ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಷ್ಟದಲ್ಲಿ ಮಾನವೀಯತೆ ಮೆರೆದ ಜನರು

ಕಡುಬಡವರು, ನಿರ್ಗತಿಕರಿಗೆ ಊಟ, ಅಗತ್ಯ ವಸ್ತುಗಳನ್ನು ವಿತರಿಸುತ್ತಿರುವ ಉದಾರಿಗಳು
Last Updated 2 ಏಪ್ರಿಲ್ 2020, 11:24 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜಾರಿಗೆ ತಂದ ಲಾಕ್‌ಡೌನ್‌ನಿಂದ ಕಾರ್ಮಿಕರು, ಕಡುಬಡವರು, ನಿರಾಶ್ರಿತರು, ಭಿಕ್ಷುಕರು ಅಗತ್ಯ ವಸ್ತುಗಳು, ಅನ್ನಾಹಾರ ಸಿಗದೆ ಸಂಕಷ್ಟದಿಂದ ನರಳುತ್ತಿರುವುದು ಕಂಡು ಅನೇಕ ಜನರು ಕಷ್ಟದಲ್ಲಿರುವವರ ನೋವಿಗೆ ಮಿಡಿಯುವ ಕೆಲಸ ಮಾಡುತ್ತಿದ್ದಾರೆ.

ಲಾಕ್‌ಡೌನ್ ಜಾರಿಯಾದಾಗಿನಿಂದಲೂ ಜನರು ಮನೆಯಿಂದ ಆಚೆ ಹೋಗಿ ಅಗತ್ಯ ವಸ್ತುಗಳನ್ನು ತಂದುಕೊಳ್ಳಲು ಕೂಡ ಭಯಪಡುತ್ತಿದ್ದು, ಇದರ ನಡುವೆ ನಗರದಲ್ಲಿನ ಭಿಕ್ಷುಕರು, ನಿರಾಶ್ರಿತರು, ಕಾರ್ಮಿಕರು ಮತ್ತು ಅಲೆಮಾರಿ ಬಡ ಜನರ ದುಸ್ಥಿತಿ ಗಂಭೀರವಾಗಿರುವುದು ಅರಿತು ಅನೇಕರು ನೊಂದವರ ಕಣ್ಣೀರು ಒರೆಸಲು ಮುಂದಾಗುವ ಮಾದರಿ ಕೆಲಸಕ್ಕೆ ಮುಂದಾಗಿದ್ದಾರೆ.

ಲಾಕ್‌ಡೌನ್‌ನಿಂದ ಸರಿಯಾಗಿ ಊಟ ಸಿಗದೆ, ಉಪವಾಸದಿಂದ ಇರುವ ಜನರಿಗೆ ರೆಡ್‌ಕ್ರಾಸ್ ಸಂಸ್ಥೆಯ ಚಿಕ್ಕಬಳ್ಳಾಪುರ ಶಾಖೆ ಸೇರಿದಂತೆ ಅನೇಕ ಸಮಾಜ ಸೇವಕರು ನೊಂದವರಿಗೆ ಊಟ, ಅಗತ್ಯ ವಸ್ತುಗಳನ್ನು ತಲುಪಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಮಹಾಕಾಳಿ ದೇವಸ್ಥಾನದ ರಸ್ತೆಯ ಸುಬ್ರಮಣ್ಯಶಾಸ್ತ್ರಿ ಅವರು ತಮ್ಮ ಕುಟುಂಬದವರ ಸಹಕಾರದೊಂದಿಗೆ ಕಳೆದ ಕೆಲ ದಿನಗಳಿಂದ ನಿತ್ಯ ಸುಮಾರು 250 ಜನರಿಗೆ ಊಟ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರ್‌.ಎಂ.ವಿ.ಕಾರ್ಮಿಕ ಸೇವಾ ಸಂಘದ ಸದಸ್ಯರು ನಿತ್ಯ ನಗರದಾದ್ಯಂತ ಸಂಚರಿಸಿ ಸುಮಾರು 300 ಜನರ ಹಸಿವು ನೀಗುವ ಮಹದುಪಕಾರದ ಕೆಲಸ ಮಾಡುತ್ತಿದ್ದಾರೆ.

ರೆಡ್‌ಕ್ರಾಸ್ ಸಂಸ್ಥೆಯ ಚಿಕ್ಕಬಳ್ಳಾಪುರ ಶಾಖೆಯು ಸ್ವಯಂ ಸೇವಕರಾದ ರೆಹಮಾನ್, ಸೈಯದ್, ಜಲೀಲ್, ಸೈಯದ್ ಅಲ್ಲಬಕಾಶ್, ವಾಸೀಬ್, ಮನ್ಸೂರು ಅವರ ಮೂಲಕ ನಗರದಲ್ಲಿ ಇರುವ ನಿರಾಶ್ರಿತರು, ಭಿಕ್ಷುಕರಿಗೆ ಊಟ ತಲುಪಿಸುವ ಕೆಲಸ ಮಾಡುತ್ತಿದೆ. ಈ ವ್ಯವಸ್ಥೆ ಏಪ್ರಿಲ್ 14ರ ವರೆಗೆ ಇರಲಿದೆ ಎನ್ನುತ್ತಾರೆ ಖಜಾಂಚಿ ಎಂ.ಜಯರಾಮ್.

ನಗರ ವ್ಯಾಪ್ತಿಯ ಲಿಡ್ಕರ್ ಕಾಲೋನಿಯ ಬಡ, ಕೂಲಿ ಕಾರ್ಮಿಕರ ಕುಟುಂಬಗಳಿಗೆ ನಗರಸಭೆಯ 18ನೇ ವಾರ್ಡ್ ಸದಸ್ಯ ಎ.ಬಿ.ಮಂಜುನಾಥ ಅವರು ದಿನಸಿ ಪದಾರ್ಥಗಳನ್ನು ನೀಡಿ ಸಹಾಯ ಹಸ್ತ ಚಾಚಿದರೆ, 5ನೇ ವಾರ್ಡ್‌ ಸದಸ್ಯ ಗ್ಯಾಸ್‌ ನಾಗರಾಜ್ ಅವರು ಪೌರಕಾರ್ಮಿಕರಿಗೆ ಮಾಲೆ ಹಾಕಿ ಸನ್ಮಾನಿಸುವ ಜತೆಗೆ ದಿನಸಿ ಸಾಮಗ್ರಿಗಳನ್ನು ವಿತರಿಸುವ ಮೂಲಕ ಗೌರವಿಸಿದರು.

ಬಟ್ಟೆ ಹೊದಿಕೆ ವಿತರಣೆ

ಚಿಕ್ಕಬಳ್ಳಾಪುರ ಹೊರವಲಯದ ಕಂದವಾರದಲ್ಲಿನ ನಿರಾಶ್ರಿತರಿಗೆ ತಹಶೀಲ್ದಾರ್ ನಾಗಪ್ರಶಾಂತ್, ನಗರಸಭೆ ಆಯುಕ್ತ ಲೋಹಿತ್, ಸರ್ಕಲ್ ಇನ್‌ಸ್ಪೆಕ್ಟರ್ ಮತ್ತು ಅಖಂಡ ಭಾರತ ಸೇವಾ ಸಮಿತಿ ಇವರ ವತಿಯಿಂದ ಬಟ್ಟೆ ಹೊದಿಕೆ ಹಾಗೂ ಊಟ ವಿತರಿಸುವ ಜತೆಗೆ ಕೋವಿಡ್-19 ಬಗ್ಗೆ ಅರಿವು ಮೂಡಿಸಿದರು.

ಚಿಕ್ಕಬಳ್ಳಾಪುರದ ಸಮಾಜ ಸೇವಕ ಎಸ್‌ಆರ್‌ಎಸ್‌ ದೇವರಾಜ್ ಅವರು ಅಗತ್ಯ ವಸ್ತುಗಳನ್ನು ಖರೀದಿಸಲು ಕಷ್ಟ ಪಡುತ್ತಿದ್ದ ಕಡು ಬಡಕುಟುಂಬಗಳನ್ನು ಗುರುತಿಸಿ, ಅವರಿಗೆ ಬೇಕಾದ ದಿನಸಿ ಸಾಮಾಗ್ರಿಗಳನ್ನು ವಿತರಿಸುವ ಕೆಲಸ ಮಾಡಿದರು.

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಅಗಲಗುರ್ಕಿ ಚಲಪತಿ ಅವರು ಬುಧವಾರ ಗೌರಿಬಿದನೂರು ರಸ್ತೆಯಲ್ಲಿರುವ ಕಣಿವೆ ಪ್ರದೇಶದಲ್ಲಿ ಕೋತಿಗಳಿಗೆ ಹಣ್ಣುಗಳು ಮತ್ತು ನೀರು ಒದಗಿಸುವ ಮೂಲಕ ಮಾನವೀಯತೆ ಮೆರೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT