ಸೋಮವಾರ, ಮಾರ್ಚ್ 1, 2021
23 °C

ಕಳಸದಲ್ಲಿ ಮತ್ತೊಬ್ಬ ನೆರೆ ಸಂತ್ರಸ್ತ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳಸದ ಎಸ್.ಕೆ. ಮೇಗಲ್ ಗ್ರಾಮದ ಚಂದ್ರೇಗೌಡ ಅವರ ಭತ್ತದ ಗದ್ದೆಗೆ ಹಾನಿಯಾಗಿರುವುದು

ಕಳಸ: ಅತಿವೃಷ್ಟಿಯಿಂದ ಭತ್ತದ ಗದ್ದೆ ಹಾಗೂ ಕಾಫಿತೋಟವನ್ನು ಕಳೆದುಕೊಂಡಿದ್ದ ತಾಲ್ಲೂಕಿನ ಎಸ್.ಕೆ.ಮೇಗಲ್ ಗ್ರಾಮದ ರೈತ ಚಂದ್ರೇಗೌಡ (60) ಬುಧವಾರ ರಾತ್ರಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗದ್ದೆಗೆ ಸಿಂಪಡಣೆ ಮಾಡಲು ತಂದಿದ್ದ ಕೀಟನಾಶಕವನ್ನು ಸೇವಿಸಿದ್ದ ಚಂದ್ರೇಗೌಡ ಅವರನ್ನು ಕಳಸದ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಈ ಮೂಲಕ ತಾಲ್ಲೂಕಿನಲ್ಲಿ ಇಬ್ಬರು ನೆರೆ ಸಂತ್ರಸ್ತ ರೈತರು ಆತ್ಮಹತ್ಯೆ ಮಾಡಿಕೊಂಡಂತಾಗಿದೆ. ಸೆ. 10ರಂದು ಕಾರಗದ್ದೆಯ ಕೃಷಿಕ ಚನ್ನಪ್ಪಗೌಡ (62) ತಮ್ಮ ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಚಂದ್ರೇಗೌಡ ಅವರ ಒಂದೂವರೆ ಎಕರೆ ಭತ್ತದ ಗದ್ದೆಯ ಮೇಲೆ ಪ್ರವಾಹದ ನೀರು ಹರಿದು, ಅದರಲ್ಲಿ ಸಂಪೂರ್ಣ ಹೂಳು ತುಂಬಿತ್ತು. ಅಲ್ಲದೆ, ಕಾಫಿತೋಟಕ್ಕೂ ಮಳೆಯಿಂದ ಹಾನಿಯಾಗಿತ್ತು. ಅನಾರೋಗ್ಯದಿಂದಲೂ ಬಳಲುತ್ತಿದ್ದ ಚಂದ್ರೇಗೌಡ ಹಲವೆಡೆ ಸಾಲವನ್ನೂ ಮಾಡಿಕೊಂಡಿದ್ದರು. ಕೃಷಿ ಭೂಮಿಗೆ ಆಗಿದ್ದ ಹಾನಿಯನ್ನು ಕಂಡು, ಸೂಕ್ತ ಪರಿಹಾರವೂ ಸಿಗದೆ ವಿಪರೀತವಾಗಿ ನೊಂದುಕೊಂಡಿದ್ದರು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. 

ಕಳಸ ಬಂದ್‌: ಕಳಸದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ದಿಢೀರ್ ಪ್ರತಿಭಟನೆ ನಡೆಯಿತು. ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತ ಸಮುದಾಯಕ್ಕೆ ಈವರೆಗೂ ಪರಿಹಾರವನ್ನು ಸರ್ಕಾರಗಳು ನೀಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಬಹುತೇಕ ಅಂಗಡಿಗಳು ‌ಬಾಗಿಲು ಮುಚ್ಚಿ ಪ್ರತಿಭಟನೆಗೆ ಬೆಂಬಲ ಸೂಚಿಸಿದವು. ಒಂದೆರಡು ಅಂಗಡಿಗಳ ಮಾಲೀಕರು ಬಾಗಿಲು ಮುಚ್ಚಲು ಒಪ್ಪದ ಕಾರಣಕ್ಕೆ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು