ಮಂಗಳವಾರ, ನವೆಂಬರ್ 30, 2021
21 °C
ನಾಟಿ ಕೋಳಿ ಸಾಕಿ ಲಾಭ ಗಳಿಸುತ್ತಿರುವ ಮಲ್ಲಿಕಾರ್ಜುನಗೌಡ

ಬೆಳೆ ನಷ್ಟವಾದರೂ ಕೈ ಹಿಡಿದ ಕುರಿ, ಮೇಕೆ, ಕೋಳಿ ಸಾಕಣೆ: ಉತ್ತಮ ಗಳಿಕೆ

ಎಂ.ರಾಮಕೃಷ್ಣಪ್ಪ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ತಾಲ್ಲೂಕಿನ ಕಸಬಾ ಹೋಬಳಿಯ ಕುರುಬೂರು ಗ್ರಾಮದ ಕೃಷಿಕ ಮಲ್ಲಿಕಾರ್ಜುನಗೌಡ ಕುರಿ, ಮೇಕೆ, ಕೋಳಿಗಳನ್ನು ಸಾಕಿ ಅಧಿಕ ಲಾಭ ಗಳಿಸಿದ್ದಾರೆ.

ತಂದೆಯಿಂದ ಬಳುವಳಿಯಾಗಿ ಬಂದಿದ್ದ ಕೃಷಿಯಲ್ಲಿ ಮಲ್ಲಿಕಾರ್ಜುನ ಗೌಡ ಟೊಮೆಟೊ, ಬದನೆ, ರೇಷ್ಮೆ ಮತ್ತಿತರ ಹಲವಾರು ಬೆಳೆಗಳನ್ನು ಬೆಳೆಯುತ್ತಿದ್ದರು. ಬೆಳೆಗೆ ರೋಗಗಳು, ಮಾರುಕಟ್ಟೆಯ ಏರುಪೇರುನಿಂದ ನಷ್ಟ ಹೊಂದಿ ಕುರಿ, ಮೇಕೆ, ಕೋಳಿ ಸಾಕಾಣಿಕೆಯಿಂದ ಉತ್ತಮ ಲಾಭ ಪಡೆಯುತ್ತಿದ್ದಾರೆ.

ಕುರಿ, ಮೇಕೆ, ಕೋಳಿಗಳ ಸಾಕಾಣಿಕೆಗಾಗಿ ವೈಜ್ಞಾನಿಕ ರೀತಿಯಲ್ಲಿ ಶೆಡ್ ನಿರ್ಮಿಸಿದ್ದಾರೆ. 200 ಕುರಿ, 100 ಮೇಕೆ ಹಾಗೂ ನಾಟಿ ಕೋಳಿಗಳನ್ನು ಸಾಕಿದ್ದಾರೆ. ಕುರಿಗಳಿಗೆ 70X120 ಶೆಡ್ ನಿರ್ಮಿಸಿ, ಅದರಲ್ಲಿ 10X10, 15X15, 20X20 ವಿಭಾಗ ಮಾಡಿದ್ದಾರೆ. ಒಂದೊಂದು ಹಂತದ ಕುರಿಗಳನ್ನು ಒಂದೊಂದು ವಿಭಾಗದಲ್ಲಿ ಹಾಕಿದ್ದಾರೆ.

ಡಾರ್ಫರ್, ನಾರಿ ಸುವರ್ಣ, ಬಂಡೂರ್‌ ಕುರಿ ತಳಿಗಳನ್ನು ಸಾಕಿದ್ದಾರೆ. ಡಾರ್ಫರ್ ಮರಿ 2.5ರಿಂದ 4 ಕೆ.ಜಿ ತೂಕವಿರುತ್ತದೆ. ಒಂದು ಮರಿಯನ್ನು ₹3,500ರಿಂದ ₹4 ಸಾವಿರದವರೆಗೂ ಮಾರಾಟ ಮಾಡುತ್ತಾರೆ. ನಾರಿ ಸುವರ್ಣ ತಳಿ ಒಂದು ಬಾರಿಗೆ 2-3 ಮರಿ ಹಾಕುತ್ತದೆ. 3 ತಿಂಗಳ ಮರಿಯನ್ನು ₹15 ಸಾವಿರದಿಂದ ₹20 ಸಾವಿರದವರೆಗೆ ಮಾರಾಟ ಮಾಡುತ್ತೇವೆ ಎನ್ನುತ್ತಾರೆ ಮಲ್ಲಿಕಾರ್ಜುನಗೌಡ.

ಮೇಕೆಗಳಲ್ಲಿ ಬಿಟೆಲ್, ತಳಚೆರಿ, ಬೊಯರ್ ತಳಿಗಳಿವೆ. ಒಂದು ಬಾರಿಗೆ 1ರಿಂದ 3 ಮರಿ ಹಾಕುತ್ತವೆ. ಒಂದು ಮರಿಗೆ ₹20 ಸಾವಿರದಿಂದ ₹25 ಸಾವಿರದವರೆಗೆ, ಮಾಂಸದ ಲೆಕ್ಕದಲ್ಲಿ ಆದರೆ ಕೆ.ಜಿ.ಗೆ ₹650ಕ್ಕೆ ಮಾರಾಟ ಮಾಡುತ್ತಾರೆ. ಕುರಿ, ಮೇಕೆ ಸಾಕಾಣಿಕೆಗೆ ಹೆಚ್ಚಿನ ಆಳುಗಳ ಅಗತ್ಯವಿಲ್ಲ. ಮೇವು ಕಟಾವು ಯಂತ್ರ, ಶೈಲೇಜ್ ಯಂತ್ರಗಳ ಮೂಲಕ ಮೇವನ್ನು ಕಟಾವು ಮಾಡುತ್ತಾರೆ.

ಮೇವು: ಕುರಿ, ಮೇಕೆಗಳಿಗಾಗಿ ಸೂಪರ್ ನೇಪಿಯರ್ ತಳಿ ಹುಲ್ಲು ಬೆಳೆಸಿದ್ದಾರೆ. ಕಟಾವು ಮಾಡಿ, ಮಿಷನ್‌ಗೆ ಹಾಕಿ ಸಣ್ಣ ಸಣ್ಣ ಬಿಲ್ಲೆಗಳಾಗಿ ಮಾಡಿ ನೀಡುತ್ತಾರೆ. ‘ಈ ಹುಲ್ಲು ತುಂಬಾ ರುಚಿಯಾಗಿದ್ದು, ಚೆನ್ನಾಗಿ ತಿನ್ನುತ್ತವೆ. ಸ್ವಲ್ಪವೂ ವ್ಯರ್ಥ ಮಾಡುವುದಿಲ್ಲ. ಹಸು, ಎಮ್ಮೆ ಎಲ್ಲ ರಾಸುಗಳಿಗೂ ನೀಡಬಹುದು’ ಎನ್ನುತ್ತಾರೆ.

ಇದರ ಜತೆಗೆ ಅರಣ್ಯಕೃಷಿಯನ್ನು ಮಾಡಿದ್ದು, ಶ್ರೀಗಂಧ, ಬೇವು, ನುಗ್ಗೆ ಮುಂತಾದ ಮರಗಳನ್ನು ಬೆಳೆಸಿದ್ದಾರೆ. ಮರಗಳ ಸೊಪ್ಪನ್ನು ಕಟಾವು ಮಾಡಿ ಕುರಿ ಮೇಕೆಗಳಿಗೆ ನೀಡುತ್ತಾರೆ.

ಚಿಕಿತ್ಸೆ: ಕುರಿ ಮೇಕೆಗಳಿಗೆ ಬರುವ ಸಣ್ಣ-ಪುಟ್ಟ ನೆಗಡಿ, ಜ್ವರ ಕಾಯಿಲೆಗಳಿಗೆ ಸ್ವಂತಃ ಚಿಕಿತ್ಸೆ ಮಾಡುತ್ತಾರೆ. ಕಾಲುಬಾಯಿ ರೋಗ, ಬಾಯಿಹುಣ್ಣು ಕಾಯಿಲೆಗೆ ಪಶುವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸುತ್ತಾರೆ.

ಕೋಳಿ: ಕುರಿ ಮೇಕೆಯ ಜತೆಗೆ ನಾಟಿ ಕೋಳಿ ಸಾಕಿದ್ದಾರೆ. ಕೆ.ಜಿ.ಗೆ ₹400 ಮತ್ತು ಒಂದು ಮೊಟ್ಟೆಗೆ ₹10ರಂತೆ ಮಾರಾಟ ಮಾಡುತ್ತಾರೆ. ಜೋಳ ಮತ್ತು ಚಕ್ಕೆಯನ್ನು ಮಿಶ್ರಣ ಮಾಡಿ ನೀಡುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು