ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: 238 ಅಂಗನವಾಡಿಗೆ ಸ್ವಂತ ಸೂರಿಲ್ಲ

ಸಮುದಾಯಭವನ, ಬಾಡಿಗೆ ಕಟ್ಟಡಗಲ್ಲೇ ಆಶ್ರಯ
Published 21 ಆಗಸ್ಟ್ 2023, 6:55 IST
Last Updated 21 ಆಗಸ್ಟ್ 2023, 6:55 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕಾನ್ವೆಂಟ್ ಸಂಸ್ಕೃತಿ ಹೆಚ್ಚಳದ ನಡುವೆ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ 1,825 ಅಂಗನವಾಡಿಗಳಿವೆ. ಇವುಗಳ ಪೈಕಿ 238 ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳಿಲ್ಲ.

ಹಲವು ಅಂಗನವಾಡಿಗಳು ಸರ್ಕಾರದ ಬೇರೆ– ಬೇರೆ ಇಲಾಖೆಗಳ ಕಟ್ಟಡಗಳಲ್ಲಿ ಆಶ್ರಯ ಪಡೆದಿದ್ದರೆ, ಇ ಕೆಲವು ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಬಾಡಿಗೆ ಕಟ್ಟಡದಲ್ಲಿ 66 ಅಂಗನವಾಡಿಗಳಿವೆ.

ಇವುಗಳ ಪೈಕಿ 33 ಕಟ್ಟಡಗಳ ಕಾಮಗಾರಿ ಪ್ರಗತಿಯಲ್ಲಿದೆ. 24 ಕಟ್ಟಡಗಳಿಗೆ ಈಗ ನಿವೇಶನ ಲಭ್ಯವಾಗಿದ್ದು, ಕಟ್ಟಡ ನಿರ್ಮಾಣ ಆಗಬೇಕಿದೆ. ಇನ್ನೂ 9 ಅಂಗನವಾಡಿಗಳಿಗೆ ಸ್ವಂತ ಕಟ್ಟಡವೂ ಇಲ್ಲ, ನಿರ್ಮಾಣಕ್ಕೆ ನಿವೇಶನಗಳೂ ಲಭ್ಯವಿಲ್ಲ. ಬಾಡಿಗೆ ಕಟ್ಟಡದಲ್ಲೇ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆ ಮುಂದುವರಿದಿದೆ.

ನಿವೇಶನ ಇಲ್ಲದ ಅಂಗನವಾಡಿಗಳು ಬಹುತೇಕ ಚಿಕ್ಕಮಗಳೂರು ನಗರದಲ್ಲೇ ಇವೆ. ಶರೀಫ್‌ ಗಲ್ಲಿ, ಕಾಳಿದಾಸನಗರ, ನಾರಾಯಣಪುರ, ಜಯನಗರ ಕೆಂಪನಹಳ್ಳಿ ಹೊಸ ಬಡಾವಣೆ, ತರೀಕೆರೆ ಪಟ್ಟಣದ ವಾಸಪ್ಪ ಕಾಲೊನಿ, ಮೂಡಿಗೆರೆ ಪಟ್ಟಣದ ಕುರುಕ್ ಮಕ್ಕಿ, ಕಡೂರು ತಾಲ್ಲೂಕು ಸೋಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಾಘಟ್ಟ ತಾಂಡ್ಯ, ಚಿಕ್ಕಮಗಳೂರು ತಾಲ್ಲೂಕಿನ ಸಿಂದಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಂದಿಗೆರೆ ಮಡಿವಾಳ ಬೀದಿಯ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಹೊಂದುವ ಭಾಗ್ಯ ಸದ್ಯಕ್ಕಿಲ್ಲ.

ನಿವೇಶನ ಲಭ್ಯವಿಲ್ಲದ ಕಾರಣ ಸ್ವಂತ ಕಟ್ಟಡ ನಿರ್ಮಾಣ ಸಾಧ್ಯವಾಗುತ್ತಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಪೂರಕ ಮಾಹಿತಿ: ಜೆ.ಒ.ಉಮೇಶ್‌ಕುಮಾರ್, ರವಿಕುಮಾರ್ ಶೆಟ್ಟಿಹಡ್ಲು, ಎಚ್.ಎಂ.ರಾಜಶೇಖರಯ್ಯ, ಕೆ.ಎನ್.ರಾಘವೇಂದ್ರ

ಮೂಡಿಗೆರೆಯ ಬಾಪುನಗರದಲ್ಲಿರುವ ಬಾಡಿಗೆ ಕಟ್ಟಡದಲ್ಲಿನ ಅಂಗನವಾಡಿ ಕೇಂದ್ರ
ಮೂಡಿಗೆರೆಯ ಬಾಪುನಗರದಲ್ಲಿರುವ ಬಾಡಿಗೆ ಕಟ್ಟಡದಲ್ಲಿನ ಅಂಗನವಾಡಿ ಕೇಂದ್ರ

16 ಅಂಗನವಾಡಿಗೇ ಬೇಕಿದೆ ಸ್ವಂತ ಕಟ್ಟಡ ಅಜ್ಜಂಪುರ: ತಾಲ್ಲೂಕಿನಲ್ಲಿ 131 ಅಂಗನವಾಡಿಗಳಿದ್ದು 115 ಕೇಂದ್ರಗಳು ಸ್ವಂತ ಕಟ್ಟಡ ಹೊಂದಿವೆ. 16 ಅಂಗನವಾಡಿಗಳಿಗೆ ಕಟ್ಟಡ ನಿರ್ಮಾಣ ಆಗಬೇಕಿದೆ. 2 ಕೇಂದ್ರಗಳಿಗೆ ನಿವೇಶನ ಮಂಜೂರಾಗಿಲ್ಲ. 4 ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. 10 ಕೇಂದ್ರಗಳಿಗೆ ನಿವೇಶನವಿದ್ದು ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ. ಎಲ್ಲವೂ ವರ್ಷದ ಅಂತ್ಯಕ್ಕೆ ಸ್ವಂತ ಕಟ್ಟಡ ಹೊಂದಲಿವೆ ಎಂದು ಸಿಡಿಪಿಒ ಜ್ಯೋತಿ ಲಕ್ಷ್ಮಿ ಮಾಹಿತಿ ನೀಡಿದ್ದಾರೆ. ಅಜ್ಜಂಪುರ ಗೀಜಿಕಟ್ಟೆ ಬೆಣಕುಣಸೆ ಮುಗಳಿ ಢಣಾಯಕಪುರ ಸಿದ್ದಾಪುರ ಜಲಧಿಹಳ್ಳಿಯಲ್ಲಿ ಅಂಗನವಾಡಿಯನ್ನು ಶಾಲೆಗಳಲ್ಲಿ ಹಾಗೂ ಬೇಗೂರು ತಾಂಡ್ಯ ಗುಡ್ಡದಹಳ್ಳಿ ಬಿಲ್ಲಹಳ್ಳಿ ಅಬ್ಬಿನಹೊಳಲು ಶಿವನಿ ಆರ್.ಎಸ್. ಕಲ್ಲುಶೆಟ್ಟಿಹಳ್ಳಿಯ ಅಂಗನವಾಡಿಗಳು ಸಮುದಾಯಭವನದಲ್ಲಿ ಅಜ್ಜಂಪುರ ಮತ್ತು ಕುರುಬರಹಳ್ಳಿಯ ಅಂಗನವಾಡಿ ತರಗತಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಅಂಗನವಾಡಿ ದುರಸ್ತಿ ಕಾರ್ಯ ನಡೆದಿದೆ. ಆದರೆ ಕಾಮಗಾರಿ ಪೂರ್ಣಗೊಂಡಿಲ್ಲ. ಆಗಿರುವ ಕೆಲಸವೂ ಕಳಪೆಯಾಗಿದೆ. ಬಣ್ಣ ಹಚ್ಚುವ ಕೆಲಸವೂ ಅರ್ಧಕ್ಕೆ ನಿಂತಿದೆ. ದುರಸ್ತಿಗಾಗಿ ಮಾಡಿರುವ ವೆಚ್ಚ ವ್ಯರ್ಥವಾಗಿದೆ ಎಂದು ಹೆಸರು ಹೇಳಲಿಚ್ಚಿಸದ ಕಾರ್ಯಕರ್ತೆಯೊಬ್ಬರು ಬೇಸರ ವ್ಯಕ್ತಪಡಿಸಿದರು. ಕೆಲವೆಡೆ ಹೊಸ ಅಂಗನವಾಡಿ ತಲೆ ಎತ್ತಿದ್ದು ತರಗತಿಗಳು ಆರಂಭಗೊಂಡಿವೆ. ಆದರೆ ಕಟ್ಟಡದಲ್ಲಿ ನೀರು ಪೂರೈಕೆ ವ್ಯವಸ್ಥೆ ಆಗಿಲ್ಲ. ಹೀಗೆ ಸಾಕಷ್ಟು ಕೊರತೆಯಿರುವ ಕಟ್ಟಡಗಳಲ್ಲಿಯೇ ಕೇಂದ್ರ ನಡೆಸುವ ಅನಿವಾರ್ಯತೆ ಒದಗಿದೆ ಎಂದು ಕಾರ್ಯಕರ್ತೆಯೊಬ್ಬರು ಅಳಲು ತೋಡಿಕೊಂಡಿದ್ದಾರೆ.

ಸ್ವಂತ ಕಟ್ಟಡಕ್ಕೆ ಕಾದಿರುವ ಅಂಗನವಾಡಿ ಕೊಪ್ಪ: ತಾಲ್ಲೂಕಿನಲ್ಲಿ ಒಟ್ಟು 155 ಅಂಗನವಾಡಿ ಕೇಂದ್ರಗಳಿದ್ದು ಈ ಪೈಕಿ 4 ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲ. ಗುಡ್ಡೆತೋಟ ಗ್ರಾಮ ಪಂಚಾಯಿತಿ ವ್ಯಾಪ್ತಿ ಗೋಳ್ಗೋಡು ಹಾಗೂ ಎಡಗುಂದಾ ಹಿರೇಕೊಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿ ದೋರಗಲ್(ಮಿನಿ ಅಂಗನವಾಡಿ) ಬಿಂತ್ರವಳ್ಳಿ ಪಂಚಾಯಿತಿ ವ್ಯಾಪ್ತಿ ಬಿಂತ್ರವಳ್ಳಿ(ಕಾಮಗಾರಿ ಪ್ರಾರಂಭಗೊಂಡಿಲ್ಲ) ಇವುಗಳ ಸ್ವಂತ ಕಟ್ಟಡಕ್ಕಾಗಿ ವಿಶೇಷ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಅನುದಾನ ಮಂಜೂರಾಗಿದ್ದು ಕಾಮಗಾರಿಗೆ ಚಾಲನೆ ದೊರೆತಿದೆ. ಅತಿವೃಷ್ಟಿಯಲ್ಲಿ ಹಾನಿಗೀಡಾಗಿದ್ದ ತಾಲ್ಲೂಕಿನ ಭಂಡಿಗಡಿಯಲ್ಲಿನ ಅಂಗನವಾಡಿ ಕೇಂದ್ರ ಛಾವಣಿ ಎಲೆಮಡಲು ಅಂಗನವಾಡಿ ಕೇಂದ್ರ ಛಾವಣಿ ದುರಸ್ತಿಗೆ ಅನುದಾನ ಕೋರಲಾಗಿದೆ. ಸ್ಥಿರೂರಿನಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಮಳೆಗಾಲದಲ್ಲಿ ಕೆಸರು ಮಣ್ಣು ಜರಿಯುತ್ತಿದ್ದು ಇಲ್ಲಿ ತಡೆಗೋಡೆ ನಿರ್ಮಿಸಲು ಅನುದಾನ ಕೇಳಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಣೆಗೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ 10 ಹುದ್ದೆಗಳ ಪೈಕಿ ಸಿಡಿಪಿಒ ಹುದ್ದೆ ಒಳಗೊಂಡಂತೆ ಪ್ರಥಮ ದರ್ಜೆ ಸಹಾಯಕ ದ್ವಿತೀಯ ದರ್ಜೆ ಸಹಾಯಕ ವಾಹನ ಚಾಲಕ ತಲಾ 1 ಹುದ್ದೆ ಅಂಗನವಾಡಿ ಮೇಲ್ವಿಚಾರಕಿ 2 ಹುದ್ದೆಗಳು ಖಾಲಿ ಇವೆ ಎಂದು ವಿವರಿಸುತ್ತಾರೆ.

14 ಅಂಗನವಾಡಿಗೆ ಕಟ್ಟಡವಿಲ್ಲ ತರೀಕೆರೆ: ತಾಲ್ಲೂಕಿನ ಅಂಗನವಾಡಿಗಳು ಕೆಲವು ಕೊರತೆ ನಡುವೆ ಸೇವೆ ಸಲ್ಲಿಸುತ್ತಿವೆ. ಕರಕುಚ್ಚಿ ಕಾಲೊನಿ ನರಸಿಪುರ ರಾಜನಹಳ್ಳಿ ಸೇರಿದಂತೆ 14 ಗ್ರಾಮಗಳಲ್ಲಿ ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿಲ್ಲ. ಶಾಲಾ ಕೂಠಡಿಯಲ್ಲಿ ಅಂಗನವಾಡಿ ನಡೆಯುತ್ತಿವೆ. ಲಕ್ಕೆನಹಳ್ಳಿ ದೋರನಾಳು ಸೀತಾಪುರ ಸಿದ್ದರಬೈಲು ಸಹ್ಯಾದ್ರಿಪುರ ಹಲಸೂರು ವಾಗೂ ಕ್ಯಾಂಪ್ ಶಾಂತಿಪುರ ಗ್ರಾಮಗಳಲ್ಲಿ ಅಂಗನವಾಡಿಗಳು ಸಮುದಾಯ ಭವನಗಳನ್ನೇ ಆಶ್ರಯಿಸಿವೆ. ಇನ್ನೂ ಇಟ್ಟಿಗೆ ಪಿರುಮೆನಹಳ್ಳಿ ಭೋವಿ ಕಾಲೊನಿ ಇಂದಿರಾನಗರ ಪಟ್ಟಣದ ಕೆಲವು ವಾರ್ಡ್‌ಗಳು ಸೇರಿದಂತೆ 19 ಕಡೆ ಅಂಗನವಾಡಿಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಕೆಲವು ಗ್ರಾಮಗಳಲ್ಲಿ ಜಾಗದ ಕೊರತೆ ಕಂಡು ಬಂದಿದೆ. ಉಳಿದಂತೆ ಅನುದಾನ ಕೊರತೆಗಳಿವೆ. ‘ನಮ್ಮ ಕಾಲೊನಿಯಲ್ಲಿ ಅಂಗನವಾಡಿ ಇದೆ ಆದರೆ ಸ್ವಂತ ಕಟ್ಟಡವಿಲ್ಲ. ಆದ್ದರಿಂದ ನಮ್ಮ ಮಕ್ಕಳು ದೂರದ ಶಾಲಾ ಅಂಗನವಾಡಿಗೆ ಹೋಗಬೇಕಾದ ಪರಿಸ್ಥಿತಿ ಇದೆ’ ಎನ್ನುತ್ತಾರೆ ದೋರನಾಳು ಕಾಲೊನಿಯ ಯಲ್ಲಮ್ಮ.

ಸಮುದಾಯ ಭವನವೇ ಅಂಗನವಾಡಿ ಕೇಂದ್ರ ಮೂಡಿಗೆರೆ: ತಾಲ್ಲೂಕಿನ ವಿವಿಧೆಡೆ ಅಂಗನವಾಡಿ ಕಟ್ಟಡಗಳಿಲ್ಲದೇ ಸಮುದಾಯ ಭವನಗಳಲ್ಲಿ ಬಾಡಿಗೆ ಕಟ್ಟಡಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ನಡೆಸುವ ಸ್ಥಿತಿ ಇದೆ. ತಾಲ್ಲೂಕಿನಲ್ಲಿ ಒಟ್ಟು 257 ಅಂಗನವಾಡಿ ಕೇಂದ್ರಗಳಿದ್ದು ಅವುಗಳಲ್ಲಿ ಬಾಪುನಗರ ಕುರ್ಕುಮಕ್ಕಿ ಬಾಳೂರು ದರ್ಬಾರ್ ಪೇಟೆ ಸೇರಿದಂತೆ ಹಲವು ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿದ್ದರೆ ಶುಭಾನಗರ ತಮಟೇಬೈಲ್ ಜಿ.ಹೊಸಳ್ಳಿ ಎಸ್ಟೇಟ್ ಸೇರಿದಂತೆ 18ಕ್ಕೂ ಹೆಚ್ಚು ಅಂಗನವಾಡಿಗಳು ಸಮುದಾಯ ಭವನ ಗ್ರಾಮ ಪಂಚಾಯತಿಯ ಹಳೆಯ ಕಟ್ಟಡಗಳಲ್ಲಿ ನಡೆಯುತ್ತಿವೆ. ತಾಲ್ಲೂಕಿನ ಜೇನುಬೈಲ್ ಅತ್ತಿಗೆರೆ ಬಿ. ಹೊಸ್ಕೆರೆ ಸೇರಿದಂತೆ 11ಕ್ಕೂ ಅಧಿಕ ಅಂಗನವಾಡಿ ಕೇಂದ್ರಗಳು ದುರಸ್ತಿ ಹಂತಕ್ಕೆ ತಲುಪಿದ್ದು ಕೆಲವು ಅಂಗನವಾಡಿಗಳನ್ನು ಸ್ಥಳಾಂತರ ಕೂಡ ಮಾಡಲಾಗಿದೆ. ‘ತಾಲ್ಲೂಕಿನಲ್ಲಿ ಸಮುದಾಯ ಭವನಗಳಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳಿಗೆ ಹೊಸ ಕಟ್ಡಡ ನಿರ್ಮಿಸಲು ಜಾಗ ಮಂಜೂರಾತಿ ಮಾಡುವಂತೆ ಪ್ರಸ್ತಾವನೆಯನ್ನು ಕಳಿಸಿದ್ದೇವೆ. ಬಹುತೇಕ ಅಂಗನವಾಡಿ ಕೇಂದ್ರಗಳು ಸುಸಜ್ಜಿತವಾಗಿವೆ. ನಿಡುವಾಳೆ ಸುಂಕಸಾಲೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಇರುವ ಅಂಗನವಾಡಿ ಕೇಂದ್ರಗಳು ಮಾದರಿಯಾಗಿ ನಿರ್ಮಾಣವಾಗಿವೆ’ ಎನ್ನುತ್ತಾರೆ ಹೆಸರೇಳಲು ಇಚ್ಛಿಸದ ಇಲಾಖೆಯ ಅಧಿಕಾರಿಗಳು.

ನಾಲ್ಕು ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ಶೃಂಗೇರಿ: ತಾಲ್ಲೂಕಿನಲ್ಲಿ 105 ಅಂಗಡನವಾಡಿಗಳಿದ್ದು ಅವುಗಳ ಪೈಕಿ ನಾಲ್ಕು ಕಟ್ಟಡಗಳಿಗೆ ಸ್ವಂತ ಕಟ್ಟಡಗಳಿಲ್ಲ. ಇರುವ ಅಂಗನವಾಡಿಗಳಲ್ಲಿ ಕೆಲವು ಸೋರುವ ಸ್ಥಿತಿಯಲ್ಲಿದ್ದು ದುರಸ್ತಿಗೆ ಕಾದಿವೆ. ಕೆಲ ಅಂಗನವಾಡಿಗಳಲ್ಲಿ ಪೀಠೋಪಕರಣಗಳೇ ಇಲ್ಲ. ನಾಲ್ಕು ಅಂಗನವಾಡಿಗೆ ನೌಕರರೇ ಇಲ್ಲ. ಕ್ಷೇತ್ರ ಸಮನ್ವಯಾಧಿಕಾರಿ ಸಿಡಿಪಿ ಬಿಇಒ ಹುದ್ದೆಯೂ ಖಾಲಿ ಇವೆ. ಬೇರೆ ಇಲಾಖೆಯ ಅಧಿಕಾರಿಗಳು ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಅವರಿಗೆ ಈ ಇಲಾಖೆಯ ಸಂಪೂರ್ಣ ಮಾಹಿತಿ ಇಲ್ಲದೆ ನಮ್ಮ ಕೆಲಸಗಳು ಬಾಕಿ ಉಳಿದಿವೆ ಎನ್ನುತ್ತಾರೆ ನೌಕರರು.

ಅಂಗನವಾಡಿ ಕಟ್ಟಡಗಳ ‌ಸ್ಥಿತಿಗತಿ ತಾಲ್ಲೂಕು; ಒಟ್ಟು ಅಂಗನವಾಡಿಗಳು; ಸ್ವಂತ ಕಟ್ಟಡ;ಇತರೆ ಸರ್ಕಾರಿ ಕಟ್ಟಡ; ಬಾಡಿಗೆ ಕಟ್ಟಡ;=ಕಾಮಗಾರಿ ಹಂತದಲ್ಲಿರುವ ಕಟ್ಟಡ ಕಡೂರು;456;370;67;19;45 ಕೊಪ್ಪ;155;151;3;1;6 ಮೂಡಿಗೆರೆ;257;221;32;4;17 ಶೃಂಗೇರಿ;105;101;4;0;0 ಚಿಕ್ಕಮಗಳೂರು;394;338;30;26;17 ತರೀಕೆರೆ;324;275;33;16;21 ‌ಎನ್.ಆರ್.ಪುರ;134;131;3;0;4 ಒಟ್ಟು;1825;1587;172;66;110

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT