ಮಂಗಳವಾರ, ಜನವರಿ 21, 2020
23 °C
ಚಿಕ್ಕಮಗಳೂರು ಜಿಲ್ಲಾ ಸಮ್ಮೇಳನದ ದಿಕ್ಸೂಚಿ ಭಾಷಣ

ಬಾಯಿ ಮುಚ್ಚಿಸಲು ‘ನಕ್ಸಲೈಟ್‌ ಲೆಬಲ್’: ಸಾಹಿತಿ ಕುಂ.ವೀರಭದ್ರಪ್ಪ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶೃಂಗೇರಿ (ಚಿಕ್ಕಮಗಳೂರು): ‘ಯಾರನ್ನಾದರು ಸುಲಭವಾಗಿ ಮಟ್ಟಹಾಕಲು ನಕ್ಸಲೈಟ್‌ ಎಂಬ ಲೆಬಲ್‌ ಅಂಟಿಸುವ ಪರಿಪಾಠ ಬೆಳೆದಿದೆ. ಇಂಥ ಲೆಬಲ್‌ ಅಂಟಿಸಿ ಯಾರನ್ನು ಬೇಕಾದರೂ ಬಾಯಿಮುಚ್ಚಿಸುವ ಕೆಲಸವನ್ನು ಸರ್ಕಾರಗಳು ಮಾಡುತ್ತಿವೆ’ ಎಂದು ಸಾಹಿತಿ ಕುಂ.ವೀರಭದ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಲಂಚ ಪಡೆದು ಭ್ರಷ್ಟ ಭಕ್ತರಿಗೆ ಆಶೀರ್ವಾದ ಮಾಡುವ ದೇವರುಗಳನ್ನು ನಂಬಲ್ಲ ಎಂದು ಕುವೆಂಪು ಹೇಳಿದ್ದರು, ಅವರು ನಕ್ಸಲೈಟಾ? ನೆಲದ ತಲ್ಲಣಗಳಿಗೆ ಸ್ಪಂದಿಸದವ ಲೇಖಕ ಅಲ್ಲ ಎಂದು ಲಂಕೇಶ ಹೇಳಿದ್ದರು, ಅವರು ನಕ್ಸಲೈಟಾ ಎಂದು ಪ್ರಶ್ನಿಸಿದರು.

‘ಸಾವರ್ಕರ್‌ ಅಥವಾ ಗೋಳವಾಳ್ಕರ್‌ ಅವರ ಪ್ರತಿನಿಧಿಗಳಾಗಿ ಕೆಲ ಮಂದಿ ಕೂಗಾಡಿದರೆ ಸಮ್ಮೇಳನ ನಿಲ್ಲಿಸಲು ಸಾಧ್ಯ ಇಲ್ಲ. 18ನೇ ಶತಮಾನದಲ್ಲಿ ಪೇಶ್ವೆ ಪಟವರ್ಧನ್‌ ಎಂಬವರು ಶೃಂಗೇರಿಗೆ ದಾಳಿ ಮಾಡಿ ಲೂಟಿ ಮಾಡಿದ್ದಾರೆ. ಗುರುಗಳನ್ನು ಅಟ್ಟಾಸಿದ್ದರು. ಅವರು ನಕ್ಸಲೈಟಾ? ಅಥವಾ ಶಾರದಾಂಬೆಗೆ ಎಲ್ಲ ರೀತಿಯ ಸಂರಕ್ಷಣೆ ನೀಡಿದ ಅದೇ ಗುರುಗಳನ್ನು ಪುನಃ ಪ್ರತಿಷ್ಠಾಪಿಸಿದ ಟಿಪ್ಪು ನಕ್ಸಲೈಟಾ? ಎಂಬುದನ್ನು ನೀವೇ ತೀರ್ಮಾನಿಸಿ’ ಎಂದು ವಿಶ್ಲೇಷಿಸಿದರು.

‘ದೇಶದಲ್ಲಿ ಸತ್ತ ಆತ್ಮಗಳು ಶಾಂತವಾಗುವುದಿಲ್ಲ. ಯಾರೊಳಗೆ ಹೊಕ್ಕು ಏನೇನು ಕೆಲಸ ಮಾಡೋಣ ಎಂದು ಅಲೆಯುತ್ತಿರುತ್ತವೆ. ಪ್ರೇತಗಳ ಕೆಲಸವೇ ಕಾಡುವುದು. ಸಣ್ಣಪುಟ್ಟ ಪ್ರೇತಗಳು ಮಹಿಳೆಯರ ದೇಹ ಹೊಕ್ಕಿದರೆ, ಫೇಮಸ್‌ ಪ್ರೇತಗಳು ಪುರುಷರ ದೇಹ ಹೊಕ್ಕುತ್ತವೆ. ಪ್ರೇತ ಗಳಲ್ಲಿ ಪ್ರಸಿದ್ಧವಾಗಿರುವ ಪ್ರೇತಗಳು ಸಾರ್ವಕರ್‌, ಗೋಳವಾಳ್ಕರ್‌, ನಾಥೂರಾಮ್‌ ಗೋಡ್ಸೆ ಪ್ರೇತಗಳಾಗಿ ರಬಹುದು. ಅವು ಆರ್‌ಎಸ್‌ಎಸ್‌, ಭಜರಂಗದಳ, ಹಿಂದುತ್ವವಾದಿಗಳಲ್ಲಿ ಹೊಕ್ಕಿಕೊಂಡು ದೇಶವನ್ನು ಅಂಡಾ ವರಣ ಮಾಡುತ್ತಿರಬಹುದು’ ಎಂದು ಸಭಿಕರನ್ನು ನಗೆಗಡಲಿನಲ್ಲಿ ತೇಲಿಸಿದರು.

‘ಕನ್ನಡ ಸಾಹಿತ್ಯ ಶ್ರೀಮಂತಗೊಳಿ ಸಿರುವುದು ಎಡಪಂಥೀಯ ಲೇಖಕರು. ಗ್ರಾಮೀಣ ಹಿನ್ನೆಲೆಯ ಲೇಖಕರು. ಪಟ್ಟಣ ವಾಸಿಗಳಲ್ಲ, ವಿಶ್ವ ವಿದ್ಯಾಲಯಗಳಿರುವವರಲ್ಲ’ ಎಂದು ವಿಶ್ಲೇಷಿಸಿದರು.

‘ಸಿ.ಟಿ.ರವಿ ಅವರು ಎಸ್‌ಎಫ್‌ಐ ಗರಡಿಯಲ್ಲಿ ಬೆಳೆದವರು. ಅವರಿಗೆ ಸಾವ ರ್ಕರ್‌ ಪ್ರೇತ ಹೊಕ್ಕಿದೆಯೋ ಅಥವಾ ಗೋಳವಾಳ್ಕರ್‌ ಪ್ರೇತ ಹೊಕ್ಕಿದೆ ಯೋ ಗೊತ್ತಿಲ್ಲ. ಎರಡೂ ಹೊಕ್ಕಿಕೊಂಡಿರ ಬಹುದು. ಶೋಭಾ ಕರಂದ್ಲಾಜೆ ಅವರ ದೇಹದಲ್ಲಿ ಹೊಕ್ಕಿರುವ ಪ್ರೇತ ಯಾವುದೆಂಬುದು ಇನ್ನು ನಿಖರವಾಗಿಲ್ಲ’ ಎಂದು ವ್ಯಂಗ್ಯವಾಡಿದರು.

‘ಕಲಿತ ಕನ್ನಡಕ್ಕೆ ಗೌರವಿಸುವುದು ಸಚಿವರ ಲಕ್ಷಣ. ಮನೆಹಾಳ ಸಾಹಿತಿ ಗಳನ್ನು ಹೊರಗಿಡಿ ಎಂದು ಸಿ.ಟಿ.ರವಿ ಹೇಳಿದ್ದರು. ಮನೆ ಹಾಳ ಸಾಹಿತಿಗಳು ಎಂದರೆ ಯಾರು? ಅವರ ಪ್ರಕಾರ ಜನರ ಪರವಾಗಿ ಮಾತಾಡುವವರು ಮನೆಹಾಳ ಸಾಹಿತಿಗಳು’ ಎಂದರು.

‘ಕನ್ನಡ ಸಾಹಿತ್ಯವು ಶ್ರಮಜೀವಿಗಳಿಂದ ಉಳಿದಿದೆ. ನಾವೆಲ್ಲ ಕೃಷಿಕರು, ಕಾರ್ಮಿಕರ ಮಕ್ಕಳು, ನಾವೇ ನಿಜವಾದ ಕನ್ನಡ ಸಾಹಿತ್ಯದ ವಾರಸುದಾರರು’ ಎಂದರು.

‘ಪ್ರತಿಭಟನೆ, ಪ್ರತಿರೋಧ, ಒತ್ತಡಗಳಿರುವಲ್ಲಿ ಕನ್ನಡ ಸಾಹಿತ್ಯ ಬೆಳೆದಿದೆ. ‘ಪರ್ವ’ದ ಬಗ್ಗೆ ಈಚೆಗೆ ಒಂದು ಪರ್ವ ಮಾಡಿದರು. ‘ಪರ್ವ’ ಕೃತಿಕಾರರಂಥ ಸಾಹಿತಿಗಳಿಂದ ಕನ್ನಡ ಸಾಹಿತ್ಯ ಬೆಳೆಯಲು ಸಾಧ್ಯ ಇಲ್ಲ. ಬೀದಿಯಲ್ಲಿದ್ದು ಬರೆದರೆ ಮಾತ್ರ ಒಳ್ಳೆಯ ಸಾಹಿತಿಯಾಗಲು ಸಾಧ್ಯ’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು