ಗುರುವಾರ , ಡಿಸೆಂಬರ್ 3, 2020
23 °C
ಪುರಸಭೆ– ಭಂಡಾರಿ ಶ್ರೀನಿವಾಸ್ ಅಧ್ಯಕ್ಷ, ವಿಜಯಾ ಉಪಾಧ್ಯಕ್ಷೆ

ಕಡೂರು ಪುರಸಭೆ: ಬಿಜೆಪಿ–ಜೆಡಿಎಸ್‌ ಮೈತ್ರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಡೂರು: ಕಡೂರು ಪುರಸಭೆಗೆ ಅಧ್ಯಕ್ಷ ರಾಗಿ ಜೆಡಿಎಸ್‌ನ ಭಂಡಾರಿ ಶ್ರೀನಿವಾಸ್ ಅಧ್ಯಕ್ಷ ಮತ್ತು ಉಪಾಧ್ಯಕ್ಷೆಯಾಗಿ ಬಿಜೆಪಿಯ ವಿಜಯಾ ಆಯ್ಕೆಯಾದರು. 

ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಪೊಲೀಸರ ಬಿಗಿ ಬಂದೋಬಸ್ತಿನೊಂದಿಗೆ ಸೋಮವಾರ ನಡೆಯಿತು. ಒಟ್ಟು 23 ಸದಸ್ಯ ಬಲದ
(ಕಾಂಗ್ರೆಸ್ - 7 ಬಿಜೆಪಿ- 6 ಜೆಡಿಎಸ್ - 6 ಮತ್ತು ಪಕ್ಷೇತರರು 4 ) ಪುರಸಭೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ದೋಸ್ತಿಯಾಗಿ ಅಧಿಕಾರ ಹಿಡಿಯಿತು.

ಅಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ಭಂಡಾರಿ ಶ್ರೀನಿವಾಸ್ 14 ಮತ ಪಡೆದರೆ, ಕಾಂಗ್ರೆಸ್‌ನ ಸಯ್ಯದ್ ಯಾಸೀನ್ 7 ಮತ ಪಡೆದು ಪರಾಭವ ಗೊಂಡರು. ಉಪಾಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ವಿಜಯಾ 14 ಮತ ಪಡೆದರೆ, ಕಾಂಗ್ರೆಸ್‌ನ ಜ್ಯೋತಿ 7 ಮತ ಪಡೆದು ಪರಾಭವಗೊಂಡರು. ಚುನಾವಣಾಧಿಕಾರಿಯಾಗಿ ಅಜ್ಜಂಪುರ ತಹಶೀಲ್ದಾರ್ ವಿಶ್ವನಾಥ ರೆಡ್ಡಿ ಕರ್ತವ್ಯ ನಿರ್ವಹಿಸಿದರು.

ಭಂಡಾರಿ ಶ್ರೀನಿವಾಸ್ ಮತ್ತು ವಿಜಯಾ ಪರವಾಗಿ ಜೆಡಿಎಸ್‌ನ 6, ಬಿಜೆಪಿಯ 6 ಮತ್ತು ಒಬ್ಬ ಪಕ್ಷೇತರ ಅಭ್ಯರ್ಥಿ ಮತ ಚಲಾಯಿಸಿದರು. ಜೊತೆಗೆ ಶಾಸಕರ ಒಂದು ಮತ ಸೇರಿ ಒಟ್ಟು 14 ಮತಗಳು ಇವರಿಗೆ ದೊರೆ ತವು. ಇಬ್ಬರು ಪಕ್ಷೇತರರು ತಟಸ್ಥರಾಗಿ ಉಳಿದರು. ಮತ್ತೊಬ್ಬ ಪಕ್ಷೇತರ ಸದಸ್ಯ ಈರಳ್ಳಿ ರಮೇಶ್ ಗೈರಾಗಿದ್ದರು.

 ‘ನಮ್ಮ ನಾಯಕರಾದ ವೈ.ಎಸ್.ವಿ.ದತ್ತಾ ಅವರ ಮಾರ್ಗದರ್ಶನದಂತೆ ಶಾಸಕ ಬೆಳ್ಳಿಪ್ರಕಾಶ್ ಅವರ ಸಹಕಾರದಿಂದ ಕಡೂರು ಪುರಸಭೆಯ ಅಧ್ಯಕ್ಷನಾಗಿದ್ದೇನೆ. ಪಟ್ಟಣದ ಸರ್ವತೋಮುಖ ಅಭಿವೃದ್ಧಿಗಾಗಿ ನಿರಂತರ ಕೆಲಸ ಮಾಡುತ್ತೇವೆ’ ಎಂದು ಭಂಡಾರಿ ಶ್ರೀನಿವಾಸ್‌ ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಮಹೇಶ್‌ ಒಡೆಯರ್ ಇದ್ದರು.

ಬದಲಾದ ರಾಜಕೀಯ: 20 ವರ್ಷಗಳ ಹಿಂದೆ ಪುರಸಭೆಯ ಚುನಾವಣೆಯಲ್ಲಿ ಭಂಡಾರಿ ಶ್ರೀನಿವಾಸ್ ಅವರು ಬೆಳ್ಳಿಪ್ರಕಾಶ್ ಅವರನ್ನು ಸೋಲಿಸಿ ಪುರಸಭೆಗೆ ಆಯ್ಕೆಯಾಗಿದ್ದರು. ನಂತರ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು. ಇದೀಗ ಬದಲಾದ ಸಂದರ್ಭದಲ್ಲಿ ಬೆಳ್ಳಿ ಪ್ರಕಾಶ್ ಶಾಸಕರಾಗಿದ್ದಾರೆ. ಅವರ ಪಕ್ಷದ ಬೆಂಬಲದಿಂದಲೇ ಭಂಡಾರಿ ಶ್ರೀನಿವಾಸ್ ಅಧ್ಯಕ್ಷರಾಗಿರುವುದು ವಿಶೇಷ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.