ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಕವಿದಿದೆ ಮಂಕು

ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಪರಸ್ಪರ ದೂಷಣೆಗಿಳಿದ ‘ಕೈ’ ಕಾರ್ಯಕರ್ತರು
Last Updated 22 ಫೆಬ್ರುವರಿ 2023, 5:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಬೂತ್‌ಮಟ್ಟದಲ್ಲಿ ಕಾರ್ಯಕರ್ತರ ಪಡೆ ಇದೆ. ಆದರೆ ಅವರನ್ನು ಸಮರ್ಥವಾಗಿ ಸಂಘಟಿಸುವ ನಾಯಕನಿಲ್ಲ–ಇದು ಸದ್ಯದ ಮಟ್ಟಿಗೆ ಚಿಕ್ಕಬಳ್ಳಾಪುರ ಕಾಂಗ್ರೆಸ್‌ನ ಪರಿಸ್ಥಿತಿ.

ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಿಚಾರ ಇನ್ನೂ ಕಗ್ಗಂಟಾಗಿದೆ. ಟಿಕೆಟ್ ವಿಚಾರವಾಗಿಯೇ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ‘ಕೈ’ ಪಕ್ಷದ ಕಾರ್ಯಕರ್ತರೇ ಪರಸ್ಪರ ದೂಷಣೆ ನಡೆಸುತ್ತಿದ್ದಾರೆ!

ಟಿಕೆಟ್ ವಿಚಾರದಲ್ಲಿ ಗೊಂದಲ, ಹೊರಗಿನ ಅಭ್ಯರ್ಥಿಯೊ ಸ್ಥಳೀಯ ಅಭ್ಯರ್ಥಿಯೊ ಎನ್ನುವ ಜಿಜ್ಞಾಸೆ, ಸಮರ್ಥ ನಾಯಕತ್ವದ ಕೊರತೆ, ಒಂದು ಗುಂಪು ಮಾಡುವ ಕಾರ್ಯಕ್ರಮಗಳಿಗೆ ಮತ್ತೊಂದು ಗುಂಪಿನ ಅಸಹಕಾರ, ವೈಯಕ್ತಿಕ ಪ್ರತಿಷ್ಠೆ, ಟಿಕೆಟ್ ದೊರೆತ ನಂತರ ಕೆಲಸ ಮಾಡಿದರೆ ಆಯಿತು ಎನ್ನುವ ಮನೋಭಾವ ಸೇರಿದಂತೆ ಹಲವು ಕಾರಣಗಳಿಂದ ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಮಂಕು ಕವಿದಿದೆ.

ಒಂದೆಡೆ ಸಚಿವ ಡಾ.ಕೆ.ಸುಧಾಕರ್ ಅವರ ನೇತೃತ್ವದಲ್ಲಿ ಬಿಜೆಪಿ ಭರ್ಜರಿಯಾಗಿಯೇ ಚುನಾವಣೆ ತಾಲೀಮು ನಡೆಸಿದೆ. ಮತ್ತೊಂದೆಡೆ ಜೆಡಿಎಸ್ ಅಭ್ಯರ್ಥಿ, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಅವರು ಮನೆ ಮನೆಗಳಿಗೆ ಭೇಟಿ ನೀಡುವ ಮೂಲಕ ಮತದಾರರ ಮನಗೆಲ್ಲಲು ಪ್ರಯತ್ನಿಸುತ್ತಿದ್ದಾರೆ. ಇತ್ತ ಕಾಂಗ್ರೆಸ್ ಮಾತ್ರ ‘ಪತ್ರಿಕಾ ಹೇಳಿಕೆ’, ‘ಸುದ್ದಿಗೋಷ್ಠಿ’ಗಳಿಗೆ ಸೀಮಿತವಾಗಿದೆ. ನೆಪ ಮಾತ್ರಕ್ಕೆ ಕಾಂಗ್ರೆಸ್‌ನ ಬೆರಳೆಣಿಕೆಯಷ್ಟು ಮಂದಿ ಸೋಮವಾರ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ!

ಜಿಲ್ಲೆಯ ಉಳಿದ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಹೋಲಿಸಿದರೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಚಾರ ಭರಾಟೆ ಪಡೆದಿಲ್ಲ.

ಕೆಪಿಸಿಸಿ ಸದಸ್ಯ ವಿನಯ್ ಎನ್.ಶ್ಯಾಮ್, ಒಕ್ಕಲಿಗ ಸಂಘದ ನಿರ್ದೇಶಕರೂ ಆದ ಮುಖಂಡ ಯಲುವಳ್ಳಿ ರಮೇಶ್, ಮುಖಂಡರಾದ ಗಂಗರೇಕಾಲುವೆ ನಾರಾಯಣಸ್ವಾಮಿ, ಕೆ.ಎನ್.ರಘು ಮತ್ತು ಲಾಯರ್ ನಾರಾಯಣಸ್ವಾಮಿ ಟಿಕೆಟ್ ನೀಡುವಂತೆ ವೀಕ್ಷಕರಿಗೆ ಅರ್ಜಿ ಸಲ್ಲಿಸಿದ್ದರು. ಈ ನಡುವೆ ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್
ಪರವಾಗಿ ಸಹಿ ಹಾಕಿ ಕೆಲವು ಮುಖಂಡರು ವೀಕ್ಷಕರಿಗೆ ಅರ್ಜಿ ನೀಡಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ನಡೆದ ‘ಪ್ರಜಾಧ್ವನಿ’ ಯಾತ್ರೆಯಲ್ಲಿ ಕೊತ್ತೂರು ಮಂಜುನಾಥ್ ಭಾಗಿಯಾಗಿದ್ದು ಚಿಂತಾಮಣಿ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್, ಚಿಕ್ಕಬಳ್ಳಾಪುರಕ್ಕೆ ಚಿರತೆ ಬರುತ್ತದೆ ಎಂದು ಪರೋಕ್ಷವಾಗಿ ಕೊತ್ತೂರು ಪರವಾಗಿ ಮಾತನಾಡಿದ್ದು ಮತ್ತು ಮಂಜುನಾಥ್ ಪರವಾಗಿ ಚಿಂತಾಮಣಿಯಿಂದ ಬಂದಿದ್ದ ಕಾರ್ಯಕರ್ತರ ಜಯಕಾರ ಸ್ಥಳೀಯ ಕಾಂಗ್ರೆಸ್‌ನಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು.

ಕೊತ್ತೂರು ಪರ ಬಣ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಮಂಜುನಾಥ್ ಅಭ್ಯರ್ಥಿಯಾಗುವರು ಎಂದು ಸಂದೇಶಗಳನ್ನು ಹರಿಬಿಟ್ಟಿತ್ತು. ಇದನ್ನು ವಿನಯ್ ಶ್ಯಾಮ್ ಬೆಂಬಲಿಗರು ವಿರೋಧಿಸಿ ತಮ್ಮ ನಾಯಕನ ಪರವಾಗಿ ಸಂದೇಶಗಳನ್ನು ಹರಿಬಿಟ್ಟರು.

ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ದೂಷಣೆ: ವಿನಯ್ ಶ್ಯಾಮ್ ಮತ್ತು ಕೊತ್ತೂರು ಮಂಜುನಾಥ್ ಪರವಾಗಿ ಕಾಂಗ್ರೆಸ್ ಕಾರ್ಯಕರ್ತರು ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಪರಸ್ಪರ ಸಂದೇಶಗಳನ್ನು ಹರಿಬಿಡುತ್ತಿದ್ದು ಇದು ಎರಡೂ ಬಣಗಳ ಕಾರ್ಯಕರ್ತರ ನಡುವೆ ಪರಸ್ಪರ ದೂಷಣೆಗಳಿಗೂ ಕಾರಣವಾಗಿತ್ತು. ಈ ದೂಷಣೆಗಳು ವೈಯಕ್ತಿಕ ಮಟ್ಟಕ್ಕೂ ತಲುಪಿದ್ದವು. ಹಬ್ಬಗಳು ಬಂದಾಗ ಶುಭಕೋರುವ ಪೋಸ್ಟರ್‌ಗಳಲ್ಲಿ ಕೆಲವು ಕಾರ್ಯಕರ್ತರು ಕೊತ್ತೂರು ಮಂಜುನಾಥ್ ಅವರನ್ನು ಅಭ್ಯರ್ಥಿ ಎಂದರೆ ಮತ್ತೆ ಕೆಲವರು ಯಲುವಳ್ಳಿ ರಮೇಶ್ ಮತ್ತು ವಿನಯ್ ಶ್ಯಾಮ್ ಅಭ್ಯರ್ಥಿ ಎಂದು ಪೋಸ್ಟರ್‌ಗಳನ್ನು ಪ್ರಕಟಿಸಿದ್ದರು. ಹೀಗೆ ಟಿಕೆಟ್ ವಿಚಾರ ನಾಯಕರು ಮತ್ತು ಕಾರ್ಯಕರ್ತರಲ್ಲಿಯೇ ಪರಸ್ಪರ ದೂಷಣೆಗೆ ಕಾರಣವಾಗಿದೆ.

ಈ ಹಿಂದೆ ಕೆಲವು ಮುಖಂಡರು ಯುವಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಅವರನ್ನು ಚಿಕ್ಕಬಳ್ಳಾಪುರಕ್ಕೆ ಕರೆ ತರಲು ಪ್ರಯತ್ನಿಸಿದ್ದರು. ಆದರೆ ರಕ್ಷಾ ರಾಮಯ್ಯ ಆಸಕ್ತಿ ತೋರಲಿಲ್ಲ. ಆ ಸಂದರ್ಭದಲ್ಲಿಯೂ ‘ಅಭ್ಯರ್ಥಿ’ ಎಂದು ರಕ್ಷಾ ರಾಮಯ್ಯ ಪರ ಪೋಸ್ಟರ್‌ಗಳನ್ನು ಹರಿಬಿಡುತ್ತಿದ್ದರು.

ಟಿಕೆಟ್ ವಿಚಾರ ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ನಾಯಕರ ನಡುವೆ ತಿಕ್ಕಾಟಕ್ಕೂ ಕಾರಣವಾಗಿದೆ. ಒಂದೇ ವೇದಿಕೆಯಲ್ಲಿ ಕುಳಿತುಕೊಳ್ಳದಷ್ಟು ದೂರ ಮಾಡಿದೆ.

ಯಾರು ಅಭ್ಯರ್ಥಿಯಾದರೆ ಯಾರು ‘ಕೈ’ ಕೊಡುತ್ತಾರೆ, ಸಕ್ರಿಯವಾಗಿ ಕೆಲಸ ಮಾಡುತ್ತಾರೆ ಎನ್ನುವ ಚರ್ಚೆ ಪಕ್ಷದಲ್ಲಿದೆ.

ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಎನ್ನುವಂತೆ ಯಾವ ಅಭ್ಯರ್ಥಿಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಚುನಾವಣೆ ಎದುರಿಸಲಿದೆ ಎನ್ನುವ ಕುತೂಹಲ ಆ ಪಕ್ಷದ ಕಾರ್ಯಕರ್ತರಲ್ಲಿಯೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT