ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ಹಾಸಿಗೆ ಹೆಚ್ಚಳಕ್ಕೆ ಸಿಬ್ಬಂದಿ, ಸವಲತ್ತಿನ ಕೊರತೆ

ಪರೀಕ್ಷೆಗೆ ಮುಂದಾಗದ ಗ್ರಾಮಸ್ಥರು l ತಂತ್ರಜ್ಞರಿಲ್ಲದೇ ಬಳಕೆಯಾಗದ ವೆಂಟಿಲೇಟರ್‌
Last Updated 31 ಮೇ 2021, 21:50 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ತಾಲ್ಲೂಕು ಆಸ್ಪತ್ರೆಗಳಲ್ಲಿವೆಂಟಿಲೇಟರ್‌ಗಳು ಇದ್ದರೂ ಅರಿವಳಿಕೆ ತಜ್ಞರು, ತಂತ್ರಜ್ಞರು, ಆಮ್ಲಜನಕದ ಕೊರತೆಯಿಂದಾಗಿ ಬಹಳಷ್ಟುಕಡೆಅವು ಬಳಕೆಯಾಗುತ್ತಿಲ್ಲ, ವೈದ್ಯರುಸೂಚಿಸಿದರೂ ಗ್ರಾಮಗಳಲ್ಲಿ ಬ‌ಹುತೇಕರು ಆರ್‌ಟಿಪಿಸಿಆರ್‌ ಮಾಡಿಸಿಕೊಳ್ಳಲು ಮುಂದಾಗುತ್ತಿಲ್ಲ, ಮಲೆನಾಡು ಭಾಗದ ದುರ್ಗಮ ರಸ್ತೆಗಳಲ್ಲಿ ಸೋಂಕಿತರನ್ನು ಆಸ್ಪತ್ರೆಗಳಿಗೆ ಒಯ್ಯಲು ಹರಸಾಹಸಪಡಬೇಕಾದ ಸ್ಥಿತಿ ಇದೆ.

ಇದು ಚಿಕ್ಕಮಗಳೂರು ಜಿಲ್ಲೆಯ ಆರೋಗ್ಯ ವ್ಯವಸ್ಥೆಯ ಚಿತ್ರಣ. ಜಿಲ್ಲಾಸ್ಪತ್ರೆಯ ಕೋವಿಡ್‌ ಆರೋಗ್ಯ ಕೇಂದ್ರದಲ್ಲಿನ ಐಸಿಯು ವೆಂಟಿಲೇಟರ್‌ ವಾರ್ಡ್‌ಗಳ ಹಾಸಿಗೆಗಳು ಭರ್ತಿಯಾಗಿವೆ. ಈ ವಾರ್ಡ್‌ಗಳು ಮತ್ತು ಹಾಸಿಗೆಗಳ ಸಂಖ್ಯೆ ಹೆಚ್ಚಿಸಲು ವೈದ್ಯರು– ಸಿಬ್ಬಂದಿ, ಸವಲತ್ತುಗಳ ಕೊರತೆ ಇದೆ.

‘ತಾಲ್ಲೂಕು ಆಸ್ಪತ್ರೆಯಲ್ಲಿ ಆರು ವೆಂಟಿಲೇಟರ್‌ಗಳು ಇವೆ. ಅವು ಮೂಲೆಗುಂಪಾಗಿವೆ. ಅವುಗಳ ಬಳಕೆಗೆ ತಜ್ಞರು, ತಂತ್ರಜ್ಞರ ನೇಮಕಕ್ಕೆ ಸಂಬಂಧಪಟ್ಟವರು ಗಮನಹರಿಸುತ್ತಿಲ್ಲ’ ಎನ್ನುತ್ತಾರೆ ಎನ್.ಆರ್‌.ಪುರದ ಜನಸಂಗ್ರಾಮ ಪರಿಷತ್‌ ಸದಸ್ಯ ವಾಸುದೇವ ಕೋಟ್ಯಾನ್‌.

ಎರಡನೇ ಅಲೆಯಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಪ್ರಕರಣಗಳು ಹೆಚ್ಚಾಗಿವೆ. ಬಯಲು ಸೀಮೆಯ ಚಿಕ್ಕಮಗಳೂರು, ಕಡೂರು, ತರೀಕೆರೆ ಭಾಗ, ಮಲೆನಾಡಿನ ಎನ್‌.ಆರ್‌.ಪುರ, ಮೂಡಿಗೆರೆ ಭಾಗದಲ್ಲಿ ಸೋಂಕಿತರ ಪ್ರಮಾಣ ಜಾಸ್ತಿ ಇದೆ.

ತಪಾಸಣೆಗೆ ಮುಂದಾಗುತ್ತಿಲ್ಲ: ಶೀತ, ತಲೆನೋವು, ಸುಸ್ತು ಮೊದಲಾದ ಲಕ್ಷಣಗಳಿದ್ದವರು ಪ್ರಾಥಮಿಕ ಆರೋಗ್ಯ ಕೇಂದ್ರ
ಗಳಿಗೆ ಬರುತ್ತಾರೆ. ಅದಕ್ಕೆ ಔಷಧ ಪಡೆಯುತ್ತಾರೆ. ವೈದ್ಯರು ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸೂಚಿಸಿದರೂ ಬಹಳಷ್ಟು ಮಂದಿ ಮಾಡಿಸುತ್ತಿಲ್ಲ.

‘ಬೆಂಗಳೂರು, ಇತರ ಜಿಲ್ಲೆಗಳಿಂದ ಹಳ್ಳಿಗಳಿಗೆ ವಾಪಸಾಗಿರುವವರು ಬಹಳಷ್ಟು ಮಂದಿ ಕ್ವಾರಂಟೈನ್‌ ಆಗಲ್ಲ. ಸ್ನೇಹಿತರು, ಗ್ರಾಮಸ್ಥರು, ಸಂಬಂಧಿಕರ ಜತೆ ಬೆರೆಯುತ್ತಾರೆ. ಸೋಂಕು ವ್ಯಾಪಕವಾಗಿ ಪಸರಿಸಲು ಇದೂ ಒಂದು ಕಾರಣ’ ಎಂದು ಕಡೂರು ತಾಲ್ಲೂಕಿನ ಗರ್ಜೆ ಪ್ರಾಥಮಿಕ ಕೇಂದ್ರದ ಶುಶ್ರೂಷಕಿಯೊಬ್ಬರು ತಿಳಿಸಿದರು.

‘ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಲು ಬಹಳಷ್ಟು ಮಂದಿ ಹಿಂದೇಟು ಹಾಕುತ್ತಾರೆ. 100 ಜನರಿಗೆ ಸೂಚಿಸಿದರೆ ಐದರಿಂದ ಹತ್ತು ಜನ ಮಾತ್ರ ಮಾಡಿಸುತ್ತಾರೆ ಅಷ್ಟೆ’ ಎನ್ನುವುದು ಕರ್ಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುಮಾ ಉಮೇಶ್‌ ಹೇಳುವ ಮಾತು.

ಕಡೂರು ತಾಲ್ಲೂಕು ಆಸ್ಪತ್ರೆಯ ಎಲ್ಲ ಹಾಸಿಗೆಗಳು ಭರ್ತಿಯಾಗಿವೆ. ಹಾಸಿಗೆ ಸೌಲಭ್ಯ ಹೆಚ್ಚಿಸಲು ಆಮ್ಲಜನಕ ಕೊರತೆ, ಸಿಬ್ಬಂದಿ ಸಮಸ್ಯೆ ಇದೆ. ಈ ಆಸ್ಪತ್ರೆಯನ್ನು ಕೋವಿಡ್‌ ರೋಗಿಗಳಿಗೆ ಮೀಸಲಿಡಬೇಕು ಎಂಬ ಕೂಗಿದ್ದರೂ, ಪರಿಗಣಿಸುತ್ತಿಲ್ಲ ಎನ್ನುವ ಆರೋಪ ಜನರಿಂದ ಕೇಳಿ ಬರುತ್ತಿದೆ.

‘ಕೋವಿಡ್‌ ದೃಢಪಟ್ಟವರು ಅದನ್ನು ಹೇಳಿಕೊಳ್ಳಲು ಭಯಪಡುತ್ತಾರೆ, ಮುಜುಗರಪಟ್ಟುಕೊಳ್ಳುತ್ತಾರೆ. ಭಯಪಡಬೇಡಿ, ಜಾಗ್ರತೆಯಿಂದ ಇರುವಂತೆ ಧೈರ್ಯ ತುಂಬುತ್ತೇವೆ’ ಎಂದು ಕಡೂರು ತಾಲ್ಲೂಕಿನ ಮಲ್ಲೇಶ್ವರದ ಶುಶ್ರೂಷಕಿ ಮೀನಾಕ್ಷಮ್ಮ ಹೇಳಿಕೊಂಡರು.

ಮೂಡಿಗೆರೆ ತಾಲ್ಲೂಕಿನ ದಾರದಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಸುಸಜ್ಜಿತವಾಗಿದೆ. ಕೋವಿಡ್‌ ಲಸಿಕೆ ಹಾಕಿಸಿಕೊಳ್ಳುವವರು, ರೋಗಿಗಳ ಸಹಿತ ನಿತ್ಯ 60ಕ್ಕೂ ಹೆಚ್ಚು ಮಂದಿ ಇಲ್ಲಿಗೆ ಬಂದು ಹೋಗುತ್ತಾರೆ. ಆಸ್ಪತ್ರೆಗೆ ಔಷಧ ಪೂರೈಕೆ ವಿಳಂಬವಾಗುತ್ತಿದೆ. ದಿನದಲ್ಲಿ 3–4 ಬಾರಿ ವಿದ್ಯುತ್‌ ಕೈಕೊಡುತ್ತದೆ ಎಂದು ಸಿಬ್ಬಂದಿ ಸಮಸ್ಯೆ ತೋಡಿಕೊಂಡರು.

ಮಲೆನಾಡು ಭಾಗದ ಗ್ರಾಮಗಳ ದುರ್ಗಮ ರಸ್ತೆಗಳಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಹರಸಾಹಸ ಪಡಬೇಕಾಗಿದೆ. ಕೆಲ ಗ್ರಾಮಗಳಿಗೆ ಕಾಲುಹಾದಿಗಳೇ ಸಂಪರ್ಕ ರಸ್ತೆಗಳು. ಇಂಥ ಹಾದಿಗಳಲ್ಲಿ ವಾಹನಗಳು ಸಂಚರಿಸಲ್ಲ.ರೋಗಿಗಳನ್ನು ನಡೆಸಿಕೊಂಡು, ಹೊತ್ತುಕೊಂಡು ಸಾಗಬೇಕಾದ ಸ್ಥಿತಿ ಇದೆ.

ಜಿಲ್ಲಾ ಆಸ್ಪತ್ರೆಯಲ್ಲೂ ಅವ್ಯವಸ್ಥೆ:

ಜಿಲ್ಲಾಸ್ಪತ್ರೆಯ ವಾರ್ಡ್‌ನಲ್ಲಿನ ರೋಗಿಗಳ ಜತೆ ಅವರ ಕಡೆಯವರು ಇರುತ್ತಾರೆ. ಪಿಪಿಇ ಕಿಟ್‌ ಧರಿಸದೆ ವಾರ್ಡ್‌ ಒಳಕ್ಕೆ, ಹೊರಕ್ಕೆ ಸಲೀಸಾಗಿ ಓಡಾಡುತ್ತಾರೆ.

‘ಕೋವಿಡ್‌ನಿಂದ ಸ್ನೇಹಿತನ ಸಂಬಂಧಿಕರೊಬ್ಬರು ಮೃತಪಟ್ಟಿದ್ದರು. ಜಿಲ್ಲಾಸ್ಪತ್ರೆಗೆ ಕೋವಿಡ್‌ ಘಟಕಕ್ಕೆ ಹೋಗಿದ್ದೆ. ವಾರ್ಡ್‌ನಲ್ಲಿ ರೋಗಿ ಜತೆ ಅವರ ಕಡೆಯವರೂ ಇದ್ದರು. ಅಂತರ ಪಾಲನೆ ಯಾವುದೂ ಇರಲಿಲ್ಲ’ ಎಂದು ಉಪ್ಪಳ್ಳಿಯ ಗೌಸ್‌ ಮುನೀರ್‌ ತಿಳಿಸಿದರು.

ಜಿಲ್ಲಾಸ್ಪತ್ರೆಯಲ್ಲೂ ಸವಲತ್ತುಗಳು ಅಷ್ಟಕಷ್ಟೆ. ತುರ್ತು, ಗಂಭೀರ ಸ್ಥಿತಿ ಪ್ರಕರಣಗಳನ್ನು ಪಕ್ಕದ ಮಂಗಳೂರು, ಹಾಸನ, ಶಿವಮೊಗ್ಗಕ್ಕೆ ಒಯ್ಯಬೇಕಾದ ಅನಿವಾರ್ಯ ಇದೆ. ಲಸಿಕೆಯ ಕೊರತೆ ಇದ್ದು, ಲಸಿಕೆ ಹಾಕಿಸಿಕೊಳ್ಳಲು ಕೇಂದ್ರಗಳಿಗೆ ಜನ ಎಡತಾಕುವಂತಾಗಿದೆ.

‘ಆಸ್ಪತ್ರೆಗೆ ಹೋಗುವುದೇ ಕಷ್ಟ’:

‘ಶೃಂಗೇರಿ ತಾಲ್ಲೂಕಿನ ದೂರದ ಮತ್ತು ಒಳನಾಡು ಗುಡ್ಡಗಾಡು ಪ್ರದೇಶವಾದ ಕೆರೆ ಮತ್ತು ನೆಮ್ಮಾರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿತರು ಸಾಕಷ್ಟಿದ್ದು, ಸಂಚಾರ ಸಾಧ್ಯವಾಗದೇ ಚಿಕಿತ್ಸೆ ಪಡೆಯುವುದು ಕಷ್ಟವಾಗಿದೆ. ಅವರನ್ನು ಪರೀಕ್ಷೆಗೆ ಒಳಪಡಿಸಿ ಅವರಿಗೆ ಚಿಕಿತ್ಸೆ ನೀಡಬೇಕು’ ಎನ್ನುವುದು ನೆಮ್ಮಾರ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ದಿನೇಶ್ ಹೆಗ್ಡೆ ಅವರ ಒತ್ತಾಯ.

‘ಪಟ್ಟಣದಿಂದ 20 ರಿಂದ 30 ಕಿ.ಮೀ ದೂರದಲ್ಲಿರುವ ಈ ಗ್ರಾಮದ ಜನತೆಗೆ ವೈದ್ಯಕೀಯ ಸೇವೆಗೆ ನೆಮ್ಮಾರ್ ಮತ್ತು ಶೃಂಗೇರಿಯನ್ನೇ ಅವಲಂಬಿಸಬೇಕಿದೆ. ಕೋವಿಡ್ ಪರೀಕ್ಷೆಗೆ ಹಾಗೂ ಲಸಿಕೆ ಪಡೆಯಲು ಪಟ್ಟಣಕ್ಕೆ ಬರಬೇಕು. ಸಾರಿಗೆ ವ್ಯವಸ್ಥೆ ಇಲ್ಲದೇ ಬಹುತೇಕ ರೋಗಿಗಳ ತಪಾಸಣೆ ಆಗಿಲ್ಲ. ಈ ಭಾಗದ ಜನರ ಗಂಟಲು ದ್ರವ ಪರೀಕ್ಷೆ ಹಾಗೂ ಲಸಿಕೆಯನ್ನು ಸಂಚಾರಿ ವಾಹನದ ಮೂಲಕ ಹಳ್ಳಿಗೆ ತೆರಳಿ ತಪಾಸಣೆ ಮಾಡಬೇಕು’ ಎಂದು ಆಗ್ರಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT