಗಳಿಂದ ರಥದ ಕೆಲಸ ಮಾಡುತ್ತಿದ್ದೇನೆ’ ಎನ್ನುತ್ತಾರೆ ಗವಿಗಾನಹಳ್ಳಿ ಜಿ.ಪಿ.ಪಿಳ್ಳಪ್ಪ.

‘ಕಲ್ಲಿನ ಎರಡೆರಡು ಚಕ್ರಕ್ಕೆ ಮರದ ತೊಲೆಗಳನ್ನು ಜೋಡಿಸುತ್ತೇವೆ. ನಾಲ್ಕೂ ಚಕ್ರಗಳನ್ನು ಅವುಗಳ ಸ್ಥಾನದಲ್ಲಿ ಸಮಾನವಾಗಿ ನಿಲ್ಲಿಸಿ ಅದರ ಮೇಲೆ ಪಾಳಿಗಳನ್ನು ರಸಮಟ್ಟ ಕಾಯ್ದುಕೊಂಡು ಮರದ ಗಡಾರಿಗಳನ್ನು ಕೂರಿಸುತ್ತೇವೆ. ಇದು ನಮ್ಮ ಜವಾಬ್ದಾರಿ. ಮನೆಗೆ ಪಾಯ ಹಾಕಿದಂತೆ ರಥದ ಆಯಪಾಯವನ್ನು ಮಾಡುವವರು ನಾವು. ರಥಸಪ್ತಮಿ ದಿನ ರಥಕ್ಕೆ ಸಂಬಂಧಿಸಿದ ಚಕ್ರ, ಅಚ್ಚು ಇತ್ಯಾದಿ ಸಾಮಗ್ರಿಗಳಿಗೆ ಅರ್ಚಕರು ಪೂಜೆ ಸಲ್ಲಿಸುವರು.

ನಂತರ ರಥ ನಿರ್ಮಾಣ ಕಾರ್ಯ ಪ್ರಾರಂಭವಾಗುತ್ತದೆ. 50 ಮಂದಿ ನಾವು ನಮ್ಮ ಗವಿಗಾನಹಳ್ಳಿ ಗ್ರಾಮದಿಂದ ಬಂದು ಕೆಲಸ ಪ್ರಾರಂಭಿಸುತ್ತೇವೆ. ಪೌರ್ಣಮಿ ದಿನ ಗುಜ್ಜು(ಸ್ತಂಭ) ಪೂಜೆ ಮಾಡುತ್ತೇವೆ. ನಾವು ಮರದ ತೊಲೆಗಳನ್ನು ಹಾಕಿ ಸಮತಟ್ಟು ಮಾಡಿಕೊಟ್ಟ ಮೇಲೆ ಅಡಿಕೆ, ಬಿದಿರು, ತೆಂಗು ಮರದ ಗುಜ್ಜುಗಳನ್ನು ಕಟ್ಟಿ ತೇರನ್ನು ಎತ್ತರಿಸಿಕೊಳ್ಳುತ್ತಾ ಸಾಗುವರು’ ಎಂದು ಅವರು ವಿವರಿಸಿದರು.

ಅರ್ಚಕ ಶ್ರೀನಾಥ್ ಅವರು ಈ ಬಗ್ಗೆ ವಿವರಣೆ ನೀಡಿ, ‘ಭೋಗನಂದೀಶ್ವರ ದೇವಾಲಯದ ಕಲ್ಲಿನ ಚಕ್ರಗಳ ರಥವನ್ನು ಸುಮಾರು ನೂರು ವರ್ಷಗಳಿಂದ ಕಟ್ಟಿ ಆಚರಣೆ ನಡೆಸಲಾಗುತ್ತಿದೆ. ಇಲ್ಲಿನ ದೊಡ್ಡ ರಥದಲ್ಲಿ ಗಿರಿಜಾಂಭ ಸಮೇತ ಭೋಗನಂದೀಶ್ವರ ಸ್ವಾಮಿಯನ್ನು ಕೂರಿಸಿದರೆ, ಚಿಕ್ಕ ರಥದಲ್ಲಿ ಅಂಬಿಕಾ ಮತ್ತು ಗಣಪತಿ ಸ್ವಾಮಿಯನ್ನು ಕೂರಿಸಲಾಗುತ್ತದೆ. ರಥ ನಿರ್ಮಾಣಕ್ಕೆ ಬೇಕಾದ ಅಚ್ಚುಗಳು, ಬಂಬು, ತೆಂಗು ಮತ್ತು ಅಡಿಕೆ ಮರಗಳನ್ನು ಉಪಯೋಗಿಸಿ ರಥನಿರ್ಮಾಣ ನಡೆಯುತ್ತವೆ.

ರಥದ ಸಿದ್ಧತೆಗೆ ಸುಮಾರು ಎರಡು ವಾರಗಳು ಬೇಕು. ಗವಿಗಾನಹಳ್ಳಿ ಜಿ.ಪಿ.ಪಿಳ್ಳಪ್ಪ ಅವರ ತಂಡ ಆಯಪಾಯ ಸರಿಮಾಡಿದ ಮೇಲೆ ಚನ್ನಕೃಷ್ಣಪ್ಪನವರ ಮಗ ದೇವರಾಜು ರಥವನ್ನು ಎತ್ತರಿಸುತ್ತಾ ಸಾಗುತ್ತಾರೆ. ಶಿವರಾತ್ರಿ ದಿನ ಕಳಶ ಪೂಜೆ ಮಾಡಿ ರಥದ ಮೇಲೆ ಕೂರಿಸಲಾಗುತ್ತದೆ. ಶಿವರಾತ್ರಿ ಮರುದಿನ  ಸ್ವಾಮಿಯವರನ್ನು ಕೂರಿಸಿ ರಾಜಬೀದಿಗಳಲ್ಲಿ ದೇವಾಲಯದ ಸುತ್ತ ಪ್ರದಕ್ಷಿಣೆ ಮಾಡಿಸಿ ಬಂದ ನಂತರ ಸ್ವಸ್ಥಾನದಲ್ಲಿ ನಿಲ್ಲುತ್ತದೆ’ ಎಂದು ಹೇಳಿದರು.

**
ರಥದ ನಾಲ್ಕು ಸ್ತಂಭಗಳನ್ನು ನಾಲ್ವರು ಸಹೋದರಿಯರಾದ ನಂದಿನಿ, ನಳಿನಿ, ಮೈತ್ರೇಯಿ ಮತ್ತು ಪುಷ್ಪವರ್ಧಿನಿ ಎನ್ನುತ್ತೇವೆ. ಶಿವರಾತ್ರಿ ದಿನ ಸಂಜೆ 6 ರಿಂದ ಮರುದಿನ ಬೆಳಗ್ಗೆಯವರೆಗೂ ವಿಶೇಷ ಪೂಜೆ ಹೋಮಗಳು ನಡೆಯುತ್ತವೆ. ಬೆಳಗಿನ ಶುಭ ಮುಹೂರ್ತದಲ್ಲಿ ಮಾಂಗಲ್ಯಧಾರಣೆ ನಡೆಸಿ ರಥದಲ್ಲಿ ಗಿರಿಜಾಂಭ ಸಮೇತ ಭೋಗನಂದೀಶ್ವರ ಸ್ವಾಮಿಯನ್ನು ರಥದಲ್ಲಿ ಕೂರಿಸಿ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿಸುವುದು ಸಂಪ್ರದಾಯ.
-ಶ್ರೀನಾಥ್, ಅರ್ಚಕ

**

ರಥದ ಮೊದಲ ಪೂಜೆ ಮತ್ತು ಕಡೆಯ ಪೂಜೆ ನಮ್ಮದೇ. ರಥವನ್ನು ಹೇಗೆ ಕಟ್ಟುತ್ತೇವೆಯೋ ಅದೇ ರೀತಿ ಬೇರ್ಪಡಿಸಲಾಗುತ್ತದೆ. ಎಲ್ಲಾ ಸಾಮಾನುಗಳನ್ನೂ ಒಪ್ಪವಾಗಿ ಜೋಡಿಸಿಟ್ಟು ಹೊರಡುತ್ತೇವೆ. ತೇರಿನ ದಿನ ಗ್ರೀಸ್ ಹಾಕುವುದು, ಚೈನ್ ಬಿಗಿಯುವುದು, ಮಾವಿನ ಸೊಪ್ಪು ಬಾಳೆ ದಿಂಡನ್ನು ಕಟ್ಟಿ, ಹೋಮ ಮಾಡಿಸಿ, ಗಣ್ಯರಿಂದ ಚಾಲನೆ ಕೊಡುವುದು ಮುಂತಾದ ಕಾರ್ಯಗಳಲ್ಲಿ ನಾವೆಲ್ಲಾ ಶ್ರದ್ಧೆಯಿಂದ ಪಾಲ್ಗೊಳ್ಳುತ್ತೇವೆ.
-ಜಿ.ಪಿ.ಪಿಳ್ಳಪ್ಪ, ಗವಿಗಾನಹಳ್ಳಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು