ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಟೆಸ್ಟ್‌ಗೆ ವಿದ್ಯಾರ್ಥಿಗಳ ಕ್ಯೂ; ಕನಿಷ್ಠ ಅಂತರ ಮಾಯ

ಪರೀಕ್ಷಾ ವರದಿಗಾಗಿ ಪರದಾಟ
Last Updated 6 ಜನವರಿ 2021, 5:00 IST
ಅಕ್ಷರ ಗಾತ್ರ

ಚಿಂತಾಮಣಿ: ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕೋವಿಡ್-19 ಟೆಸ್ಟ್ ಮಾಡಿಸಿಕೊಳ್ಳಲು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಎರಡು ದಿನಗಳಿಂದ ನೂಕು ನುಗ್ಗಲಿನಲ್ಲಿ ಮುಗಿಬೀಳುತ್ತಿದ್ದಾರೆ.

ರಾಜ್ಯ ಸರ್ಕಾರ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಜನವರಿ ಒಂದರಿಂದ ತರಗತಿಗಳನ್ನು ಆರಂಭಿಸಿದೆ. ವಿದ್ಯಾರ್ಥಿಗಳು ಕೋವಿಡ್-19 ಟೆಸ್ಟ್ ಮಾಡಿಸಿಕೊಂಡು ನೆಗೆಟಿವ್ ವರದಿ ತರುವುದು ಕಡ್ಡಾಯ. ವರದಿ ಇದ್ದರೆ ಮಾತ್ರ ಶಾಲಾ, ಕಾಲೇಜಿಗೆ ಪ್ರವೇಶ ನೀಡಲಾಗುತ್ತಿದೆ. ಶುಕ್ರವಾರ, ಶನಿವಾರ ಅಷ್ಟಾಗಿ ಬಿಸಿ ತಟ್ಟಿರಲಿಲ್ಲ. ಸೋಮವಾರದಿಂದ ವಿದ್ಯಾರ್ಥಿಗಳ ಶಾಲಾ ಕಾಲೇಜುಗಳಿಗೆ ಹಾಜರಾಗಲು ಹೆಚ್ಚಿನ ಉತ್ಸಾಹ ತೋರುತ್ತಿದ್ದಾರೆ.

ಕೋವಿಡ್ ಟೆಸ್ಟ್‌ಗಾಗಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಯಾವುದೇ ಅಂತರವನ್ನು ಪಾಲಿಸದೆ ಒಬ್ಬರ ಮೇಲೆ ಒಬ್ಬರು ಮುಗಿಬೀಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಸೋಮವಾರ ಮತ್ತು ಮಂಗಳವಾರ ಉದ್ದದ ಸಾಲು ಕಂಡುಬಂತು. ನೂರಾರು ವಿದ್ಯಾರ್ಥಿಗಳು ಒಮ್ಮಲೇ ಟೆಸ್ಟ್‌ಗೆ ಆಗಮಿಸಿದ್ದರಿಂದ ನೂಕು ನುಗ್ಗಲು ಉಂಟಾಗಿದೆ.

‘ಶಾಲಾ, ಕಾಲೇಜುಗಳು ಪ್ರಾರಂಭದ ದಿನಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಕೋವಿಡ್-19 ಟೆಸ್ಟ್‌ಗೆ ಬರುತ್ತಾರೆ. ಟೆಸ್ಟ್‌ಗಾಗಿ 3-4 ಕೌಂಟರ್‌ಗಳನ್ನು ತೆರೆಯಬೇಕು. ಆರೋಗ್ಯ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಮ
ನ್ವಯತೆ ಸಾಧಿಸಿಕೊಂಡು ವ್ಯವಸ್ಥೆ ಮಾಡಬೇಕಾಗಿತ್ತು. ಯಾವ ಕ್ರಮ ಕೈಗೊಳ್ಳದೆ ವಿದ್ಯಾರ್ಥಿಗಳು ನೂಕು ನುಗ್ಗಲಿನಲ್ಲಿ ಗಂಟೆಗಟ್ಟಲೇ ಕಾಯಬೇಕಾಗಿದೆ’ ಎಂದು ಪೋಷಕ ರಾಮಚಂದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

‘ತಾಲ್ಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಕೋವಿಡ್-19 ಟೆಸ್ಟ್ ಮಾಡಲಾಗುತ್ತಿದೆ. ಎಲ್ಲ ವಿದ್ಯಾರ್ಥಿಗಳು ನಗರದ ಸಾರ್ವಜನಿಕ ಆಸ್ಪತ್ರೆಗೆ ಬರುವ ಅವಶ್ಯಕತೆ ಇಲ್ಲ. ಅವರವರ ಹೋಬಳಿ ಕೇಂದ್ರಗಳಲ್ಲೇ ಟೆಸ್ಟ್ ಮಾಡಿಸಿಕೊಳ್ಳಬಹುದು. ಈ ಬಗ್ಗೆ ಶಿಕ್ಷಣ ಸಂಸ್ಥೆಗಳ ಅಧಿಕಾರಿಗಳು ಜಾಗೃತಿ ಮೂಡಿಸಬೇಕು. ಸಾರ್ವಜನಿಕ ಆಸ್ಪತ್ರೆಯಲ್ಲೂ 3-4 ಜನ ಟೆಸ್ಟ್ ಮಾಡುತ್ತಿದ್ದಾರೆ. ಸೋಮವಾರ 300 ವಿದ್ಯಾರ್ಥಿಗಳಿಗೆ ಟೆಸ್ಟ್ ಮಾಡಲಾಗಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸ್ವಾತಿ ಹೇಳಿದರು.

‘ಶಾಲಾ ಕಾಲೇಜುಗಳು ಆರಂಭವಾಗುತ್ತಿವೆ. ಕೋವಿಡ್-19 ಟೆಸ್ಟ್‌ಗೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಆರೋಗ್ಯ ಇಲಾಖೆಗೆ ಪತ್ರ ಬರೆಯಲಾಗಿದೆ. ವಿದ್ಯಾರ್ಥಿಗಳ ನೂಕು ನುಗ್ಗಲಿನ ಕುರಿತು ಮತ್ತೊಮ್ಮೆ ಆರೋಗ್ಯ ಅಧಿಕಾರಿಗಳಿಗೆ ಮನವಿ ಮಾಡಲಾಗುವುದು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT