ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ಕೋನಪ್ಪಲ್ಲಿಯಲ್ಲಿ 2.5 ಕೋಟಿ ಲೀಟರ್ ನೀರು ಸಂಗ್ರಹ

Last Updated 21 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನಲ್ಲಿ ಅಂತರ್ಜಲ ತೀವ್ರ ಕುಸಿದಿದೆ. 1500 ಅಡಿ ಕೊರೆದರೂ ಕೊಳವೆ ಬಾವಿಗಳಲ್ಲಿ ನೀರು ದೊರೆಯುತ್ತಿಲ್ಲ. ಹೀಗಾಗಿ ಮಳೆ ನೀರನ್ನು ಸದುಪಯೋಗಪಡಿಸಿಕೊಳ್ಳಲಾಗುತ್ತಿದೆ.

ಮಳೆಯಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ. ಮಳೆಯ ದಿನಗಳಲ್ಲಿ ಬದಲಾವಣೆಯಾಗಿದೆ. ಮಳೆ ಬಿದ್ದಾಗ ಹರಿದುಹೋಗುವ ನೀರನ್ನು ಪೋಲಾಗದಂತೆ ಸಂಗ್ರಹಿಸಿಕೊಳ್ಳುವತ್ತ ಗಮನಹರಿಸಲಾಗುತ್ತಿದೆ. ಮುಂಗಾರಿನ ಮಳೆಯ ನೀರನ್ನು ವಿವಿಧ ರೀತಿಯಲ್ಲಿ ಸಂಗ್ರಹಣೆ ಮಾಡಿದರೆ ಅಂತರ್ಜಲ ವೃದ್ಧಿಯಾಗುತ್ತದೆ. ಪುನರ್ಬಳಕೆ ಮಾಡಿಕೊಳ್ಳಬಹುದು.

ಶಾಶ್ವತ ನೀರಾವರಿಗಾಗಿ ಎರಡು ದಶಕಗಳಿಂದ ಹೋರಾಟ ನಡೆಯುತ್ತಿದ್ದರೂ ಫಲಪ್ರದವಾಗಿಲ್ಲ. ಶಾಶ್ವತ ನೀರಾವರಿ ಹೋರಾಟದ ಜತೆಗೆ ಸ್ಥಳೀಯ ಜಲ ಸಂಪನ್ಮೂಲಗಳಾದ ಕೆರೆ, ಕುಂಟೆ, ಕಲ್ಯಾಣಿ ಪುನರುಜ್ಜೀವನ, ಚೆಕ್ ಡ್ಯಾಂ ನಿರ್ಮಿಸಿ ಮಳೆ ನೀರು ಸಂಗ್ರಹಿಸಿಕೊಳ್ಳಬೇಕು ಎಂಬುದು ನೀರಾವರಿ ತಜ್ಞರ ಅಭಿಪ್ರಾಯ.

ಚಿಂತಾಮಣಿ ತಾಲ್ಲೂಕಿನ ಕೋನಪ್ಪಲ್ಲಿ ಗ್ರಾಮ ಪಂಚಾಯಿತಿಯು ಸುಮಾರು 2.5 ಎಕರೆಯಲ್ಲಿ ಚೆಕ್‌ಡ್ಯಾಂ ನಿರ್ಮಿಸಿ 2.5 ಕೋಟಿ ಲೀಟರ್ ನೀರು ಸಂಗ್ರಹಿಸಿದೆ. ಇದರಿಂದ ಗ್ರಾಮ ನೀರಿನ ಬವಣೆ ಪರಿಹಾರವಾಗಿದೆ. ಈಸಾಧನೆಗಾಗಿ ಕೋನಪ್ಪಲ್ಲಿ ಗ್ರಾಮ ಪಂಚಾಯಿತಿಗೆ ಮೂರು ಬಾರಿ ಗಾಂಧಿ ಗ್ರಾಮ ಪುರಸ್ಕಾರ ಸಂದಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಏಳು ಕೊಳವೆ ಬಾವಿಗಳನ್ನು ಕೊರೆದಿದ್ದರೂ ನೀರಿನ ಸಮಸ್ಯೆ ಬಗೆಹರಿಯದೆ ದೊಡ್ಡ ಸಮಸ್ಯೆಯಾಗಿ ಕಾಡಿತ್ತು ಎನ್ನುತ್ತಾರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಣ್ಣ.

ಬೆಟ್ಟಗಳ ತಪ್ಪಲಿನಲ್ಲಿರುವ ಗ್ರಾಮಕ್ಕೆ ಬೆಟ್ಟಗಳಿಂದ ಜರಿಯ ನೀರು ಹರಿದು ಬರುತ್ತಿತ್ತು. ಒಂದು ಸಣ್ಣ ಚೆಕ್ ಡ್ಯಾಂ ಇತ್ತು. ಸರ್ಕಾರಿ ಭೂಮಿಯಾಗಿದ್ದರೂ ಒತ್ತುವರಿಯಾಗಿತ್ತು. ಇದೇ ಚೆಕ್ ಡ್ಯಾಂನ್ನು ವಿಶಾಲಗೊಳಿಸಿ ಎತ್ತರಿಸಿದರೆ ಸಾಕಷ್ಟು ನೀರು ಸಂಗ್ರಹಿಸಬಹುದು ಎಂದು ನರೇಗಾ ಯೋಜನೆಯಲ್ಲಿ ಕಾಮಗಾರಿಯನ್ನು ಕೈಗೊಳ್ಳಲು ಅನುಮತಿ ಪಡೆಯಲಾಯಿತು. ಒತ್ತುವರಿದಾರರ ಮನವೊಲಿಸಲಾಯಿತು. 2.5 ಎಕರೆ ಪ್ರದೇಶದಲ್ಲಿ ₹21 ಲಕ್ಷ ವೆಚ್ಚದಲ್ಲಿ ನೀರು ಸಂಗ್ರಹಣೆಯ ಹೊಂಡವನ್ನು ನಿರ್ಮಾಣ ಮಾಡಲಾಗಿದೆ.

ಸುತ್ತಲೂ ಕಲ್ಲುಗಳ ಕಟ್ಟೆಯನ್ನು ಕಟ್ಟಿ ಹೂಳು ತೆಗೆಯಲಾಗಿದೆ. 12 ಅಡಿ ನೀರು ಸಂಗ್ರಹವಾಗಿದೆ. ಮಧ್ಯದಲ್ಲಿದ್ದ ಒಂದು ಜಂಬುನೇರಳೆ ಮರವನ್ನು ಕಡಿಯದೆ ಉಳಿಸಿಕೊಳ್ಳಲಾಗಿದೆ. ಅದಕ್ಕೆ ಒಂದು ದ್ವೀಪದಂತೆ ಸುತ್ತಲೂ ಕಲ್ಲುಕಟ್ಟೆ ಕಟ್ಟಲಾಗಿದೆ. ಕೊಳವೆ ಬಾವಿಗಳಲ್ಲಿ ಅಂತರ್ಜಲ ಮರುಪೂರಣವಾಗಿದೆ. ಸ್ಥಗಿತಗೊಂಡಿದ್ದ ಬಾವಿಗಳಲ್ಲಿ ನೀರು ಬರುತ್ತಿದೆ. ಗ್ರಾಮದ ಜನರು ಮತ್ತು ಜಾನುವಾರುಗಳ ನೀರಿನ ಸಮಸ್ಯೆ ನಿವಾರಣೆಯಾಗಿದೆ.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಅತೀಕ್ ಹೊಂಡವನ್ನು ವೀಕ್ಷಿಸುವ ಸಲುವಾಗಿಯೇ ಇಲ್ಲಿಗೆ ಬಂದಿದ್ದರು. ಇತರೆ ಗ್ರಾಮ ಪಂಚಾಯಿತಿಗಳಲ್ಲೂ ಇದೇ ಮಾದರಿಯ ಹೊಂಡಗಳನ್ನು ನಿರ್ಮಿಸಲು ಸಲಹೆ ನೀಡಿದ್ದಾರೆ.

ಹೊಂಡದ ಬಳಿ ಎರಡು ಕೊಳವೆ ಬಾವಿಗಳು ನೀರು ಇಲ್ಲದೆ ಸ್ಥಗಿತಗೊಂಡಿದ್ದವು. ನೀರು ಸಂಗ್ರಹಣೆಯ ನಂತರ ಅಂತರ್ಜಲ ಮರುಪೂರಣಗೊಂದಿದೆ. ದಿನದ 24 ಗಂಟೆಯೂ ನೀರು ದೊರೆಯುತ್ತಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಣ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT