ಶನಿವಾರ, ಜನವರಿ 28, 2023
13 °C
ಹಲವೆಡೆ ಹಾಳಾದ ಪರಿವರ್ತಕ l ತೋಟದ ಮಧ್ಯೆ ಹಾದು ಹೋದ ತಂತಿ l ವೋಲ್ಟೇಜ್‌ನಲ್ಲಿ ಆಗಾಗ್ಗೆ ವ್ಯತ್ಯಯ

ಚಿಕ್ಕಮಗಳೂರಿನಲ್ಲಿ ಶಿಥಿಲ ಕಂಬಗಳು, ಜೋತಾಡುವ ತಂತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು:  ಜಿಲ್ಲೆಯ ಕೆಲವೆಡೆ ವಿದ್ಯುತ್‌ ಕಂಬಗಳು ಶಿಥಿಲಾವಸ್ಥೆಗೆ ತಲುಪಿದರೆ, ಹಲವೆಡೆ ವಾಲಿವೆ. ತಂತಿಗಳು ಜೋತು ಬಿದ್ದಿವೆ. ಕೆಲ ತೋಟಗಳಲ್ಲಿ  ಗಿಡಮರಗಳ ಕೊಂಬೆ, ಗರಿಗಳು ತಾಗುತ್ತವೆ, ಅಪಾಯಕ್ಕೆ ಕಾದಿವೆ.

ಕೆಲವೆಡೆ ಕೆರೆ, ಕಟ್ಟೆಗಳ ಅಂಗಳದಲ್ಲೇ ವಿದ್ಯುತ್‌ ತಂತಿಗಳು ಹಾದುಹೋಗಿವೆ. ಮಲೆನಾಡು ಭಾಗದಲ್ಲಿ ಸಮಸ್ಯೆಗಳು ಹೆಚ್ಚು ಇವೆ. ವೋಲ್ಟೆಜ್‌ ಸಮಸ್ಯೆ ಕಾಡುತ್ತಿದೆ. 

ವೋಲ್ಟೆಜ್‌, ವಿದ್ಯುತ್‌ ಪರಿವರ್ತಕ ಸಮಸ್ಯೆ

ನರಸಿಂಹರಾಜಪುರ: ತಾಲ್ಲೂಕಿನ ಹಳ್ಳಿಬೈಲು, ಸೀತೂರು ಆಸುಪಾಸಿನ ಗ್ರಾಮಗಳಿಗೆ ಕೊಪ್ಪ ವಿದ್ಯುತ್ ವಿತರಣಾ ಕೇಂದ್ರದಿಂದ ಸಿದ್ದರಮಠದ ಮೂಲಕ ಅರಣ್ಯ ಭಾಗದಲ್ಲಿ ವಿದ್ಯುತ್ ಮಾರ್ಗ ಹಾದುಹೋಗಿದೆ. ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ಇರುತ್ತದೆ.

ಕಟ್ಟಿನಮನೆ ಗ್ರಾಮಕ್ಕೆ ಕೊಡಿಹಿತ್ಲು ಎಸ್ಟೇಟ್ ಮೂಲಕ ವಿದ್ಯುತ್ ಮಾರ್ಗ ಹಾದು ಹೋಗಿದೆ. ಕಾನೂರು, ಕೆರೆಮನೆ ಗ್ರಾಮದ ವ್ಯಾಪ್ತಿಯಲ್ಲಿ ವೋಲ್ಟೆಜ್‌ ಸಮಸ್ಯೆಯ ದೂರುಗಳಿವೆ.

‘ಕುದುರೆಗುಂಡಿಯಲ್ಲಿ ವಿದ್ಯುತ್ ಪ್ರಸರಣ ಕೇಂದ್ರ ಆರಂಭಿಸಿದರೆ ಸೀತೂರು, ಕಾನೂರು ಗ್ರಾಮದವರಿಗೆ ಅನುಕೂಲವಾಗುತ್ತದೆ. ಪರಿವರ್ತಕ ಹಾಳಾದರೆ ತ್ವರಿತವಾಗಿ ದುರಸ್ತಿಪಡಿಸಲ್ಲ’ ಎನ್ನುತ್ತಾರೆ ಹಳ್ಳಿಬೈಲಿನ  ಪಿ.ಕೆ.ಬಸವರಾಜ್.

ಹಳೆ ತಂತಿ ಬದಲಾವಣೆ ಕಾರ್ಯ ಆಮೆಗತಿ

ಕೊಪ್ಪ: ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ತೋಟದ ಮಧ್ಯೆ ವಿದ್ಯುತ್ ತಂತಿ ಹಾದು ಹೋಗಿವೆ. ಹಳೆಯ ತಂತಿ ಬದಲಾವಣೆ ಕಾರ್ಯ ನಿಧಾನಗತಿಯಲ್ಲಿ ಸಾಗಿದೆ.

ತುಳುವಿನಕೊಪ್ಪದ ನೆಕ್ಕರಿಕೆ, ಮಾಚಿಕೊಪ್ಪದಲ್ಲಿ ಸುಮಾರು 30ಕ್ಕೂ ಹೆಚ್ಚು ಮನೆಗಳಿದ್ದು ವಿದ್ಯುತ್ ಪರಿವರ್ತಕದ ಬೇಡಿಕೆ ಇದೆ.

ತಾಲ್ಲೂಕಿನಲ್ಲಿ 15ಕ್ಕೂ ಹೆಚ್ಚು ಕಡೆಗಳಿಗೆ ವಿದ್ಯುತ್ ಪರಿವರ್ತಕದ ಬೇಡಿಕೆ ಇದೆ. ಹರಿಹರಪುರ, ಕುದುರೆಗುಂಡಿ ಭಾಗದಲ್ಲಿ ‘ಪವರ್ ಸ್ಟೇಷನ್’ ಸ್ಥಾಪಿಸಬೇಕು ಎಂಬುದು ಸಾರ್ವಜನಿಕರ ಮೊರೆ.

ಗುಣವಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಂಪರ್ಕ ಕಲ್ಪಿಸಿರುವ ವಿದ್ಯುತ್ ತಂತಿ ಮೇಲೆ ಬಿದ್ದ ಕೊಂಬೆಯನ್ನು ತೆರವು ಮಾಡಿಲ್ಲ. ಸ್ಥಿರೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ.

ಚಂಡೆಗುಡ್ಡೆ ಬಳಿಯ ರಸ್ತೆ ತಿರುವಿನಲ್ಲಿ ವಿದ್ಯುತ್ ಪರಿವರ್ತಕವಿದ್ದು, ಅಪಾಯಕಾರಿ ಸ್ಥಿತಿಯಲ್ಲಿದೆ. ನಾರ್ವೆ ಹ್ಯಾಂಡ್ ಪೋಸ್ಟ್(ಎನ್‌ಎಚ್‌ಪಿ)ನಿಂದ ಚಂಡೆಗುಡ್ಡೆ ಮುಖ್ಯ ಲೈನ್‌ಗೆ ಸಂಪರ್ಕ ಕಲ್ಪಿಸಿಲ್ಲ. ಎ.ಜಿ.ಕಟ್ಟೆಯಿಂದ ಎನ್‌ಎಚ್‌ಪಿವರೆಗೆ ಸಂಪರ್ಕ ಲೈನ್ ಅನ್ನು ಹೆದ್ದಾರಿ ಪಕ್ಕ ಅಳವಡಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

15 ಮನೆಗೆ ವಿದ್ಯುತ್ ಸಂಪರ್ಕ ಇಲ್ಲ

ಶೃಂಗೇರಿ: ತಾಲ್ಲೂಕಿನ ಬೇಗಾರ್, ಕೆರೆಕಟ್ಟೆ, ಕೂತುಗೋಡು, ಬುಕ್ಕಡಿಬೈಲ್, ಹೊಳೆಗದ್ದೆ, ಕುಂಬ್ರಗೊಡು, ಕೆರೆಮನೆ, ನೆಮ್ಮಾರ್, ಹೊಳೇಕೊಪ್ಪ, ಮೆಣಸೆ, ಹಾದಿ ಕಿರೂರು , ನಲ್ಲೂರು, ಕಲಿಗೆ, ಗುಂಡ್ರೆಯಲ್ಲಿ ವಿದ್ಯುತ್‌ ಪರಿವರ್ತಕಗಳು ಇಲ್ಲ. ವೋಲ್ಟೇಜ್ ಸಮಸ್ಯೆ ಇದೆ.

ಬೇಗಾರ್ ಗ್ರಾಮ ಪಂಚಾಯಿತಿಯಲ್ಲಿ ಸುಮಾರು 15 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಪಂಚಾಯಿತಿ ಎನ್ನುತ್ತಾರೆ ಅಧ್ಯಕ್ಷ ಲಕ್ಷ್ಮೀಶ.

ಕೆಳಕೊಪ್ಪ, ತನಿಕೊಡು, ಹಾಲಂದೂರು ಕಿಕ್ರೆ, ಬೆಟ್ಟಗೆರೆ ಭಾಗದಲ್ಲಿ ಲೈನ್‌ಗಳು ತೋಟದ ನಡುವೆ ಹಾದುಹೋಗಿವೆ. ಕೆಲವೆಡೆ ಕಂಬಗಳು ಬಾಗಿವೆ.

ಶಿಥಿಲ ಕಂಬ ಬದಲಿಸಲು ಮೊರೆ

ಅಜ್ಜಂಪುರ: ತಾಲ್ಲೂಕಿನ ಹೆಬ್ಬೂರು-ನಾರಣಾಪುರ, ಗಡೀಹಳ್ಳಿ - ಅಣ್ಣಾಪುರ-ನಂದೀಪುರ, ಬುಕ್ಕಾಂಬುಧಿ- ಶಿವನಿ, ಚೀರನಹಳ್ಳಿ ರಸ್ತೆಯ ಬದಿಯ ಹಲವು ವಿದ್ಯುತ್ ಕಂಬಗಳು ವಾಲಿವೆ.

ಶಿವನಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಮುಂಭಾಗ, ಸೊಲ್ಲಾಪುರ ಗ್ರಾಮದ ಕಾಲೊನಿ, ನಂದೀಪುರ ಗ್ರಾಮದೊಳಗೆ ಅಳವಡಿಸಿರುವ ವಿದ್ಯುತ್ ಕಂಬಗಳು ಶಿಥಿಲಾವಸ್ಥೆಗೆ ತಲುಪಿವೆ. ನಂದೀಪುರ, ಬಾಳಯ್ಯನ ಹೊಸೂರು ಗ್ರಾಮದ ಕೆರೆಯೊಳಗಿನ ವಿದ್ಯುತ್ ಕಂಬಗಳು ಬಾಗಿವೆ.

(ತಂಡ: ಬಿ.ಜೆ. ಧನ್ಯಪ್ರಸಾದ್‌, ಜೆ.ಒ.ಉಮೇಶ್‌ಕುಮಾರ್‌, ಹಾ.ಮ.ರಾಜಶೇಖರಯ್ಯ, ಕೆ.ಎನ್‌.ರಾಘವೇಂದ್ರ, ಕೆ.ವಿ.ನಾಗರಾಜ್‌,
ಸತೀಶ್‌ ಜೈನ್‌, ರವಿಕುಮಾರ್ ಶೆಟ್ಟಿಹಡ್ಲು, ರವಿಕೆಳಂಗಡಿ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು