ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಅಗಾಧವಾಗಿದೆ. ಫ್ಲೋರೈಡ್ ಕ್ಯಾಲ್ಸಿಯಂ ಸಮಸ್ಯೆ ಜನರನ್ನು ಬಾಧಿಸುತ್ತಿದೆ. ನಗರ ಬೆಳೆಯುತ್ತಿದೆ. ನೀರಿನ ಕೊರತೆ ಇದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಮೂಲಕ ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ‘ಅಮೃತ್ 2’ ಯೋಜನೆಯಡಿ ಶಿಡ್ಲಘಟ್ಟದ ಕುಡಿಯುವ ನೀರಿನ ಯೋಜನೆ ಸೇರಿಸುವಂತೆ ವಿನಂತಿಸಿದ್ದೆವು. ರಾಜ್ಯ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಕೂಡ ಸ್ಪಂದಿಸಿದರು. ಈ ಯೋಜನೆಗೆ ನೆರವಾದರು ಎಂದು ಹೇಳಿದರು. ರಾಮಸಮುದ್ರ ಕೆರೆಯಿಂದ ಈ ಯೋಜನೆಗೆ ಬಳಸಿಕೊಳ್ಳುವುದು 3.5 ಎಂಎಲ್‌ಡಿ ಮಾತ್ರ. ಉಳಿಕೆ 6.5 ಎಂಎಲ್‌ಡಿಯಷ್ಟು ನೀರು ಕೆರೆಯಲ್ಲೇ ಇರುತ್ತದೆ. ತಾಲ್ಲೂಕಿನ 13 ಹಳ್ಳಿಗಳು ಮತ್ತು ನಗರದ ಎಲ್ಲಾ ಮನೆಗಳಿಗೂ ಶುದ್ಧ ಕುಡಿಯುವ ನೀರು ನಿರಂತರವಾಗಿ ಸಿಗಲಿದೆ ಎಂದರು. ರೇಷ್ಮೆ ಉದ್ಯಮಕ್ಕೂ ನೀರು ಬೇಕು ನಗರ ದಿನೇದಿನೇ ಬೆಳೆಯುತ್ತಿದೆ. ನಗರದಲ್ಲಿ ಜನರಿಗಲ್ಲದೆ ರೇಷ್ಮೆ ಉದ್ಯಮಕ್ಕೂ ನೀರು ಬೇಕಿದೆ. ನೀರಿಗೆ ಕೊಳವೆಬಾವಿಗಳನ್ನಷ್ಟೇ ನಾವು ನಂಬಿರುವುದರಿಂದ ಸಾಕಷ್ಟು ಸಮಸ್ಯೆಗಳಿವೆ. ರಾಮಸಮುದ್ರ ಕೆರೆಯಿಂದ ನೀರು ಬಂದರೆ ನಮ್ಮ ನಗರಕ್ಕೆ ಬಹಳ ಉಪಯೋಗ ಮತ್ತು ಉಪಕಾರವಾಗಲಿದೆ ಎನ್ನುತ್ತಾರೆ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಜಿ.ಅಮೃತ.
ಜಿಲ್ಲೆಯ ಎರಡನೇ ದೊಡ್ಡ ಕೆರೆ
ಶಿಡ್ಲಘಟ್ಟ ಹಾಗೂ ಚಿಕ್ಕಬಳ್ಳಾಪುರದ ಗಡಿಯ ಅಚ್ಚುಕಟ್ಟು ಪ್ರದೇಶ ಹಂಚಿಕೊಂಡಿರುವ ರಾಮಸಮುದ್ರ ಕೆರೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಅತಿ ದೊಡ್ಡದಾದ ಕೆರೆ. ಜಿಲ್ಲೆಯಲ್ಲಿಯೇ ಎರಡನೇ ಅತಿದೊಡ್ಡ ಕೆರೆ ಎಂಬ ಖ್ಯಾತಿ ಪಡೆದಿದೆ. ತಾಲ್ಲೂಕಿನ ಉತ್ತರ ಭಾಗವು ಬೆಟ್ಟಗುಡ್ಡಗಳ ಸಾಲಿನಿಂದ ಕೂಡಿದ್ದು ಸಣ್ಣಪುಟ್ಟ ಕೆರೆಗಳ ಸರಪಳಿಯಾಗಿದೆ. ಅವುಗಳ ಪೈಕಿ ಪ್ರಮುಖವಾದ ತಲಕಾಯಲಬೆಟ್ಟದ ವೆಂಕಟೇಶ್ವರಸಾಗರ ಮತ್ತು ಎಸ್.ದೇವಗಾನಹಳ್ಳಿಯ ರಾಮಸಮುದ್ರ ಕೆರೆಗಳು ಮಾತ್ರ ದೊಡ್ಡ ಪ್ರಮಾಣದ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿವೆ. 130 ವರ್ಷಗಳ ಹಿಂದೆ ನಿರ್ಮಿಸಿದ್ದ ರಾಮಸಮುದ್ರ ಕೆರೆಯು 900 ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದೆ. 800 ಎಕರೆಯಷ್ಟು ಅಚ್ಚುಕಟ್ಟು ಶಿಡ್ಲಘಟ್ಟ ತಾಲ್ಲೂಕಿನಲ್ಲಿದ್ದರೆ ಉಳಿದ 100 ಎಕರೆಯಷ್ಟು ಅಚ್ಚುಕಟ್ಟು ಚಿಕ್ಕಬಳ್ಳಾಪುರ ತಾಲ್ಲೂಕಿನ ವ್ಯಾಪ್ತಿಯಲ್ಲಿದೆ. ಈ ಕೆರೆ ಸುತ್ತ ಮುತ್ತಲ ಏಳೂರಿನ ಗ್ರಾಮಸ್ಥರಿಗೆ ಜೀವನಾಡಿಯಾಗಿದೆ.
ಕೇಂದ್ರ ರಾಜ್ಯದ ಅನುದಾನ
₹ 96 ಕೋಟಿ ಯೋಜನೆಯ ವೆಚ್ಚವಾಗಿದೆ. ಈ ಪೈಕಿ ಕೇಂದ್ರ ಸರ್ಕಾರ ಶೇ 50 (₹ 42.88 ಕೋಟಿ) ರಾಜ್ಯ ಸರ್ಕಾರ ಶೇ 40 (₹34.30 ಕೋಟಿ) ನಗರಸಭೆ ಶೇ 10 (₹18.8 ಕೋಟಿ) ಭರಿಸಲಿವೆ. ನಗರದ ಜೊತೆಗೆ ತಾಲ್ಲೂಕಿನ ಯರ್ರಗಾನಹಳ್ಳಿ ಗಡಿಮಿಂಚೇನಹಳ್ಳಿ ಅಮ್ಮಗಾರಹಳ್ಳಿ ಬಶೆಟ್ಟಹಳ್ಳಿ ಅಜ್ಜಕದಿರೇನಹಳ್ಳಿ ಗಿರಿಮಿರಲಹಳ್ಳಿ ಕೋಟಹಳ್ಳಿ ಜಯಂತಿಗ್ರಾಮ ಮಲ್ಲಹಳ್ಳಿ ಅಬ್ಲೂಡು ಚೀಮನಹಳ್ಳಿ ವರದನಾಯಕನಹಳ್ಳಿ ಹನುಮಂತಪುರ ಗ್ರಾಮಗಳಿಗೂ ನೀರಿನ ಸೌಲಭ್ಯ ಸಿಗಲಿದೆ. ಶಿಡ್ಲಘಟ್ಟ ನಗರ ಮತ್ತು ಮಾರ್ಗ ಮಧ್ಯದ 13 ಹಳ್ಳಿಗಳಿಗೆ ಕುಡಿಯುವ ನೀರಿನ ಬೇಡಿಕೆ 2025ಕ್ಕೆ 84 ಎಂ.ಸಿ.ಎಫ್.ಟಿ ಗಳಿದ್ದರೆ ರಾಮಸಮುದ್ರ ಕೆರೆಯ ನೀರಿನ ಶೇಖರಣಾ ಸಾಮರ್ಥ್ಯ 280.18 ಎಂ.ಸಿ.ಎಫ್.ಟಿ ಆಗಿದೆ. ರಾಮಸಮುದ್ರ ಕೆರೆ ಅಂಗಳದ ವಿಸ್ತೀರ್ಣ 470 ಎಕರೆ.