ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾರ್ಮಾಡಿ ಘಾಟಿ; ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅಪಘಾತ

Published 8 ಮಾರ್ಚ್ 2024, 14:22 IST
Last Updated 8 ಮಾರ್ಚ್ 2024, 14:22 IST
ಅಕ್ಷರ ಗಾತ್ರ

ಕೊಟ್ಟಿಗೆಹಾರ: ಇಲ್ಲಿನ ಚಾರ್ಮಾಡಿ ಘಾಟಿಯ ಮೂರನೆಯ ತಿರುವಿನಲ್ಲಿ ತಾಂತ್ರಿಕ ಸಮಸ್ಯೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವನ್ನು ಕೆಎಸ್‌ಆರ್‌ಟಿಸಿ ಬಸ್‌ ಚಾಲಕ ಸಂತೋಷ್ ಕುಮಾರ್ ಸಮಯಪ್ರಜ್ಞೆಯಿಂದ ತಪ್ಪಿಸಿದ್ದು, ಬಸ್‌ನಲ್ಲಿದ್ದ ಹಲವು ಪ್ರಯಾಣಿಕರ ಜೀವ ಉಳಿಸಿದ್ದಾರೆ. ಚಾಲಕನ ಕಾರ್ಯಕ್ಕೆ ಪ್ರಯಾಣಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. 

ಚಿಕ್ಕಮಗಳೂರು ಘಟಕಕ್ಕೆ ಸೇರಿದ ಬಸ್‌ ಕಡೂರಿನಿಂದ ಮಂಗಳೂರಿಗೆ ಬರುತ್ತಿತ್ತು. ಶುಕ್ರವಾರ ಬೆಳಿಗ್ಗೆ ಬಸ್‌ ಚಾರ್ಮಾಡಿ ಘಾಟಿಯ ಮೂರನೆಯ ತಿರುವು ಸಮೀಪ ಬಂದಾಗ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತು. ಬಸ್‌ನಿಂದ ದಟ್ಟ ಹೊಗೆ ಹೊರಬರತೊಡಗಿತು. ಬಸ್‌ ಅನ್ನು ನಿಯಂತ್ರಣಕ್ಕೆ ತರಲು ಚಾಲಕ ಪ್ರಯತ್ನಿಸಿ ಬ್ರೇಕ್‌ ಹಾಕಿದಾಗ, ಬ್ರೇಕ್‌ ಹಿಡಿಯದೆ ತಿರುವಿನಲ್ಲಿ ಬಸ್‌ ಪಲ್ಟಿಯಾಗುವ ಸನ್ನಿವೇಶ ಎದುರಾಯಿತು. ಇದರಿಂದ ಬಸ್‌ನಲ್ಲಿದ್ದ ಪ್ರಯಾಣಿಕರು ಗಾಬರಿಗೊಂಡರು. ತಿರುವಿನಲ್ಲಿ ಇನ್ನೇನು ಪಲ್ಟಿಯಾಗಬೇಕಿದ್ದ ಬಸ್‌ ಅನ್ನು ಚಾಲಕ ಸಂತೋಷ್‌ ಕುಮಾರ್‌ ಜಾಣ್ಮೆಯಿಂದ ರಸ್ತೆ ಬದಿಯ ಸಣ್ಣ ಸೇತುವೆಗೆ ಡಿಕ್ಕಿ ಹೊಡೆಸಿ, ನಿಲ್ಲಿಸುವಲ್ಲಿ ಯಶಸ್ವಿಯಾದರು. ‘ಒಂದು ವೇಳೆ ಬಸ್ ತಿರುವಿನಲ್ಲಿ ನಿಲ್ಲದಿದ್ದಲ್ಲಿ, ಮುಂದೆ ಇದ್ದ ಹಿಮ್ಮರಿ ತಿರುವಿನಲ್ಲಿ ಬಸ್ ಪಲ್ಟಿಯಾಗಬೇಕಿತ್ತು. ಸಾವು ನೋವು ಸಂಭವಿಸುವ ಸಾಧ್ಯತೆಯಿತ್ತು’ ಎಂದು ಈ ಬಸ್‌ನಲ್ಲಿ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಬಣಕಲ್ ಪ್ರೆಂಡ್ಸ್ ಕ್ಲಬ್ ಅಧ್ಯಕ್ಷ ಬಿ.ಎಂ.ಸಿದ್ದೀಕ್ ’ಪ್ರಜಾವಾಣಿ’ಗೆ ತಿಳಿಸಿದರು.

ಸಾರ್ವಜನಿಕರ ಮನವಿ: ಚಿಕ್ಕಮಗಳೂರು, ಮೂಡಿಗೆರೆ, ಕಡೂರು ಮತ್ತಿತರ ಘಟಕಗಳಿಂದ ಮಂಗಳೂರು, ಧರ್ಮಸ್ಥಳಕ್ಕೆ ಮತ್ತಿತರ ಮಾರ್ಗಗಳಲ್ಲಿ ಅವಧಿ ಮುಗಿದ ಹಳೆಯ ಬಸ್‌ಗಳು ಸಂಚರಿಸುತ್ತಿವೆ. ಅನೇಕ ಬಸ್‌ಗಳಲ್ಲಿ ಎಂಜಿನ್‌ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ರಸ್ತೆ ಮಧ್ಯೆ ಪದೇ ಪದೇ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುತ್ತವೆ. ಇಂತಹ ಬಸ್‌ಗಳನ್ನು ಬದಲಿಸಿ, ಹೊಸ ಬಸ್‌ಗಳನ್ನು ಬಿಟ್ಟರೆ ಜನರು ಸುರಕ್ಷಿತವಾಗಿ ಪ್ರಯಾಣ ಮಾಡಲು ಅನುಕೂಲವಾಗುತ್ತದೆ. ಚಿಕ್ಕಮಗಳೂರು ಘಟಕದ ವ್ಯವಸ್ಥಾಪಕರು ಹಳೆಯ ಬಸ್‌ಗಳನ್ನು ಬದಲಿಸುವಂತೆ ಸರ್ಕಾರದ ಗಮನ ಸೆಳೆಯಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT