ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ಮಾದರಿ ಶಾಲೆ ಮಕ್ಕಳ ಶೌಚಕ್ಕೆ ಬಯಲೇ ಗತಿ

ಬಟ್ಲಹಳ್ಳಿ ಸರ್ಕಾರಿ ಶಾಲೆ ದುಃಸ್ಥಿತಿ * ಶಿಕ್ಷಕರ ಕೊರತೆ ನೀಗಿಸಲು ಪೋಷಕರ ಮನವಿ
Last Updated 5 ನವೆಂಬರ್ 2022, 6:16 IST
ಅಕ್ಷರ ಗಾತ್ರ

ಚಿಂತಾಮಣಿ: ಇಲ್ಲಿಂದ 25 ಕಿ.ಮೀ ದೂರದ ಗಡಿಭಾಗದಲ್ಲಿರುವ ಬಟ್ಲಹಳ್ಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯು ಹೆಸರಿಗೆ ತಕ್ಕಂತೆ ಮಾದರಿಯಾಗಿದ್ದರೂ ಶೌಚಾಲಯ, ಪೀಠೋಪಕರಣ ಹಾಗೂ ಶಿಕ್ಷಕರ ಕೊರತೆಯಿಂದ ನಲುಗುತ್ತಿದೆ.

ಆಂಧ್ರ ಗಡಿಗೆ ಕೇವಲ 5 ಕಿ.ಮೀ ದೂರದಲ್ಲಿರುವ ಈ ಶಾಲೆ ಹಲವು ಸೌಕರ್ಯಗಳೊಂದಿಗೆ ಸುಸಜ್ಜಿತವಾಗಿದೆ. ಮಕ್ಕಳಿಗೆ ಆಕರ್ಷಣೀಯವಾಗಿ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುಂತಿದೆ. ಜಿಲ್ಲಾ ಪಂಚಾಯಿತಿ ನರೇಗಾ ಯೋಜನೆ ಹಾಗೂ ದಾನಿಗಳ ನೆರವಿನಿಂದ ಖಾಸಗಿ ಶಾಲೆಗೂ ಕಡಿಮೆ ಇಲ್ಲದಂತೆ ನಡೆಯುತ್ತಿದೆ. 1 ರಿಂದ 7 ನೇ ತಗತಿಯವರೆಗೆ 206 ಮಕ್ಕಳು ಕಲಿಯುತ್ತಿದ್ದಾರೆ.

ಶಾಲೆಯಲ್ಲಿ ಕನ್ನಡ ಮತ್ತು ಆಂಗ್ಲ ಮಾದ್ಯಮ ಎರಡರಲ್ಲೂ ಬೋಧನೆ ಮಾಡಲಾಗುತ್ತಿದೆ. 1 ರಿಂದ 4 ತರಗತಿಯವರೆಗೆ ಆಂಗ್ಲ ಮಾದ್ಯಮ, 5 ರಿಂದ 7 ನೇ ತರಗತಿಯವರೆಗೆ ಕನ್ನಡ ಮಾದ್ಯಮದಲ್ಲಿ ಬೋಧಿಸಲಾಗುತ್ತಿದೆ. ಶಿಕ್ಷಕರ 9 ಮಂಜೂರಾತಿ ಹುದ್ದೆಗಳಿವೆ. ಇಬ್ಬರು ಮಾತ್ರ ಕಾಯಂ ಶಿಕ್ಷಕರಿದ್ದು, ಇಬ್ಬರು ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗಿದೆ. ನಾಲ್ಕು ಜನರನ್ನು ನಿಯೋಜನೆ ಮಾಡಲಾಗಿದೆ. ಏಳು ಹುದ್ದೆಗಳು ಖಾಲಿ ಇವೆ. ಅದಷ್ಟು ಬೇಗ ಕಾಯಂ ಶಿಕ್ಷಕರನ್ನು ನೇಮಕ ಮಾಡಬೇಕೆಂಬುದು ಪೋಷಕರ ಒತ್ತಾಯವಾಗಿದೆ.

‌ನರೇಗಾ ಯೋಜನೆಯಲ್ಲಿ ಶಾಲಾ ತಡೆಕಾಂಪೌಂಡ್ ನಿರ್ಮಾಣ, ಆಟದ ಮೈದಾನ ಸಮತಟ್ಟು ಕಾಮಗಾರಿ, ಕಬಡ್ಡಿ, ಖೋ-ಖೋ, ಬಾಲ್ ಬ್ಯಾಡ್ ಮಿಂಟನ್, ಬ್ಯಾಸ್ಕೆಟ್ ಬಾಲ್, ವಾಲೀಬಾಲ್ ಕ್ರೀಡಾಂಗಣಗಳ ನಿರ್ಮಾಣ, ಮಳೆ ಕೊಯ್ಲು, ಹನಿ ನೀರಾವರಿ, ಕಿಚನ್ ಗಾರ್ಡನ್, ಸಿಸಿ ರಸ್ತೆ, ಪ್ರವೇಶದ್ವಾರ, ಉದ್ಯಾನವನವನ್ನು ನಿರ್ಮಿಸಿಕೊಟ್ಟಿದ್ದಾರೆ. ಸ್ವಚ್ಛತೆಯನ್ನು ಕಾಪಾಡಲಾಗಿದೆ. ಕೈತೋಟದಲ್ಲಿ
ಬಣ್ಣ ಬಣ್ಣದ ಫಲಕ ಅಳವಡಿಸಲಾಗಿದೆ. ಸರ್ಕಾರಿ ಶಾಲೆಯು ಮಾದರಿಯಾಗಿ ರೂಪುಗೊಂಡಿದ್ದು, ಖಾಸಗಿ
ಶಾಲೆಗಳಿಗೆ ಸ್ಪರ್ಧೆ ಒಡ್ಡುತ್ತಿದೆ. ಆದರೆ ಶೌಚಾಲಯ ವ್ಯವಸ್ಥೆ ತೀರಾ ಕೆಟ್ಟದಾಗಿದೆ. ಇಷ್ಟೆಲ್ಲ ಕಾಮಗಾರಿ ನಡೆಸಿದರೂ ಶೌಚಾಲಯ ದುರಸ್ತಿಗೊಳಿಸಲು ಅಥವಾ ಹೊಸ ಶೌಚಾಲಯ ನಿರ್ಮಾಣಕ್ಕೆ ಪಂಚಾಯಿತಿಯವರು ಗಮನ ಹರಿಸಿಲ್ಲ, ಶಿಕ್ಷಣ ಇಲಾಖೆಯೂ
ನಿರ್ಲಕ್ಷ್ಯವಹಿಸಿದೆ.

ಇರುವ ಹಳೆ ಶೌಚಾಲಯ ಬಳಕೆಯ ಯೋಗ್ಯತೆಯನ್ನು ಕಳೆದುಕೊಂಡಿದೆ. ಹೀಗಾಗಿ ಮಾದರಿ ಶಾಲಾ ಮಕ್ಕಳು ಶೌಚ ಮಾಡಲು ಬಯಲೆ ಗತಿಯಾಗಿದೆ. ಜತೆಗೆ ಪಿಠೋಪಕರಣಗಳ ಕೊರತೆ ಇದೆ. ಮಕ್ಕಳಿಗೆ ಕುಳಿತುಕೊಳ್ಳಲು ಬೆಂಚ್‌ ಇಲ್ಲದೆ ನೆಲದ ಮೇಲೆ ಕುಳಿತುಕೊಳ್ಳುವ ದುಸ್ಥಿತಿ ಇದೆ.

ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿಗೆ ಅನೇಕ ಬಾರಿ ಮನವಿ ಪ್ರಸ್ತಾವನೆಯನ್ನು ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಇದರಿಂದ ಮಕ್ಕಳಿಗೆ ತೊಂದರೆಯಾಗಿದೆ, ಶಾಲೆಗೂ ಇದೊಂದು ಕಪ್ಪುಚುಕ್ಕೆಯಾಗಿದೆ ಎನ್ನುವುದು ಶಿಕ್ಷಕರ ನೋವಾಗಿದೆ.

ದಾಖಲೆಯಲ್ಲಿ ಏರಿಕೆ
2018-19ರಲ್ಲಿ 61 ಮಕ್ಕಳಿದ್ದರು. 2019-20ರಲ್ಲಿ 104, 2020-21 ರಲ್ಲಿ 131, 2021-22 ರಲ್ಲಿ 183 ಮಕ್ಕಳಿದ್ದರು. ಈ ವರ್ಷ 206 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಇಳಿಮುಖವಾಗುತ್ತಿದ್ದರೆ ಈ ಶಾಲೆಯಲ್ಲಿ ಏರುಗತಿಯಲ್ಲಿ ದಾಖಲಾತಿ ಸಾಗುತ್ತಿದೆ. ಬಟ್ಲಹಳ್ಳಿಯಲ್ಲಿ 2, ಇರಗಂಪಲ್ಲಿ 2, ಮುಂಗಾನಹಳ್ಳಿ 2 ಕಡದಲಮರಿಯಲ್ಲಿ 1 ಖಾಸಗಿ ಶಾಲೆಗಳಿದ್ದರೂ ತೀವ್ರ ಪೈಪೋಟಿಯನ್ನು ನೀಡಿ ದಾಖಲಾತಿ ಹೆಚ್ಚು ಮಾಡಲಾಗಿರುವುದು ಶಿಕ್ಷಕರ ಹೆಗ್ಗಳಿಕೆಯಾಗಿದೆ.

ಕೊರತೆ ಪರಿಹರಿಸಲು ಮನವಿ
‘ಶಿಕ್ಷಕರ ಆಸಕ್ತಿ, ಸಮುದಾಯ ಮತ್ತು ದಾನಿಗಳ ನೆರವಿನಿಂದ ಸರ್ಕಾರಿ ಶಾಲೆಯು ಮಾದರಿಯಾಗಿ ರೂಪುಗೊಂಡಿದೆ. ಖಾಸಗಿ ಶಾಲೆಗಳಿಗೆ ಸ್ಪರ್ಧೆ ಒಡ್ಡುತ್ತಿದೆ. ಖಾಸಗಿ ಶಾಲೆಗಳಲ್ಲಿ ದೊರೆಯುವ ಎಲ್ಲ ಸೌಲಭ್ಯಗಳು ಇಲ್ಲಿ ದೊರೆಯುತ್ತಿವೆ. ಗ್ರಾಮ ಹಾಗೂ ಸುತ್ತಮುತ್ತಲ ಗ್ರಾಮಗಳ ಪೋಷಕರು ಖಾಸಗಿ ಶಾಲೆಗಳಿಗೆ ಹೋಗುತ್ತಿದ್ದ ಮಕ್ಕಳನ್ನು ಕರೆತಂದು ಇಲ್ಲಿ ದಾಖಲಿಸಿದ್ದಾರೆ. ಶೌಚಾಲಯ, ಪೀಠೋಪಕರಣಗಳು ಮತ್ತು ಶಿಕ್ಷಕರ ಕೊರತೆಯನ್ನು ಶೀಘ್ರವಾಗಿ ನಿವಾರಿಸಬೇಕು ಎಂದು ನಿವೃತ್ತ ಮುಖ್ಯ ಶಿಕ್ಷಕ ಶ್ರೀನಿವಾಸ್ ಮನವಿ ಮಾಡಿದ್ದಾರೆ.

ನೆರವಿನಿಂದ ಸುಂದರಗೊಂಡ ಶಾಲೆ
ಬಟ್ಲಹಳ್ಳಿ ಬೆಸ್ಕಾಂ ಶಾಖೆಯ ಅಧಿಕಾರಿ ಗೋಪಾಲಕೃಷ್ಣ ಶಾಲೆಯ 12 ಕೊಠಡಿಗಳಿಗೆ ಸುಣ್ಣ, ಬಣ್ಣ, ಕಿಟಕಿ ಬಾಗಿಲುಗಳಿಗೆ ಬಣ್ಣ ಮಾಡಿಸಿದ್ದಾರೆ. ಆಂಧ್ರ ಪ್ರದೇಶದ ಕಾಕಿನಾಡುವಿನಿಂದ ಚಿತ್ರಕಲೆಗಾರರನ್ನು ಕರೆಸಿ ಶಾಲೆಯ ಎಲ್ಲ ಹೊರ ಗೋಡೆಗಳಿಗೆ ಆಕರ್ಷಣೀಯವಾಗಿ ಕಾಣುವಂತೆ ವಿಶಿಷ್ಟ ರೀತಿಯನ್ನು ಚಿತ್ರಕಲೆಯನ್ನು ಮಾಡಿಸಿದ್ದಾರೆ.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ಎನ್.ರಘುನಾಥರೆಡ್ಡಿ ₹30 ಸಾವಿರ ವೆಚ್ಚದ ಮೈಕ್ ಸೆಟ್ ನೀಡಿದ್ದಾರೆ. ತಾಲ್ಲೂಕು ಪಂಚಾಯಿತಿಯಲ್ಲಿ ಆಗಿನ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್ ನೆಲಕ್ಕೆ ಪ್ಲೋರಿಂಗ್ ಮ್ಯಾಟ್, ಸಹಾಯಕ ನಿರ್ದೇಶಕಿ ಕವಿತಾ ಹಳೆಯ ವಿದ್ಯಾರ್ಥಿಗಳಾದ ರಾಮಲಿಂಗಾರೆಡ್ಡಿ, ಬೈರಾರೆಡ್ಡಿ, ಪದ್ಮ ಮತ್ತಿತರರು ವಿವಿಧ ವಸ್ತು ದಾನ ಮಾಡಿದ್ದಾರೆ.

ಹಳೆಯ ವಿದ್ಯಾರ್ಥಿ ಕಲ್ಯಾಣರೆಡ್ಡಿ ₹1.5 ಲಕ್ಷ ವೆಚ್ಚದಲ್ಲಿ ರಂಗಮಂದಿರ ನಿರ್ಮಿಸಿದ್ದಾರೆ. ಶಿಕ್ಷಕರು ₹30 ಸಾವಿರ ವೆಚ್ಚದಲ್ಲಿ ಶಾಲೆಯ ತಡೆಗೋಡೆ ಚಿತ್ರ ಬರೆಸಿದ್ದಾರೆ. ನೆದರ್ ಲ್ಯಾಂಡ್ ರಾಬರ್ಟ್ ರೋಜ್ ಒಂದು ಲಕ್ಷದ ಕ್ರೀಡಾ ಉಪಕರಣಗಳನ್ನು ನೀಡಿದ್ದಾರೆ. ಹೀಗೆ ದಾನಿಗಳ ನೆರವಿನಿಂದ ಶಾಲೆ ಸುಂದರ ಮತ್ತು ಆಕರ್ಷಣೀಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT