ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ವಿತರಣೆಗೆ ಆದ್ಯತೆ ನೀಡಿ

ಸಹಕಾರ ಸಂಘಗಳ ಸಿಬ್ಬಂದಿಗೆ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದೇಗೌಡ ಸೂಚನೆ
Last Updated 12 ಫೆಬ್ರುವರಿ 2020, 9:47 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡುವವರಲ್ಲಿನ ಬದ್ಧತೆ, ಇಚ್ಛಾಶಕ್ತಿಯ ಕೊರತೆಯಿಂದ ಸಹಕಾರ ಕ್ಷೇತ್ರಕ್ಕೆ ದೊಡ್ಡ ಪೆಟ್ಟು ಬೀಳುತ್ತಿದೆ. ಇನ್ನಾದರೂ ಸಹಕಾರ ಸಂಘಗಳ ಕಾರ್ಯದರ್ಶಿಗಳು ತಮ್ಮ ಧೋರಣೆ ಬದಲಿಸಿಕೊಂಡು, ಮಹಿಳಾ ಸಂಘಗಳ ರಚನೆ, ಸಾಲ ವಿತರಣೆ ಆದ್ಯತೆ ನೀಡಿ ಜವಾಬ್ದಾರಿಯಿಂದ ಕೆಲಸ ಮಾಡಬೇಕು’ ಎಂದು ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದೇಗೌಡ ಹೇಳಿದರು.

ನಗರದಲ್ಲಿ ಮಂಗಳವಾರ ನಡೆದ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ವ್ಯವಸಾಯ ಸೇವಾ ಸಹಕಾರಿ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡಿದರು. ‌

‘ಈಗಾಗಲೇ ಕೋಲಾರ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಸಂಘಗಳಿಗೆ ಸಾಲ ವಿತರಿಸಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆ ಕೆಲಸ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಅದರಲ್ಲೂ ಶಿಡ್ಲಘಟ್ಟ, ಚಿಕ್ಕಬಳ್ಳಾಪುರ ತಾಲ್ಲೂಕುಗಳಲ್ಲಂತೂ ಸಾಲ ವಿತರಣೆ ತುಂಬಾ ಕಡಿಮೆ ಇದೆ. ಇದರಿಂದ ವೈಯಕ್ತಿಕವಾಗಿ ನನಗೆ ಕೆಟ್ಟ ಹೆಸರು ಬರುತ್ತಿದೆ. ತಾರತಮ್ಯ ಮಾಡುತ್ತಿದ್ದೇವೆ ಎಂಬ ಟೀಕೆ ಕೇಳಬೇಕಾಗಿದೆ. ಆದ್ದರಿಂದ, ಇನ್ನಾದರೂ ಕಾರ್ಯದರ್ಶಿಗಳು ಸಾಲ ವಿತರಣೆಗೆ ಒತ್ತು ನೀಡಿ ಕೆಲಸ ಮಾಡಬೇಕು’ ಎಂದು ತಿಳಿಸಿದರು.

‘ಇವತ್ತಿಗೂ ಬಹುತೇಕ ಸಂಘಗಳು ಸ್ತ್ರೀಶಕ್ತಿ ಸಂಘಗಳ ರಚನೆಗೆ ಮುಂದಾಗುತ್ತಿಲ್ಲ. ಪ್ರತಿ ತಾಲ್ಲೂಕಿನಲ್ಲಿ 5,000 ಸಂಘಗಳನ್ನು ರಚನೆ ಮಾಡುವಂತೆ ತಿಳಿಸಿರುವೆ. ಆದರೆ, ಈ ತಾಲ್ಲೂಕಿನಲ್ಲಿ 500 ಸಂಘಗಳೂ ರಚನೆಯಾಗಿಲ್ಲ. ಪರಿಸ್ಥಿತಿ ಹೀಗಿರುವಾಗ ನಾನು ಎರಡೂ ಜಿಲ್ಲೆಗಳಿಗೆ ಸಮಾನವಾಗಿ ಸಾಲ ವಿತರಣೆ ಮಾಡುವುದು ಹೇಗೆ? ಸಂಘ ರಚನೆ ವಿಚಾರವಾಗಿ ಐದು ಬಾರಿ ಸಭೆ ನಡೆಸಿದರೂ ಪ್ರಗತಿ ಕಂಡುಬರುತ್ತಿಲ್ಲ. ಕಾರ್ಯದರ್ಶಿಗಳ ಮನೋಭಾವ ಅರ್ಥವಾಗುತ್ತಿಲ್ಲ. ಯಾರಲ್ಲೂ ಬಡವರ ಪರವಾಗಿ ಕೆಲಸ ಮಾಡುವ ಇಚ್ಛಾಶಕ್ತಿ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ನಮ್ಮಲ್ಲಿ ಬಡವರೇ ಇಲ್ಲ ಎನ್ನುವ ಸಬೂಬು ನನಗೆ ಬೇಡ. ಎಲ್ಲೆಡೆ ಬಡವರು ಇದ್ದಾರೆ. ಪಕ್ಷಾತೀತ, ಜಾತ್ಯಾತೀತವಾಗಿ ಆ ಬಡವರಿಗೆ ನಮ್ಮ ಸಾಲದ ಯೋಜನೆ ಪ್ರಯೋಜನವಾಗಬೇಕು. ದುಡಿಯುವ ಮಹಿಳೆ ನಮ್ಮ ಸಾಲದ ಹಣದಲ್ಲಿ ಕುಟುಂಬ ಸಲುಹುತ್ತಾಳೆ. ಪ್ರಾಮಾಣಿಕವಾಗಿ ಸಾಲ ಮರುಪಾವತಿಸುತ್ತಾರೆ. ಸಾಲ ಕೊಡುವುದರಿಂದ ಸೊಸೈಟಿಗಳಿಗೆ ಲಾಭವಿದೆ ಎನ್ನುವುದು ಮರೆಯಬಾರದು. ಈ ಬಗ್ಗೆ ಪ್ರತಿಯೊಬ್ಬರಲ್ಲಿ ಇಚ್ಛಾಶಕ್ತಿ ಬರಬೇಕಿದೆ’ ಎಂದರು.

‘ಈ ತಾಲ್ಲೂಕಿನಲ್ಲಿ ಫೆ.25ರ ಒಳಗೆ ಕನಿಷ್ಠ 500 ಸ್ವಸಹಾಯ ಸಂಘಗಳ ರಚನೆ ಮಾಡಬೇಕು. ಸಂಘ ರಚನೆ ಕೂಡ ಕಷ್ಟದ ಕೆಲಸವಲ್ಲ. ಬೇಕಿದ್ದರೆ ಸಂಪನ್ಮೂಲ ವ್ಯಕ್ತಿಗಳು ಕಳುಹಿಸಿ ಕೊಡುತ್ತೇನೆ. ಪ್ರತಿ 15 ದಿನಕ್ಕೊಮ್ಮೆ ಭೇಟಿ ನೀಡುತ್ತೇನೆ. ಮಾರ್ಚ್‌ ಒಳಗೆ 1,000 ಮಹಿಳಾ ಸಂಘಗಗಳ ರಚನೆಯಾಗಬೇಕು. ನಂತರ ಹಂತಹಂತವಾಗಿ ಆ ಸಂಖ್ಯೆ ಹೆಚ್ಚುತ್ತ ಹೋಗಬೇಕು. ನನಗೆ ಎರಡು ಜಿಲ್ಲೆಗಳೂ ಒಂದೇ. ಹೀಗಾಗಿ, ಇಲ್ಲಿಯೂ ಸಾಲ ವಿತರಣೆ ಸಮರ್ಪಕವಾಗಿ ನಡೆಯಬೇಕಿದೆ’ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಚ್‌.ಎಸ್.ಮೋಹನ್ ರೆಡ್ಡಿ, ಕೆ.ಎಸ್.ದ್ಯಾವಪ್ಪ, ಅಶ್ವತ್ಥಪ್ಪ, ಡಿಸಿಸಿ ಬ್ಯಾಂಕ್ ಚಿಕ್ಕಬಳ್ಳಾಪುರ ಶಾಖೆ ವ್ಯವಸ್ಥಾಪಕಿ ಜ್ಯೋತಿ, ಸೂಪರ್‌ವೈಸರ್‌ ವಸಂತಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT