ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚೇಳೂರು: ನೀರಿಲ್ಲದೆ ಬರಡಾದ ಜಲಮೂಲ, ಮರುಭೂಮಿಯಂತಾದ ಕೆರೆ–ಕುಂಟೆ

ಸಿ.ಎಸ್. ವೆಂಕಟೇಶ್
Published 15 ಮಾರ್ಚ್ 2024, 6:08 IST
Last Updated 15 ಮಾರ್ಚ್ 2024, 6:08 IST
ಅಕ್ಷರ ಗಾತ್ರ

ಚೇಳೂರು: ಕಳೆದ ಎರಡು ವರ್ಷಗಳ ಹಿಂದೆ ಸುರಿದ ಭಾರಿ ಮಳೆಗೆ ಚೇಳೂರು ಸುತ್ತಮುತ್ತಲಿನ ಹಲವಾರು ಕೆರೆ, ಬಾವಿಗಳು ಭರ್ತಿಯಾಗಿದ್ದವು. ನಂತರದ ವರ್ಷಗಳಿಂದ ಮಳೆ ಅಭಾವದಿಂದ ಕೆರೆ, ಬಾವಿಗಳ ತಳಭಾಗದ ಮಣ್ಣು ಬಿರುಕು ಬಿಟ್ಟಿದೆ. ಇತ್ತ 500-600 ಅಡಿ ಆಳ ಕೊರೆಯಲಾಗಿದ್ದ ಕೊಳವೆಬಾವಿಗಳಲ್ಲೂ ಅಂತರ್ಜಲ ಬತ್ತಿದೆ. ಜನ, ಜಾನುವಾರು ಕುಡಿವ ನೀರಿಗೆ ಪರಿತಪಿಸುವಂತಾಗಿದೆ.

ತಾಲ್ಲೂಕಿನಾದ್ಯಂತ ಕಳೆದ ಒಂದು ತಿಂಗಳ ಆರಂಭದಲ್ಲೇ ಹಿಂದೆಂದೂ ಕಾಣದಷ್ಟು ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಜನತೆ ಬಿಸಿಲಿನ ಧಗೆ ತಡೆಯಲಾರದೇ ಹೈರಾಣಾಗುತ್ತಿದ್ದಾರೆ. ಹಲವಾರು ಕೆರೆ–ಕಟ್ಟೆಗಳು ಹಾಗೂ ಹಳ್ಳ–ಕೊಳ್ಳಗಳು ನೀರಿಲ್ಲದೆ ಸಂಪೂರ್ಣ ಒಣಗಿ ನಿಂತಿರುವ ದೃಶ್ಯ ಎಲ್ಲೆಡೆ ಕಂಡು ಬರುತ್ತಿದೆ.

ರಾಜ್ಯದಲ್ಲಿ ಬರಡು ನಾಡೆಂದೇ ಹೆಸರು ವಾಸಿಯಾದ ಸಂಪೂರ್ಣ ಬಯಲು ಪ್ರದೇಶ ಎನಿಸಿರುವ ಬಾಗೇಪಲ್ಲಿ, ಚೇಳೂರು ತಾಲ್ಲೂಕಿನಲ್ಲಿ ದಿನೇದಿನೇ ಬಿಸಿಲಿನ ತಾಪ ತೀವ್ರ ಸ್ವರೂಪದಲ್ಲಿ ಹೆಚ್ಚಾಗುತ್ತಿದೆ. ಅಲ್ಪ ಸ್ವಲ್ಪ ನೀರಿರುವ ಕೆರೆ–ಕಟ್ಟೆಗಳು ಬರಿದಾಗಿವೆ.

ಅಂತರ್ಜಲ ಕುಸಿತದಿಂದ ಕೊಳವೆ ಬಾವಿಗಳಲ್ಲಿಯೂ ನೀರಿನ ಪ್ರಮಾಣ ಕಡಿಮೆಯಾಗಿ ಕುಡಿಯುವ ನೀರಿಗಾಗಿ ಜನತೆ ಪ್ರತಿನಿತ್ಯ ಪರದಾಡುವ ದೃಶ್ಯ ಗ್ರಾಮೀಣ ಭಾಗದಲ್ಲಿ ಸಾಮಾನ್ಯವಾಗಿದೆ. ಜಾನುವಾರುಗಳ ಸ್ಥಿತಿಯಂತೂ ಹೇಳತೀರದಾಗಿದೆ. ಕುರಿ– ಮೇಕೆಗಳು ನೀರಿಗಾಗಿ ತೋಟಗಳಲ್ಲಿರುವ ಪಂಪ್‌ಸೆಟ್‌ ಬಳಿ ನಿರ್ಮಿಸಿರುವ ನೀರಿನ ತೊಟ್ಟಿಗಳನ್ನು ಹುಡುಕಬೇಕಿದೆ. ಎಪ್ರಿಲ್ ಮತ್ತು ಮೇ ತಿಂಗಳ ಬಿಸಿಲನ್ನು ಎದುರಿಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ.

ಮುಂಗಾರು ಮಳೆ ಕಳೆದ ವರ್ಷ ಕೈಕೊಟ್ಟಿದ್ದ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿನ ಹಲವು ಬಾವಿ, ಕೆರೆ ಕುಂಟೆಗಳು ಹಾಗೂ ಬೋರ್‌ವೆಲ್‌ಗಳು ಬತ್ತಿವೆ. ಬಿಸಿಲು ಹೊಡೆತದಿಂದ ನೀರಿರುವ ಕೆರೆಗಳು ಬತ್ತುವ ಸ್ಥಿತಿಗೆ ತಲುಪಿವೆ.

ಚೇಳೂರು ಸಮೀಪದ ಷೇರ್‌ಖಾನ್ ಕೋಟೆಯ ಕೆರೆಯಲ್ಲಿ ಎರಡು ವರ್ಷಗಳ ಹಿಂದೆ ತುಂಬಿ ತುಳುಕಿದ ಕೆರೆ ಇಂದು ಶೇ 30ರಷ್ಟು ಪ್ರಮಾಣದ ನೀರು ಇದೆ. ಉಳಿದ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಕೆರೆಗಳು ಪೂರ್ತಿ ಖಾಲಿಯಾಗಿವೆ. ಬೈರಪ್ಪನಹಳ್ಳಿ, ಮೂಗಿರೆಡ್ಡಿಪಲ್ಲಿ, ಪುಲ್ಲಗಲ್ಲು ಸೇರಿದಂತೆ ಅನೇಕ ಕೆರೆ, ಬಾವಿ ಬತ್ತಿಹೋಗಿವೆ.

ಹಣ ಪಡೆಯಲು ಕಾಮಗಾರಿ: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನರೇಗಾ ಯೋಜನೆಯಡಿ ಕೆರೆ ಹಾಗೂ ಕುಂಟೆಗಳ ಸಂರಕ್ಷಣೆಗಾಗಿ ಹಾಗೂ ಅವುಗಳ ನಿರ್ವಹಣೆ ಮಾಡಲು ಹೂಳು ತೆಗೆಯುವ ಪದ್ಧತಿ ಇದೆ. ಆದರೆ ಅವು ಬಹಳಷ್ಟು ಗುತ್ತಿಗೆದಾರ ಹೊಟ್ಟೆ ತುಂಬಿಸಿದವು. ಆದರೆ ಅವುಗಳಿಂದ ಹೂಳು ತೆಗೆಯುವ ಪದ್ಧತಿ ಬರೀ ಕಾಟಾಚಾರಕ್ಕೆ ಎಂಬಂತೆ ಆಗಿವೆ.

ಕುರಿ, ಮೇಕೆ ಹಾಗೂ ಕಾಡು ಪ್ರಾಣಿಗಳು ಕೆರೆ, ಕುಂಟೆಯಲ್ಲಿನ ನೀರನ್ನು ಮೂಸಿ ನೋಡುತ್ತಿಲ್ಲ. ಕೆಲವೊಂದು ಕೆರೆಗಳಲ್ಲಿ ಮೀನನ್ನು ಬಿಟ್ಟಿದ್ದು ಅವುಗಳ ಸಾಕಾಣಿಕೆಗೆಂದು ವಿವಿಧ ಬಗೆಯ ಆಹಾರವನ್ನು ಕೆರೆಗೆ ಹಾಕಲಾಗಿತ್ತು. ಇದರಿಂದ ನೀರು ಕಲುಷಿತಗೊಂಡಿವೆ. ಕುರಿ, ಮೇಕೆಗಳು ಈ ನೀರನ್ನು ಕುಡಿಯುತ್ತಿಲ್ಲ ಎನ್ನುತ್ತಾರೆ ಕುರಿಗಾಹಿ ನಾರಾಯಣ.

ಚೇಳೂರು ಸಮೀಪದ ಬೈರಪ್ಪನಹಳ್ಳಿ ಗ್ರಾಮದ ಕೆರೆ ಬತ್ತಿ ಹೋಗಿರುವುದು
ಚೇಳೂರು ಸಮೀಪದ ಬೈರಪ್ಪನಹಳ್ಳಿ ಗ್ರಾಮದ ಕೆರೆ ಬತ್ತಿ ಹೋಗಿರುವುದು
ಜಾನುವಾರು ಕುಡಿಯುವ ನೀರಿನ ತೊಟ್ಟಿಗಳಲ್ಲಿ ನೀರಿಲ್ಲದೆ ಕಸ ಕಡ್ಡಿ ತುಂಬಿರುವುದು
ಜಾನುವಾರು ಕುಡಿಯುವ ನೀರಿನ ತೊಟ್ಟಿಗಳಲ್ಲಿ ನೀರಿಲ್ಲದೆ ಕಸ ಕಡ್ಡಿ ತುಂಬಿರುವುದು
ಚೇಳೂರು ತಾಲ್ಲೂಕಿನ ವ್ಯಾಪ್ತಿಯಲ್ಲಿ ಹಲವಾರು ಕಡೆಗಳಲ್ಲಿ ಜಾನುವಾರು ಕುಡಿಯುವ ನೀರಿನ ತೊಟ್ಟಿ ನಿರ್ಮಿಸಲಾಗಿದೆ. ಆದರೆ ಹಲವು ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳ ನಿರ್ಲಕ್ಷ್ಯದಿಂದ ನೀರಿಲ್ಲದೆ ಒಣಗಿ ಕಸ ಕಡ್ಡಿ ತುಂಬುವ ತೊಟ್ಟಿಗಳಾಗಿವೆ. ಸಂಬಂಧಿಸಿದವರು ಕಣ್ಣು ಮುಚ್ಚಿ ಕುಳಿತುಕೊಳ್ಳದೆ ನೀರು ತುಂಬಿಸಿ ಜಾನುವಾರುಗಳ ಉಪಯೋಗಕ್ಕೆ ಅನುಕೂಲ ಮಾಡಿಕೊಡಬೇಕು.
-ಪಿ.ಎನ್.ಆಂಜನೇಯರೆಡ್ಡಿ, ಬೈರಪ್ಪನಹಳ್ಳಿ
ಬೇಸಿಗೆಯಲ್ಲಿ ತಾಪಮಾನದ ಏರಿಕೆಗೆ ಅಕಾಲಿಕ ಮಳೆ ಸೇರಿದಂತೆ ನೂರಾರು ಕಾರಣಗಳಿವೆ. ಪ್ರಕೃತಿಯಲ್ಲಿ ಈ ಬದಲಾವಣೆಗಳಿಗೆ ಮಾನವನೇ ಸೂತ್ರಧಾರ. ಪರಿಸರ ಸಂರಕ್ಷಣೆ ಜಾಗೃತಿ ಮೂಡದ ಹೊರತು ಹವಾಮಾನ ವೈಪರೀತ್ಯ ನಿಯಂತ್ರಿಸಲು ಸಾಧ್ಯವಿಲ್ಲ.
-ಎಸ್.ವಿ.ಈಶ್ವರರೆಡ್ಡಿ, ಚೇಳೂರು
ಅಭಿವೃದ್ಧಿ ಹೆಸರಿನಲ್ಲಿ ಮರ ಕಡಿದು ನಾಶ ಮಾಡಲಾಗುತ್ತಿದೆ. ಹೀಗಾಗಿ ಮಳೆ ಅಭಾವ ಎದುರಾಗಿದೆ. ಸರ್ಕಾರ ಮನೆಗೊಂದು ಮರ ಊರಿಗೊಂದು ವನ ಯೋಜನೆ ರೂಪಿಸಬೇಕು
-ಸಂಪಂಗಿ ಶ್ರೀನಿವಾಸ್, ಚೇಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT