ಶನಿವಾರ, ಆಗಸ್ಟ್ 20, 2022
21 °C
ಗರಿಗೆದರುತ್ತಿವೆ ಹೋಂ ಸ್ಟೇ, ರೆಸಾರ್ಟ್ ಉದ್ಯಮ

ಮಲೆನಾಡಿನತ್ತ ಹೊರ ಜಿಲ್ಲೆಯ ಪ್ರವಾಸಿಗರ ಚಿತ್ತ

ವಿಶೇಷ ವರದಿ Updated:

ಅಕ್ಷರ ಗಾತ್ರ : | |

Prajavani

ಮೂಡಿಗೆರೆ: ಲಾಕ್‌ಡೌನ್‌ನಿಂದ ಸ್ತಬ್ಧವಾಗಿದ್ದ ಪ್ರವಾಸೋದ್ಯಮದ ಚಟುವಟಿಕೆಗಳು ಈಗ ಗರಿಗೆದರ ತೊಡಗಿದ್ದು, ಪ್ರವಾಸಿಗರು ಮಲೆನಾಡಿನತ್ತ ಮುಖ ಮಾಡತೊಡಗಿದ್ದಾರೆ.

ತಾಲ್ಲೂಕಿನಲ್ಲಿ ಮಳೆಯಿಂದ ಝರಿ, ತೊರೆಗಳು ತುಂಬಿ ಹರಿಯುತ್ತಿರುವುದರಿಂದ ಪ್ರಾಕೃತಿಕ ಸೌಂದರ್ಯವನ್ನು ಸವಿಯಲು ಪ್ರವಾಸಿಗರು ಮುಂದಾಗುತ್ತಿದ್ದು, ಮಹಾನಗರಗಳಿಂದ ಹೋಂ ಸ್ಟೇ, ರೆಸಾರ್ಟ್‌ಗಳಿಗೆ ನಿಧಾನವಾಗಿ ಬರತೊಡಗಿದ್ದಾರೆ. ಲಾಕ್‌ಡೌನ್‌ಗೂ ಪೂರ್ವದಲ್ಲಿ ವಾರಾಂತ್ಯವಾದರೆ ಹೊಸ್ಕೆರೆ, ಭೈರಾಪುರ, ಜಪಾವತಿ, ದುರ್ಗದಹಳ್ಳಿ, ದೇವರುಂದ ಮುಂತಾದ ಕಡೆಗಳಲ್ಲಿ ಪ್ರವಾಸಿಗರ ದಂಡೇ ನೆರೆಯುತ್ತಿತ್ತು. ಆದರೆ, ಈಗ ಅಷ್ಟೊಂದು ಪ್ರಮಾಣದಲ್ಲಿಲ್ಲವಾದರೂ, ನಿಧಾನವಾಗಿ ಗರಿಗೆದರುತ್ತಿರುವುದು ಪ್ರವಾಸೋದ್ಯಮವನ್ನೇ ನಂಬಿಕೊಂಡ ಕುಟುಂಬಗಳಿಗೆ ನಿಟ್ಟುಸಿರು ಬಿಡುವಂತಾಗಿದೆ.

ರೆಸಾರ್ಟ್‌ನತ್ತ ಆಕರ್ಷಣೆ: ಮದುವೆ, ನಿಶ್ಚಿತಾರ್ಥ, ನಾಮಕರಣ ಸೇರಿದಂತೆ ಸಮಾರಂಭಗಳಿಗೆ ಜನಸಂದಣಿ ಸೇರಿಸುವಂತಿಲ್ಲದ ಕಾರಣ, ಕಲ್ಯಾಣ ಮಂಟಪಗಳಲ್ಲಿ ನಡೆಯುತ್ತಿದ್ದ ಮದುವೆ, ನಿಶ್ಚಿತಾರ್ಥ ನಾಮಕರಣದಂತಹ ಕಾರ್ಯಕ್ರಮಗಳೆಲ್ಲವೂ ರೆಸಾರ್ಟ್‌ಗಳಿಗೆ ಸ್ಥಳಾಂತರಗೊಂಡಿದ್ದು, ಅವುಗಳಿಗೆ ಬೇಡಿಕೆಯುಂಟಾಗಿದೆ. ಅಲ್ಲದೇ ಮಲೆನಾಡಿನಲ್ಲಿ ಹಲವು ರೆಸಾರ್ಟ್‌ಗಳು ಮದುವೆಗೆ ನಿಗದಿತ ಮೊತ್ತವನ್ನು ಸ್ವೀಕರಿಸಿ, ಊಟ, ವಸತಿ ಸೇರಿದಂತೆ ಸಂಪೂರ್ಣ ಹೊಣೆಹೊರುವ ಪದ್ಧತಿಯನ್ನು ಅನುಸರಿಸುತ್ತಿರುವುದರಿಂದ ಲಾಕ್‌ಡೌನ್ ತೆರವಾದ ಬೆನ್ನಲ್ಲೇ ಸಮಾರಂಭಗಳನ್ನು ನಡೆಸಲು ರೆಸಾರ್ಟ್‌ಗಳಿಗೆ ಜನರು ದುಂಬಾಲು ಬಿದ್ದಿರುವುದರಿಂದ ಪ್ರವಾಸೋದ್ಯಮಕ್ಕೆ ಜೀವ ಬಂದಂತಾಗಿದೆ.

ದೇವಾಲಯದತ್ತ ಭಕ್ತರ ದಂಡು: ಐದಾರು ತಿಂಗಳಿನಿಂದ ಮನೆಯಲ್ಲಿಯೇ ಕುಳಿತಿದ್ದ ಜನತೆ ದೇವಾಲಯಗಳತ್ತ ಮುಖ ಮಾಡಿರುವುದರಿಂದ ತಾಲ್ಲೂಕಿನ ಅಂಗಡಿ ಗ್ರಾಮದ ವಸಂತ ಪರಮೇಶ್ವರಿ ದೇವಾಲಯ, ದೇವರುಂದದ ಪ್ರಸನ್ನ
ರಾಮೇಶ್ವರ ದೇವಾಲಯ, ಭೈರಾಪುರದ ನಾಣ್ಯಭೈರವೇಶ್ವರ, ಮರಗುಂದದ ಬೆಟ್ಟದ ಭೈರೇಶ್ವರ, ದೇವರಮನೆಯ ಕಾಲಭೈರವೇಶ್ವರ ದೇವಾಲಯಗಳಲ್ಲಿ ಚಟುವಟಿಕೆ ಗರಿಗೆದರಿದೆ. ದೇವಾಲಯಗಳಿರುವ ಗ್ರಾಮಗಳಲ್ಲಿ ಪ್ರವಾಸಿಗರಿಂದ ವಹಿವಾಟು ಚಿಗುರುವಂತಾಗಿದೆ. ಬಹುತೇಕ ದೇವಾಲಯಗಳು ಸ್ಯಾನಿಟೈಸರ್, ಸುರಕ್ಷಿತ ಅಂತರ, ಮಾಸ್ಕ್ ನಂತಹ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತಿರುವುದರಿಂದ ಭಕ್ತರಲ್ಲೂ ಭಯದ ವಾತಾವರಣ ಕಣ್ಮರೆಯಾಗಿದ್ದು, ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

‘ಲಾಕ್‌ಡೌನ್ ಅವಧಿಯಲ್ಲಿ ಅನುಭವಿಸಲಾರದಷ್ಟು ಕಷ್ಟವನ್ನು ಅನುಭವಿಸಿದೆವು. ಹೋಂ ಸ್ಟೇ, ರೆಸಾರ್ಟ್‌ಗಳನ್ನೇ ನಂಬಿಕೊಂಡು ಸ್ವಚ್ಛತಾಗಾರರಿಂದ ವ್ಯವಸ್ಥಾಪಕರ ವರೆಗೂ ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿದ್ದವು. ಲಾಕ್‌ಡೌನ್‌ನಿಂದಾಗಿ ಅವರೆಲ್ಲರೂ ದುಡಿಮೆಯಿಲ್ಲದೇ ಕುರುವಂತಾಯಿತು. ಈ ಅವಧಿಯಲ್ಲಿ ಬಹುತೇಕರು ಸಾಲ ಮಾಡಿಯೇ ಜೀವನ ನಡೆಸಿದ್ದೇವೆ. ಈಗ ಲಾಕ್‌ಡೌನ್ ತೆರವಿನಿಂದ ನಿರೀಕ್ಷಿತ ಪ್ರಮಾಣದಲ್ಲಲ್ಲದಿದ್ದರೂ ಆಗೊಮ್ಮೆ, ಈಗೊಮ್ಮೆ ಪ್ರವಾಸಿಗರು ಬಂದೋಗುತ್ತಿರುವುದು ಆಸರೆಯಾಗುತ್ತಿದೆ’ ಎನ್ನುತ್ತಾರೆ ಹೋಂ ಸ್ಟೇ ಮಾಲಿಕ ಮಹೇಶ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು