ಬುಧವಾರ, ಏಪ್ರಿಲ್ 1, 2020
19 °C
ಅಮೆರಿಕಾ ಜತೆಗಿನ ಭಾರತದ ಒಪ್ಪಂದ ಖಂಡಿಸಿ ನಗರದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ಪದಾಧಿಕಾರಿಗಳ ಪ್ರತಿಭಟನೆ

‘ಟ್ರಂಪ್‌ ಗೋ ಬ್ಯಾಕ್‌’ ಚಳವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಭಾರತ ಭೇಟಿ ವಿರೋಧಿಸಿ ನಗರದಲ್ಲಿ ಸೋಮವಾರ ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ಪದಾಧಿಕಾರಿಗಳು ‘ಟ್ರಂಪ್‌ ಗೋ ಬ್ಯಾಕ್‌’ ಚಳವಳಿ ನಡೆಸಿದರು.

ಈ ವೇಳೆ ಮಾತನಾಡಿದ ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ರಾಜ್ಯ ಸಮಿತಿ ಉಪಾಧ್ಯಕ್ಷ ಎಂ.ಪಿ.ಮುನಿವೆಂಕಟಪ್ಪ, ‘ಅಮೆರಿಕಾ ಜತೆಗಿನ ಒಪ್ಪಂದ ಭಾರತದ ಹೈನುಗಾರಿಕೆ ಮತ್ತು ಕುಕ್ಕುಟೋದ್ಯಮದ ಮರಣಶಾಸನವಾಗಲಿದೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಟ್ರಂಪ್ ಅವರನ್ನು ಆಹ್ವಾನಿಸಿ, ಹೈನುಗಾರಿಕೆ ಮತ್ತು ಕುಕ್ಕುಟೋದ್ಯಮದ ಮುಕ್ತ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕುವುದನ್ನು ತೀವ್ರವಾಗಿ ಖಂಡಿಸುತ್ತೇವೆ’ ಎಂದು ಹೇಳಿದರು.

‘ಈ ಒಪ್ಪಂದ ಜಾರಿಯಾದಲ್ಲಿ ಭಾರತಕ್ಕೆ ವಾರ್ಷಿಕ ಅಂದಾಜು ₹42 ಸಾವಿರ ಕೋಟಿ ಹೈನು ಉತ್ಪನ್ನಗಳು, ಕೋಳಿ ಉತ್ಪನ್ನಗಳು, ಟರ್ಕಿ ಮತ್ತಿತರ ಕೃಷಿ ಉತ್ಪನ್ನಗಳ ವಸ್ತುಗಳು ಆಮದಾಗುತ್ತವೆ. ಇದರಿಂದ ದೇಶದಲ್ಲಿ ಹೈನುಗಾರಿಕೆಯಲ್ಲಿ ತೊಡಗಿರುವ ಸುಮಾರು 10 ಕೋಟಿ ರೈತರು, ಅದರಲ್ಲೂ ರೈತ ಮಹಿಳೆಯರು ಮತ್ತು ಬಡವರು ಸರ್ಕಾರದ ಈ ಒಪ್ಪಂದದಿಂದ ಸಂಕಷ್ಟಕ್ಕೆ ಸಿಲುಕುತ್ತಾರೆ. ಹೈನುಗಾರಿಕೆ ಮತ್ತು ಕುಕ್ಕಟ ಉದ್ಯಮದಲ್ಲಿ ತೊಡಗಿರುವ ಕಾರ್ಮಿಕರು ಕೂಡ ತಮ್ಮ ಜೀವನೋಪಾಯದಿಂದ ವಂಚಿತರಾಗುತ್ತಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಸೇಬು, ಚೆರ್ರಿ, ಬಾದಾಮಿ, ಸೋಯಾಬಿನ್, ಗೋಧಿ, ಜೋಳ ಮೊದಲಾದ ಹಣ್ಣು ಮತ್ತು ಕಾಳುಗಳ ಮೇಲಿನ ಆಮದು ತೆರಿಗೆಯನ್ನು ಶೇ100 ರಿಂದ ಶೇ 10ಕ್ಕೆ ಇಳಿಸಿದರೆ ನಮ್ಮ ರೈತರ ಮೇಲೆ ಗಂಭೀರ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಭಾರತದ ರೈತರ ಪ್ರತಿಭಟನೆಗಳಿಗೆ ಮಣಿದು ‘ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ’ದ (ಆರ್‌ಸಿಇಪಿ) ಮುಕ್ತ ವ್ಯಾಪಾರ ಒಪ್ಪಂದಕ್ಕೆ ನಾವು ಸಹಿ ಹಾಕಿಲ್ಲ ಎಂದು ಹೇಳಿಕೊಂಡ ಬಿಜೆಪಿ ಸರ್ಕಾರ, ಈಗ ಈ ಹೊಸ ಒಪ್ಪಂದದ ಮೂಲಕ ಆರ್‌ಸಿಇಪಿಗಿಂತಲೂ ಹೆಚ್ಚಿನ ಆಘಾತಕಾರಿ ಪರಿಣಾಮವನ್ನು ಉಂಟುಮಾಡಲು ಹೊರಟಿದೆ’ ಎಂದು ಆರೋಪಿಸಿದರು.

‘ಭಾರತದಲ್ಲಿ ಹೈನುಗಾರಿಕೆಯು ಸುಮಾರು ಹತ್ತು ಕೋಟಿ ರೈತಾಪಿ ಕುಟುಂಬಗಳಿಗೆ ಜೀವನೋಪಾಯವಾಗಿದೆ. ಅನೇಕ ವರ್ಷಗಳಿಂದ, ಸಹಕಾರಿ ಜಾಲದ ಮೂಲಕ ಕಟ್ಟಿ ಬೆಳೆಸಿದ ಹೈನುಗಾರಿಕೆ ಉದ್ಯಮದಲ್ಲಿ ಹಾಲಿನ ಬೆಲೆಯ ಶೇ71 ರಷ್ಟು ಹಣ ರೈತಾಪಿ ಕುಟುಂಬಗಳಿಗೆ ವಾಪಾಸಾಗುತ್ತಿತ್ತು. ಆದರೆ, ಈಗ ಅಮೆರಿಕದ ಬೇಡಿಕೆಯಂತೆ ಹೈನುಗಾರಿಕೆ ಉತ್ಪನ್ನಗಳ ಆಮದಿನ ಮೇಲಿನ ಶೇ 64ರಷ್ಟು ತೆರಿಗೆಯನ್ನು ಕಡಿತಗೊಳಿಸಿದರೆ ಭಾರತದ ಹಾಲಿನ ಆಂತರಿಕ ಮಾರುಕಟ್ಟೆ ತೀವ್ರವಾಗಿ ನೆಲ ಕಚ್ಚುತ್ತದೆ’ ಎಂದು ತಿಳಿಸಿದರು.

ಕರ್ನಾಟಕ ಪ್ರಾಂತ ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ ಮಾತನಾಡಿ, ‘ಭಾರತದಲ್ಲಿ ಕುಕ್ಕುಟೋದ್ಯಮವು ಸುಮಾರು 4.80 ಕೋಟಿ ಜನರ ಜೀವನೋಪಾಯವಾಗಿದೆ. ಈ ವಲಯದ ಸಂಘಟಿತ ಮತ್ತು ಅಸಂಘಟಿತ ರೂಪದ ಆದಾಯ ಸುಮಾರು ₹80 ಸಾವಿರ ಕೋಟಿ. ಈಗ ಅಮೆರಿಕಾದಿಂದ ಕಡಿಮೆ ದರದ ಕುಕ್ಕುಟ ಉತ್ಪನ್ನಗಳು ಭಾರತವನ್ನು ಪ್ರವೇಶಿಸುವುದು ಎಂದರೆ, ಭಾರತದ ಆಂತರಿಕ ಕುಕ್ಕುಟ ಮಾರುಕಟ್ಟೆಗೆ ಮರಣ ಶಾಸನ ಬರೆದಂತೆಯೇ ಸರಿ. ಈ ಮೂಲಕ ಕೋಟ್ಯಂತರ ಸಣ್ಣ ಮತ್ತು ಮಧ್ಯಮ ರೈತರು ಹಾಗೂ ವ್ಯಾಪಾರಿಗಳು, ಕಾರ್ಮಿಕರು ತೊಂದರೆಗೆ ಒಳಗಾಗುತ್ತಾರೆ’ ಎಂದರು.

‘ಅಮೆರಿಕದ ತೀವ್ರ ಒತ್ತಡಕ್ಕೆ ಒಳಗಾಗಿ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವುದರಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಶೇ 85 ರಷ್ಟು ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಹಾಗೂ ಕೃಷಿ ಕೂಲಿಕಾರರು ಸಂಕಷ್ಟಕ್ಕೆ ಒಳಗಾಗುತ್ತಾರೆ. ಇದು ಅಮೆರಿಕದ ಅತಿ ಹೆಚ್ಚಿನ ಪ್ರಮಾಣದ ಸಬ್ಸಿಡಿ ದರದೊಂದಿಗೆ ಸ್ಪರ್ಧಿಸಲಾಗದೆ ನಮ್ಮ ರೈತರನ್ನು ಸಮಸ್ಯೆಗೆ ದೂಡುತ್ತದೆ. ಜಾಗತಿಕ ಹಣಕಾಸು ಪರಿಸ್ಥಿತಿ ಕುಸಿಯುತ್ತಿರುವ ಈ ಸಮಯದಲ್ಲಿ ಭಾರತದಲ್ಲಿ ಈ ಒಪ್ಪಂದ ಜಾರಿಯಾಗುತ್ತಿದೆ. ಬಿಜೆಪಿ ಸರ್ಕಾರದ ಈ ನಡೆಯನ್ನು ಪ್ರತಿಯೊಬ್ಬರೂ ಖಂಡಿಸಬೇಕು’ ಎಂದು ಆಗ್ರಹಿಸಿದರು.

ಎಸ್‌ಎಫ್‌ಐ ಜಿಲ್ಲಾ ಘಟಕದ ಸಂಚಾಲಕ ಸೋಮಶೇಖರ್, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಸಮಿತಿ ಸದಸ್ಯೆ ಬಿ.ಸಾವಿತ್ರಮ್ಮ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು