ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ: ಅಪಾಯದ ಸ್ಥಿತಿಯಲ್ಲಿ 678 ಕೊಠಡಿ

ಶಾಲಾ ಕೊಠಡಿಗಳ ದುರಸ್ತಿಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ₹ 54 ಲಕ್ಷ ಮಂಜೂರು
Published 19 ಜೂನ್ 2024, 6:29 IST
Last Updated 19 ಜೂನ್ 2024, 6:29 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಮಳೆಗಾಲ ಆರಂಭವಾಗಿದೆ. ಎಲ್ಲ ಇಲಾಖೆಗಳು ಸಹ ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಮಳೆಗಾಲದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ಶಿಕ್ಷಣ ಇಲಾಖೆ ಸಹ ಮಳೆಗಾಲದ ಮುನ್ನೆಚ್ಚರಿಕೆ ಕ್ರಮವಾಗಿ ಶಿಥಿಲವಾಗಿರುವ ಶಾಲಾ ಕೊಠಡಿಗಳ ಪಟ್ಟಿ ಮಾಡಿದೆ. ಅವುಗಳಲ್ಲಿ ಅಪಾಯದ ಸ್ಥಿತಿಯಲ್ಲಿರುವ ಕೊಠಡಿಗಳನ್ನು ನೆಲಸಮ ಮಾಡಿದರೆ, ಹಾಳಾದ ಕೊಠಡಿಗಳನ್ನು ದುರಸ್ತಿ ಮಾಡಿಸಲು ಮುಂದಾಗಿದೆ.

ಜಿಲ್ಲೆಯ 437 ಶಾಲೆಗಳಲ್ಲಿನ 678 ಕೊಠಡಿಗಳು ದುರಸ್ತಿಗೆ ಬಂದಿವೆ. ಹೀಗೆ ದುರಸ್ತಿಗೆ ಬಂದಿರುವ ಶಾಲೆಗಳಲ್ಲಿ ಒಟ್ಟು 2,174 ಕೊಠಡಿಗಳು ಇವೆ. ಇವುಗಳ ಪೈಕಿ 1,496 ಕೊಠಡಿಗಳು ಉತ್ತಮ ಸ್ಥಿತಿಯಲ್ಲಿ ಇವೆ. ಉಳಿದ ಕೊಠಡಿಗಳು ದುರಸ್ತಿಯ ಭಾಗ್ಯ ಕಾಣಬೇಕಾಗಿದೆ. 

ಕೆಲವು ಕೊಠಡಿಗಳು ಸಣ್ಣ ಪುಟ್ಟ ರಿಪೇರಿ ಇದ್ದರೆ ಮತ್ತೊಂದಿಷ್ಟು ಕೊಠಡಿಗಳ ದುರಸ್ತಿಗೆ ಹೆಚ್ಚು ಹಣದ ಅಗತ್ಯವಿದೆ. ಮಳೆ ನೀರು ಸೋರುವುದು, ಚಾವಣಿ ಕಿತ್ತು ಬಂದಿರುವುದು, ನೆಲಹಾಸು ಹಾಳಾಗಿರುವುದು, ಸುಣ್ಣ ಬಣ್ಣ ಅಗತ್ಯವಿರುವುದು–ಹೀಗೆ ನಾನಾ ರೀತಿ ದುರಸ್ತಿಗಳನ್ನು ಇಲಾಖೆ ಮಾಡಿಸಬೇಕಾಗಿದೆ.

ಜಿಲ್ಲೆಯ ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿಯೇ ಅತಿ ಹೆಚ್ಚು ಕೊಠಡಿಗಳು ದುರಸ್ತಿಗೆ ಬಂದಿವೆ. ಈ ತಾಲ್ಲೂಕಿನಲ್ಲಿ 262 ಕೊಠಡಿಗಳು ದುರಸ್ತಿ ಕೈಗೊಳ್ಳಬೇಕಾಗಿದೆ. ಶಿಡ್ಲಘಟ್ಟ ಹೊರತುಪಡಿಸಿ ಉಳಿದ ತಾಲ್ಲೂಕುಗಳಲ್ಲಿ ದುರಸ್ತಿಗೆ ಬಂದಿರುವ ಕೊಠಡಿಗಳ ಸಂಖ್ಯೆ 100ರ ಒಳಗೆ ಇದೆ.

ವಿಶೇಷ ಅನುದಾನ: ನಂಜುಂಡಪ್ಪ ವರದಿಯ ಪ್ರಕಾರ ಬಾಗೇಪಲ್ಲಿ ಮತ್ತು ಗೌರಿಬಿದನೂರು ಅತಿ ಹಿಂದುಳಿದ ತಾಲ್ಲೂಕುಗಳ ಪಟ್ಟಿಯಲ್ಲಿವೆ. ಈ ಕಾರಣದಿಂದ 44 ಶಾಲೆಗಳ 47 ಕೊಠಡಿಗಳ ದುರಸ್ತಿಗೆ ಸರ್ಕಾರದಿಂದ ವಿಶೇಷ ಅನುದಾನ ದೊರೆತಿದೆ. ‌ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ 34 ಶಾಲೆಗಳಲ್ಲಿನ ಕೊಠಡಿಗಳ ದುರಸ್ತಿಗೆ ತಲಾ ₹ 10 ಲಕ್ಷ ಸಹ ಮಂಜೂರಾಗಿದೆ ಎನ್ನುತ್ತದೆ ಶಿಕ್ಷಣ ಇಲಾಖೆ.

ಸಿಎಸ್‌ಆರ್ ಸದ್ಬಳಕೆ: ಜಿಲ್ಲೆಯ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರವೂ ಸೇರಿದಂತೆ ಕೆಲವು ಆಯ್ದ ಶಾಲೆಗಳನ್ನು ವಿವಿಧ ಕೈಗಾರಿಕೆಗಳು, ಸಂಸ್ಥೆಗಳು ತಮ್ಮ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್)ಯಡಿ ದುರಸ್ತಿ ಮಾಡಿಸಿವೆ. ಕೆಲವು ಕಡೆಗಳಲ್ಲಿ ಕೊಠಡಿಗಳನ್ನೇ ನಿರ್ಮಿಸಿವೆ. ‌

ದಾನಿಗಳು, ವಿವಿಧ ಕಂಪನಿಗಳು ಸಹ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶಾಲಾ ಕೊಠಡಿಗಳನ್ನು ನಿರ್ಮಿಸಿಕೊಟ್ಟಿದ್ದಾರೆ.

ಜಿಲ್ಲೆಯಲ್ಲಿ ಶಿಥಿಲವಾಗಿರುವ ಶಾಲಾ ಕೊಠಡಿಗಳು

ತಾಲ್ಲೂಕು;ಶಾಲೆಗಳ ಸಂಖ್ಯೆ;ಒಟ್ಟು ತರಗತಿ ಕೊಠಡಿಗಳ ಸಂಖ್ಯೆ;ಅಪಾಯದಲ್ಲಿರುವ ತರಗತಿಗಳ ಕೊಠಡಿಗಳು
ಬಾಗೇಪಲ್ಲಿ;59;237;88
ಚಿಕ್ಕಬಳ್ಳಾಪುರ;58;244;75
ಚಿಂತಾಮಣಿ;57;305;73
ಗೌರಿಬಿದನೂರು;149;832;262
ಗುಡಿಬಂಡೆ;11;52;15
ಶಿಡ್ಲಘಟ್ಟ;103;504;165
ಒಟ್ಟು;437;2,174;678

‘ದುರಸ್ತಿಗೆ 2.62 ಕೋಟಿ ಬಿಡುಗಡೆ’

ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಶಾಲಾ ಕೊಠಡಿಗಳ ದುರಸ್ತಿಗಾಗಿ ಎಸ್‌ಸಿಪಿ ಟಿಎಸ್‌ಪಿ ಅನುದಾನದ ಅಡಿಯಲ್ಲಿ ₹ 54.24 ಲಕ್ಷ ಹಣ ಮಂಜೂರಾಗಿದೆ. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು ₹ 2.62 ಕೋಟಿ ಬಿಡುಗಡೆಯಾಗಿದೆ ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ಬೈಲಾಂಜನಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು. ಶಿಥಿಲವಾಗಿರುವ ಕೊಠಡಿಗಳಲ್ಲಿ ತರಗತಿಗಳನ್ನು ನಡೆಸುತ್ತಿಲ್ಲ. ಕೆಲವು ಕಡೆಗಳಲ್ಲಿ ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಕಡಿಮೆ ಆಗಿದೆ. ಇಂತಹ ಕಡೆಗಳಲ್ಲಿ ಕೊಠಡಿಗಳು ಸಹ ಹೆಚ್ಚುವರಿಯಾಗಿವೆ. ಆದ್ದರಿಂದ ಯಾವುದೇ ಸಮಸ್ಯೆ ಆಗಿಲ್ಲ. ಅಪಾಯಕಾರಿ ಕೊಠಡಿಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ತಿಳಿಸಿದರು.  ಈಗ ಇಲಾಖೆಗೆ ಲಭ್ಯವಿರುವ ಅನುದಾನದಲ್ಲಿ ದುರಸ್ತಿಗೆ ಬಂದಿರುವ 678 ಶಾಲಾ ಕೊಠಡಿಗಳ ಪೈಕಿ ಶೇ 50ರಷ್ಟು ಶಾಲೆಗಳನ್ನು ದುರಸ್ತಿ ಮಾಡಿಸಲಾಗುವುದು. ಶಿಥಿಲವಾಗಿರುವ ಕಡೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು. ಸುಣ್ಣ ಬಣ್ಣ ನೆಲಹಾಸು ದುರಸ್ತಿ ಸೇರಿದಂತೆ ಸಣ್ಣ ಪುಟ್ಟ ದುರಸ್ತಿ ಕಾರ್ಯಗಳಿಗೆ ₹ 3 ಲಕ್ಷ ಸಾಕು. ಪ್ರತಿ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಶಾಲೆಗಳ ಕೊಠಡಿಗಳ ಸ್ಥಿತಿಗತಿಯನ್ನು ಸಹ ಪರಿಶೀಲಿಸಿದ್ದೇನೆ ಎಂದು ಹೇಳಿದರು.

ಶಿಥಿಲ 27 ಕೊಠಡಿ ನೆಲಸಮ

ಜಿಲ್ಲೆಯಲ್ಲಿ ಪೂರ್ಣವಾಗಿ ಶಿಥಿಲವಾಗಿರುವ 27 ತರಗತಿ ಕೊಠಡಿಗಳನ್ನು ನೆಲಸಮ ಮಾಡಲಾಗಿದೆ. ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಈ ಬಗ್ಗೆ ವರದಿ ನೀಡಿದ್ದರು. ಆ ವರದಿ ಆಧರಿಸಿ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಅವರಿಂದ ಸಿಇಒ ಕೊಠಡಿಗಳ ಗುಣಮಟ್ಟದ ಬಗ್ಗೆ ವರದಿ ಪಡೆದಿದ್ದರು.  ಈ ಕೊಠಡಿಗಳು ಬಳಕೆಗೆ ಯೋಗ್ಯವಾಗಿಲ್ಲ ಎಂದು ವರದಿ ನೀಡಿದ ನಂತರ ಅವುಗಳನ್ನು ನೆಲಸಮಗೊಳಿಸಲಾಗಿದೆ. ಹೀಗೆ ನೆಲಸಮಗೊಳಿಸಿದ ಕಡೆಗಳಲ್ಲಿ 27 ವಿವೇಕ ಕೊಠಡಿಗಳನ್ನು ನಿರ್ಮಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT