ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ: ಬಯಲುಸೀಮೆಯಲ್ಲಿ ಜೆಡಿಎಸ್‌ಗೆ ಬಲ

Published 9 ಜೂನ್ 2024, 5:11 IST
Last Updated 9 ಜೂನ್ 2024, 5:11 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಹಳೆ ಮೈಸೂರು ಭಾಗದ ಜಿಲ್ಲೆಗಳಲ್ಲಿ ಜೆಡಿಎಸ್‌ಗೆ ಉತ್ತಮ ನೆಲೆ ಇದೆ. ಅದರಲ್ಲಿಯೂ ಬಯಲು ಸೀಮೆಯ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಗಳಲ್ಲಿ ಪಕ್ಷಕ್ಕೆ ತನ್ನದೇ ಆದ ದೊಡ್ಡ ಮಟ್ಟದ ಮತ ಬ್ಯಾಂಕ್ ಇದೆ. 

ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟದ ಸಂಭಾವ್ಯ ಸಚಿವರಲ್ಲಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರೂ ಆದ ಮಂಡ್ಯ ಸಂಸದ ಎಚ್‌.ಡಿ. ಕುಮಾರಸ್ವಾಮಿ ಅವರೂ ಇದ್ದಾರೆ. ಎಚ್‌.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗುವುದು ಬಯಲು ಸೀಮೆಯ ಈ ಜಿಲ್ಲೆಗಳಲ್ಲಿ ಜೆಡಿಎಸ್ ಬಲಗೊಳ್ಳಲು ಕಾರಣವಾಗುತ್ತದೆ ಎನ್ನುವ ನಂಬಿಕೆ ಆ ಪಕ್ಷದ ನಾಯಕರಲ್ಲಿದೆ. 

ಕುಮಾರಸ್ವಾಮಿ ಸಚಿವರಾಗುವುದನ್ನು ಕಣ್ತುಂಬಿಕೊಳ್ಳಲು ಈ ಜಿಲ್ಲೆಗಳ ಪ್ರಮುಖ ಮುಖಂಡರು ನವದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ. 

ಲೋಕಸಭೆ ಚುನಾವಣೆಯಲ್ಲಿ ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನ ಪತಾಕೆ ಹಾರಿಸಲು ಜೆಡಿಎಸ್ ಪ್ರಮುಖ ಕಾರಣ. ಕೋಲಾರ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಿ ಗೆಲ್ಲಿಸಿಕೊಂಡಿದೆ. ಒಕ್ಕಲಿಗ ಸಮುದಾಯದ ಮತದಾರರು ಬಹುಸಂಖ್ಯೆಯಲ್ಲಿರುವ ಈ ಜಿಲ್ಲೆಗಳಲ್ಲಿ ಲೋಕಸಭಾ ಚುನಾವಣೆಯಲ್ಲಿ ಈ ಸಮುದಾಯ ಬಿಜೆಪಿ–ಜೆಡಿಎಸ್ ಮೈತ್ರಿಕೂಟವನ್ನು ದೊಡ್ಡ ಪ್ರಮಾಣದಲ್ಲಿ ಬೆಂಬಲಿಸಿದೆ. 

ಎಚ್‌ಡಿಕೆಗೆ ನಂಟು: ‘ಚಿಕ್ಕಬಳ್ಳಾಪುರ ಜಿಲ್ಲೆಯ ಜನರು ನನ್ನ ಮನೆಯ ಮಗನಂತೆ ಕಾಣುವರು. ಅವರ ಹೃದಯದಲ್ಲಿ ನನಗೆ ಸ್ಥಾನ ನೀಡಿದ್ದಾರೆ. ಆ ಸ್ಥಾನವನ್ನು ಉಳಿಸಿಕೊಳ್ಳುವೆ’–ಇದು ಜಿಲ್ಲೆಗೆ ಎಚ್‌.ಡಿ.ಕುಮಾರಸ್ವಾಮಿ ಯಾವುದೇ ಚುನಾವಣೆಯ ಸಮಯದಲ್ಲಿ ಭೇಟಿ ನೀಡಿದಾಗಲೂ ಹೇಳುವ ಮಾತು. ಕೋಲಾರ ಜಿಲ್ಲೆಯಿಂದ ಬೇರ್ಪಡಿಸಿ ಚಿಕ್ಕಬಳ್ಳಾಪುರಕ್ಕೆ ಜಿಲ್ಲೆಯ ಅಸ್ತಿತ್ವ ನೀಡಿದ್ದು ಸಹ ಎಚ್‌ಡಿಕೆ.  

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಪ್ರಚಾರಕ್ಕೆ ಎನ್‌ಡಿಎ ಪ್ರಮುಖವಾಗಿ ನೆಚ್ಚಿಕೊಂಡಿತ್ತು. ಎರಡೂ ಕ್ಷೇತ್ರಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಯ ವೇಳೆಯೂ ಹಾಜರಿದ್ದರು. ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಕುಮಾರಸ್ವಾಮಿ ಪ್ರಚಾರ ನಡೆಸಿದ್ದರು. ಇದು ಎನ್‌ಡಿಎ ಅಭ್ಯರ್ಥಿಗಳಿಗೆ ಪ್ರಮುಖವಾಗಿ ಬಲ ತಂದಿತು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಪಕ್ಷಕ್ಕೆ ಇರುವ ಬಲವನ್ನು ಮನಗಂಡು ಎಚ್‌.ಡಿ.ಕುಮಾರಸ್ವಾಮಿ ಅವರು 2014ರ ಲೋಕಸಭಾ ಚುನಾವಣೆಯಲ್ಲಿ ಇಲ್ಲಿಂದ ಕಣಕ್ಕೆ ಇಳಿದಿದ್ದರು. 3,46,339 (ಶೇ 27.4) ಮತಗಳನ್ನು ಪಡೆದಿದ್ದರು. ಅವರ ಸ್ಪರ್ಧೆಯು ಅಂದು ಬಿಜೆಪಿ ಅಭ್ಯರ್ಥಿಯಾಗಿದ್ದ ಒಕ್ಕಲಿಗ ಸಮುದಾಯದ ಬಿ.ಎನ್.ಬಚ್ಚೇಗೌಡ ಅವರ ಸೋಲಿಗೆ ಕಾರಣವಾಗಿತ್ತು. 

ಮೈತ್ರಿಯ ಬಲ: ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ರಾಜಕೀಯ ಹೆಜ್ಜೆ ಗುರುತುಗಳನ್ನು ನೋಡಿದರೆ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಾಂಪ್ರದಾಯಿಕ ಎದುರಾಳಿಗಳಾಗುತ್ತಿದ್ದವು. ಅಲ್ಲೊಂದು ಇಲ್ಲೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ನೆಲೆ ಕಂಡುಕೊಂಡಿತ್ತು. 

ಆದರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಗ್ಗಟ್ಟಿನಿಂದ ಮುನ್ನಡೆಯುವ ಮೂಲಕ ಇಲ್ಲಿ ಕಾಂಗ್ರೆಸ್ ಮಣಿಸಿವೆ. ಗೆಲುವಿನ ಉತ್ಸಾಹದಲ್ಲಿರುವ ಎರಡೂ ಪಕ್ಷಗಳ ಮುಖಂಡರು ಮುಂದಿನ ಎಲ್ಲ ಚುನಾವಣೆಗಳಲ್ಲಿಯೂ ‘ಮೈತ್ರಿ’ಯಾಗಿ ನಡೆದರೆ ಕಾಂಗ್ರೆಸ್ ಮಣಿಸಬಹುದು ಎಂದೇ ಪ್ರತಿಪಾದಿಸುತ್ತಿದ್ದಾರೆ.  

ಈ ಎಲ್ಲ ಲೆಕ್ಕಾಚಾರಗಳ ಕಾರಣದಿಂದ ಎಚ್‌.ಡಿ.ಕುಮಾರಸ್ವಾಮಿ ಕೇಂದ್ರ ಸಚಿವರಾಗುತ್ತಾರೆ ಎನ್ನುವುದು ಈ ಜಿಲ್ಲೆಗಳ ಜೆಡಿಎಸ್ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದೆ. ಜೆಡಿಎಸ್‌ನ ಸಾಂಪ್ರದಾಯಿಕ ಮತದಾರರು ಎನಿಸಿರುವ ಒಕ್ಕಲಿಗರ ಮತಗಳು ಚದುರದಂತೆ ತಡೆಯಲು ಸಾಧ್ಯವಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.  

ಅಭಿವೃದ್ಧಿಗೆ ಬಲ

ಎಚ್‌.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾದರೆ ಬಯಲು ಸೀಮೆಯ ಜಿಲ್ಲೆಗಳ ಅಭಿವೃದ್ಧಿಗೆ ಬಲ ದೊರೆಯಲಿದೆ ಎಂದು ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಆರ್.ರೆಡ್ಡಿ ತಿಳಿಸುವರು.

ಅವಿಭಜಿತ ಕೋಲಾರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಜೆಡಿಎಸ್‌ಗೆ ಗ್ರಾಮೀಣ ಮಟ್ಟದಲ್ಲಿ ಕಾರ್ಯಕರ್ತರ ಪಡೆ ಇದೆ. ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ದೇವೇಗೌಡರ ಬೆಂಬಲಿತ 11 ಮಂದಿ ಶಾಸಕರು ಈ ಹಿಂದೆ ಆಯ್ಕೆ ಆಗಿದ್ದ ಇತಿಹಾಸವಿದೆ ಎಂದರು.

ಜೆಡಿಎಸ್ ಕಾರಣದಿಂದಲೇ ಬಿಜೆಪಿ ಹಳೇ ಮೈಸೂರು ಭಾಗದ ಕ್ಷೇತ್ರಗಳಲ್ಲಿ ಹೆಚ್ಚು ಸ್ಥಾನ ಪಡೆಯಿತು. ಕುಮಾರಸ್ವಾಮಿ ಅವರು ಸಚಿವರಾಗುವುದರಿಂದ ಈ ಜಿಲ್ಲೆಗಳ ನೀರಾವರಿ, ಕೃಷಿ ಕ್ಷೇತ್ರಗಳ ಬೆಳವಣಿಗೆ ಸಾಧ್ಯವಾಗುತ್ತದೆ. ಅವರು ಬಯಲು ಸೀಮೆಯ ಜಿಲ್ಲೆಗಳಿಗೆ ಆದ್ಯತೆ ನೀಡುವರು ಎಂದು ಪ್ರತಿಪಾದಿಸಿದರು.

ನೀರಾವರಿ ಆಶಾವಾದ

ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗುವುದು ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೀರಾವರಿ ವಿಚಾರವಾಗಿ ಆಶಾವಾದವನ್ನು ಗರಿಗೆದರುವಂತೆ ಮಾಡಿದೆ.

‘ಬಯಲು ಸೀಮೆಗೆ ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲು ಕ್ರಮವಹಿಸುವೆ. ಈ ವಿಚಾರದಲ್ಲಿ ನಾನು ಯಶಸ್ಸು ಕಾಣದಿದ್ದರೆ  ಮುಂದಿನ ಐದು ವರ್ಷಗಳ ನಂತರ ರಾಜಕೀಯದಲ್ಲಿ ಮುಂದುವರಿಯುವುದಿಲ್ಲ. ಮುಂದಿನ ಐದು ವರ್ಷಗಳ ನಂತರ ರಾಜಕೀಯ ನಿವೃತ್ತಿ ಪಡೆಯುವೆ’ ಎಂದು ಚಿಕ್ಕಬಳ್ಳಾಪುರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. 

ಬಯಲು ಸೀಮೆಯ ಈ ಮೂರು ಜಿಲ್ಲೆಗಳಿಗೆ ಎಚ್‌ಡಿಕೆ ಭೇಟಿ ನೀಡಿದಾಗಲೆಲ್ಲ ನೀರಾವರಿ ವಿಚಾರಗಳನ್ನು ಪ್ರಧಾನವಾಗಿ ಪ್ರಸ್ತಾಪಿಸುವರು. ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾದರೆ ಈ ಜಿಲ್ಲೆಗಳ ನೀರಾವರಿ ಯೋಜನೆಗಳ ವಿಚಾರವಾಗಿ ಧ್ವನಿ ಎತ್ತುವರು ಎನ್ನುವ ನಂಬಿಕೆ ಜೆಡಿಎಸ್‌ ಕಾರ್ಯಕರ್ತರಲ್ಲಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT