ಶಿಡ್ಲಘಟ್ಟ: ಕೃಷಿ ಕಾಯ್ದೆ ವಿರೋಧಿಸಿ ಮುತ್ತಿಗೆ

ಶಿಡ್ಲಘಟ್ಟ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ಮತ್ತು ಜನವಿರೋಧಿ ನೀತಿ ಖಂಡಿಸಿ ಸೆಪ್ಟೆಂಬರ್ 13ರಂದು ವಿಧಾನಸೌಧ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ರೈತಸಂಘ ಹಾಗೂ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ತಿಳಿಸಿದರು.
ನಗರದ ರೈತ ಸಂಘದ ಕಚೇರಿಯಲ್ಲಿ ವಿಧಾನಸೌಧ ಚಲೋ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ದೇಶದ ಅನ್ನದಾತವಾಗಿರುವ ರೈತರ ಪರವಾಗಿ ಸುಪ್ರೀಂ ಕೋರ್ಟ್ ಜಾರಿಗೊಳಿಸಿರುವ ಆದೇಶವನ್ನು ಧಿಕ್ಕರಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋಧಿ ಮತ್ತು ಜನ ವಿರೋಧಿ ಕಾಯ್ದೆಗಳನ್ನು ಅನುಷ್ಠಾನಗೊಳಿಸುವ ಮೂಲಕ ರೈತರ ಸಹನೆಯನ್ನು ಪರೀಕ್ಷೆ ಮಾಡುವ ದುಸ್ಸಾಹಸ ಮಾಡುತ್ತಿದೆ. ರೈತ ವಿರೋಧಿ ನೀತಿಗಳ ಬಗ್ಗೆ ರೈತ ಸಮುದಾಯ ಎಚ್ಚೆತ್ತುಕೊಳ್ಳಬೇಕು ಎಂದರು.
ಕಳೆದ ಕೆಲ ದಶಕಗಳಿಂದ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕರೆ ನೀಡಿದ್ದ ಎಲ್ಲಾ ಹೋರಾಟಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಹೆಸರುವಾಸಿಯಾಗಿರುವ ತಾಲ್ಲೂಕಿನ ರೈತರು ಇದೇ ಸೆಪ್ಟೆಂಬರ್ 13 ರಂದು ಹಮ್ಮಿಕೊಂಡಿರುವ ಬೆಂಗಳೂರಿನ ವಿಧಾನಸೌಧ ಚಲೋ ಕಾರ‍್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.
ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷ ವೇಣುಗೋಪಾಲ್, ವೀರಾಪುರ ಮುನಿನಂಜಪ್ಪ, ಕೃಷ್ಣಪ್ಪ, ನಗರಘಟಕದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಪದಾಧಿಕಾರಿಗಳಾದ ಗುಡಿಹಳ್ಳಿ ಕೆಂಪಣ್ಣ, ತೋಪಡ ರಾಮಚಂದ್ರಪ್ಪ, ದೇವರಾಜ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.