ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು: ಬಿತ್ತನೆಗೆ ರೈತರು ಸಿದ್ಧ

Published 27 ಮೇ 2024, 5:53 IST
Last Updated 27 ಮೇ 2024, 5:53 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಬರಗಾಲಕ್ಕೆ ಸಿಲುಕಿ ನರಳಿದ್ದ ಕಾಫಿ ನಾಡಿಗೆ ಪೂರ್ವ ಮುಂಗಾರು ಜೀವ ಕಳೆ ತಂದಿದೆ. ಮಲೆನಾಡು ಮತ್ತು ಬಯಲು ಸೀಮೆ ಸೇರಿ ಎಲ್ಲೆಡೆ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ರೈತರು ಹುಮ್ಮಸ್ಸಿನಿಂದ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.

ಕಳೆದ ವರ್ಷ ಮುಂಗಾರು ತಡವಾಗಿ ಆರಂಭವಾಗಿತ್ತು. ಹಿಂಗಾರು ಕೂಡ ಕೈಕೊಟ್ಟಿತ್ತು. ಇದರಿಂದ ಮಲೆನಾಡಿನಲ್ಲೂ ಬರಗಾಲದ ಸ್ಥಿತಿ ಇತ್ತು. ಬೆಳೆ ಉಳಿಸಿಕೊಳ್ಳಲು ಜನ ಪರದಾಡಿದರು. ಬಿಸಿಲು ಹೆಚ್ಚಾಗಿ ದಾಖಲೆಯ ಉಷ್ಣಾಂಶ ಕೂಡ ದಾಖಲಾಗಿತ್ತು. 

ಈಗ ಮುಂಗಾರು ಪೂರ್ವ ಮಳೆ ಇಡೀ ವಾತಾವರಣವನ್ನು ಬದಲಿಸಿದೆ. ಜೀವನದಿಗಳು ಕಳೆ ಪಡೆದುಕೊಂಡಿದ್ದರೆ, ಕೆರೆ–ಕಟ್ಟೆಗಳಿಗೆ ನೀರು ಬಂದಿದೆ. ಇದು ರೈತರ ಹುರುಪು ಹೆಚ್ಚಿಸಿದೆ.

ಬಯಲು ಸೀಮೆ ಪ್ರದೇಶಗಳಾದ ಕಡೂರು, ಅಜ್ಜಂಪುರ, ತರೀಕೆರೆ ಮತ್ತು ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಮುಂಗಾರು ಪೂರ್ವದಲ್ಲಿ ಎಳ್ಳು, ಹೆಸರು, ಅಲಸಂದೆ, ಉದ್ದು, ನೆಲಗಡಲೆ, ಸೂರ್ಯಕಾಂತಿ ಬಿತ್ತನೆ ಮಾಡಲಾಗುತ್ತದೆ. ಬಿತ್ತನೆ ಕಾರ್ಯವನ್ನು ರೈತರು ಆರಂಭಿಸಿದ್ದಾರೆ.

ಒಟ್ಟು 98,300 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಿದೆ. 1,150 ಹೆಕ್ಟೇರ್‌ ಪ್ರದೇಶದಲ್ಲಿ ಅಲಸಂದೆ, 800 ಹೆಕ್ಟೇರ್ ಉದ್ದು, 1,900 ಹೆಕ್ಟೇರ್ ಹೆಸರು, 2,300 ಹೆಕ್ಟೇರ್ ನೆಲಗಡಲೆ, 2,700 ಹೆಕ್ಟೇರ್ ಎಳ್ಳು, 1,500 ಹೆಕ್ಟೇರ್ ಸೂರ್ಯಕಾಂತಿ ಬಿತ್ತನೆಯ ಗುರಿ ಇಟ್ಟುಕೊಂಡಿದೆ.‌ ಈಗಾಗಲೇ 2,971 ಹೆಕ್ಟೇರ್‌ನಲ್ಲಿ ವಿವಿಧ ಬೆಳೆಗಳ ಬಿತ್ತನೆಯಾಗಿದೆ.

ಮಳೆ ಬಿಡುವು ನೀಡಿರುವುದರಿಂದ ಮುಂದಿನ ದಿನಗಳಲ್ಲಿ ಬಿತ್ತನೆ ಕಾರ್ಯದಲ್ಲಿ ರೈತರು ತೊಡಗಿಕೊಳ್ಳಲಿದ್ದಾರೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ದಾಸ್ತಾನಿದ್ದು, ರೈತರು ಪಡೆದುಕೊಳ್ಳಬಹುದು ಎಂದು ಜಿಲ್ಲಾಡಳಿತ ತಿಳಿಸಿದೆ.

ಚಿಕ್ಕಮಗಳೂರು ತಾಲ್ಲೂಕಿನ ಮೂರು ರೈತ ಸಂಪರ್ಕ ಕೇಂದ್ರಗಳಲ್ಲಿ(ಲಕ್ಯಾ, ಅಂಬಳೆ, ಕಸಬಾ) 188 ಕ್ವಿಂಟಾಲ್, ಕಡೂರು ತಾಲ್ಲೂಕಿನ ಎಂಟು(ಬೀರೂರು, ಕಸಬಾ, ಸಖರಾಯಪಟ್ಟಣ, ಪಂಚನಹಳ್ಳಿ, ಯಗಟಿ, ಸಿಂಗಟಗೆರೆ, ಹಿರೇನಲ್ಲೂರು, ಚೌಳಹಿರಿಯೂರು) ಕೇಂದ್ರಗಳಲ್ಲಿ 510 ಕ್ವಿಂಟಾಲ್ ಮತ್ತು ತರೀಕೆರೆ ತಾಲ್ಲೂಕಿನ ಆರು(ಕಸಬಾ, ಲಿಂಗದಹಳ್ಳಿ, ಲಕ್ಕವಳ್ಳಿ, ಹುಣಸಘಟ್ಟ, ಅಜ್ಜಂಪುರ, ಶಿವನಿ) ಕೇಂದ್ರಗಳಲ್ಲಿ 264 ಕ್ವಿಂಟಾಲ್ ಸೇರಿ ಒಟ್ಟು 963 ಕ್ವಿಂಟಾಲ್ ದಾಸ್ತಾನಿದೆ ಎಂದು ಮಾಹಿತಿ ನೀಡಿದೆ. 

ಮಲೆನಾಡಿನಲ್ಲೂ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದು, ಕಾಫಿ ಗಿಡಗಳಿಗೆ ಗೊಬ್ಬರ ಹಾಕುವ ಕಾರ್ಯ ಚುರುಕಿನಿಂದ ಸಾಗಿದೆ. ಮಳೆ ಇಲ್ಲದೆ ಒಣಗುತ್ತಿದ್ದ ಕಾಫಿ ಗಿಡಗಳು ಈಗ ನಳನಳಿಸುತ್ತಿವೆ.

1.17 ಲಕ್ಷ ಟನ್ ಗೊಬ್ಬರ

2024-25ನೇ ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಗೆ ಒಟ್ಟು 117749 ಟನ್ ರಸಗೊಬ್ಬರ ಬೇಕಾಗುವ ಅಂದಾಜಿದೆ. ದಾಸ್ತಾನಿದ್ದ 53250 ಟನ್ ಗೊಬ್ಬರದ ಪೈಕಿ 13068 ಟನ್ ವಿತರಣೆ ಕೂಡ ಮಾಡಲಾಗಿದೆ. 40182 ಟನ್ ರಸಗೊಬ್ಬರ ದಾಸ್ತಾನಿದೆ ಎಂದು  ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡುತ್ತಾರೆ. 

ಶೇ 98ರಷ್ಟು ಅಧಿಕ

ಮಳೆ ‌ಮುಂಗಾರು ಪೂರ್ವ ಮಳೆ ಜಿಲ್ಲೆಯನ್ನು ವಾಡಿಕೆಗಿಂತ ಈ ಬಾರಿ ಶೇ 98ರಷ್ಟು ಅಧಿಕವಾಗಿ ಸುರಿದಿದೆ.‌  ಜಿಲ್ಲೆಯ ಒಟ್ಟು ಸರಾಸರಿ 14.3 ಸೆಂಟಿ ಮೀಟರ್ ಮಳೆಯಾಗಬೇಕಿದ್ದು 28.2 ಸೆಂಟಿ ಮೀಟರ್ ಮಳೆಯಾಗಿದೆ. ತಾಲ್ಲೂಕುವಾರು ಮಳೆ ಗಮನಿಸಿದರೆ ಶೃಂಗೇರಿ ಜಿಲ್ಲೆಯಲ್ಲಿ ಅತೀ ಹೆಚ್ಚು 34 ಸೆಂಟಿ ಮೀಟರ್ ಮಳೆಯಾಗಿದೆ. ವಾಡಿಕೆಯಂತೆ 17 ಸೆಂಟಿ ಮೀಟರ್ ಮಳೆಯಾಗಬೇಕಿತ್ತು. ಆದರೆ ವಾಡಿಕೆ ಮಳೆಗೆ ಹೋಲಿಸಿದರೆ ಅಜ್ಜಂಪುರ ತಾಲ್ಲೂಕಿನಲ್ಲಿ ಅತೀ ಹೆಚ್ಚು ವ್ಯತ್ಯಾಸವಾಗಿದೆ. ಅಜ್ಜಂಪುರ ತಾಲ್ಲೂಕಿನಲ್ಲಿ ವಾಡಿಕೆಯಂತೆ 10 ಸೆಂಟಿ ಮೀಟರ್ ಮಳೆಯಾಗಬೇಕಿತ್ತು. ಈಗಾಗಲೇ 24 ಸೆಂಟಿ ಮೀಟರ್ ಮಳೆಯಾಗಿದೆ. 14 ಸೆಂಟಿ ಮೀಟರ್ ಹೆಚ್ಚುವರಿ ಮಳೆಯಾಗಿದೆ. ಎನ್.ಆರ್‌.ಪುರ ತಾಲ್ಲೂಕಿನಲ್ಲಿ 12 ಸೆಂಟಿ ಮೀಟರ್ ಮಳೆಯಾಗಬೇಕಿತ್ತು. ಈಗಾಗಲೇ 30 ಸೆ.ಮೀ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT