ಮಂಗಳವಾರ, ಜೂನ್ 22, 2021
28 °C
ಜಿಲ್ಲಾಸ್ಪತ್ರೆಯ ಕೋವಿಡ್‌ ಆರೋಗ್ಯ ಕೇಂದ್ರ– ಮೂರು ದಿನಗಳಿಂದ ವಿಲೇವಾರಿ ಮಾಡಿಲ್ಲ

ಬಾಗಿಲಲ್ಲೇ ಕೋವಿಡ್‌ ತ್ಯಾಜ್ಯ ಚೀಲಗಳ ರಾಶಿ

ಬಿ.ಜೆ.ಧನ್ಯಪ್ರಸಾದ್‌ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ನಗರದ ಜಿಲ್ಲಾಸ್ಪತ್ರೆಯ ಕೋವಿಡ್‌ ಆರೋಗ್ಯ ಕೇಂದ್ರದ ಕೋವಿಡ್‌ ತ್ಯಾಜ್ಯವನ್ನು ಮೂರು ದಿನಗಳಿಂದ ವಿಲೇವಾರಿ ಮಾಡಿಲ್ಲ. ತ್ಯಾಜ್ಯ ತುಂಬಿದ ಪ್ಲಾಸ್ಟಿಕ್‌ ಚೀಲಗಳು ಕೇಂದ್ರದ ಬಾಗಿಲಲ್ಲೇ ರಾಶಿ ಬಿದ್ದಿವೆ.

ರೋಗಿಗಳ ಕಡೆಯುವರು, ಆಸ್ಪತ್ರೆಯ ಸಿಬ್ಬಂದಿ ತ್ಯಾಜ್ಯ ರಾಶಿ ಬಿದ್ದಿರುವ ದ್ವಾರದಲ್ಲೇ ಓಡಾಡಬೇಕಾಗಿದೆ. ಬಳಸಿದ ಕೈಗವುಸು, ಮುಖಗವಸು, ಪಿಪಿಇ ಉಡುಪು, ಔಷಧ ಪೊಟ್ಟಣ ಇತ್ಯಾದಿ ಎಲ್ಲವನ್ನೂ ಪ್ಲಾಸ್ಟಿಕ್‌ ಚೀಲಗಳಲ್ಲಿ ತುಂಬಿ ಗಂಟುಕಟ್ಟಿ ಹಾಕಲಾಗಿದೆ. ಮಳೆಗಾಳಿಗೆ ಚೀಲಗಳು ಅಸ್ತವ್ಯಸ್ತವಾಗಿ ಆವರಣದಲ್ಲಿ ಹರಡುವ ಭೀತಿ ಎದುರಾಗಿದೆ.

‘ಕೋವಿಡ್‌ ತ್ಯಾಜ್ಯ ಅಪಾಯಕಾರಿ. ಕೋವಿಡ್‌ ಕೇಂದ್ರದ ಬಾಗಿಲಲ್ಲಿನ ತ್ಯಾಜ್ಯ ಚೀಲಗಳ ರಾಶಿಯ ಅಕ್ಕಪಕ್ಕದಲ್ಲೇ ರೋಗಿಗಳ ಕಡೆಯುವರು ನಿಂತಿರುತ್ತಾರೆ. ಕೇಂದ್ರದಲ್ಲಿ ಸ್ವಚ್ಛತೆ ಕಾಪಾಡುವುದು ಮುಖ್ಯ. ತ್ಯಾಜ್ಯ ಸಂಗ್ರಹಣೆಯನ್ನು ನಿರ್ಜನ ಜಾಗಕ್ಕೆ ವರ್ಗಾಯಿಸುವಂತೆ ಸಂಬಂಧಪಟ್ಟವರಿಗೆ ಮನವಿ ಮಾಡಿದರೂ ಗಮನ ಹರಿಸುತ್ತಿಲ್ಲ. ಆತಂಕದಲ್ಲೇ ಕಾರ್ಯನಿರ್ವಹಿಸಬೇಕಾದ ಸ್ಥಿತಿ ಇದೆ’ ಎಂದು ಶುಶ್ರೂಷಕಿಯೊಬ್ಬರು ಸಂಕಷ್ಟ ತೋಡಿಕೊಂಡರು.

ಹಾಸನದ ವಿವಿ ಇನ್‌ಸಿನ್‌ ಸಂಸ್ಥೆಯು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯ ತ್ಯಾಜ್ಯ ವಿಲೇವಾರಿಯ ಹೊಣೆ ಹೊತ್ತಿದೆ. ಪ್ರತಿನಿತ್ಯ ಐದರಿಂದ ಆರು ಕ್ವಿಂಟಲ್‌ ತ್ಯಾಜ್ಯ ಸಂಗ್ರಹವಾಗುತ್ತದೆ, ಅದನ್ನು ವಾಹನಗಳಲ್ಲಿ ಹಾಸನಕ್ಕೆ ಒಯ್ಯಲಾಗುತ್ತದೆ.

ಕೋವಿಡ್‌ ಜೈವಿಕ ತ್ಯಾಜ್ಯವನ್ನು ಹಳದಿ, ಹಸಿರು ಮತ್ತು ಕೆಂಪು ಬಣ್ಣದ ಪ್ಲಾಸ್ಟಿಕ್‌ ಚೀಲಗಳಲ್ಲಿ ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತದೆ. ಯಾವ ತ್ಯಾಜ್ಯವನ್ನು ಯಾವ ಬಣ್ಣದ ಚೀಲಕ್ಕೆ ಹಾಕಬೇಕು ಎಂದು ಸಿಬ್ಬಂದಿಗೆ ತಿಳಿಸಲಾಗಿದೆ. ತ್ಯಾಜ್ಯ ಚೀಲಗಳನ್ನು ಜಾಗರೂಕವಾಗಿ, ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು.

‘ಜಿಲ್ಲಾಡಳಿತವು ತ್ಯಾಜ್ಯ ವಿಲೇವಾರಿ ನಿರ್ವಹಣೆ ಬಾಬ್ತಿನ ಹಣ ಪಾವತಿಸಿಲ್ಲ. ವಿಷಯವನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ತ್ಯಾಜ್ಯ ಸಾಗಣೆಯ ಎರಡು ವಾಹನಗಳು ರಿಪೇರಿ ಇದ್ದವು. ಹೀಗಾಗಿ, ತ್ಯಾಜ್ಯ ಸಾಗಿಸಲು ಸಾಧ್ಯವಾಗಿಲ್ಲ. ಸಮಸ್ಯೆ ಪರಿಹಾರವಾದ ತಕ್ಷಣವೇ ಒಯ್ಯಲು ಕ್ರಮ ವಹಿಸುತ್ತೇವೆ’ ಎಂದು ಹಾಸನದ ವಿವಿ ಇನ್‌ಸಿನ್‌ ಸಂಸ್ಥೆಯ ಮಾರುತಿಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು