ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀರೂರು: ಮುತ್ತಿನಕಟ್ಟೆ ಆಶ್ರಯ ಬಡಾವಣೆಗೆ ಮುಕ್ತಿ ಯಾವಾಗ?

Published 16 ಜೂನ್ 2023, 16:11 IST
Last Updated 16 ಜೂನ್ 2023, 16:11 IST
ಅಕ್ಷರ ಗಾತ್ರ

ಎನ್.ಸೋಮಶೇಖರ

ಬೀರೂರು: ಬೀರೂರು ಪುರಸಭೆ ವ್ಯಾಪ್ತಿಯ ಆಶ್ರಯ ಬಡಾವಣೆಗಳ ಪೈಕಿ ಯಗಟಿ ರಸ್ತೆಯಲ್ಲಿ ಸ್ಥಾಪಿಸಿದ್ದ ಮುತ್ತಿನಕಟ್ಟೆ ಬಡಾವಣೆ (ಶಿವಾಜಿ ನಗರ) ಈಗ ತ್ಯಾಜ್ಯ ವಿಲೇವಾರಿ ಘಟಕವಾಗಿ ಬದಲಾಗಿದೆ.

ಸ್ಥಳೀಯ ಆಡಳಿತ ಮೂಲ ಸೌಲಭ್ಯ ಕಲ್ಪಿಸದೆ ಇರುವುದರಿಂದ ಇಲ್ಲಿನ ನಿವೇಶನದಾರರು ಮನೆ ನಿರ್ಮಿಸಿರಲಿಲ್ಲ. ಇದರಿಂದಾಗಿ ಆಶ್ರಯ ಬಡಾವಣೆ ಕಸದ ರಾಶಿಯಿಂದ ತುಂಬಿಹೋಗಿದೆ.

ಪಟ್ಟಣ ಹೊರವಲಯದ ಯಗಟಿ ರಸ್ತೆಯಲ್ಲಿ 1996ರಲ್ಲಿ 2 ಎಕರೆ ಕೃಷಿ ಭೂಮಿಯನ್ನು ಖರೀದಿಸಿ ಆಶ್ರಯ ಬಡಾವಣೆ ನಿರ್ಮಿಸಿದ ಪುರಸಭೆ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರವನ್ನೂ ನೀಡಿತ್ತು. ಆದರೆ, ನಿವೇಶನಗಳಿಗೆ ರಸ್ತೆ, ಕುಡಿಯುವ ನೀರು, ಚರಂಡಿ, ವಿದ್ಯುತ್ ದೀಪ ಕಲ್ಪಿಸಲಿಲ್ಲ. ಆಶ್ರಯ ಬಡಾವಣೆಯ ಫಲಾನುಭವಿಗಳು ಈ ಕಾರಣದಿಂದ ಮನೆ ನಿರ್ಮಿಸಲು ಮುಂದಾಗಲಿಲ್ಲ. ಯುಜಿಡಿ ಅನುಷ್ಠಾನದ ಸಂದರ್ಭದಲ್ಲಿ ನೂರಾರು ಲೋಡ್ ಮಣ್ಣು, ಕಸ ಹಾಕಿದ ಬಳಿಕ ಎಚ್ಚೆತ್ತ ನಿವೇಶನದಾರರು ಪುರಸಭೆಗೆ ನಿವೇಶನ ಗುರುತಿಸಿಕೊಡುವಂತೆ ಮಾಡಿದ ಮನವಿಗೆ ಸ್ಪಂದನೆ ಸಿಗಲಿಲ್ಲ. ಪುರಸಭೆ ಇದುವರೆಗೂ ಈ ಜಾಗವನ್ನು ಕಸ ವಿಲೇವಾರಿ ಘಟಕವಾಗಿ ಮಾಡಿಕೊಂಡಿದೆ.

2020ರಲ್ಲಿ ಬೀರೂರು ಪುರಸಭೆಗೆ ವೈಜ್ಞಾನಿಕ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಹಿರಿಯಂಗಳ ಗ್ರಾಮದ ಸರ್ವೆ ನಂ-434 ಮತ್ತು 435 ರಲ್ಲಿ 8.20 ಎಕರೆ ಭೂ ಪ್ರದೇಶವನ್ನು ಜಿಲ್ಲಾಡಳಿತ ಮಂಜೂರು ಮಾಡಿದೆ. ಭೂಸ್ವಾಧೀನ ಮಾಡಿಕೊಂಡು ಅಲ್ಲಿ ಪುರಸಭೆ ಕೇವಲ ಕಾಂಪೌಂಡ್ ನಿರ್ಮಿಸಿದೆ. ಪಟ್ಟಣದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಅಲ್ಲಿಗೆ ಸ್ಥಳಾಂತರಿಸಬೇಕು ಎನ್ನುವ ಉದ್ದೇಶ ಇದುವರೆಗೂ ಕೈಗೂಡಿಲ್ಲ. ಮುತ್ತಿಕಟ್ಟೆ ಬಳಿಯೇ ಕಸದ ರಾಶಿ ಸೃಷ್ಟಿಯಾಗುತ್ತಿದೆ.

ಇಲ್ಲಿ ಸಂಗ್ರಹವಾದ ಕಸವನ್ನು ವಿಲೇವಾರಿ ಮಾಡದ ಪುರಸಭೆ ಅಲ್ಲಿಯೇ ಬೆಂಕಿ ಹಾಕುತ್ತಿದೆ. ಎಲ್ಲ ಬಗೆಯ ಕಸ ಸುರಿಯುವುದರಿಂದ ನಾಯಿಗಳ ಕಾಟವೂ ಹೆಚ್ಚಾಗಿದೆ ಎಂದು ಸ್ಥಳೀಯ ಜಮೀನುದಾರರು ಅಳಲು ತೋಡಿಕೊಳ್ಳುತ್ತಾರೆ.

ಅನುಮೋದನೆ ಸಿಗುವ ಭರವಸೆ

‘ನಾವು ಈ ಹಿಂದೆ ರಾಜ್ಯ ತಾಂತ್ರಿಕ ಸಮಿತಿಯ ಮುಂದೆ ಡಿಪಿಆರ್ ಸಲ್ಲಿಸಿ ಅದರ ನಿರ್ದೇಶನದಂತೆ 3 ಬಾರಿ ತಿದ್ದುಪಡಿ ಮಾಡಿ ಘಟಕ ಸ್ಥಾಪನೆಗೆ ಅನುಮತಿ ನೀಡುವಂತೆ ಕೋರಿಕೆ ಸಲ್ಲಿಸಿದ್ದೆವು. 4ನೇ ಬಾರಿಯೂ ವೆಚ್ಚದ ವಿಷಯವಾಗಿ ಅವರು ಸ್ಪಷ್ಟೀಕರಣ ಕೋರಿರುವುದರಿಂದ ಮತ್ತೆ ತಿದ್ದುಪಡಿ ಮಾಡಿ ಅರ್ಜಿ ಸಲ್ಲಿಸಿದ್ದೇವೆ. ಈ ಬಾರಿ ಅನುಮೋದನೆ ಸಿಗುವ ಭರವಸೆ ಇದೆ. ಬಳಿಕ ಯಗಟಿ ರಸ್ತೆಯಲ್ಲಿ ಸಂಗ್ರಹವಾಗಿರುವ ಹಾಗೂ ಪಟ್ಟಣದಲ್ಲಿ ಸಂಗ್ರಹವಾಗುವ ಕಸವನ್ನು ಅಲ್ಲಿಯೇ ವಿಲೇವಾರಿ ಮಾಡುತ್ತೇವೆ ಎನ್ನುತ್ತಾರೆ ಪುರಸಭೆಯ ಪರಿಸರ ಎಂಜಿನಿಯರ್ ಮಹಮದ್ ನೂರುದ್ದೀನ್.

’ಸಮಸ್ಯೆಗೆ ಪರಿಹಾರ ಒದಗಿಸಿ’

‘ಆಶ್ರಯ ಬಡಾವಣೆಯಲ್ಲಿ ನಮ್ಮ ನಿವೇಶನಗಳನ್ನು ಗುರುತಿಸಿ ಅಳತೆ ಮಾಡಿಕೊಡುವಂತೆ ನಾವು 2015ರಿಂದ ಮನವಿ ಮಾಡಿದ್ದೆವು. ಆದರೆ ಪುರಸಭೆ ಇದುವರೆಗೂ ಕ್ರಮ ವಹಿಸಿಲ್ಲ. ವಿಚಾರಿಸಿದರೆ ಬಡಾವಣೆಯ ಅಕ್ಕಪಕ್ಕದ ಜಮೀನು ಮಾಲೀಕರು ಒತ್ತುವರಿ ಮಾಡಿದ್ದು ಅದನ್ನು ತೆರವುಗೊಳಿಸಿ ನಂತರ ಅಳತೆ ಮಾಡಿಕೊಡಲಾಗುವುದು ಎಂದು ಉತ್ತರಿಸುತ್ತಾರೆ. ಪುರಸಭೆಯು ಸರ್ಕಾರ ಮಂಜೂರು ಮಾಡಿದ ಜಾಗದಲ್ಲಿ ಕಸ ವಿಲೇವಾರಿಗೆ ಶೀಘ್ರ ವ್ಯವಸ್ಥೆ ಮಾಡಿಕೊಂಡು ಈ ಸಮಸ್ಯೆಗೆ ಪರಿಹಾರ ಒದಗಿಸಬೇಕು’ ಎಂದು ಈ ಆಶ್ರಯ ಬಡಾವಣೆಯಲ್ಲಿ ನಿವೇಶನ ಪಡೆದ ಫಲಾನುಭವಿ ಅಮ್ಜದ್‍ಖಾನ್ ಸಮಸ್ಯೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT