ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು–ಬೇಲೂರು ರೈಲು ಮಾರ್ಗ: ಕಾಮಗಾರಿ ಚುರುಕು

ಆರಂಭವೇ ಆಗದ ಬೇಲೂರು–ಹಾಸನ ನಡುವಿನ ಭೂಸ್ವಾಧೀನ ಪ್ರಕ್ರಿಯೆ
Published 13 ಸೆಪ್ಟೆಂಬರ್ 2023, 5:50 IST
Last Updated 13 ಸೆಪ್ಟೆಂಬರ್ 2023, 5:50 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಹಾಸನ ಮತ್ತು ಚಿಕ್ಕಮಗಳೂರು ನಡುವಿನ ನೇರ ರೈಲು ಮಾರ್ಗ ನಿರ್ಮಾಣ ಯೋಜನೆಯ ಮೊದಲ ಹಂತದ ಸಿವಿಲ್ ಕಾಮಗಾರಿ ಆರಂಭವಾಗಿದೆ. ಚಿಕ್ಕಮಗಳೂರು ಭಾಗದಲ್ಲಿ ಒಂಬತ್ತು ಕಿಲೋ ಮೀಟರ್‌ ಮಾರ್ಗದ ಕಾಮಗಾರಿ ಚುರುಕುಗೊಂಡಿದೆ. ಆದರೆ, ಬೇಲೂರು–ಹಾಸನ ನಡುವಿನ ಭೂಸ್ವಾಧೀನ ಪ್ರಕ್ರಿಯೆಯೇ ಇನ್ನೂ ಆರಂಭವಾಗಿಲ್ಲ.

ಚಿಕ್ಕಮಗಳೂರು–ಹಾಸನ ನಡುವೆ 54 ಕಿಲೋ ಮೀಟರ್ ಉದ್ದದ ರೈಲು ಮಾರ್ಗ ನಿರ್ಮಾಣದ ಯೋಜನೆಗೆ ರೈಲ್ವೆ ಮಂಡಳಿ 2019–20ರಲ್ಲಿ ಅನುಮೋದನೆ ನೀಡಿದೆ. ಒಟ್ಟು ₹748.85 ಕೋಟಿ ಮೊತ್ತದ ಯೋಜನೆಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರದ ತಲಾ ಶೇ 50ರಷ್ಟು ಪಾಲುದಾರಿಕೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ, ಅಗತ್ಯದಷ್ಟು ಜಾಗವನ್ನು ಉಚಿತವಾಗಿ ರೈಲ್ವೆ ಇಲಾಖೆಗೆ ಹಸ್ತಾಂತರಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿ.

ಮೊದಲ ಹಂತದಲ್ಲಿ ಚಿಕ್ಕಮಗಳೂರು–ಹಾದಿಹಳ್ಳಿ ನಡುವಿನ 9 ಕಿಲೋ ಮೀಟರ್ ಮಾರ್ಗಕ್ಕೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಜಿಲ್ಲಾಡಳಿತ ಅಷ್ಟೂ ಜಾಗವನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಿದೆ. ಈಗ ಸಿವಿಲ್ ಕಾಮಗಾರಿ ಆರಂಭವಾಗಿದ್ದು, 2024ರ ಮಾರ್ಚ್‌ ವೇಳೆಗೆ ಒಂಬತ್ತು ಕಿಲೋ ಮೀಟರ್‌ ಮಾರ್ಗದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ರೈಲ್ವೆ ಇಲಾಖೆ ಕಾಲಾವಕಾಶ ನೀಡಿದೆ.

ಹಾದಿಹಳ್ಳಿ–ಬೇಲೂರು ನಡುವಿನ 13 ಕಿಲೋ ಮೀಟರ್ ಮಾರ್ಗಕ್ಕೆ 179 ಎಕರೆ 7 ಗುಂಟೆ ಭೂಮಿ ಅಗತ್ಯವಿದ್ದು, 106 ಎಕರೆ 5 ಗುಂಟೆ ಜಾಗದ ಭೂಸ್ವಾಧೀನ ಪ್ರಕ್ರಿಯೆಯನ್ನು ಕಂದಾಯ ಇಲಾಖೆ ಪೂರ್ಣಗೊಳಿಸಿದೆ. ಶೇ 59ರಷ್ಟು ಜಾಗ ‌‌ರೈಲ್ವೆ ಇಲಾಖೆಗೆ ಹಸ್ತಾಂತರ ಕೂಡ ಆಗಿದೆ. ಆದರೆ, ಶೇ 90ರಷ್ಟು ಜಾಗ ಲಭ್ಯವಾಗುವ ತನಕ ರೈಲ್ವೆ ಇಲಾಖೆ ಕಾಮಗಾರಿ ಆರಂಭಿಸುವುದಿಲ್ಲ. 162 ಎಕರೆಯಷ್ಟು ಜಾಗ ಹಸ್ತಾಂತರವಾದರೆ ಸಿವಿಲ್ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ಹೇಳುತ್ತಾರೆ.

ಹಾದಿಹಳ್ಳಿ– ಬೇಲೂರು ನಡುವಿನ ಮಾರ್ಗಕ್ಕೆ ಇಪಿಸಿ(ಎಂಜಿನಿಯರಿಂಗ್, ಪ್ರಕ್ಯೂರ್‌ಮೆಂಟ್‌ ಆ್ಯಂಡ್ ಕನ್‌ಸ್ಟ್ರಕ್ಷನ್) ಮಾದರಿಯಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಿ 2026ರ ಮಾರ್ಚ್ ವೇಳೆಗೆ ಕಾಮಗಾರಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ಅವರು ವಿವರಿಸುತ್ತಾರೆ.

ಬೇಲೂರು–ಹಾಸನ ನಡುವಿನ 32 ಕಿಲೋ ಮೀಟರ್ ಮಾರ್ಗಕ್ಕೆ 554 ಎಕರೆ ಜಾಗ ಅಗತ್ಯವಿದೆ. ಹಾಸನದ ವಿಶೇಷ ಭೂಸ್ವಾಧೀನಾಧಿಕಾರಿ ಮೂಲಕ ಸರ್ವೆ ಮತ್ತು ಭೂಸ್ವಾಧೀನ ನಡೆಯಬೇಕಿದೆ. ಸರ್ವೆ ಕಾರ್ಯ ಮುಗಿದಿದ್ದು, ಭೂಸ್ವಾಧೀನ ಪ್ರಕ್ರಿಯೆ ಇನ್ನಷ್ಟೇ ಆರಂಭವಾಗಬೇಕಿದೆ. ಶೇ 90ರಷ್ಟು ಜಾಗ ಸ್ವಾಧೀನವಾದ ಬಳಿಕವೇ ಟೆಂಟರ್ ಪ್ರಕ್ರಿಯೆ ಆರಂಭವಾಗಲಿದೆ. ಆದ್ದರಿಂದ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಆರಂಭಿಸಿ ಪೂರ್ಣಗೊಳಿಸಬೇಕು ಎಂಬುದು ಸ್ಥಳೀಯರ ಒತ್ತಾಯ.

‘ಚಿಕ್ಕಮಗಳೂರು– ಬೇಲೂರು ತನಕದ ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ. ಬೇಲೂರು–ಹಾಸನ ನಡುವಿನ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲು ‌ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಹಾಸನದ ವಿಶೇಷ ಭೂಸ್ವಾಧೀನಾಧಿಕಾರಿ ಮಂಜುನಾಥ್ ತಿಳಿಸಿದರು.

ಅಂಕಿ– ಅಂಶ 54 ಕಿ.ಮೀಚಿಕ್ಕಮಗಳೂರು–ಹಾಸನ ರೈಲು ಮರ್ಗದ ಉದ್ದ ₹748.85 ಕೋಟಿಯೋಜನೆಯ ಒಟ್ಟು ಮೊತ್ತ 50:50ರಾಜ್ಯ ಮತ್ತು ಕೇಂದ್ರ ಸರ್ಕಾರದ ಪಾಲುದಾರಿಕೆ

ಪ್ರವಾಸೋದ್ಯಮಕ್ಕೆ ಅನುಕೂಲ

ಚಿಕ್ಕಮಗಳೂರು–ಹಾಸನ ನಡುವೆ ರೈಲು ಕಾರ್ಯಚರಣೆಯಾದರೆ ಜಿಲ್ಲೆಯ ಅಭಿವೃದ್ಧಿ ಮತ್ತು ಪ್ರವಾಸೋದ್ಯಮಕ್ಕೆ ಅನುಕೂಲ ಆಗಲಿದೆ.  ಹಾಸನ–ಬೆಂಗಳೂರು ಮತ್ತು ಹಾಸನ–ಮೈಸೂರು ನಡುವೆ ನೇರ ರೈಲು ಮಾರ್ಗ ಇದ್ದು ಹಾಸನ–ಚಿಕ್ಕಮಗಳೂರು ನಡುವೆ ರೈಲು ಮಾರ್ಗ ನಿರ್ಮಾಣವಾದರೆ ಚಿಕ್ಕಮಗಳೂರು–ಬೆಂಗಳೂರು ಚಿಕ್ಕಮಗಳೂರು–ಮೈಸೂರು ನಡುವೆ ನೇರ ರೈಲು ಮಾರ್ಗ ನಿರ್ಮಾಣವಾದಂತೆ ಆಗಲಿದೆ. ‘ಜಿಲ್ಲೆಯನ್ನು ಕರ್ನಾಟಕದ ಸ್ವಿಡ್ಜರ್ಲೆಂಡ್ ಕರ್ನಾಟಕದ ಕಾಶ್ಮೀರ ಎಂದು ಕರೆಯಲಾಗುತ್ತದೆ. ರೈಲು ಸಂಪರ್ಕ ಹೆಚ್ಚಾದರೆ ಜಿಲ್ಲೆಯ ಪ್ರವಾಸಿ ತಾಣಗಳನ್ನು ಎಲ್ಲರೂ ಸವಿಯಲು ಅನುಕೂಲ ಆಗಲಿದೆ. ಆರಂಭವಾಗಿರುವ ಕಾಮಗಾರಿ ಚುರುಕಾಗಬೇಕು’ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ. ಶಾಂತವೀರಪ್ಪ ಒತ್ತಾಯಿಸಿದರು. ‘ಕಡೂರಿಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಸಾಂಕೇತಿಕವಾಗಿ ಒಂದು ರೈಲು ಮಾತ್ರ ಕಾರ್ಯಾಚರಣೆ ಮಾಡುತ್ತಿದೆ. ನೂರಾರು ಕೋಟಿ ವೆಚ್ಚ ಮಾಡಿ ನಿರ್ಮಿಸಿದ ರೈಲು ಹಳಿ ಮತ್ತು ನಿಲ್ದಾಣಗಳು ಉಪಯೋಗಕ್ಕೆ ಬಾರದಂತಾಗಿವೆ. ಆದ್ದರಿಂದ ಬೆಂಗಳೂರಿಗೆ ಎಕ್ಸ್‌‍ಪ್ರೆಸ್ ರೈಲು ಅಥವಾ ಸ್ಲೀಪರ್ ರೈಲು ಕಾರ್ಯಾಚರಣೆ ಮಾಡಿದರೆ ಅನುಕೂಲ ಆಗಲಿದೆ’ ಎಂದರು.

ಹೆಚ್ಚುವರಿ ರೈಲಿಗೆ ಬೇಡಿಕೆ: ಪರಿಶೀಲನೆ

ಚಿಕ್ಕಮಗಳೂರಿಗೆ ಸದ್ಯ ಕಡೂರಿನಿಂದ ಒಂದು ರೈಲು ಬಂದು ಹೋಗುತ್ತಿದ್ದು ಹೆಚ್ಚುವರಿ ರೈಲುಗಳ ಕಾರ್ಯಾಚರಣೆ ಆರಂಭಿಸಬೇಕು ಎಂಬ ಬೇಡಿಕೆ ಇದೆ. ರಾತ್ರಿ 8.40 ಗಂಟೆ ವೇಳೆಗೆ ಚಿಕ್ಕಮಗಳೂರು ನಿಲ್ದಾಣಕ್ಕೆ ಶಿವಮೊಗ್ಗದಿಂದ ಬರುವ ರೈಲು ಬೆಳಿಗ್ಗೆ 6.40 ಗಂಟೆಗೆ ಹೊರಡಲಿದೆ. ಈ ರೈಲು ಹೊರತುಪಡಿಸಿ ಬೇರೆ ರೈಲು ಇಲ್ಲ. ಹೆಚ್ಚುವರಿ ರೈಲುಗಳ ಕಾರ್ಯಾಚರಣೆ ಆರಂಭಿಸಬೇಕು ಎಂಬುದು ಸ್ಥಳೀಯರ ಒತ್ತಾಯ. ‘ಪ್ರಯಾಣಿಕರ ಬೇಡಿಕೆ ಮತ್ತು ಕಾರ್ಯಾಚರಣೆಯ ಕಾರ್ಯಸಾಧ್ಯತೆ ನೋಡಿಕೊಂಡು ನಿರ್ಧಾರ ಕೈಗೊಳ್ಳಲಾಗುವುದು’ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನಿಶ್ ಹೆಗಡೆ ‘‍ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT