ಸೋಮವಾರ, 8 ಡಿಸೆಂಬರ್ 2025
×
ADVERTISEMENT
ADVERTISEMENT

ಚಿಕ್ಕಮಗಳೂರು | ನದಿಗಳ ಕಲುಷಿತ ನಿರಂತರ

Published : 8 ಡಿಸೆಂಬರ್ 2025, 6:26 IST
Last Updated : 8 ಡಿಸೆಂಬರ್ 2025, 6:26 IST
ಫಾಲೋ ಮಾಡಿ
Comments
ಮೂಡಿಗೆರೆ ಸಂತೆ ಮೈದಾನದ ಬಳಿ ಇರುವ ಭದ್ರಾ ನದಿಯ ಉಪನದಿ ಹುಲುಗಿ ಹಳ್ಳದ ಬಳಿ ತ್ಯಾಜ್ಯ
ಮೂಡಿಗೆರೆ ಸಂತೆ ಮೈದಾನದ ಬಳಿ ಇರುವ ಭದ್ರಾ ನದಿಯ ಉಪನದಿ ಹುಲುಗಿ ಹಳ್ಳದ ಬಳಿ ತ್ಯಾಜ್ಯ
ಮಲೀನ ನೀರು ನದಿಗೆ ತರೀಕೆರೆ:
ಲಕ್ಕವಳ್ಳಿ ಬಳಿ ಹಾದು ಹೋಗಿರುವ ಭದ್ರಾ ನದಿ ಪಾತ್ರದಿಂದ ಹಲವು ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಈ ನದಿ ಪಾತ್ರದಿಂದ ಕುಡಿಯುವ ನೀರು ಸರಬರಾಜು ಮಾಡುವ ಪಂಪ್‌ಹೌಸ್‌ಗೆ ಜಲಾಶಯದ ಮುಂಭಾಗದಲ್ಲಿ ಇರುವ ಮೀನು ಸಾಕಾಣಿಕೆ ಕೇಂದ್ರದಿಂದ ಬಳಿಸಿದ ನಂತರ ಮಲೀನಗೊಂಡಿರುವ ತ್ಯಾಜ್ಯ ನೀರನ್ನು ನದಿಗೆ ಹರಿಸಲಾಗಿತ್ತಿದೆ ಎಂದು ಲಕ್ಕವಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು ಆರೋಪಿಸಿದ್ದಾರೆ. ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಭದ್ರಾ ಬಲದಂಡೆ ನಿರಾವರಿ ಇಲಾಖೆ ಅಧಿಕಾರಿಗಳಿಗೆ ಶಾಸಕರ ಸಚಿವರ ಹಾಗೂ ಸಂಸದರ ಗಮನಕ್ಕೆ ತಂದಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎಂಬುದು ಗ್ರಾಮಸ್ಥರ ದೂರು. ಈ ರೀತಿ ಕಲುಷಿತಗೊಂಡಿರುವ ನೀರನ್ನು ಶುದ್ಧಿಕರಿಸದೇ ನೇರವಾಗಿ ಕುಡಿಯಲು ಪೂರೈಕೆ ಮಾಡಲಾಗುತ್ತಿದೆ. ಶುದ್ಧೀಕರಣ ಘಟಕ ನಿರ್ಮಿಸಲು ಸರ್ಕಾರದಿಂದ ₹50 ಲಕ್ಷ ಮಂಜೂರಾಗಿತ್ತು. ಕಾಮಗಾರಿ ಅರ್ಧದಲ್ಲೆ ನಿಂತಿದ್ದು ಉಪಕರಗಳು ತುಕ್ಕು ಹಿಡಿದು ಹಾಳಾಗಿವೆ ಎಂದು ವಿವರಿಸುತ್ತಾರೆ.
ತ್ಯಾಜ್ಯ ನೀರು ನೇರ ನದಿಗೆ ಕೊಪ್ಪ:
ತಾಲ್ಲೂಕಿನ ಹರಿಹರಪುರದಲ್ಲಿ ಹರಿಯುತ್ತಿರುವ ತುಂಗಾ ನದಿ ನೀರಿನ ಒಡಲು ಸೇರುತ್ತಿರುವ ತ್ಯಾಜ್ಯ ಹಾಗೂ ಕಲುಷಿತ ನೀರಿನಿಂದ ಮಲೀನಗೊಳ್ಳುತ್ತಿದೆ. ಪಟ್ಟಣ ವ್ಯಾಪ್ತಿಯ ಒಂದು ಕೇಂದ್ರ ಬಿಂದುವಿನ ಸುತ್ತ ಇಳಿಜಾರು ಪ್ರದೇಶದಿಂದ ಕೂಡಿದ್ದು ಕಲುಷಿತ ನೀರು ಮುಸುರೆ ಹಳ್ಳವನ್ನು(ಬ್ರಾಹ್ಮಿ ನದಿ) ಸೇರಿ ಆ ಮೂಲಕ ತೀರ್ಥಹಳ್ಳಿ ತಾಲ್ಲೂಕು ಮೃಗವಧೆ ಸಮೀಪ ತುಂಗಾ ನದಿ ಸೇರುತ್ತಿದೆ. ಮೀನು ಮಾಂಸ ಮಾರುಕಟ್ಟೆಯಲ್ಲಿ ಡ್ರೈಫಿಟ್ ಅಳವಡಿಸದಿರುವುದರಿಂದ ಕಲುಷಿತ ನೀರು ನೇರವಾಗಿ ಹಳ್ಳ ಸೇರುತ್ತಿದೆ. ಸಿಗದಾಳು ಘಾಟಿಯಲ್ಲಿರುವ ತ್ಯಾಜ್ಯ ಸಂಗ್ರಹಣ ಘಟಕದಿಂದ ಉಂಟಾಗುವ ಕಲುಷಿತ ನೀರು ಇಳಿಜಾರು ಪ್ರದೇಶದ ಮೂಲಕ ಹರಿಹರಪುರದ ಬಳಿ ತುಂಗಾ ನದಿ ಸೇರುತ್ತದೆ. ಇಷ್ಟು ಮಾತ್ರವಲ್ಲದೆ ಹರಿಹರಪುರದ ಸೇತುವೆ ಕೆಳಗಡೆ ಕಸ ಸುರಿಯಲಾಗುತ್ತಿದೆ. ಇದು ನೇರವಾಗಿ ನೀರು ಸೇರಿ ಮಾಲಿನ್ಯ ಉಂಟು ಮಾಡುತ್ತಿದೆ.
ತುಂಗಾ ನದಿ ಸೇರುವ ಕಲುಷಿತ ನೀರು ಶೃಂಗೇರಿ:
ತುಂಗಾ ನದಿಗೆ ಕೊಳಚೆ ನೀರು ಸೇರಿ ಮಲೀನವಾಗುತ್ತಿದ್ದು ಇದೇ ನೀರು ಮತ್ತೆ ಪಟ್ಟಣ ಮತ್ತು ಬೇರೆ ಊರುಗಳ ಜನ ಬಳಕೆ ಮಾಡುವ ಸ್ಥಿತಿ ಇದೆ. ತಾಲ್ಲೂಕಿನ ರಾಜಾನಗರ ಗಿಣಿಗಿಣಿ ಹನುಮಂತನಗರ ಕುವೆಂಪು ಬಸ್ ನಿಲ್ದಾಣ ಕೆರೆದಂಡೆ ಪ್ರದೇಶಗಳ ಕೊಳಚೆ ನೀರು ಚರಂಡಿಯ ಮೂಲಕ ಎಕ್ಕನಹಳ್ಳದಿಂದ ತುಂಗಾನದಿ ಸೇರುತ್ತದೆ. ಇದೇ ನೀರು ಮತ್ತೆ ಇಡೀ ಪಟ್ಟಣಕ್ಕೆ ಕುಡಿಯುವ ನೀರಾಗಿ ಸರಬರಾಜಾಗುತ್ತಿದೆ. ಶಾರದಾ ಮಠದ ಊಟದ ಭವನದಲ್ಲಿ ಅನ್ನ ಬಸಿದ ನೀರು ಮತ್ತು ಪ್ರವಾಸಿಗರು ಊಟ ಮಾಡಿ ಕೈತೊಳೆದ ಕೋಳಚೆ ನೀರು ಪ್ರಸಾದದ ಅವಶೇಷಗಳು ಚರಂಡಿಯ ಮುಖಾಂತರ ತುಂಗಾ ನದಿ ಸೇರುವುದರಿಂದ ನದಿ ನೀರು ಕಲುಷಿತಗೊಳ್ಳುತ್ತಿದೆ. ಗಾಂಧಿ ಮೈದಾನದಲ್ಲಿರುವ ಮಠದ ಪ್ರವಾಸಿ ತಾಣಗಳು ಸುಲಭ ಶೌಚಾಲಯ ಕೊಳಕು ನೀರು ಹಳ್ಳದ ರೀತಿ ನದಿ ಸೇರುತ್ತಿದೆ. ಗಾಂಧಿ ಮೈದಾನದ ಸ್ನಾನ ಘಟ್ಟದಲ್ಲಿ ಸಾವಿರಾರು ಪ್ರವಾಸಿಗರು ರಾಸಾಯನಿಕ ಸೋಪ್ ಬಳಸಿ ನದಿಯಲ್ಲಿ ಸ್ನಾನ ಮಾಡುತ್ತಾರೆ. ಅವರು ಬಳಸಿದ ಪ್ಲಾಸ್ಟಿಕ್‍ ನದಿಗೆ ಎಸೆಯುವುದರಿಂದ ನದಿ ನೀರು ಹಾಳಾಗುತ್ತಿದೆ. ಕಟ್ಟೇಬಾಗಿಲು ಮಲ್ಲಿಕಾರ್ಜುನ ಬೀದಿ ಭಾರತೀ ಬೀದಿಯ ಎರಡು ಚರಂಡಿಗಳ ಕೊಳಚೆ ನೀರು ನೇರವಾಗಿ ತುಂಗಾ ನದಿಗೆ ಸೇರುತ್ತಿದೆ. ಮದಗಜಹಳ್ಳ ಗಿಣಿಗಿಣಿಹಳ್ಳದ ಕೊಳಚೆ ನೀರು ಪಟ್ಟಣದ ಶಾರದಾ ನಗರದಿಂದ ಕುರುಬಕೇರಿ ರಸ್ತೆಯ ಚರಂಡಿಯ ಮೂಲಕ ಎಂ.ಎಸ್.ಐ.ಎಲ್ ಮಧ್ಯದ ಅಂಗಡಿ ಹತ್ತಿರ ಕಪ್ಪು ಬಣ್ಣಕ್ಕೆ ತಿರುಗಿ ತುಂಗಾ ನದಿ ಸೇರುತ್ತಿದೆ. ಮಾಂಸದ ಅವಶೇಷಗಳು ಮಾಂಸ ತೊಳೆದ ಕೊಳಚೆ ನೀರು ಕೂಡ ನದಿ ಸೇರುತ್ತಿದೆ. ಈ ಕಲುಷಿತ ನೀರು ಪಟ್ಟಣಕ್ಕೆ ಮಾತ್ರವಲ್ಲದೆ ಮುಂದೆ ನದಿಯ ದಂಡೆಯಲ್ಲಿರುವ ಎಲ್ಲಾ ಗ್ರಾಮಗಳಿಗೆ ಪೂರೈಕೆಯಾಗುತ್ತಿದೆ. ಮಳೆಗಾಲದಲ್ಲಿ ನದಿಯ ಹರಿವು ಜಾಸ್ತಿ ಇರುವುದರಿಂದ ಅಷ್ಟಾಗಿ ಸಮಸ್ಯೆ ಕಾಣಿಸುವುದಿಲ್ಲ. ಬೇಸಿಗೆಯಲ್ಲಿ ಕಡಿಮೆ ನೀರು ಹರಿಯುವುದರಿಂದ ಕಲುಷಿತ ಪ್ರಮಾಣ ಹೆಚ್ಚಾಗುತ್ತಿದೆ. ಇದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಯ.
ಹೇಮಾವತಿ: ಕಲುಷಿತದ ಹಾದಿ ಹಲವು ಮೂಡಿಗೆರೆ:
ಜಾವಳಿಯಲ್ಲಿ ಉಗಮಗೊಂಡು ತಾಲ್ಲೂಕಿನಲ್ಲಿ 32 ಕಿಲೋ ಮೀಟರ್ ಹರಿದು ಸಕಲೇಶಪುರಕ್ಕೆ ಸಾಗುವ ಹೇಮಾವತಿ ನದಿ ಹಲವೆಡೆ ಕಲುಷಿತ‌ಗೊಳ್ಳುತ್ತಿದೆ. ಹೇಮಾವತಿಗೆ ತಾಲ್ಲೂಕಿನಲ್ಲಿ ಸೇರಿಕೊಳ್ಳುವ ಸುಂಡೇಕೆರೆ ಜಪಾವತಿ‌ ನದಿಗಳು ಪ್ರಮುಖ ಉಪನದಿಗಳಾಗಿದ್ದು ಸುಂಡೇಕೆರೆ ನದಿಯು ತ್ಯಾಜ್ಯದ ಕೂಪವಾಗಿ ಮಾರ್ಪಟ್ಟಿದೆ. ಪಟ್ಟಣದ ಜೆ.ಎಂ. ರಸ್ತೆ ಮಾರ್ಗವಾಗಿ ಹಾಗೂ ಗೆಂಡೆಹಳ್ಳಿ ರಸ್ತೆ ಬದಿಯಲ್ಲಿ ಹರಿಯುವ ರಾಜ ಕಾಲುವೆಗಳು ಇಡೀ ಪಟ್ಟಣದ ತ್ಯಾಜ್ಯ ನೀರನ್ನು ನಾಗರಿಕ ಸಮಾಜದ ಕಣ್ಣೇದುರೇ ಸುಂಡೇಕೆರೆ ನದಿಗೆ ಸೇರಿ ಅದು‌ ಮುಂದೆ ಹೇಮಾವತಿಯನ್ನು ಸಂಧಿಸುವಂತೆ ಮಾಡಿದೆ. ಪಟ್ಟಣದಲ್ಲಿ ಯುಜಿಡಿ ವ್ಯವಸ್ಥೆ ಇಲ್ಲದಿರುವುದರಿಂದ ಬಹುತೇಕ ತಗ್ಗು ಪ್ರದೇಶಗಳಲ್ಲಿ ಶೌಚ ಗುಂಡಿಯಿಂದ ಕೊಳಚೆ ನೀರು ನದಿಯನ್ನು ನಿರಾಯಾಸವಾಗಿ ಸೇರುತ್ತಿವೆ. ಕರಾವಳಿ ಮಲೆನಾಡಿನ‌ ನಡುವೆ ಸರಕು ಸಾಗಿಸುವ ವಾಹನಗಳನ್ನು ಬಣಕಲ್ ಪಟ್ಟಣದ ಬಳಿ ಹೇಮಾವತಿ ನದಿಯೊಳಗೆ ಇಳಿದು‌ ಶುಚಿಗೊಳಿಸಲಾಗುತ್ತಿದೆ. ವಾಹನ ಶುಚಿತ್ವದ ನೆಪದಲ್ಲಿ ವಾಹನದಲ್ಲಿ ಉಳಿದ‌ ಸತ್ತ ಕೋಳಿಗಳು ಮೀನಿನ ಅಂಗಡಿ ತ್ಯಾಜ್ಯ ನದಿಗೆ‌ ಬಿಡಲಾಗುತ್ತಿದೆ. ಬಣಕಲ್ ಗ್ರಾಮ ಪಂಚಾಯಿತಿಯಿಂದ ಲಾರಿಗಳು ಇಳಿಯದಂತೆ ಚರಂಡಿ ನಿರ್ಮಿಸಿ ತಡೆಯಲಾಗಿದೆ. ಆದರೂ ಬೆಂಗಳೂರಿನಿಂದ ಕೊಟ್ಟಿಗೆಹಾರಕ್ಕೆ ಬರುವ ಖಾಸಗಿ ಬಸ್‌ಗಳು ನದಿಯ ತೀರಕ್ಕೆ ಬಂದು ತೊಳೆಯುವುದು ಸಾಮಾನ್ಯವಾಗಿದೆ. ಕಾಫಿ ಪಲ್ಪರ್ ಸಮಯದಲ್ಲಿ ತ್ಯಾಜ್ಯದ ನೀರನ್ನು ಹೇಮಾವತಿ ನದಿಗೆ ಸೇರಿಸುವುದು ಕೂಡ ನಡೆಯುತ್ತಿದ್ದು ಪಲ್ಪರ್ ಸಂದರ್ಭದಲ್ಲಿ ಜಲಚರಗಳು‌ ಸತ್ತು ತೇಲುವ ಸುದ್ದಿ ಮರುಕಳಿಸುತ್ತಲೇ ಇವೆ. ಭದ್ರಾ ನದಿಯ ಉಪನದಿಯಾದ ಹುಲುಗಿ ನದಿ ಉಗಮಿಸುವುದು ಹಳ್ಳದ ಗಂಡಿಯಲ್ಲಿ. ಈ ನದಿಗೆ ಸಂತೆ ಮೈದಾನದ ಬಳಿಯಿರುವ ಸೇತುವೆಯು ಮಲೀನ‌ ತುಂಬುವ ಹೆಬ್ಬಾಗಿಲಾಗಿದ್ದು ಮನೆಯ ಕಸ ಪೂಜೆ ನಡೆಸಿದ ತ್ಯಾಜ್ಯ ವಾರದ ಸಂತೆಯಲ್ಲಿ ಮೀನಿನ ತ್ಯಾಜ್ಯ ಹಣ್ಣಿ‌ನ ಪದಾರ್ಥ ಹೋಟೆಲ್ ರಸ್ತೆ‌ ಬದಿಯ‌ ಕ್ಯಾಂಟೀನ್‌ಗಳಲ್ಲಿ‌ ಉಳಿದ ಆಹಾರ ಪದಾರ್ಥಗಳನ್ನು ಸೇತುವೆಯ ಮೇಲ್ಭಾಗದಿಂದ ಸುರಿಯುವುದು ನಿರಂತರವಾಗಿವೆ. ಸೇತುವೆ ಪ್ರದೇಶವು ಹೆಸ್ಗಲ್ ಗ್ರಾಮ ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿಯ ಗಡಿಭಾಗವಾಗಿದ್ದು ಮಲೀನ ತಡೆಗೆ ಗಡಿ ಎಂಬ ಸಬೂಬು ಅಡ್ಡಿಯಾಗಿದೆ. ಮಾಲಿನ್ಯ ತಡೆಯಬೇಕಿದ್ದ ಮಾಲಿನ್ಯ ನಿಯಂತ್ರಣ ಮಂಡಳಿಯು ಸಿಬ್ಬಂದಿ ಕೊರತೆಯ ನೆಪ ಹೇಳುತ್ತಿದೆ. ಇದರಿಂದ ನದಿಗಳ ಮಲೀನ ನಿರಂತರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT