ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ಕಾರಕ್ಕೆ ವರ್ಷ; ಚಿಕ್ಕಬಳ್ಳಾಪುರ ಅಭಿವೃದ್ಧಿಗೆ ಇಲ್ಲ ವೇಗ

Published 22 ಮೇ 2024, 7:21 IST
Last Updated 22 ಮೇ 2024, 7:21 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರ್ಣವಾಗಿದೆ. ಈ ಅವಧಿಯಲ್ಲಿ ಚಿಕ್ಕಬಳ್ಳಾಪುರಕ್ಕೆ ದೊರೆತಿದ್ದೇನೆ ಎಂದು ಅವಲೋಕಿಸಿದರೆ ನಿರಾಶೆ ಎದ್ದು ಕಾಣುತ್ತದೆ. ಗ್ಯಾರಂಟಿ ಯೋಜನೆಗಳೇ ಜಿಲ್ಲೆಯ ಜನರಿಗೆ ವರ ಎನ್ನುವಂತೆ ಆಗಿದೆ.

ಜಿಲ್ಲೆಯಲ್ಲಿ ಮೂರು ಮಂದಿ ಕಾಂಗ್ರೆಸ್ ಶಾಸಕರು ಆಯ್ಕೆ ಆಗಿದ್ದರೆ, ಗೌರಿಬಿದನೂರಿನ ಪಕ್ಷೇತರ ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಕಾಂಗ್ರೆಸ್ ಬೆಂಬಲಿಸಿದ್ದಾರೆ. ಚಿಂತಾಮಣಿಯ ಡಾ.ಎಂ.ಸಿ.ಸುಧಾಕರ್ ಸಚಿವರೂ ಆಗಿದ್ದಾರೆ.

ಹೀಗಿದ್ದರೂ ಜಿಲ್ಲೆಯ ಪಾಲಿಗೆ ಈ ಒಂದು ವರ್ಷದಲ್ಲಿ ರಾಜ್ಯ ಸರ್ಕಾರ ಮಹತ್ವದ ಯೋಜನೆ ಮತ್ತು ಕೊಡುಗೆಗಳನ್ನು ನೀಡಿಲ್ಲ. 

ಕಳೆದ ಒಂದು ವರ್ಷದಲ್ಲಿ ಜಿಲ್ಲೆಗೆ ಐದು ಕ್ಷೇತ್ರಗಳ ಶಾಸಕರ ಪ್ರದೇಶಾಭಿವೃದ್ದಿ ನಿಧಿಗೆ ತಲಾ ₹ 50 ಲಕ್ಷ ನೀಡಲಾಗಿದೆ. ಇದನ್ನು ಹೊರತುಪಡಿಸಿ ಹೆಚ್ಚಿನ ಅನುದಾನ ಬಂದಿಲ್ಲ. ಐದು ಗ್ಯಾರಂಟಿ ಯೋಜನೆಗಳು ಜಿಲ್ಲೆಯ ಮಹಿಳೆಯರು ಮತ್ತು ನಾಗರಿಕರಿಗೆ ಪಾಲಿಗೆ ದಕ್ಕಿದ ಸಂಭ್ರಮ ಎನ್ನುವಂತೆ ಇದೆ. 

ಶಾಶ್ವತ ನೀರಾವರಿ ಯೋಜನೆ, ಎತ್ತಿನಹೊಳೆ ಯೋಜನೆಯ ಮೂಲಕ ನೀರು ಹರಿಸುವುದು, ನಂದಿ ಗಿರಿಧಾಮಕ್ಕೆ ರೋಪ್ ವೇ, ಎಚ್‌.ಎನ್.ವ್ಯಾಲಿ ನೀರನ್ನು ಮೂರು ಹಂತದಲ್ಲಿ ಶುದ್ದೀಕರಿಸುವುದು, ಕೈಗಾರಿಕೀಕರಣದ ಯೋಜನೆಗಳು ಈ ಒಂದು ವರ್ಷದ ಅವಧಿಯಲ್ಲಿ ಸ್ವಲ್ಪ ಮಟ್ಟಿಗೂ ಆಶಾದಾಯಕ ಬೆಳವಣಿಗೆಗಳನ್ನು ಕಂಡಿಲ್ಲ. 

ಎತ್ತಿನಹೊಳೆಗೆ ಸಿಗದ ವೇಗ: 2023ರ ವಿಧಾನಸಭಾ ಚುನಾವಣೆ ಪೂರ್ವದಲ್ಲಿ  ಜಿಲ್ಲೆಯ ಶಾಸಕರು 2023ರ ಡಿಸೆಂಬರ್ ಅಂತ್ಯದ ವೇಳೆಗೆ ಜಿಲ್ಲೆಗೆ ಎತ್ತಿನಹೊಳೆ ನೀರು ಹರಿಯಲಿದೆ ಎಂದು ಹೇಳಿದ್ದರು. ಆದರೆ 2024ರಲ್ಲಿಯೂ ಎತ್ತಿನಹೊಳೆ ನೀರು ಜಿಲ್ಲೆಗೆ ಬರುವ ಲಕ್ಷಣಗಳು ಕಾಣುತ್ತಿಲ್ಲ. 

ಈ ಒಂದು ವರ್ಷದ ಅವಧಿಯಲ್ಲಿ ಜಿಲ್ಲೆಯಲ್ಲಿ ಎತ್ತಿನಹೊಳೆ ಯೋಜನೆ ಪ್ರಗತಿ ಬಗ್ಗೆ ಸರ್ಕಾರ ಪರಿಶೀಲಿಸಿದ್ದು ಕಂಡು ಬರಲಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳು ಈ ಬಗ್ಗೆ ಗಟ್ಟಿಧ್ವನಿಯಲ್ಲಿ ಕೇಳಿದ್ದು ಸಹ ಇಲ್ಲ. ಎತ್ತಿನಹೊಳೆ ಜೊತೆಗೆ ಶಾಶ್ವತ ನೀರಾವರಿ ಯೋಜನೆಗಳ ಅನುಷ್ಠಾನದ ಬಗ್ಗೆಯು ಸರ್ಕಾರದ ಮೇಲೆ ಒತ್ತಡ ತರುವ ಕೆಲಸವನ್ನು ಜಿಲ್ಲೆಯ ಶಾಸಕರು, ಸಚಿವರು ಮಾಡುತ್ತಿಲ್ಲ.

ಚಿಮೂಲ್ ರಚನೆಯ ಮಾತಿಲ್ಲ: ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋಚಿಮುಲ್ ಪ್ರತ್ಯೇಕಗೊಳಿಸಿ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಚಿಮುಲ್) ರಚಿಸಲಾಗಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಚಿಮುಲ್ ರಚನೆಯನ್ನು ರದ್ದುಗೊಳಿಸಿತು. 

ಆ ನಂತರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಆಸ್ತಿ ಹಂಚಿಕೆ ಸೇರಿದಂತೆ ಎಲ್ಲ ಸಾಧಕ ಬಾಧಕಗಳನ್ನು ಪರಿಶೀಲಿಸಿ ಕೋಚಿಮುಲ್ ವಿಭಜಿಸಲಾಗುವುದು ಎಂದಿದ್ದರು. ಆದರೆ ಸಚಿವರ ಮಾತು ಭರವಸೆಗೆ ಮಾತ್ರ ಸೀಮಿತವಾಗಿದೆ. ಚಿಮುಲ್ ರಚನೆಯ ವಿಚಾರವು ಈಗ ಗೌಣವಾಗಿದೆ. 

ನಂದಿಗಿರಿಧಾಮಕ್ಕೆ ರೋಪ್ ವೇ ಅಳವಡಿಸುವ ಕಾಮಗಾರಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ರಾಜಕೀಯ ಜಟಾಪಟಿಗೂ ಕಾರಣವಾಗಿತ್ತು. ವಿಧಾನಸಭೆ ಚುನಾವಣೆಯ ಹೊಸ್ತಿಲಿನಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರೋಪ್ ವೇಗೆ ಭೂಮಿ ಪೂಜೆ ನೆರವೇರಿಸಿದ್ದರು. ನಂತರ ಸರ್ಕಾರ ಬದಲಾಯಿತು. 

ಕಾಂಗ್ರೆಸ್ ಸರ್ಕಾರ ಬಂದ ನಂತರ ಯೋಜನೆಯ ಬಗ್ಗೆ ಖುದ್ದು ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ ನಂದಿ ಬೆಟ್ಟದಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಸಹ ಸಭೆಗಳನ್ನು ನಡೆಸಿದರು. ಆದರೆ ಇಂದಿಗೂ ಈ ಯೋಜನೆಯ ತೊಡಕುಗಳನ್ನು ನಿವಾರಿಸಲು ಸಾಧ್ಯವಾಗಿಲ್ಲ.

ಭರಪೂರ ಭರವಸೆ: ₹ 75 ಕೋಟಿ ವೆಚ್ಚದಲ್ಲಿ ಜಿಲ್ಲಾ ಕ್ರೀಡಾಂಗಣವನ್ನು ಅಭಿವೃದ್ಧಿಗೊಳಿಸುವುದಾಗಿ
ಸಚಿವ ಡಾ.ಎಂ.ಸಿ.ಸುಧಾಕರ್ ಭರವಸೆ ನೀಡಿದ್ದಾರೆ. ಕ್ರೀಡಾಂಗಣ ಅಭಿವೃದ್ಧಿಯ ನೀಲನಕ್ಷೆ ಸಹ ರೂಪಿಸಿದ್ದಾರೆ.

 ಶಿಡ್ಲಘಟ್ಟದಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆಗೆ ಸರ್ಕಾರ ₹ 100 ಕೋಟಿ ನೀಡಿದೆ. ಆದರೆ ಇಂದಿಗೂ ಕಾಮಗಾರಿ ಆರಂಭವಾಗಿಲ್ಲ. ಚಿಂತಾಮಣಿಯಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ ಬಗ್ಗೆಯೂ ‌ಉಸ್ತುವಾರಿ ಸಚಿವರು ಭರವಸೆ ನೀಡಿದ್ದಾರೆ. ನಂದಿ ವೈದ್ಯಕೀಯ ಶಿಕ್ಷಣ ಕಾಲೇಜಿನ ಕಾಮಗಾರಿಯೂ ‍ಪೂರ್ಣವಾಗಿಲ್ಲ.

ಕೈಗಾರಿಕೀಕರಣಕ್ಕಿಲ್ಲ ಬಲ: ಕೃಷಿ, ತೋಟಗಾರಿಕೆ, ಹೈನುಗಾರಿಕೆ, ರೇಷ್ಮೆ ಕೃಷಿಯಲ್ಲಿ ಜಿಲ್ಲೆಯು ಇಂದಿಗೂ ರಾಜ್ಯದಲ್ಲಿ ಮುಂಚೂಣಿಯಲ್ಲಿ ಇದೆ. ಆದರೆ ಜಿಲ್ಲೆಯ ನಿರುದ್ಯೋಗಿ ಯುವಕ, ಯುವತಿಯರಿಗೆ ಉದ್ಯೋಗಕ್ಕೆ ಆಸರೆ ಆಗಬಲ್ಲ ಯಾವ ಕೈಗಾರಿಕೆಗಳು ಜಿಲ್ಲೆ ಕಡೆ ಮುಖ ಮಾಡುತ್ತಿಲ್ಲ.

ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿರುವ ಚಿಕ್ಕಬಳ್ಳಾಪುರ ಕೈಗಾರೀಕರಣದ ವಿಚಾರದಲ್ಲಿ ತಾರತಮ್ಯಕ್ಕೆ ಒಳಗಾಗಿದೆ.

ಚಿಕ್ಕಬಳ್ಳಾಪುರ ಹೊರವಲಯದ ನಂದಿ ತೋಟಗಾರಿಕಾ ಸಸ್ಯ ಕ್ಷೇತ್ರದಲ್ಲಿ ಹೂ ಮಾರುಕಟ್ಟೆ ನಿರ್ಮಾಣ, ಚಿಂತಾಮಣಿಯಲ್ಲಿ ಎಂಜಿನಿಯರಿಂಗ್ ಕಾಲೇಜು, ಜಿಲ್ಲೆಯಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಒತ್ತು, ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿ, ನೀರಿನಿಂದ ಆವೃತವಾಗಿರುವ ಅಮಾನಿಗೋಪಾಲ ಕೃಷ್ಣ ಕೆರೆಯ ಗಾಜಿನ ಮನೆಯ ಪುನರುಜ್ಜೀವನ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗತಗೊಳಿಸುವ ಆಸಕ್ತಿ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಇದೆ. 

ಈ ಒಂದು ವರ್ಷದಲ್ಲಿ ಜಿಲ್ಲೆಗೆ ದೊರೆತಿದ್ದು ಅತ್ಯಲ್ಪವಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಜಿಲ್ಲೆಗೆ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುತ್ತದೆ ಎನ್ನುವ ಅಪಾರ ನಿರೀಕ್ಷೆಯನ್ನು ಜಿಲ್ಲೆಯ ಜನರು ಹೊಂದಿದ್ದಾರೆ.

ಭರವಸೆಗೆ ಸೀಮಿತವಾದ ಶುದ್ದೀಕರಣ

ಎಚ್‌.ಎನ್.ವ್ಯಾಲಿ ಯೋಜನೆಯ ನೀರನ್ನು ಮೂರು ಹಂತದಲ್ಲಿ ಶುದ್ದೀಕರಿಸಬೇಕು ಎನ್ನುವುದು ನೀರಾವರಿ ಹೋರಾಟಗಾರರು ಮತ್ತು ರೈತ ಸಂಘದ ಮುಖಂಡರ ಆಗ್ರಹವಾಗಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಕೊನೆಯ ಬಜೆಟ್‌ನಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಯಿತು.

ಸರ್ಕಾರ ರಚನೆಯಾದ ಸ್ವಲ್ಪ ದಿನಗಳ ನಂತರ ಸಣ್ಣ ನೀರಾವರಿ ಸಚಿವ ಬೋಸರಾಜು ಜಿಲ್ಲೆಗೆ ಭೇಟಿ ನೀಡಿದಾಗ ಮೂರನೇ ಹಂತದ ಶುದ್ದೀಕರಣದ ಬಗ್ಗೆ ಮುಖ್ಯಮಂತ್ರಿ ಜೊತೆ ಮಾತನಾಡುವುದಾಗಿ ತಿಳಿಸಿದ್ದರು. ಆದರೆ ವರ್ಷವಾದರೂ ಮೂರು ಹಂತದ ಶುದ್ದೀಕರಣದ ಬಗ್ಗೆ ರಾಜ್ಯ ಸರ್ಕಾರ ಕ್ರಮವಹಿಸಿಲ್ಲ.

ಈ ಹಿಂದೆ ಪ್ರದೀಪ್ ಈಶ್ವರ್ ಸಹ ಮೂರು ಹಂತದಲ್ಲಿ ಎಚ್‌.ಎನ್.ವ್ಯಾಲಿ ಮತ್ತು ಕೆ.ಸಿ.ವ್ಯಾಲಿ ನೀರು ಶುದ್ದೀಕರಣವಾಗಬೇಕು ಎಂದು ಆಗ್ರಹಿಸಿದ್ದರು. ಆದರೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ಈಗ ಮೂರು ಹಂತದ ಶುದ್ದೀಕರಣದ ಬಗ್ಗೆ ಗಟ್ಟಿಯಾಗಿ ಧ್ವನಿ ಎತ್ತುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT