ಶುಕ್ರವಾರ, ಮೇ 20, 2022
23 °C

ಕಮ್ಮರಡಿ: ಟಿಎಪಿಸಿಎಂಎಸ್ ಶಾಖೆಯ ನೂತನ ಕಟ್ಟಡ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪ: ‘ಕೃಷಿ ಸಂಬಂಧಿತ ತಿದ್ದುಪಡಿ ಕಾಯ್ದೆ ರೈತರ ಪರವಾಗಿದೆ. ಆದರೆ, ಈ ಕುರಿತು ಸರಿಯಾದ ಅರಿವಿಲ್ಲದೆ ಕಾಯ್ದೆ ವಿರೋಧಿಸಿ ಹೋರಾಟ ನಡೆಸುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ತಿಳಿಸಿದರು.

ತಾಲ್ಲೂಕಿನ ಕಮ್ಮರಡಿಯಲ್ಲಿ ಶುಕ್ರವಾರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಶಾಖೆ ನೂತನ ಕಟ್ಟಡವನ್ನು ಉದ್ಘಾಟಿಸಿದ ಅವರು, ‘ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವುದಾಗಿ ಮನಮೋಹನ್ ಸಿಂಗ್ ಅವಧಿಯಲ್ಲಿ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿದ್ದರು. ಆದರೆ, ಇಂದು ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ’ ಎಂದರು.

‘ಪಂಜಾಬ್, ಹರಿಯಾಣದಲ್ಲಿ ಎಪಿಎಂಸಿಗಳಲ್ಲಿ ಪಟ್ಟಭದ್ರ ಹಿತಾಸಕ್ತಿ ಗಳಿವೆ. ಕೇರಳದಲ್ಲಿ ಎಪಿಎಂಸಿ ವ್ಯವಸ್ಥೆ ಇಲ್ಲದಿದ್ದರೂ, ಅವರು ಕಾಯ್ದೆ ವಿರೋಧಿಸುತ್ತಿದ್ದಾರೆ. ಹೋರಾಟ ಗಾರರಿಗೆ ನಿಶ್ಚಿತ ಕಾರಣ ತಿಳಿದಿಲ್ಲ, ಅವರು ಕಾಯ್ದೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಎನ್.ರಾಮಸ್ವಾಮಿ ಮಾತನಾಡಿ, ‘ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ತರಿಕೆರೆ ಶಾಸಕ ಸುರೇಶ್ ಅವರು ಶೃಂಗೇರಿ ಕ್ಷೇತ್ರಕ್ಕೆ ₹ 15 ಕೋಟಿ ಹೆಚ್ಚುವರಿ ಸಾಲ ಮಂಜೂರು ಮಾಡಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ರಾಜಕಾರಣ ಸಲ್ಲದು. ಕ್ಷೇತ್ರದ ಶಾಸಕರು ಶಂಕುಸ್ಥಾಪನೆ ಕಾರ್ಯಕ್ರಮದ ವೇಳೆ ಸ್ಥಳೀಯ ಜನಪ್ರತಿನಿಧಿಗಳನ್ನು ಕಡೆಗಣಿಸಿದ್ದರು. ಸಿ.ಆರ್.ಎಫ್ ರಸ್ತೆ ಶಂಕುಸ್ಥಾಪನೆ ಕಾರ್ಯಕ್ರಮಕ್ಕೂ ಕೂಡ ಸಂಸದರನ್ನು ಆಹ್ವಾನಿಸಲಿಲ್ಲ’ ಎಂದರು.

ಟಿಎಪಿಸಿಎಂಎಸ್‌ನ ಅಧ್ಯಕ್ಷ ಎಚ್.ಡಿ.ಜಯಂತ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕ್ಷೇತ್ರ ಅಕ್ರಮ– ಸಕ್ರಮ ಸಮಿತಿ ಸದಸ್ಯ ಎಚ್.ಕೆ.ದಿನೇಶ್, ತಾಲ್ಲೂಕು ಪಂಚಾಯಿತಿ ಸದಸ್ಯ ಎಂ.ಕೆ.ಕಿರಣ್, ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಅದ್ದಡ ಸತೀಶ್, ಚಾವಲ್ಮನೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ, ಟಿಎಪಿಸಿಎಂಎಸ್‌ನ ನಿರ್ದೇಶಕರು ಇದ್ದರು.

ವಿರೋಧ ಬೇಡ: ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ, ‘ಈ ಭಾಗದ ಒತ್ತುವರಿ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗಿದೆ. ಅಡಿಕೆ ಮತ್ತು ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆ ನಿವಾರಿಸಲು ಒತ್ತು ನೀಡಲಾಗಿದೆ. ಸಹಕಾರ ಸಂಘದ ಕಾರ್ಯಕ್ರಮಗಳು ಪಕ್ಷಾತೀತವಾಗಿ ನಡೆಯುವಂತಹವು.
ಅವುಗಳಿಗೆ ಸಹಕಾರ ನೀಡಬೇಕೇ ವಿನಾ ವಿರೋಧಿಸುವುದಲ್ಲ’ ಎಂದರು.

ಶಾಸಕರನ್ನು ಆಹ್ವಾನಿಸದ್ದಕ್ಕೆ ಪ್ರತಿಭಟನೆ: ‘ಶಾಖೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ಶಾಸಕ ಟಿ.ಡಿ.ರಾಜೇಗೌಡ ಅವರನ್ನು ಆಹ್ವಾನಿಸದೆ ಅವಮಾನಿಸಲಾಗಿದೆ’ ಎಂದು ಕಾರ್ಯಕ್ರಮದ ವೇಳೆ ಕೆಲವರು ಪ್ರತಿಭಟನೆ ನಡೆಸಿದರು.

ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ಧಿಕ್ಕಾರ ಕೂಗಿದರು. ಶಿವಪ್ಪಗೌಡ, ಎಚ್.ಕೆ.ಪ್ರಶಾಂತ್, ಕೊಡಿಗೆ ಶ್ರೀನಿವಾಸ್ ಮೂರ್ತಿ, ಚಾವಲ್ಮನೆ ಸುರೇಶ್ ನಾಯ್ಕ್, ಕುಂಬರಗೋಡು ನಾಗಪ್ಪ, ಲತಾ, ಲೀಲಾವತಿ, ಸಮರ್ಥ್, ಚನ್ನಕೇಶವ್ ಹೊಸೂರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು