ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀರೂರು: ನೀರು ಸಂಗ್ರಹಕ್ಕೆ ಟ್ಯಾಂಕ್‌ ಕೊರತೆ, ನಿವಾಸಿಗಳಿಗೆ ನಿತ್ಯ ಸಮಸ್ಯೆ

ಎನ್. ಸೋಮಶೇಖರ್
Published 29 ಮಾರ್ಚ್ 2024, 6:51 IST
Last Updated 29 ಮಾರ್ಚ್ 2024, 6:51 IST
ಅಕ್ಷರ ಗಾತ್ರ

ಬೀರೂರು: ಬೀರೂರು ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಯಾಗುವ ಭದ್ರಾ ಜಲಾಶಯದಲ್ಲಿ ನೀರು ಇದ್ದರೂ, ನೀರು ಸಂಗ್ರಹಕ್ಕೆ ಟ್ಯಾಂಕ್‌ಗಳ ಕೊರತೆಯಿಂದಾಗಿ ಕೆಲವು ಬಡಾವಣೆಗಳ ಜನರು ನೀರಿಗಾಗಿ ಪರದಾಡುವಂತಾಗಿದೆ.

ಪಟ್ಟಣಕ್ಕೆ ಭದ್ರಾ ಜಲಾಶಯದಲ್ಲಿ ನೀರಿದ್ದು ಸದ್ಯಕ್ಕೆ ತೊಂದರೆ ಇಲ್ಲ. ಸಮಸ್ಯೆ ಬಂದರೆ 20ಕ್ಕೂ ಹೆಚ್ಚು ಕೊಳವೆಬಾವಿಗಳು ಸುಸ್ಥಿತಿಯಲ್ಲಿವೆ. ಪಟ್ಟಣಕ್ಕೆ ನಿತ್ಯ 2 ಎಂಎಲ್‌ಡಿ ನೀರಿನ ಅಗತ್ಯವಿದೆ. ಕನಿಷ್ಠ ನಾಲ್ಕು ದಿನಗಳಿಗೊಮ್ಮೆ ನೀರು ಪೂರೈಸುವ ವ್ಯವಸ್ಥೆ ಇದೆ. ಅಗತ್ಯವಿರುವ ನೀರಿನ ಶೇ 65ರಷ್ಟು (1.30 ಎಂಎಲ್‌ಡಿ) ಮಾತ್ರ ಸದ್ಯಕ್ಕೆ ಪೂರೈಕೆಯಾಗುತ್ತಿದೆ.

ಪಟ್ಟಣದಲ್ಲಿ ಪುರಸಭೆ ಹಿಂಭಾಗ ಹಾಗೂ ರಾಜಾಜಿನಗರ ಬಡಾವಣೆಯಲ್ಲಿ ತಲಾ 10 ಲಕ್ಷ ಲೀಟರ್ ಸಾಮರ್ಥ್ಯದ, ಸಂತೆ ಬಳಿ ಹಾಗೂ ಕೆಎಲ್‌ಕೆ ಮೈದಾನದಲ್ಲಿ ತಲಾ 50ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್‌ಗಳು ಇವೆ. ದೊಡ್ಡಘಟ್ಟ ಬಳಿಯ ಸಂಗ್ರಹಾಗಾರದಿಂದ ಬೀರೂರು ಪಂಪ್‌ಹೌಸ್‌ ಮೂಲಕ ಈ ಟ್ಯಾಂಕ್‌ಗಳಿಗೆ ನೀರು ಬರುತ್ತದೆ.

ಈ ನೀರು 1ರಿಂದ 16ನೇ ವಾರ್ಡ್‌ಗಳಿಗೆ ಪೂರೈಕೆಯಾಗುತ್ತದೆ. ಆದರೆ, ಬೀರೂರು ಮಾರ್ಗದ ಕ್ಯಾಂಪ್‌ ಬಡಾವಣೆಯಲ್ಲಿದ್ದ 2 ಲಕ್ಷ ಲೀಟರ್ ಸಾಮರ್ಥ್ಯದ ಶಿಥಿಲಾವಸ್ಥೆ ತಲುಪಿದ್ದ ಟ್ಯಾಂಕ್‌ ಅನ್ನು ನವೆಂಬರ್‌ನಲ್ಲಿ ಕಡೆವಲಾಗಿದೆ. ಇದರಿಂದ ಏಳು ವಾರ್ಡ್‌ಗಳಿಗೆ ನೀರಿನ ಸಮಸ್ಯೆ ಎದುರಾಗಿದೆ.

ಬಳ್ಳಾರಿ ಕ್ಯಾಂಪ್‌, ಇಂದಿರಾನಗರ, ಹೊಸಾಳಮ್ಮ ಬಡಾವಣೆ, ಮಾರ್ಗದ ಕ್ಯಾಂಪ್‌, ಅಶೋಕನಗರ, ಭಾಗವತ್‌ ನಗರ, ಬೋವಿ ಕಾಲೊನಿ, ಉಪ್ಪಾರ ಕ್ಯಾಂಪ್‌, ಸಜ್ಜನರಾಜ್‌ ಬಡಾವಣೆ, ಪುರಿಬಟ್ಟಿ ಬಡಾವಣೆ ಮೊದಲಾದ ಕಡೆಗಳ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲವರು ಸ್ವಂತ ಕೊಳವೆಬಾವಿ ಹೊಂದಿದ್ದರೆ, ಹಲವರು ಪಟ್ಟಣ ಪಂಚಾಯಿತಿ ಪೂರೈಸುವ ನೀರನ್ನೇ ಆಶ್ರಯಿಸಿದ್ದಾರೆ. ಕೂಲಿ ಕಾರ್ಮಿಕರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ನಳದ ನೀರು ಬಂದಾಗ ಡ್ರಮ್‌ಗಳಲ್ಲಿ ತುಂಬಿಸಿಟ್ಟುಕೊಳ್ಳಬೇಕಾದ ಪರಿಸ್ಥಿತಿ ಇದೆ. ಓವರ್ ಹೆಡ್ ಟ್ಯಾಂಕ್ ಇದ್ದಾಗ ವಾರಕ್ಕೆ ಎರಡು ಬಾರಿಯಾದರೂ ನೀರು ಬರುತ್ತಿತ್ತು. ಈಗ ಕೂಲಿ ಕೆಲಸ ಬಿಟ್ಟು ನೀರಿಗಾಗಿ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ಇದೆ ಎನ್ನುತ್ತಾರೆ ನಿವಾಸಿಗಳು.

‘ಕ್ಯಾಂಪ್‌ ಭಾಗದ ಜನರ ನೀರಿನ ಸಮಸ್ಯೆ ಬಗೆಹರಿಸಲು ಪುರಸಭೆ ಯತ್ನಿಸುತ್ತಿದೆ. ಹೊಸ ಟ್ಯಾಂಕ್‌ ನಿರ್ಮಾಣಕ್ಕೆ ನಗರ ನೀರು ಸರಬರಾಜು ಮಂಡಳಿಯ ಅಮೃತ್‌–2 ಯೋಜನೆಯಲ್ಲಿ ಮಂಜೂರಾತಿ ದೊರೆತಿದ್ದು, ಕಾರ್ಯಾದೇಶವಾಗಿದೆ. 10 ಲಕ್ಷ ಲೀಟರ್‌ ಸಾಮರ್ಥ್ಯದ ಟ್ಯಾಂಕ್‌ ನಿರ್ಮಿಸಲಾಗುವುದು. ನೀತಿ ಸಂಹಿತೆ ಕಾರಣಕ್ಕೆ ವಿಳಂಬವಾಗಿದ್ದು, ಜಿಲ್ಲಾಧಿಕಾರಿ ಗಮನ ಸೆಳೆದು, ಶೀಘ್ರ ನಿರ್ಮಾಣ ಕಾರ್ಯ ಪ್ರಾರಂಭಿಸಲಾಗುವುದು’ ಎಂದು ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಜಿ.ಪ್ರಕಾಶ್‌ ಪ್ರತಿಕ್ರಿಯಿಸಿದರು.

 ಬೀರೂರು ಪಟ್ಟಣದ ಅಶೋಕನಗರ ಬಡಾವಣೆಯಲ್ಲಿ ಶುದ್ಧಗಂಗಾ ಘಟಕದಿಂದ ನೀರು ಸಂಗ್ರಹಿಸುವ ನಾಗರಿಕರು
 ಬೀರೂರು ಪಟ್ಟಣದ ಅಶೋಕನಗರ ಬಡಾವಣೆಯಲ್ಲಿ ಶುದ್ಧಗಂಗಾ ಘಟಕದಿಂದ ನೀರು ಸಂಗ್ರಹಿಸುವ ನಾಗರಿಕರು

‘ನಿಗದಿತ ಸಮಯ ಇಲ್ಲ’

‘ನಾವು ಕೂಲಿ ಕೆಲಸಕ್ಕೆ ಹೋಗುವವರು ಕ್ಯಾಂಪ್‌ ಭಾಗದಲ್ಲಿ ಓವರ್‌ ಹೆಡ್‌ ಟ್ಯಾಂಕ್‌ ಕೆಡವಿದಾಗಿನಿಂದ ನೀರು ಪೂರೈಕೆಯಲ್ಲಿ ಸಾಕಷ್ಟು ಸಮಸ್ಯೆ ಇದೆ. ಪುರಸಭೆಯಲ್ಲಿ ಅಧಿಕಾರಿಗಳ ಆಡಳಿತವಿದ್ದು ಅವರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ನೀರು ಬಿಡಲು ಇತ್ತೀಚೆಗೆ ನಿಗದಿತ ಸಮಯವಿಲ್ಲ. ನೀರನ್ನು ಕಾಯುತ್ತ ಕುಳಿತರೆ ಕೆಲಸಕ್ಕೆ ಹೋಗಲು ತೊಂದರೆಯಾಗುತ್ತದೆ’ ಎಂದು 23ನೇ ವಾರ್ಡ್‌ನ ಪಾರ್ವತಮ್ಮ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT