ಗುರುವಾರ , ಏಪ್ರಿಲ್ 15, 2021
30 °C
ಮಾಸಿಕ ಸಭೆಯಲ್ಲಿ ಸೂಚನೆ

ನೀರು ಪೂರಕೆ ವ್ಯತ್ಯಯ ಆಗದಿರಲಿ: ಜಿ.ಪಂ. ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಸಮಸ್ಯಾತ್ಮಕ ಗ್ರಾಮಗಳಿಗೆ ಕುಡಿಯುವ ನೀರನ್ನು ಟ್ಯಾಂಕರ್‌ಗಳಲ್ಲಿ, ಖಾಸಗಿ ಕೊಳವೆ ಬಾವಿಗಳ ಮೂಲಕ ಸರಬರಾಜು ಮಾಡಿದ ಬಾಕಿ ಬಾಬ್ತನ್ನು ಕೂಡಲೇ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಾಸಿಕ ಕೆ.ಡಿ.ಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಬೇಸಿಗೆಯ ಹಿನ್ನೆಲೆಯಲ್ಲಿ ಎಲ್ಲೆಡೆ ತಾಪಮಾನ ಅಧಿಕವಾಗುತ್ತಿದ್ದು, ಕುಡಿಯುವ ನೀರಿಗೆ ತೊಂದರೆಯಾಗುವ ಸಮಸ್ಯಾತ್ಮಕ ಗ್ರಾಮಗಳನ್ನು ಮುಂಚಿತವಾಗಿ ಗುರುತಿಸಬೇಕು. ಈ ಸಂಬಂಧ ಪ್ರತಿ 15 ದಿನಕ್ಕೊಮ್ಮೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆ ಸೇರಬೇಕು. ಒಟ್ಟಾರೆ ಸಾರ್ವಜನಿಕರ ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಕ್ರಮಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಅಕ್ಷರ ದಾಸೋಹ ಯೋಜನೆಯಡಿ ಪ್ರತಿ ಮೂರು ತಿಂಗಳಿಗೊಮ್ಮೆ ಮಕ್ಕಳಿಗೆ ವಿತರಣೆಯಾಗುವ ಪೌಷ್ಟಿಕ ಆಹಾರವನ್ನು ಬ್ಯಾಗ್‍ಗಳ ಮೂಲಕ ಸಮರ್ಪಕವಾಗಿ ವ್ಯವಸ್ಥಿತ ರೀತಿಯಲ್ಲಿ ವಿತರಣೆಯಾಗಬೇಕು ಎಂದು ಅಕ್ಷರ ದಾಸೋಹ ಶಿಕ್ಷಣಾಧಿಕಾರಿಗೆ ತಿಳಿಸಿದರು.

ಕೊರೊನಾ ಸಾಂಕ್ರಾಮಿಕ ರೋಗವು ಹರಡುತ್ತಿರುವ 2ನೇ ಅಲೆಯ ಬಗ್ಗೆ ಎಚ್ಚರಿಕೆ ನೀಡಿದರು. ಮಾರ್ಗಸೂಚಿ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಆರೋಗ್ಯ ಇಲಾಖೆ ಗುರುತಿಸಿರುವ ವಯೋಮಾನದವರು/ ವರ್ಗದವರು ಲಸಿಕೆ ಹಾಕಿಸಿಕೊಳ್ಳಲು ಸೂಕ್ತ ಕ್ರಮವಹಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಅವರಿಗೆ ಸೂಚಿಸಿದರು.

ಮತ್ಸ್ಯ ಯೋಜನೆಗೆ ಸಹಾಯ: ಪ್ರಸ್ತುತ ಸಾಲಿನಲ್ಲಿ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನವನ್ನು ನಿಗದಿತ ಅವಧಿಯೊಳಗೆ ಸಮರ್ಪಕವಾಗಿ ಬಳಸದೆ ಸರ್ಕಾರಕ್ಕೆ ಮರು ಅಧ್ಯರ್ಪಣೆ ಮಾಡಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. ಇತ್ತೀಚಿನ ದಿನಗಳಲ್ಲಿ ಮಾಂಸ ಆಹಾರವು ಬಹಳ ತುಟ್ಟಿಯಾಗುತ್ತಿದ್ದು, ಇದಕ್ಕೆ ಪರ್ಯಾಯವಾಗಿ ಮತ್ಸ್ಯ ಆಹಾರ ಉತ್ಪನ್ನಗಳನ್ನು ಉತ್ತೇಜಿಸಲು ಪ್ರಧಾನಮಂತ್ರಿ ಮತ್ಸ್ಯ ಯೋಜನೆಯಡಿ ನೀಡುವ ಸಹಾಯಧನದ ಮಾಹಿತಿಯನ್ನು ಜಿಲ್ಲೆಯ ರೈತರಿಗೆ ಪ್ರಚಾರ ಪಡಿಸಬೇಕು. ಕಡಿಮೆ ನೀರಿನಲ್ಲಿ ಹೆಚ್ಚು ಮೀನು ಉತ್ಪಾದಿಸುವ ಪ್ರಾನ್ಸ್ ಬಯೋಕ್ಲಾಕ್ ತಂತ್ರಜ್ಞಾನವನ್ನು ಜಿಲ್ಲೆಯ ರೈತರಿಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುವಂತೆ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಈ ಭಾಗದ ಪ್ರಮುಖ ಬೆಳೆಯಾಗಿ ಆಲೂಗಡ್ಡೆಯನ್ನು ಬೆಳೆಯುತ್ತಿರುವುದರಿಂದ ಕಳಪೆ ಆಲೂಗಡ್ಡೆ ಬಿತ್ತನೆ ಬೀಜ ಪೂರೈಕೆ ಆಗದಂತೆ ಎಚ್ಚರ ವಹಿಸುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಸರಸ್ವತಮ್ಮ, ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಸಿ.ರಾಜಾಕಾಂತ್, ಬಂಕ್ ಮುನಿಯಪ್ಪ ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು