ಶುಕ್ರವಾರ, ಜೂನ್ 18, 2021
28 °C
ಲಾಕ್‌ಡೌನ್; ಕಿರು ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲ ತೀರಿಸಲಾಗದೆ ಒದ್ದಾಟ

ಬೀದಿಬದಿ ವ್ಯಾಪಾರಿಗಳ ಹೊಟ್ಟೆಗೆ ಬರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ನಮ್ಮ ಬದುಕು ಕಷ್ಟವಾಗಿದೆ. ಮನೆ ಬಾಡಿಗೆ ಕಟ್ಟದಿದ್ದರೆ ಮಾಲೀಕರು ಮನೆ ಬಿಡಿ ಎನ್ನುವರು. ಕಳೆದ ಬಾರಿಯ ಲಾಕ್‌ಡೌನ್‌ನಿಂದ ಈಗ ಚೇತರಿಕೊಳ್ಳುತ್ತಿದ್ದೆವು. ಈಗ ಮತ್ತೆ ನಮ್ಮ ಬದುಕು ಬೀದಿಗೆ ಬಂದಿದೆ’.

ಇದು ಚಿಕ್ಕಬಳ್ಳಾಪುರ ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಸ್ಲಂ ಪಾಷ ಅವರು ನೋವಿನ ನುಡಿ.

ಅಸ್ಲಂ ಅವರ ಮಾತುಗಳನ್ನು ಅನುಮೋದಿಸುವಂತೆ ಹಲವು ಬೀದಿ ಬದಿ ವ್ಯಾಪಾರಿಗಳು ಇದೇ ಮಾತು ಹೇಳುವರು. ಅಂದಿನ ವ್ಯಾಪಾರ ಅಂದಿನ ಬದುಕು ಎನ್ನುವ ರೀತಿಯಲ್ಲಿ ಜೀವನ ನಡೆಸುತ್ತಿರುವ ಬೀದಿ ಬದಿ ವ್ಯಾಪಾರಿಗಳು ಕೊರೊನಾ ಕಾರಣದಿಂದ ಕಂಗಾಲಾಗಿದ್ದಾರೆ. 

ಚಿಕ್ಕಬಳ್ಳಾಪುರ ನಗರದಲ್ಲಿ 700 ಮಂದಿ ಬೀದಿ ಬದಿ ವ್ಯಾಪಾರಿಗಳು ಸಂಘದಿಂದ ವ್ಯಾಪಾರದ ಗುರುತಿನ ಚೀಟಿ ಪಡೆದಿದ್ದಾರೆ. ಆದರೆ ಒಂದೂವರೆ ಸಾವಿರಕ್ಕೂ ಹೆಚ್ಚು ವ್ಯಾಪಾರಿಗಳು ನಗರದಲ್ಲಿ ವಹಿವಾಟು ನಡೆಸಿದ್ದಾರೆ. ಜಿಲ್ಲೆಯಲ್ಲಿ 5,400ಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳು ಇದ್ದಾರೆ.

ಬೀದಿ ಬದಿ ವ್ಯಾಪಾರಿಗಳಿಗೆ ಪ್ರತಿನಿತ್ಯದ ದುಡಿಮೆಯೇ ಆಧಾರ. ಕೊರೊನಾ ಮತ್ತು ಲಾಕ್‌ಡೌನ್ ಈ ವ್ಯಾಪಾರಿಗಳ ಬದುಕನ್ನೇ ಹೈರಾಣು ಮಾಡಿದೆ. ಕಳೆದ ವರ್ಷವೂ ಇದೇ ಅವಧಿಯಲ್ಲಿ ಬೀದಿ ಬದಿ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದರು. ಅದರಿಂದ ಚೇತರಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಮತ್ತೆ ಬದುಕಿಗೆ ಪೆಟ್ಟು ಬಿದ್ದಿದೆ.

ಕೆಲವು ಬೀದಿ ಬದಿ ವ್ಯಾಪಾರಿಗಳು ಬೆಳಿಗ್ಗೆ 6ರಿಂದ 10ರವರೆಗೆ ವ್ಯಾಪಾರ ಮಾಡುವರು. ಆದರೆ ರಸ್ತೆ ಬದಿಯಲ್ಲಿ ತಳ್ಳುಗಾಡಿಗಳ ಮೂಲಕ ಹೋಟೆಲ್ ನಡೆಸುತ್ತಿದ್ದವರು, ಪಾನಿಪೂರಿ, ಕಬಾಬ್ ಮಾರುತ್ತಿದ್ದವರು, ಬಟ್ಟೆಗಳನ್ನು ಮಾರುತ್ತಿದ್ದವರು.... ತಮ್ಮ ಗಾಡಿಗಳನ್ನು ಟಾರ್ಪಲ್‌ನಿಂದ ಮುಚ್ಚಿ ಮೂಲೆಯಲ್ಲಿ ನಿಲ್ಲಿಸಿದ್ದಾರೆ. ಹೀಗೆ ಮೂಲೆಯಲ್ಲಿ ಮುಸುಕುಹೊದ್ದ ಗಾಡಿಗಳು ಬೀದಿ ಬದಿಯ ವ್ಯಾಪಾರಿಗಳ ಬದುಕಿನ ಸ್ಥಿತಿಯನ್ನು ಸಾರಿ ಹೇಳುತ್ತಿವೆ.

ಸಂಘಗಳ ಕಿರುಕುಳ: ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ₹ 10 ಸಾವಿರ ಸಾಲ ಸಹ ದೊರೆತಿದೆ.  ಆದರೆ ಇದಕ್ಕಿಂತ ಮುಖ್ಯವಾಗಿ ಈ ವ್ಯಾಪಾರಿಗಳು ವಿವಿಧ ಹಣಕಾಸು ಸಂಸ್ಥೆಗಳು, ಸಂಘಗಳಿಂದ ಸಾಲ ಪಡೆದು ಪ್ರತಿವಾರ ಅಸಲು ಮತ್ತು ಬಡ್ಡಿಯನ್ನು ಪಾವತಿಸುತ್ತಿದ್ದರು. ಆದರೆ ಈಗ ವ್ಯಾಪಾರವಿಲ್ಲದೆ ಅಸಲು ಪಾತಿಸಲು ಸಾಧ್ಯವಾಗುತ್ತಿಲ್ಲ. ಕಿರು ಹಣಕಾಸು ಸಂಸ್ಥೆಯವರು ಬಡ್ಡಿ ಮನ್ನಾ ಮಾಡುವ ಮನಸ್ಸು ಸಹ ಮಾಡಿಲ್ಲ.

‘ವ್ಯಾಪಾರವಿಲ್ಲ. ಪ್ರತಿವಾರ ಸಂಘಗಳಿಗೆ ಹಣವನ್ನು ಕಟ್ಟಲು ಸಾಧ್ಯವಾಗುತ್ತಿಲ್ಲ. ಕಳೆದ ವರ್ಷ ಪಡೆದ ಸಾಲಕ್ಕೂ ಬಡ್ಡಿಯನ್ನು ವಿಧಿಸಿದ್ದಾರೆ. ಸರ್ಕಾರ ತಕ್ಷಣವೇ ನಮ್ಮ ನೆರವಿಗೆ ನಿಲ್ಲಬೇಕು. ಬೀದಿ ಬದಿ ವ್ಯಾಪಾರಿಗಳ ರಕ್ಷಣೆಗಾಗಿ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು’ ಎಂದು ಆಗ್ರಹಿಸುವರು ಅಸ್ಲಂಪಾಷ.

ಡಿ.ಎಂ.ಕುರ್ಕೆ ಪ್ರಶಾಂತ್, ಪಿ.ಎಸ್.ರಾಜೇಶ್, ಎಂ.ರಾಮಕೃಷ್ಣಪ್ಪ, ಡಿ.ಜಿ.ಮಲ್ಲಿಕಾರ್ಜುನ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.