ಬುಧವಾರ, ಜುಲೈ 6, 2022
21 °C

ಬಾಗೇಪಲ್ಲಿ: ಗಡಿನಾಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಂಗಾಯಣದ ಹೆಜ್ಜೆ

ಪಿ.ಎಸ್.ರಾಜೇಶ್ Updated:

ಅಕ್ಷರ ಗಾತ್ರ : | |

Prajavani

ಬಾಗೇಪಲ್ಲಿ: ಗಡಿನಾಡಿನ ಕಾಲೇಜಿನಲ್ಲಿ ರಂಗಾಯಣದ ರಂಗ ಹೆಜ್ಜೆಗಳು ಮೂಡುತ್ತಿವೆ. ಕಾಲೇಜಿನ ಸುಂದರ ವಾತಾವರಣದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ರಂಗಗೀತೆ ಕಲಿಯಲು ಉತ್ಸುಕರಾಗಿದ್ದಾರೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶಿವಮೊಗ್ಗದ ರಂಗಾಯಣದ ನುರಿತ ನಿರ್ದೇಶಕರ ಮೂಲಕ ಕಾಲೇಜು ವಿದ್ಯಾರ್ಥಿಗಳಿಗೆ ರಂಗ ತರಬೇತಿ ನಡೆಯುತ್ತಿದೆ. ದಿನನಿತ್ಯದ ವ್ಯವಹಾರವೆಲ್ಲವೂ ಇಲ್ಲಿ ತೆಲುಗುಮಯ. ಮಾತೃಭಾಷೆ ಅದುವೇ ಆಗಿದೆ. ಸಾಂಸ್ಕೃತಿಕ ಮಜಲುಗಳೆಲ್ಲವೂ ತೆಲುಗು. ಹಾಡು-ಕುಣಿತ-ಸಿನಿಮಾ-ರಾಜಕೀಯ ಎಲ್ಲವೂ ಆಂಧ್ರಮಯ. ಇಂತಹಾ ವಾತಾವರಣದಲ್ಲಿ ಶುದ್ಧ ಕನ್ನಡ ಮತ್ತು ಸಂಸ್ಕೃತಿಯನ್ನು ಅರಳಿಸಲು ಕಾಲೇಜು ಪ್ರಯತ್ನ ಮಾಡುತ್ತಿದೆ.

ಇದರ ಭಾಗವಾಗಿಯೇ ವಿದ್ಯಾರ್ಥಿಗಳಿಗೆ ರಂಗ ತಾಲೀಮಿಗೆ ಕಾಲೇಜು ವೇದಿಕೆ ಒದಗಿಸಿದೆ. ಗ್ರಾಮೀಣ ಭಾಗದ ಅದರಲ್ಲಿಯೂ ಗಡಿ ಭಾಗದ ವಿದ್ಯಾರ್ಥಿ, ವಿದ್ಯಾರ್ಥಿನಿಯರಲ್ಲಿ ನಾಡು-ನುಡಿ, ಕಲೆ, ಸಂಸ್ಕೃತಿಯ ಪ್ರೇಮ ಗಟ್ಟಿಗೊಳಿಸುವ ಕಾರ್ಯಕ್ಕೆ ಮುಂದಾಗಿದೆ. ಆಂಧ್ರಪ್ರದೇಶದ ಗಡಿಯ ಕೂಗಿನಂಚಿನಲ್ಲಿ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇದೆ. ಕಾಲೇಜಿನಲ್ಲಿ ಕಲೆ, ಉದ್ಯೋಗ, ಆರೋಗ್ಯ ಶಿಬಿರಗಳ ಮೂಲಕ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಶಿವಮೊಗ್ಗದ ರಂಗಾಯಣದವರು ಜಿಲ್ಲೆಯ ಚಿಕ್ಕಬಳ್ಳಾಪುರ, ಗೌರಿಬಿದನೂರು, ಬಾಗೇಪಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಆಯ್ಕೆ ಮಾಡಿದ್ದಾರೆ. ಒಂದು ತಿಂಗಳಿನಿಂದ ಕಾಲೇಜಿನಲ್ಲಿ ನಿರ್ದೇಶಕರು ನಾಟಕಗಳ ಬಗ್ಗೆ ರಂಗತಾಲೀಮು ಮಾಡಿಸುತ್ತಿದ್ದಾರೆ.

ಇಲ್ಲಿನ ಕಾಲೇಜಿನಲ್ಲಿ ಸಾಗರದ ಎಸ್.ಮಾಲತಿ ಅವರ ಕೃತಿಯ ‘ಜೀವನವೆಂಬ ನಾಟಕರಂಗ’ ನಾಟಕದ ರಂಗತಾಲೀಮು ನಡೆಯುತ್ತಿದೆ. ಕಾಲೇಜಿನ 25 ಮಂದಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಒಂದು ತಿಂಗಳಿನಿಂದ ಶಿವಮೊಗ್ಗ ಜಿಲ್ಲೆಯ ಸಾಗರದ ಚೈತನ್ಯಕುಲಕರ್ಣಿ ಅವರು ರಂಗ ತಾಲೀಮು ಮಾಡಿಸಿದ್ದಾರೆ.
ನಾಟಕದ ವಿವಿಧ ಪಾತ್ರಧಾರಿಗಳ ಮಾತುಗಳು, ಹಾವ-ಭಾವಗಳ ಬಗ್ಗೆ ನಿರ್ದೇಶನ ನೀಡಿದ್ದಾರೆ. ಜನವರಿ 15 ರಂದು ನಡೆಯಲಿರುವ ಚಿಕ್ಕಬಳ್ಳಾಪುರದ ಜಿಲ್ಲಾ ಉತ್ಸವದಲ್ಲಿ ವಿದ್ಯಾರ್ಥಿಗಳು ನಾಟಕ ಪ್ರದರ್ಶನ ಮಾಡಲಿದ್ದಾರೆ ಎಂದು ಕಾಲೇಜಿನ ಡಾ.ಕೆ.ಎಂ.ನಯಾಜ್ ಅಹಮದ್ ಹಾಗೂ ಡಾ.ಸಿ.ಎಸ್.ವೆಂಕಟರಾಮರೆಡ್ಡಿ ತಿಳಿಸಿದರು.

‘ಶಿವಮೊಗ್ಗದ ರಂಗಾಯಣದಿಂದ ಗಡಿ ಪ್ರದೇಶದ ಕಾಲೇಜನ್ನು ಆಯ್ಕೆ ಮಾಡಿರುವುದು ಸಂತಸವಾಗಿದೆ. ಯುವಪೀಳಿಗೆಗೆ ರಂಗಭೂಮಿಯ ಬಗ್ಗೆ ಜ್ಞಾನ ಮೂಡಿಸುವುದು, ಕಲೆ, ಸಾಹಿತ್ಯ ಬೆಳೆಸುವ ಕೆಲಸ ಮಾಡಿಸಲು ರಂಗಾಯಣದ ರಂಗ ಹೆಜ್ಜೆಗಳನ್ನು ರಂಗತಾಲೀಮು ಮಾಡಲಾಗಿದೆ. 2022ರ ಜನವರಿಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ನಾಟಕ ಪ್ರದರ್ಶನ ಮಾಡಲಿದ್ದಾರೆ’ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ.ವೈ.ನಾರಾಯಣ ತಿಳಿಸಿದರು.

‘ಗಡಿ ತಾಲ್ಲೂಕಿನಲ್ಲಿ ವಿದ್ಯಾರ್ಥಿಗಳು ರಂಗತಾಲೀಮು ಕಲಿಯಲು ಮೊದಲು ಪ್ರಯಾಸಪಟ್ಟರು. ನಂತರ ರಂಗಗೀತೆ ಕಲಿಯಲು ಉತ್ಸುಕರಾದರು. ಶಿಕ್ಷಣದ ಜತೆಗೆ ರಂಗಾಯಣವನ್ನು ಕಲಿಯಬೇಕು. ಇದು ಬದುಕನ್ನು ರೂಪಿಸುತ್ತದೆ ಎಂದು ರಂಗನಿರ್ದೇಶಕ ಚೈತನ್ಯಕುಲಕರ್ಣಿ ಹೇಳಿದರು.

ಪ್ರಾಥಮಿಕ ಶಿಕ್ಷಣದಲ್ಲಿ ಶಿಕ್ಷಣದ ಜೊತೆಗೆ ಕಲೆ, ಸಾಹಿತ್ಯ ಕಲಿಸಲು ಸರ್ಕಾರ ಮುಂದಾಗಬೇಕು ಎಂದು ರಂಗಾಯಣ ನಿರ್ದೇಶಕ ನಿತಿನ್ ಹೇಳಿದರು. ಮೊದಲು ನಾಟಕ ರಂಗತಾಲೀಮು ಮಾಡಲು ಕಷ್ಟವಾಯಿತು. ನಾಟಕ, ಕಲೆ, ಸಾಹಿತ್ಯಗಳನ್ನು ಕಲಿಯಲು ಉತ್ಸುಕರಾಗಿದ್ದೇವೆ. ಪಾತ್ರಧಾರಿಗಳ ಮಾತು, ಹಾವ-ಭಾವಗಳನ್ನು ಕಲಿತಿದ್ದೇವೆ ಎಂದು ಕಾಲೇಜಿನ ವಿದ್ಯಾರ್ಥಿಗಳಾದ ಅಂಜನ್ ಕುಮಾರ್, ಲಾವಣ್ಯ, ಹೇಮ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು