ಭಾನುವಾರ, ಮೇ 16, 2021
23 °C

ಕೊರೊನಾ ಸಂಕಷ್ಟ: ಕೈಹಿಡಿದ ಕುರಿಗಳು, ಕುಟುಂಬಕ್ಕೆ ಆಧಾರವಾದ ಮಹಿಳೆ

ಡಿ.ಜಿ.ಮಲ್ಲಿಕಾರ್ಜುನ Updated:

ಅಕ್ಷರ ಗಾತ್ರ : | |

Prajavani

ಶಿಡ್ಲಘಟ್ಟ: ಕೊರೊನಾ ನನ್ನ ಗಂಡ ಮತ್ತು ಮಗನ ಕೆಲಸ ಕಿತ್ತುಕೊಂಡರೂ ನಾನು ಸಾಕುತ್ತಿದ್ದ ಕುರಿ, ಕೋಳಿ, ಹಸು ನಮ್ಮನ್ನು ಕೈ ಹಿಡಿದು ಕಾಪಾಡಿದವು ಎಂದು ಹಿತ್ತಲಹಳ್ಳಿಯ ಎಚ್.ಸಿ.ರತ್ನಮ್ಮ ಹೇಳುತ್ತಾರೆ.

ಕೊರೊನಾ ತಡೆಗಟ್ಟಲು ಮಾಡಿದ ಲಾಕ್‌ಡೌನ್ ನಿಂದಾಗಿ ಅನೇಕ ಕಾರ್ಮಿಕರು ಕೆಲಸ ಕಳೆದುಕೊಂಡು ತಮ್ಮ ಗ್ರಾಮಗಳಿಗೆ ಹಿಂದಿರುಗಿದರು. ಹಿತ್ತಲಹಳ್ಳಿಯ ಶಿವಣ್ಣ ಮತ್ತು ಅವರ ಮಗ ಹೊಸಕೋಟೆಯ ಬಳಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದವರು ಉದ್ಯೋಗವನ್ನು ಕಳೆದುಕೊಂಡರು. ಮುಂದೇನು ಮಾಡುವುದು ಎಂದು ಚಿಂತಿತರಾದಾಗ ಅವರ ಮಡದಿ ರತ್ನಮ್ಮ ತಾವು ಸಾಕುತ್ತಿರುವ ಕುರಿಗಳೆಡೆಗೆ ಕೈತೋರಿ, ಧೈರ್ಯ ತುಂಬಿದರು.

ಕಳೆದ ಜನವರಿ ತಿಂಗಳಿನಲ್ಲಿ ನಮ್ಮ ಗ್ರಾಮದ ಪ್ರಗತಿಪರ ರೈತ ಎಚ್.ಜಿ.ಗೋಪಾಲಗೌಡ ಅವರ ಬಳಿ ಮೂರು ಕುರಿಮರಿಗಳನ್ನು ತಲಾ ₹6,000ದಂತೆ ಒಟ್ಟು ₹ 18 ಸಾವಿರ ಕೊಟ್ಟು ಕೊಂಡುಕೊಂಡೆ. ಎರಡೂವರೆ ತಿಂಗಳು ಅವುಗಳನ್ನು ಸಾಕಿ ಆ ಮೂರು ಕುರಿಗಳನ್ನು 38,500 ರೂಗಳಿಗೆ ಮಾರಿದೆ. ಕೇವಲ ಎರಡೂವರೆ ತಿಂಗಳಿಗೇ ಶೇಕಡ ನೂರಕ್ಕೂ ಹೆಚ್ಚು ಲಾಭ ಬಂತು ಎಂದರು ರತ್ನಮ್ಮ.

ಈಗ ನನ್ನ ಬಳಿ ಆರು ಕುರಿಗಳು, ಒಂದು ಹಸು ಮತ್ತು ಕೋಳಿಗಳಿವೆ. ನನ್ನ ಗಂಡ ಮತ್ತು ಮಗನಿಗೆ ಮುಂದೆ ಎಲ್ಲೂ ಕೆಲಸಕ್ಕೆ ಹೋಗಬೇಡಿ. ಕುರಿಗಳು ಮತ್ತು ಹಸುಗಳು ನಮ್ಮನ್ನು ಕಾಪಾಡುತ್ತವೆ. ಅವನ್ನೇ ಸಾಕೋಣವೆಂದು ಹೇಳಿದ್ದೇನೆ ಎಂದು ರತ್ನಮ್ಮ ವಿವರಿಸಿದರು.

**
ಕುರಿಗಳು ಎ.ಟಿ.ಎಂ. ಇದ್ದಂತೆ
ಕುರಿಗಳು ಎ.ಟಿ.ಎಂ ಇದ್ದಂತೆ. ರೈತನಿಗೆ ಕಷ್ಟ ಬಂದಾಗ ಮಾರಿ ಹಣ ಪಡೆಯಬಹುದು. ಯಾವ ಉದ್ಯೋಗದಲ್ಲೂ ಎರಡೂವರೆ ತಿಂಗಳಿನಲ್ಲಿ ಹಣ ದ್ವಿಗುಣ ಮಾಡಲಾಗದು. ಅಂತಹ ಕುರಿಗಳನ್ನು ಸಾಕಿ ಮಾರಿ ರತ್ನಮ್ಮ ಲಾಭ ಸಂಪಾದಿಸಿರುವುದಲ್ಲದೆ, ಕುಟುಂಬಕ್ಕೆ ಆಸರೆಯಾಗಿದ್ದಾರೆ, ಇತರ ಮಹಿಳೆಯರಿಗೆ ಮಾದರಿಯಾಗಿದ್ದಾರೆ.
–ಎಚ್.ಜಿ.ಗೋಪಾಲಗೌಡ, ಪ್ರಗತಿಪರ ರೈತ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು