ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂದಿಬೆಟ್ಟದಲ್ಲಿ ‘ನಂದಿ ಸಂತೆ’ಗೆ ಚಾಲನೆ

ಪ್ರವಾಸೋದ್ಯಮವನ್ನು ಉತ್ತೇಜನದ ಜತೆಗೆ ಕೃಷಿ ಮತ್ತು ಕರಕುಶಲ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಜಿಲ್ಲಾಡಳಿತದ ವಿನೂತನ ಪ್ರಯತ್ನ
Last Updated 1 ಸೆಪ್ಟೆಂಬರ್ 2018, 11:14 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ನಂದಿ ಗಿರಿಧಾಮದಲ್ಲಿ ವಾರಾಂತ್ಯದ ದಿನಗಳಲ್ಲಿ ಸ್ಥಳೀಯ ಕೃಷಿ ಉತ್ಪನ್ನ, ಕರಕುಶಲ ವಸ್ತುಗಳಿಗೆ ಮಾರುಕಟ್ಟೆ ಒದಗಿಸಿ ಕೊಡುವ ಜತೆಗೆ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ನೂತನವಾಗಿ ರೂಪಿಸಿದ ‘ನಂದಿ ಸಂತೆ’ಗೆ ಶನಿವಾರ ನಂದಿಬೆಟ್ಟದಲ್ಲಿ ಸಂಸದ ವೀರಪ್ಪ ಮೊಯಿಲಿ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ‘ನೂತನ ಜಿಲ್ಲಾಧಿಕಾರಿ ಅನಿರುದ್ಧ್ ಅವರ ಪರಿಕಲ್ಪನೆಯ ಈ ಸಂತೆ ಇನ್ನು ಮುಂದೆ ಪ್ರತಿ ವಾರ ವಾರಾಂತ್ಯದ ದಿನಗಳಲ್ಲಿ ನಿರಂತರವಾಗಿ ನಡೆಯುತ್ತದೆ. ಇಲ್ಲಿ ಸ್ಥಳೀಯ ರೈತರು, ಕುಶಲಕರ್ಮಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗುತ್ತದೆ. ಇದು ಅಭೂತಪೂರ್ವವಾಗಿ ಪ್ರಚಾರವಾಗುವುದರಲ್ಲಿ ಸಂಶಯವಿಲ್ಲ’ ಎಂದು ಹೇಳಿದರು.

‘ವಿವಿಧ ಜಿಲ್ಲೆಗಳಲ್ಲಿ ನಡೆಯುವ ಉತ್ಸವಗಳ ಮಾದರಿಯಲ್ಲಿಯೇ ಜಿಲ್ಲೆಯಲ್ಲಿ ನಂದಿ ಉತ್ಸವ ನಡೆಸಲು ಅನೇಕ ವರ್ಷಗಳಿಂದ ಯೋಚಿಸುತ್ತ ಬರಲಾಗಿತ್ತು. ಆದರೆ ಬರಗಾಲದ ಕಾರಣಕ್ಕೆ ಅದನ್ನು ಮುಂದೂಡುತ್ತ ಬರಲಾಗಿತ್ತು. ಆದರೆ ಈ ಬಾರಿ ಡಿಸೆಂಬರ್‌ಗೂ ಮುನ್ನವೇ ನಂದಿ ಉತ್ಸವ ನಡೆಸಲು ಉದ್ದೇಶಿಸಿದ್ದೇವೆ. ಎರಡ್ಮೂರು ದಿನಗಳ ಕಾಲ ನಡೆಯುವ ಉತ್ಸವ ದೇಶ, ವಿದೇಶಿಯರನ್ನು ಆಕರ್ಷಿಸುವ ದೊಡ್ಡ ಉತ್ಸವವಾಗುತ್ತದೆ’ ಎಂದು ತಿಳಿಸಿದರು.

‘ನಂದಿ ಉತ್ಸವದಲ್ಲಿ ದೊಡ್ಡ ಪ್ರಮಾಣದಲ್ಲಿ ವಸ್ತು ಪ್ರದರ್ಶನ ಮೇಳ ಆಯೋಜಿಸಿ, ಅದರಿಂದ ಬರುವ ಆದಾಯವನ್ನು ಕೊಡಗು ಸಂತ್ರಸ್ತರಿಗೆ ಪರಿಹಾರವಾಗಿ ಕೊಡುವ ಬಗ್ಗೆ ಆಲೋಚಿಸಲಾಗಿದೆ. ಸೆಪ್ಟೆಂಬರ್ 7 ರಂದು ಸಭೆಯನ್ನು ಕರೆದು ಉತ್ಸವದ ರೂಪುರೇಷಗಳನ್ನು ಅಂತಿಮಗೊಳಿಸುತ್ತೇವೆ. ಶೀಘ್ರದಲ್ಲಿಯೇ ನಂದಿ ಗ್ರಾಮದಲ್ಲಿರುವ ಭೋಗನಂದೀಶ್ವರ ದೇವಾಲಯದ ಜೀರ್ಣೋದ್ಧಾರ ಕೆಲಸ ಆರಂಭವಾಗಲಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್‌.ವಿ.ಮಂಜುನಾಥ್, ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ ಹೆಗಡೆ, ಉಪ ವಿಭಾಗಾಧಿಕಾರಿ ಶಿವಸ್ವಾಮಿ, ಎಸ್‌ಪಿ ಕಾರ್ತಿಕ್ ರೆಡ್ಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಹಾಪ್‌ಕಾಮ್ಸ್‌ ನಿರ್ದೇಶಕ ಜಿ.ಆರ್.ಶ್ರೀನಿವಾಸ್, ನಗರ ಯೋಜನಾ ಕೋಶದ ನಿರ್ದೇಶಕ ಭಾಸ್ಕರ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT