ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ಜಿಲ್ಲಾ ಉತ್ಸವಕ್ಕೆ ಅಭಿವೃದ್ಧಿ ಅನುದಾನ ಬಳಸಲ್ಲ -ಸಿ.ಟಿ.ರವಿ

ಜಿಲ್ಲಾ ಹಬ್ಬದ ಪೂರ್ವಸಿದ್ಧತಾ ಸಭೆ
Last Updated 11 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಅಭಿವೃದ್ಧಿಯ ಅನುದಾನವನ್ನು ಜಿಲ್ಲಾ ಉತ್ಸವಕ್ಕೆ ಬಳಸುತ್ತಿಲ್ಲ, ಉತ್ಸವಕ್ಕಾಗಿಯೇ ಮೀಸಲಿಟ್ಟಿರುವ ಅನುದಾನವನ್ನು ಚಿಕ್ಕಮಗಳೂರು ಜಿಲ್ಲಾ ಹಬ್ಬಕ್ಕೆ ಬಳಸುತ್ತೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದರು.

ಚಿಕ್ಕಮಗಳೂರು ಜಿಲ್ಲಾ ಹಬ್ಬದ ಸಿದ್ಧತೆ ಕುರಿತು ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ನಮ್ಮ ಜಿಲ್ಲಾ ಜಾನಪದ ಜಾತ್ರೆಗೆ 77 ಲಕ್ಷ ಮೀಸಲಿಡಲಾಗಿದೆ. ಜಿಲ್ಲಾ ಉತ್ಸವಕ್ಕಾಗಿ ₹ 50 ಲಕ್ಷ ಮೀಸಲಿಡಲಾಗಿತ್ತು. ಪ್ರವಾಸೋದ್ಯಮ ಇಲಾಖೆಯಿಂದ ಉತ್ಸವಗಳಿಗೆ ನೀಡುವ ಅನುದಾನವನ್ನು ಜಿಲ್ಲಾ ಉತ್ಸವಕ್ಕೆ ವೆಚ್ಚ ಮಾಡುತ್ತೇವೆ’ ಎಂದು ಸ್ಪಷ್ಟಪಡಿಸಿದರು.

‘ಯಶಸ್ವಿಯಾಗಿ ಹಲವಾರು ಕಾರ್ಯಕ್ರಮ ಮಾಡಿರುವ ಡಾ.ಮೋಹನ್ ಆಳ್ವ ಅವರನ್ನು ಉತ್ಸವಕ್ಕೆ ಜೋಡಿಸಿದ್ದೇವೆ. ಆಳ್ವಾಅದದ ನುಡಿಸಿರಿ, ವಿರಾಸತ್‌ ಮೂಲಕ ಸಾಂಸ್ಕೃತಿಕ ಲೋಕಕ್ಕೆ ಹೊಸ ಆಯಾಮ ಪರಿಚಯಿಸಿದ್ದಾರೆ. ಉತ್ಸವ ಚೆನ್ನಾಗಿ ಆಯೋಜಿಸುವ ನಿಟ್ಟಿನಲ್ಲಿ ಅವರ ಸಾಥ್‌ ಪಡೆದಿದ್ದೇವೆ’ ಎಂದು ತಿಳಿಸಿದರು.

‘ಜಾನಪದ, ಪಾರಂಪರಿಕ, ನವ್ಯ ಈ ಮೂರರ ಸಂಗಮ ಉತ್ಸವದ ಉದ್ದೇಶ. ಇದು ಸಂಸ್ಕೃತಿಯ ಬೇರುಗಳನ್ನು ಗಟ್ಟಿಗೊಳಿಸುವ ಪ್ರಯತ್ನ’ ಎಂದರು.

‘ಚಿಕ್ಕಮಗಳೂರು ಹಬ್ಬಕ್ಕೆ ಕೆಲವರು ಆಕ್ಷೇಪಣೆ ಮಾಡಿದ್ದಾರೆ. ನೆರೆಯಿಂದ ನಲುಗಿದ ಬೆಳಗಾವಿ, ಕಲಬುರ್ಗಿ, ಬಳ್ಳಾರಿ ಜಿಲ್ಲೆಗಳಲ್ಲೂ ಉತ್ಸವಗಳನ್ನು ನಿಲ್ಲಿಸಿಲ್ಲ. ಸಾಮರ್ಥ್ಯ ಇದ್ದವರೆಲ್ಲರನ್ನೂ ಉತ್ಸವದ ಸಮಿತಿಗಳಿಗೆ ಜೋಡಿಸಿಕೊಳ್ಳಲು ಸೂಚಿಸಿದ್ದೇನೆ’ ಎಂದು ಹೇಳಿದರು.

ಶಾಸಕರಾದ ಟಿ.ಡಿ.ರಾಜೇಗೌಡ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ವಿಜಯಕುಮಾರ ಇದ್ದರು.

23ರಿಂದ ವಿವಿಧ ಕ್ರೀಡಾ ಸ್ಪರ್ಧೆ
ಜಿಲ್ಲಾ ಉತ್ಸವ ನಿಮಿತ್ತ ಇದೇ 23ರಿಂದ 25ರವರೆಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

23ರಂದು ಉತ್ಸವ ಥಾನ್‌ ಓಟ, ಕೆಸರುಗದ್ದೆ ಓಟ, ಹಗ್ಗಜಗ್ಗಾಟ, ನಿಧಿ ಹುಡುಕಾಟ, ಗಾಳಿಪಟ ಹಾರಿಸುವ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. 23 ಮತ್ತು 24ರಂದು ಚೆಸ್‌ ಸ್ಪರ್ಧೆ ನಡೆಯಲಿದೆ. 24ರಂದು ಷಟಲ್‌ ಬ್ಯಾಡ್ಮಿಂಟ್‌, ಟೆಕ್ವೆಂಡೊ, ಮಟ್ಟಿ ಕುಸ್ತಿ, ಮಹಿಳೆಯರಿಗೆ ವಿಧ ಸ್ಪರ್ಧೆಗಳು ಜರುಗಲಿವೆ. 24 ಮತ್ತು 25ರಂದು ಕಬಡ್ಡಿ, ವಾಲಿಬಾಲ್‌ ನಡೆಯಲಿದೆ. 25ರಂದು ಯೋಗ ಸ್ಪರ್ಧೆ, ದೇಹದಾರ್ಢ್ಯ ಸ್ಪರ್ಧೆ ಏರ್ಪಡಿಸಲಾಗಿದೆ. 24 ಮತ್ತು 26ರಂದು ‘ವಿಷನ್‌ 2030’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ಚಿಕ್ಕಮಗಳೂರು ಹಬ್ಬ ಇದೇ 28ರಂದು ಶುರುವಾಗಲಿದೆ. ಸಂಜೆ ಗಂಟೆಗೆ ಮೆರವಣಿಗೆ ನಡೆಯಲಿದೆ. 130 ಕಲಾ ತಂಡಗಳು ಪಾಲ್ಗೊಳ್ಳುತ್ತವೆ. ಸಂಜೆ 5.30ಕ್ಕೆ ಉದ್ಘಾಟನೆ ನಡೆಯಲಿದೆ. ಮೂರು ದಿನ ಸಿನಿಮೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ (ನಾಟಕೋತ್ಸವ, ನೃತ್ಯೋತ್ಸವ, ಸುಗಮ ಸಂಗೀತ) ಆಯೋಜಿಸಲಾಗಿದೆ. ಜನಪದ ಜಾತ್ರೆ, ಸಂಗೀತ ರಸಸಂಭ್ರಮ, ಆಳ್ವಾಸ್‌ ನುಡಿಸಿರಿ ವಿರಾಸತ್‌ನಿಂದ ಸಾಂಸ್ಕೃತಿಕ ವೈಭವ ಜರುಗಲಿವೆ. ಆಹಾರ ಮೇಳ, ವಸ್ತು ಪ್ರದರ್ಶನ ಏರ್ಪಡಿಸಲಾಗುವುದು’ ಎಂದರು.

ಸಭೆಯಲ್ಲಿ ವ್ಯಕ್ತವಾದ ಸಲಹೆಗಳು

* ಸ್ಥಳೀಯ ಪ್ರತಿಭೆಗಳಿಗೆ ಆದ್ಯತೆ ನೀಡಬೇಕು

* ಎತ್ತಿಗಾಡಿ ಸ್ಪರ್ಧೆ ಆಯೋಜಿಸಬೇಕು

* ಸಾಧಕರನ್ನು ಸನ್ಮಾನಿಸಬೇಕು

* ಪ್ರಚಾರಕ್ಕೆ ಒತ್ತು ನೀಡಬೇಕು

* ಪುಸ್ತಕ ಮೇಳ ಏರ್ಪಡಿಸಬೇಕು

* ಮಕ್ಕಳಿಗೆ ಸಂವಾದ ಆಯೋಜಿಸಬೇಕು

* ಚುನಾಯಿತ ಪ್ರತಿನಿಧಿಗಳ ಸ್ಪರ್ಧೆ ಏರ್ಪಡಿಸಬೇಕು

* ಕಲಾವಿದರನ್ನು ಕರೆತರಲು ವಾಹನ ಸೌಕರ್ಯ ಕಲ್ಪಿಸಬೇಕು

* ಸ್ತಬ್ಧಚಿತ್ರ ಮೆರವಣಿಗೆ ಆಯೋಜಿಸಬೇಕು

* ಮೂರು ದಿನ ಶಾಲೆಕಾಲೇಜುಗಳಿಗೆ ರಜೆ ಘೋಷಿಸಬೇಕು

*
ಲಂಬಾಣಿ ಸಂಸ್ಕೃತಿ ಮತ್ತು ಭಾಷೆ ಉಳಿಸುವ ನಿಟ್ಟಿನಲ್ಲಿ ಬಂಜಾರ ಅಕಾಡೆಮಿ ಸ್ಥಾಪನೆಗೆ ಮುಖ್ಯಮಂತ್ರಿಗೆ ಪ್ರಸ್ತಾವ ನೀಡಲಾಗುವುದು. ಈ ಬಾರಿ ಬಜೆಟ್‌ನಲ್ಲಿ ಘೋಷಣೆ ಮಾಡುವಂತೆ ಕೋರುತ್ತೇವೆ.
-ಸಿ.ಟಿ.ರವಿ, ಸಚಿವ

**

ಉತ್ಸವಕ್ಕೆ ಸಂಬಂಧಿಸಿದ ಟೀಕೆಟಿಪ್ಪಣಿಗಳಿಗೆ ತಲೆಕೆಡಿಸಿಕೊಳ್ಳಬೇಡಿ. ರಾಜಕಾರಣದಲ್ಲಿ ಟೀಕೆ ಸಾಮಾನ್ಯ. ಇದು ಒಳ್ಳೆಯ ಕಾರ್ಯಕ್ರಮ. ನಮ್ಮ ಎಲ್ಲ ರೀತಿಯ ಸಹಕಾರ ಇದೆ.
–ಟಿ.ಡಿ.ರಾಜೇಗೌಡ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT