ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ | ಆಹಾ... ವೆಂಕಟೇಶ್ವರ ಮೈಸೂರು ಪಾಕ್; 8 ದಶಕದಿಂದಲೂ ಅದೇ ರುಚಿ

Published 2 ಜೂನ್ 2024, 6:06 IST
Last Updated 2 ಜೂನ್ 2024, 6:06 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರದ ಬಿಬಿ ರಸ್ತೆಯ ವೆಂಕಟೇಶ್ವರ ಸ್ವೀಟ್ ಸ್ಟಾಲ್‌ನ ಮೈಸೂರು ಪಾಕ್ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಷ್ಟೇ ಅಲ್ಲ ನೆರೆಹೊರೆಯ ಜಿಲ್ಲೆಗಳಲ್ಲಿಯೂ ಪ್ರಸಿದ್ಧಿ. 

ಗುಣಮಟ್ಟ, ಶುಚಿ, ರುಚಿಯ ಕಾರಣಕ್ಕೆ ವೆಂಕಟೇಶ್ವರ ಸ್ವೀಟ್ ಸ್ಟಾಲ್‌ನ ಮೈಸೂರು ಪಾಕ್ ಹೊರ ಜಿಲ್ಲೆ, ಹೊರ ರಾಜ್ಯಗಳಿಗೂ ರವಾನೆ ಆಗುತ್ತದೆ. ನಾನಾ ಕೆಲಸದ ನಿಮಿತ್ತ ಚಿಕ್ಕಬಳ್ಳಾಪುರಕ್ಕೆ ಬಂದವರು, ಬಂಧು ಬಳಗದವರ ಮನೆಗಳಿಗೆ ಬಂದವರು ಮರಳಿ ತಮ್ಮ ಊರುಗಳಿಗೆ ಹೋಗುವಾಗ ಇಲ್ಲಿಂದ ಮೈಸೂರು ಪಾಕ್ ಖರೀದಿಸುವರು.

ಚಿಕ್ಕಬಳ್ಳಾಪುರದ ತಿಂಡಿ ತಿನಿಸುಗಳ ಬಗ್ಗೆ ತಿಳಿದಿರುವ ಹೊರ ಜಿಲ್ಲೆಯ ಜನರು ಮತ್ತು ಚಿಕ್ಕಬಳ್ಳಾಪುರದಲ್ಲಿದ್ದು ಬೇರೆ ಕಡೆಗಳಲ್ಲಿ ಈಗ ವಾಸಿಸುತ್ತಿರುವವರನ್ನು ಮಾತಿಗೆ ಎಳೆದರೆ ಅವರು ಈ ಮೈಸೂರು ಪಾಕ್ ಬಗ್ಗೆ ಮಾತನಾಡುತ್ತಾರೆ. 

ವೆಂಕಟೇಶ್ವರ ಸ್ವೀಟ್ ಸ್ಟಾಲ್‌ಗೆ 80 ವರ್ಷಗಳ ಇತಿಹಾಸವಿದೆ. 80 ವರ್ಷಗಳ ಹಿಂದೆ  ವೆಂಕಟರಾಯ ರಾಜು ಅವರು ಈ ಸಿಹಿ ತಿನಿಸಿನ ಅಂಗಡಿ ಆರಂಭಿಸಿದರು. ಈಗ ಅವರ ಮಕ್ಕಳು ಮತ್ತು ಮೊಮ್ಮಕ್ಕಳು ಅಂಗಡಿಯನ್ನು ನಡೆಸುತ್ತಿದ್ದಾರೆ. 

ಮೈಸೂರು ಪಾಕ್ ಜೊತೆಗೆ ಬಾದಾಮ್ ಹಲ್ವಾ ಮತ್ತು ದೊಮರೊಟ್ಟು ಸಹ ಇಲ್ಲಿ ಗಮನ ಸೆಳೆಯುವ ಮತ್ತು ಬೇಡಿಕೆಯುಳ್ಳ ಸಿಹಿ ತಿಂಡಿಗಳು. ದೊಮರೊಟ್ಟು ಶನಿವಾರ ಮಾತ್ರ ದೊರೆಯುತ್ತದೆ. ಉಳಿದ ಸಿಹಿ ತಿಂಡಿಗಳು ನಿತ್ಯವೂ ದೊರೆಯುತ್ತದೆ. 

‘ನಮ್ಮ ತಾತ ಬೆಂಗಳೂರಿನಲ್ಲಿ ಸಿಹಿ ತಿಂಡಿಗಳನ್ನು ಸಿದ್ಧಗೊಳಿಸುವ ಬಗ್ಗೆ ಕಲಿತುಕೊಂಡು ಬಂದರಂತೆ. ಅಲ್ಲಿಂದ ಬಂದು ಚಿಕ್ಕಬಳ್ಳಾಪುರದಲ್ಲಿ ವೆಂಟೇಶ್ವರ ಸಿಹಿ ತಿಂಡಿಗಳ ಅಂಗಡಿ ಆರಂಭಿಸಿದರು. ಈಗ ನಮ್ಮ ಅಂಗಡಿಗೆ 80 ವರ್ಷ’ ಎನ್ನುತ್ತಾರೆ ವೆಂಕಟರಾಯ ರಾಜು ಅವರ ಮೊಮ್ಮಗ ದೀಪಕ್.

‘ನಾವು ಸಿಹಿ ತಿಂಡಿಗಳನ್ನು ಸಿ‌ದ್ಧಗೊಳಿಸುವ ಶೈಲಿ ಮತ್ತು ಗುಣಮಟ್ಟ ಎಂದಿಗೂ ತಪ್ಪಬಾರದು. ಒಂದು ಹದ ತಪ್ಪಿದರೂ ಎಲ್ಲವೂ ತಾಳ ತಪ್ಪಿದಂತೆ. ಒಂದು ರೂಪಾಯಿ ನಷ್ಟವಾದರೂ ಪರವಾಗಿಲ್ಲ. ಗುಣಮಟ್ಟವನ್ನು ತಪ್ಪಿಸಬಾರದು. ಅದೇ ನಮ್ಮ ಅಂಗಡಿಯ ಯಶಸ್ಸಿಗೆ ಕಾರಣ’ ಎನ್ನುತ್ತಾರೆ. 

ಸಾಮಾನ್ಯವಾಗಿ ಸಿಹಿ ತಿಂಡಿ ಅಂಗಡಿಗಳ ವಿನ್ಯಾಸಕ್ಕೆ ಆಧುನಿಕ ಸ್ಪರ್ಶ ನೀಡುವರು. ಆದರೆ ಗುಣಮಟ್ಟದ ಮೈಸೂರ್ ಪಾಕ್‌ಗೆ ಹೆಸರಾದ ಈ ಅಂಗಡಿಯ ವಿನ್ಯಾಸವು ಇಂದಿಗೂ ಸಾಂಪ್ರದಾಯಿಕ ರೀತಿಯಲ್ಲಿಯೇ ಇದೆ. ಒಂದು ಕಡೆ ತಟ್ಟೆಯಲ್ಲಿರುವ ಮೈಸೂರು ಪಾಕ್ ಗ್ರಾಹಕರಿಂದ ಖಾಲಿ ಆಗುತ್ತಿದ್ದಾರೆ. ಮತ್ತೊಂದು ಕಡೆ ಬಿಸಿ ಬಿಸಿ ಮೈಸೂರು ಪಾಕ್ ಸಿದ್ಧವಾಗುತ್ತಿರುತ್ತದೆ. 

‘ನಾನು ಮದುವೆ ಆಗಿರುವುದು ಚಿಕ್ಕಬಳ್ಳಾಪುರದಲ್ಲಿ. ವಾಸ ಬೆಂಗಳೂರು. ನಾನು ಮದುವೆಯಾಗಿ 30 ವರ್ಷಗಳಾಗಿವೆ. ಅಂದಿನಿಂದಲೂ ಇಲ್ಲಿ ಮೈಸೂರು ಪಾಕ್ ಖರೀದಿಸಿ ಕೊಂಡೊಯ್ಯುವೆ. ಚಿಕ್ಕಬಳ್ಳಾಪುರಕ್ಕೆ ಬಂದರೆ ವೆಂಕಟೇಶ್ವರ ಸ್ವೀಟ್ ಸ್ಟಾಲ್‌ಗೆ ಕಾಯಂ ಆಗಿ ಭೇಟಿ ನೀಡುವೆ’ ಎನ್ನುತ್ತಾರೆ ಬೆಂಗಳೂರಿನ ಸತ್ಯನಾರಾಯಣ್.

ವೆಂಕಟೇಶ್ವರ ಸ್ವೀಟ್‌ ಸ್ಟಾಲ್‌ನ ಮೈಸೂರು ಪಾಕ್
ವೆಂಕಟೇಶ್ವರ ಸ್ವೀಟ್‌ ಸ್ಟಾಲ್‌ನ ಮೈಸೂರು ಪಾಕ್
ಮೈಸೂರ್ ಪಾಕ್ ಸವಿಯುತ್ತಿರುವ ಗ್ರಾಹಕರು
ಮೈಸೂರ್ ಪಾಕ್ ಸವಿಯುತ್ತಿರುವ ಗ್ರಾಹಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT