ಬುಧವಾರ, ಮೇ 27, 2020
27 °C

ಕುಡಿಯುವ ನೀರಿಗಾಗಿ ನೂಕಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ಕುಡಿಯುವ ನೀರಿನ ವಿಚಾರದಲ್ಲಿ ಬುಧವಾರ 18 ನೇ ವಾರ್ಡ್ ಕೀರ್ತಿನಗರದ ನಿವಾಸಿಗಳು ಮತ್ತು ಪೌರಾಯುಕ್ತರ ನಡುವೆ ವಾಗ್ವಾದ ನಡೆದು, ನೂಕಾಟ-ತಳ್ಳಾಟ ನಡೆಯಿತು.

ಕೀರ್ತಿ ನಗರದಲ್ಲಿ ಕಳೆದ ಕೆಲವು ದಿನಗಳಿಂದ ನೀರು ಸರಬರಾಜು ಮಾಡಿಲ್ಲ. ಗುರುವಾರ ಶಾಬೆ ಬರಾತ್ ಹಬ್ಬದ ಹಿನ್ನೆಲೆಯಲ್ಲಿ ನೀರು ಸರಬರಾಜು ಮಾಡುವಂತೆ ಒತ್ತಾಯಿಸಿ ನಿವಾಸಿಗಳು ಪ್ರತಿಭಟನೆ ನಡೆಸಿ ಆ ಭಾಗದ ಸದಸ್ಯ ಮಹ್ಮದ್ ಷಫೀಕ್ ಅವರನ್ನು ತರಾಟೆಗೆ ತೆಗೆದುಕೊಂಡರು.

‘ಹಲವಾರು ಬಾರಿ ನಗರಸಭೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ, ನಗರಸಭೆ ಮುಂದೆ ಪ್ರತಿಭಟನೆಯನ್ನೂ ಮಾಡಿದ್ದೇನೆ. ಆದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಪೌರಾಯುಕ್ತರಿಗೆ ಸ್ಥಳಕ್ಕೆ ಕರೆಸುತ್ತೇನೆ. ನಿಮ್ಮ ಸಮಸ್ಯೆಗಳನ್ನು ಖುದ್ದಾಗಿ ತಿಳಿಸಿ’ ಎಂದು ಪೌರಾಯುಕ್ತ ಹರೀಶ್ ಅವರನ್ನು ಸ್ಥಳಕ್ಕೆ ಕರೆಸಿಕೊಂಡರು.

ಸ್ಥಳಕ್ಕೆ ಪೌರಾಯುಕ್ತರು ಬಂದ ವೇಳೆ ಷಫೀಕ್‌ 200 ಮನೆಗಳಿಗೆ ಒಂದು ಟ್ಯಾಂಕರ್ ಕಳುಹಿಸಿದರೆ ಹೇಗೆ? ಕಳೆದ ಒಂದು ತಿಂಗಳಿನಿಂದ ನೀರು ಸರಬರಾಜು ಮಾಡಿಲ್ಲ. ಬಡವರು, ಕೊಳಚೆ ಪ್ರದೇಶಗಳಿಗೆ ವಾರಕ್ಕೆ ಒಮ್ಮೆ ನೀರು ಸರಬರಾಜು ಮಾಡಬೇಕು ಎಂದು ತೀರ್ಮಾನವಾಗಿದ್ದರೂ ನೀರು ಕೊಡುತ್ತಿಲ್ಲ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಅಸಮಾಧಾನಗೊಂಡ ಸ್ಥಳೀಯರು ಪೌರಾಯುಕ್ತರನ್ನು ತರಾಟೆಗೆ ತೆಗೆದುಕೊಂಡರು. ಕೆಲಕಾಲ  ಉದ್ವಿಘ್ನ ಪರಿಸ್ಥಿತಿ ಉಂಟಾಯಿತು.

ಲಾಕ್ ಡೌನ್‌ನಿಂದ ಮನೆಯವರೆಲ್ಲರೂ ಮನೆಯಲ್ಲಿಯೇ ಇರುವುದರಿಂದ ನೀರಿನ ಅಗತ್ಯವಾಗಿದೆ. ಉಳ್ಳವರು ನೀರನ್ನು ಕೊಂಡುಕೊಳ್ಳುತ್ತಾರೆ. ಬಡಾವಣೆಯಲ್ಲಿ ಕಡುಬಡವರಾಗಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಕೆಲಸವಿಲ್ಲದೆ ಮನೆಯಲ್ಲಿದ್ದೇವೆ. ನಾವು ನೀರು ಕೊಳ್ಳುವ ಸ್ಥಿತಿಯಲ್ಲಿ ಇಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ಪ್ರತಿಭಟನಾಕಾರರ ಆಕ್ರೋಷಕ್ಕೆ ಮಣಿದ ಆಯುಕ್ತರು ಹೆಚ್ಚುವರಿ 3 ಟ್ಯಾಂಕರ್ ನೀರು ಒದಗಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಸ್ಥಗಿತಗೊಳಿಸಿದರು.

ನ್ಯಾಯಾಲಯದಲ್ಲಿ ಮೊಕದ್ದಮೆ
ಚಿಂತಾಮಣಿ 18 ನೇ ವಾರ್ಡ್ ಕೀರ್ತಿನಗರಕ್ಕೆ ಸಮರ್ಪಕವಾಗಿ ನೀರು ಪೂರೈಸಬೇಕು. ಇಲ್ಲದಿದ್ದರೆ ನಗರಸಭೆ ಅಥವಾ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು. ಅಲ್ಲಿಗೂ ಬಗೆಹರಿಯದಿದ್ದರೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡುವುದಾಗಿ ಸ್ಥಳೀಯರು ಎಚ್ಚರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.