ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿ: ಅವಸಾನದ ಅಂಚಿನಲ್ಲಿದೆ ಕೆರೆ, ಕುಂಟೆ, ಕಾಲುವೆ

Published 6 ಏಪ್ರಿಲ್ 2024, 7:05 IST
Last Updated 6 ಏಪ್ರಿಲ್ 2024, 7:05 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಪಟ್ಟಣದ ಹೊರವಲಯದಲ್ಲಿ ಬ್ರಿಟಿಷರು ನಿರ್ಮಿಸಿದ ಕೊರ್ಲಕುಂಟೆ, ಬಾಲಾಜಿರಾಯನ ಕಾಲುವೆ, ಬಾಂಗ್ಲಾಕುಂಟೆ, ರಾಳ್ಳಕುಂಟೆ ಸೇರಿದಂತೆ ಪೋಷಕ ಕಾಲುವೆಗಳನ್ನು ಸಂಬಂಧಪಟ್ಟ ಸಣ್ಣ ನೀರಾವರಿ ಇಲಾಖೆ ಸೂಕ್ತ ನಿರ್ವಹಣೆ ಮಾಡದೇ ಇರುವುದರಿಂದ ಕಳೆ, ಮುಳ್ಳಿನ ಗಿಡ ಬೆಳೆದು ಮುಚ್ಚಿವೆ.

ಯರ್ರಕಾಲುವೆ: ತಾಲ್ಲೂಕಿನ ಗಡಿದಂ ಕೆರೆ ತುಂಬಿದಾಗ, ಹರಿದ ನೀರು ಕಾಲುವೆ ಮೂಲಕ ಒಡ್ಡಿಗೆ ಹರಿಯುತ್ತದೆ. ಯರ್ರಕಾಲುವೆಯಿಂದ ಕೊರ್ಲಕುಂಟೆ, ರಾಳ್ಳಕುಂಟೆಗೆ ತಲುಪುತ್ತದೆ. ಕಾಲುವೆಗಳ ಪಕ್ಕದಲ್ಲಿ ಪೋಷಕ ಕಾಲುವೆ ಮಾಡಲಾಗಿದೆ. ತುಂಬಿದ ನೀರು ಕಾಲುವೆಯ ಅಕ್ಕ-ಪಕ್ಕದ ರೈತರ ಜಮೀನಿಗೆ ರೈತರು ನೀರು ಹರಿಸಿಕೊಂಡಿದ್ದಾರೆ. ಅಂದು 22 ಅಡಿಯಷ್ಟಿದ್ದ ಯರ್ರಕಾಲುವೆ ಇದೀಗ 3 ಅಡಿಯಷ್ಟು ಮಾತ್ರ ಇದೆ.

ಯರ್ರಕಾಲುವೆ ಹಾಗೂ ಪೋಷಕ ಕಾಲುವೆಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಿಲ್ಲ. ಮುಳ್ಳಿನ ಹಾಗೂ ಕಳೆ ಗಿಡ ಬೆಳೆದಿವೆ. ಈ ಹಿಂದೆ ಸದಾ ನೀರು ಹರಿದ ಕಾಲುವೆ, ಕುಂಟೆ ಇದೀಗ ಅವಸಾನದ ಅಂಚಿನಲ್ಲಿ ಇವೆ.

ಬಾಲಾಜಿ ಬಾಜಿರಾಯನ ಕಾಲುವೆ: ಚಿತ್ರಾವತಿ ಬಲದಂಡೆಯಲ್ಲಿ ಬಾಜಿರಾಯನ ಕಾಲುವೆ ಇತ್ತು. ಮರಾಠರ ಪೇಶ್ವೆ ಬಾಲಾಜಿ ಬಾಜಿರಾಯ ಅಂದಿನ ದಿನಗಳಲ್ಲಿ ಭೇಟಿ ನೀಡಿ ನಿರ್ಮಿಸಿರುವುದರಿಂದ, ಅವರ ಹೆಸರನ್ನೇ ಈ ಕಾಲುವೆಗೆ ಇಡಲಾಗಿದೆ. ಚಿತ್ರಾವತಿ ಬಲದಂಡೆಯ ಆಂಜನೇಯ ದೇವಾಲಯ, ಸುಂದರಯ್ಯಭವನದ ಪಕ್ಕದಲ್ಲಿ ಬಾಲಾಜಿ ಬಾಜಿರಾಯನ ಕಾಲುವೆ ಹಾದುಹೋಗಿದೆ. ಆದರೆ ಇದೀಗ ಈ ಕಾಲುವೆ ಬರೀ ನೆನಪು ಮಾತ್ರ ಉಳಿದಿದೆ.

ಪಟ್ಟಣದ ಪ್ರವಾಸಿ ಮಂದಿರದ ಮುಂದೆ ಬಾಂಗ್ಲಾ ಕುಂಟೆ ಇದೆ. ಮಳೆಯ ನೀರು ಸಂಗ್ರಹ ಆಗಿ, ಅಂತರ್ಜಲದ ಮಟ್ಟ ಹೆಚ್ಚಿಸಿತ್ತು. ಆದರೆ ಸೂಕ್ತ ನಿರ್ವಹಣೆ ಹಾಗೂ ಅಭಿವೃದ್ಧಿಪಡಿಸದೇ ಇರುವುದರಿಂದ ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ.

ಕೊಡಿಕೊಂಡಗೆ ಸಂಚರಿಸುವ ಮಾರ್ಗದಲ್ಲಿ ಕೊರ್ಲಕುಂಟೆ ಇದೆ. ಇದೇ ಕೊರ್ಲಕುಂಟೆಯಲ್ಲಿ ಪಟ್ಟಣಕ್ಕೆ ನೀರು ಸರಬರಾಜು ಮಾಡಲು ಕೊಳವೆಬಾವಿ ಮಾಡಲಾಗಿದೆ. ಆದರೆ ಇದೀಗ ಊರಿನ ಚರಂಡಿ, ಕಲುಷಿತ ನೀರಿನ ಹಾಗೂ ತ್ಯಾಜ್ಯದ ಕೇಂದ್ರವಾಗಿದೆ. ಮುಳ್ಳಿನ, ಕಳೆ ಗಿಡಗಳು ಬೆಳೆದಿದ್ದು, ಸುತ್ತಲೂ ಒತ್ತುವರಿಗೆ ನಲುಗಿದೆ.

ಚಿತ್ರಾವತಿ ನದಿ ಪಾತ್ರದ ಎಡ ಹಾಗೂ ಬಲಭಾಗದಲ್ಲಿ ನದಿ ಉದ್ದಕ್ಕೂ ಕೆಲವರು ಅನಧಿಕೃತವಾಗಿ ಅಂಗಡಿ ನಿರ್ಮಾಣ ಮಾಡಿದ್ದಾರೆ. ನದಿ ಪಾತ್ರವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಪಟ್ಟಣದ ಕಸ, ತ್ಯಾಜ್ಯ, ಕೊಳಚೆ ನೀರು ಹರಿಸಲಾಗಿದೆ. ಪೋಷಕ ಕಾಲುವೆ ಒತ್ತುವರಿ ಆಗಿದೆ.

‘ಪಟ್ಟಣದ ಹೊರವಲಯಗಳಲ್ಲಿ ಹಿಂದಿನ ಕಾಲದಲ್ಲಿ ಕೆರೆ, ಕುಂಟೆ, ಕಾಲುವೆ ಮಾಡಿ ನೀರನ್ನು ಸಂಗ್ರಹಿಸಿ ಅಂತರ್ಜಲದ ಮಟ್ಟ ಹೆಚ್ಚಿಸಲು ಕಾರಣವಾಗಿತ್ತು. ನೀರು ಪೋಲಾಗದಂತೆ ನಿರ್ವಹಣೆ ಮಾಡಿದ್ದರು. ಕೆರೆ, ಕುಂಟೆ, ಕಾಲುವೆಗಳಲ್ಲಿ ಹೂಳು ತೆಗೆಸಿ ಹೊಲ ಗದ್ದೆಗಳಿಗೆ ನೀರು ಹರಿಸಲಾಗುತ್ತಿತ್ತು ಎಂದು’ ಆವುಲಮಂದೆ ರಸ್ತೆಯ ನಿವಾಸಿ ಶಾಂತಮ್ಮ ವಿವರಿಸಿದರು.

ಇಂದು ಕೆಲ ಪ್ರಭಾವಿಗಳು, ರಿಯಲ್ ಎಸ್ಟೇಟ್ ಮಾಫಿಯಾದವರು ಕೆರೆ, ಕುಂಟೆ, ಕಾಲುವೆಗಳನ್ನು ಮುಚ್ಚಿ, ನಿವೇಶನ ಮಾಡಿದ್ದಾರೆ. ಜಲಮೂಲಗಳನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಸಂರಕ್ಷಣೆ ಮಾಡಿಲ್ಲ. ಅಭಿವೃದ್ಧಿ ಕಾರ್ಯಯೋಜನೆ ಜಾರಿ ಮಾಡಿಲ್ಲ. ಇದೀಗ ಜನ ಜಾನುವಾರುಗಳಿಗೆ ನೀರಿನ ಹಾಹಾಕಾರ ಉಂಟಾಗಿದೆ ಎಂದು ಪಟ್ಟಣದ ನಿವೃತ್ತ ಮುಖ್ಯಶಿಕ್ಷಕ ಇಲಾಹಿ ಭಕ್ಷ್ ಹೇಳಿದರು.

ಕೆಲ ಕಾಲುವೆ, ಕೆರೆಗಳು, ಕುಂಟೆ ಪಂಚಾಯಿತಿ ಹಾಗೂ ಸಣ್ಣ ನೀರಾವರಿ ಇಲಾಖೆಗೆ ವ್ಯಾಪ್ತಿಗೆ ಒಳಪಟ್ಟಿವೆ. ಇದನ್ನು ಅಭಿವೃದ್ಧಿಪಡಿಸಲು ಕಾರ್ಯಯೋಜನೆ ರೂಪಿಸಲಾಗಿದೆ. ಅನುದಾನ ಬಂದ ಕೂಡಲೇ ನಿರ್ವಹಣೆ ಮಾಡಲಾಗುವುದು ಎಂದು ಸಣ್ಣ ನೀರಾವರಿ ಇಲಾಖೆ ಸಹಾಯಕ ಎಂಜಿನಿಯರ್ ಸುನೀಲ್ ಪ್ರಜಾವಾಣಿಗೆ ಪ್ರತಿಕ್ರಿಯಿಸಿದರು.

ಸರ್ಕಾರ ತುಂಡು ಕಾಮಗಾರಿಗಳಿಗೆ ಕೋಟ್ಯಂತರ ಹಣ ವ್ಯಯ ಮಾಡುತ್ತಿದೆ. ಆದರೆ ನೀರಿನ ಶಾಶ್ವತ ಯೋಜನೆಗೆ ಪರಿಹಾರ ನೀಡಿಲ್ಲ. ಕೆರೆ ಕಾಲುವೆ ಒತ್ತುವರಿ ಆಗಿರುವುದನ್ನು ತೆರವುಗೊಳಿಸಬೇಕು
ಮುಸ್ತಾಫಸಾಬ್ ಪಟ್ಟಣದ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT