ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಡ್ಲಘಟ್ಟ: ಕೆರೆ ಸಂಪರ್ಕಿಸುವ ನರವ್ಯೂಹ ರಾಜಕಾಲುವೆ

ಕಿರುಕಾಲುವೆಗಳು, ಪೋಷಕ ಕಾಲುವೆಗಳು ಕೆರೆ ಉಳಿವಿಗೆ ಅವಶ್ಯ
Published 22 ಮೇ 2024, 7:24 IST
Last Updated 22 ಮೇ 2024, 7:24 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಮಳೆ ಬಂದಾಗ ಅದರಲ್ಲೂ ನೀರು ತೋಟಗಳಿಗೆ ಅಥವಾ ಮನೆಗಳೊಳಗೆ ನುಗ್ಗಿದಾಗ ಮಾತ್ರ ರಾಜ ಕಾಲುವೆಗಳು ನೆನಪಾಗುತ್ತವೆ. ಒಂದೊಂದು ಕೆರೆ ಸಂಪರ್ಕಿಸುವ ನರಗಳಂತಿರುವ ರಾಜಕಾಲುವೆಗಳು, ಕಿರುಕಾಲುವೆಗಳು ಮತ್ತು ಪೋಷಕ ಕಾಲುವೆಗಳು ಕೆರೆ ಉಳಿವಿಗೆ ಅತ್ಯವಶ್ಯ.

2021ರ ನವೆಂಬರ್ ತಿಂಗಳಿನಲ್ಲಿ ತಾಲ್ಲೂಕಿನ ಬೆಳ್ಳೂಟಿ ಕೆರೆಯು ಕೋಡಿ ಹರಿದಿತ್ತು. ನೀರು ಮುಂದೆ ಹರಿಯಲು ಮೊದಲಿದ್ದ ಭಕ್ತರಹಳ್ಳಿ ನಾರವಾಳ ರಾಜಕಾಲುವೆ ಒತ್ತುವರಿಯಾದ ಕಾರಣ ಭಕ್ತರಹಳ್ಳಿ ಪಕ್ಕದಿಂದ ಕಾಕಚೊಕ್ಕಂಡಹಳ್ಳಿ ಹಾದು ಭದ್ರನ ಕೆರೆ ತಲುಪಬೇಕಿದ್ದ ನೀರು ಸುಮಾರು ಒಂದೂವರೆ ಕಿ.ಮೀ ವ್ಯಾಪ್ತಿಯಲ್ಲಿ ಜಮೀನು ಮೇಲೆ ಹರಿದಿತ್ತು. ಭಕ್ತರಹಳ್ಳಿ, ಬೆಳ್ಳೂಟಿ, ಮೇಲೂರು, ಚೌಡಸಂದ್ರ ವ್ಯಾಪ್ತಿಯ ಸುಮಾರು 1200 ಎಕರೆ ಕೃಷಿ ಭೂಮಿಯಲ್ಲಿ ನೀರು ನಿಂತು, ರೈತರು ಬೆಳೆದ ಬೆಳೆ ನೀರು ಪಾಲಾಗಿತ್ತು.

ದಿವಂಗತ ಬೆಳ್ಳೂಟಿ ಸಂತೋಷ್ ಜನರನ್ನು ಒಗ್ಗೂಡಿಸಿ ಬೆಳ್ಳೂಟಿ ಕೆರೆಯಿಂದ ಕೋಡಿ ಹರಿದ ನೀರು ಮುಂದೆ ಭದ್ರನ ಕೆರೆಗೆ ಹೋಗಲು ಮಾಡಿರುವ ನಾರವಾಳ ರಾಜಕಾಲುವೆ ಒತ್ತುವರಿ ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದರು.

ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ರಾಜಕಾಲುವೆ ಒತ್ತುವರಿಯಾದ ಪರಿಣಾಮ 2021 ಮತ್ತು 2022ರಲ್ಲಿ ಮಳೆ ನೀರು ತೋಟಗಳಿಗೆ ನುಗ್ಗಿ ದ್ರಾಕ್ಷಿ, ಟೊಮೆಟೊ, ಬೀನ್ಸ್, ಹಿಪ್ಪುನೇರಳೆ ಸೊಪ್ಪು ಮುಂತಾದ ಬೆಳೆಗಳಿಗೆಲ್ಲ ಹಾಳಾಗಿದ್ದವು. ಲಕ್ಷಾಂತರ ನಷ್ಟವಾದರೂ ಕಾಲುವೆಗ ಒತ್ತುವರಿ ಮಾತ್ರ ತೆರವಾಗಿಲ್ಲ.

ಕೆರೆಗಳ ಹಾರ: 1908ರ ಮೈಸೂರು ಸರ್ಕಾರದ ‘ನ್ಯೂ ಟ್ಯಾಂಕ್ ರಿಜಿಸ್ಟರ್’ ಪ್ರಕಾರ ಶಿಡ್ಲಘಟ್ಟ ತಾಲ್ಲೂಕಿನಲ್ಲಿ 309 ಕೆರೆಗಳಿದ್ದು, ಅವುಗಳಲ್ಲಿ 61 ದೊಡ್ಡ ಕೆರೆಗಳು, 248 ಸಣ್ಣ ಕೆರೆಗಳಿವೆ. ಪ್ರತಿ ಚದರ ಮೈಲಿಗೆ 0.95 ಕೆರೆ, ಪ್ರತಿ 229 ಜನರಿಗೆ ಒಂದು ಕೆರೆ, ಪ್ರತಿಹಳ್ಳಿಗೆ 1.15 ಕೆರೆ ಇದೆ. ತಾಲ್ಲೂಕಿನಲ್ಲಿ 309 ಕೆರೆಗಳಿಂದ 12,272 ಎಕರೆ ಅಚ್ಚುಕಟ್ಟಿಗೆ ನೀರಾವರಿ ಸೌಲಭ್ಯ ಲಭ್ಯವಾಗಿದೆ.

ಈ ಕೆರೆಗಳ ಹಾರವನ್ನು ಜೋಡಿಸುವ ರಾಜಕಾಲುವೆಗಳ ಒತ್ತುವರಿಯಿಂದಾಗಿ ಒಂದೆಡೆ ಕೆರೆಯಲ್ಲಿ ನೀರು ನಿಲ್ಲುತ್ತಿಲ್ಲ. ಮತ್ತೊಂಡೆಡೆ ಅಂತರ್ಜಲ ಖಾಲಿಯಾಗುತ್ತಿದೆ. ಇದರೊಂದಿಗೆ ಮಳೆ ಜೋರಾಗಿ ಬಂದಾಗ ನೀರು ಸರಾಗವಾಗಿ ಹರಿಯದೆ ಎಲ್ಲೆಂದರಲ್ಲಿ ನುಗ್ಗಿ ಬೆಳೆ ನಾಶ ಆಗುತ್ತಿದೆ.

ಪೋಷಕ ಕಾಲುವೆ: ಒಂದು ಕೆರೆಯಿಂದ ಮತ್ತೊಂದು ಕೆರೆಗೆ ಸಂಪರ್ಕ ಕಲ್ಪಿಸುವ ಸ್ವಾಭಾವಿಕ ನಾಲೆಗಳನ್ನು ಎಚ್.ಎನ್.ವ್ಯಾಲಿ ಯೋಜನೆಯಲ್ಲಿ ಸರಿಪಡಿಸುವ ಮೂಲಕ ಈಗ ನೀರು ಹರಿದು ಬರುತ್ತಿದೆ. ಇದಕ್ಕೆ ಪೂರಕವಾಗಿ ಪೋಷಕ ಕಾಲುವೆಗಳಾದ ಕಿರುಗಾಲುವೆ ಹಾಗೂ ನೀರುಗಾಲುವೆಗಳನ್ನು ಗ್ರಾಮಸ್ಥರು ಗ್ರಾಮ ಪಂಚಾಯಿತಿ ನೆರವಿನೊಂದಿಗೆ ಸರಿಪಡಿಸಿದರೆ ಮಳೆ ನೀರು ಪೋಲಾಗದ ಹಾಗೆ ಕಾಪಾಡಿಕೊಳ್ಳಬಹುದಾಗಿದೆ. ಆಗ ವರ್ಷವಿಡೀ ಕೆರೆಗಳಲ್ಲಿ ನೀರು ಇರುತ್ತದೆ.

ನಗರದಲ್ಲಿನ ರಾಜಕಾಲುವೆ: ನಗರದ ಸರ್ಕಾರಿ ಬಸ್ ನಿಲ್ದಾಣ ಬಳಿ ರಸ್ತೆ ಪಕ್ಕದಲ್ಲಿ ‘ಅಮ್ಮನ ಕೆರೆಯಿಂದ ಗೌಡನ ಕೆರೆಗೆ’ ಸಂಪರ್ಕ ಕಲ್ಪಿಸುವ ಕಾಲುವೆ ಇದೆ. ಕಸದ ರಾಶಿ, ಹೂಳು, ಕಳೆ ಗಿಡಗಳಿಂದ ತುಂಬಿಹೋಗಿದ್ದ ಕಾಲುವೆಯನ್ನು ಶಾಸಕ ಬಿ.ಎನ್.ರವಿಕುಮಾರ್ ಖುದ್ದು ನಿಂತು ಸರಿಪಡಿಸಿದರು.

ನಗರದ ರೈಲ್ವೆ ಕೆಳಸೇತುವೆ ಸರಿಪಡಿಸಿ ಕಾಂಕ್ರಿಟ್ ಹೊದಿಕೆ ಹಾಕಿಸಿದರು. ಮಳೆ ನೀರು ಸರಾಗವಾಗಿ ಹರಿದು ಹೋಗಲು ಈಗ ಸಾಧ್ಯವಾಗಿದೆ. ನಗರದ ಉಲ್ಲೂರುಪೇಟೆಯಲ್ಲಿರುವ ದೊಡ್ಡ ಕಾಲುವೆ ಚಿಂತಾಮಣಿ ರಸ್ತೆವರೆಗೂ ಸಾಗಿದೆ. ಇದನ್ನು ಕೂಡ ಸ್ವಚ್ಛಗೊಳಿಸಲಾಗಿದೆ.

ನಗರದ ವಿವಿಧ ಅಂಗಡಿ, ಹೋಟಲ್ ಪ್ಲಾಸ್ಟಿಕ್ ಕಸ ಹಾಗೂ ಮಾಂಸದ ಅಂಗಡಿಗಳವರು ತ್ಯಾಜ್ಯ ತಂದು ಕಾಲುವೆಗಳಲ್ಲಿ ಸುರಿಯುತ್ತಾರೆ. ಅದಕ್ಕೆ ಕಡಿವಾಣ ಬೀಳಬೇಕಿದೆ.

ಶಿಡ್ಲಘಟ್ಟ ತಾಲ್ಲೂಕಿನ ಕೆರೆಗಳ ಸಾಂದ್ರತೆ
ಶಿಡ್ಲಘಟ್ಟ ತಾಲ್ಲೂಕಿನ ಕೆರೆಗಳ ಸಾಂದ್ರತೆ

ಚರಂಡಿ ಕಾಲುವೆ ಸರಿಪಡಿಸಿ

‘ನಗರದ ಹಲವು ವಾರ್ಡ್‌ಗಳಲ್ಲಿ ಚರಂಡಿ ಸ್ವಚ್ಛಗೊಳಿಸದಿರುವುದರಿಂದ ಮಳೆ ನೀರು ಮನೆಗಳಿಗೆ ನುಗ್ಗುತ್ತದೆ. ನಗರಸಭೆ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಚರಂಡಿ ಹಾಗೂ ಕಾಲುವೆ ಸರಿಪಡಿಸಬೇಕು. ಆಗ ಮಳೆ ಬಂದರೆ ಚರಂಡಿಯಲ್ಲಿನ ತ್ಯಾಜ್ಯ ಸಮೇತ ಮಳೆ ನೀರು ಮನೆಗೆ ನುಗ್ಗುವುದು ತಪ್ಪುತ್ತದೆ’.

–ಹಫೀಜುಲ್ಲಾ, ನಗರದ ನಿವಾಸಿ

ಕೆರೆಗಳ ನಾಡು

ಚಿಕ್ಕಬಳ್ಳಾಪುರ ಮತ್ತು ಕೋಲಾರ ಅವಳಿ ಜಿಲ್ಲೆಗಳು ಕೆರೆಗಳ ನಾಡು ಎಂದೇ ಪ್ರಸಿದ್ಧಿ ಪಡೆದಿದೆ. ಹಿಂದಿನಿಂದಲೂ ಮಳೆ ನೀರು ಕೆರೆಗಳಲ್ಲಿ ಶೇಖರಿಸಿ ಕೃಷಿ ಬದುಕು ಕಟ್ಟಿಕೊಂಡ ಶ್ರಮಿಕ ಜನರು ನಮ್ಮವರು. ಎಚ್.ಎನ್.ವ್ಯಾಲಿ ನೀರು ಮತ್ತು ಮಳೆ ನೀರಿನಿಂದಾಗಿ ಇದೀಗ ಕೆರೆಗಳಿಗೆ ನೀರು ಬರುವಂತಾಗಿದೆ. ನೀರಿದ್ದರೆ ನಮ್ಮ ಭಾಗದ ಜನರ ಆರ್ಥಿಕ ಪ್ರಗತಿ ಏರುಗತಿಯಲ್ಲಿ ಸಾಗುತ್ತದೆ. ಕೆಲವೆಡೆ ನೀರು ಸರಾಗವಾಗಿ ಹರಿದು ಹೋಗಲು ಆಸ್ಪದವಿಲ್ಲದೆ ಮನೆಗಳು ಮತ್ತು ತೋಟಗಳಿಗೆ ನೀರು ನುಗ್ಗುತ್ತದೆ. ಕಾಲುವೆಗಳ ಒತ್ತುವರಿ ತೆರವು ಮಾಡಿ ಭವಿಷ್ಯದಲ್ಲಿ ಈ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು.

-ಬಿಳಿಶಿವಾಲೆ ರವಿ, ಕೆಂಪಣ್ಣಸ್ವಾಮಿ ವೀರಣ್ಣಸ್ವಾಮಿ ದೇವಾಲಯ ಟ್ರಸ್ಟ್ ಉಪಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT