ಬುಧವಾರ, ಸೆಪ್ಟೆಂಬರ್ 22, 2021
29 °C
ಐ.ಜಿ, ಎಂ.ಜಿ ರಸ್ತೆ: ಕಟ್ಟಡಗಳಲ್ಲಿ ಅಗ್ನಿ ಸುರಕ್ಷತಾ ಕ್ರಮ ಮರೀಚಿಕೆ

ಚಿಕ್ಕಮಗಳೂರು: ಬಗಲಿನಲ್ಲಿ ಅಪಾಯದ ಗುಮ್ಮ

ಬಿ.ಜೆ.ಧನ್ಯಪ್ರಸಾದ್‌ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ನಗರದ ಎಂ.ಜಿ ರಸ್ತೆ, ಐ.ಜಿ ರಸ್ತೆ ಸಹಿತ ಪ್ರಮುಖ ರಸ್ತೆಗಳ ಬಹಳಷ್ಟು ಕಟ್ಟಡಗಳಲ್ಲಿ ಅಗ್ನಿ ಸುರಕ್ಷತಾ ಕ್ರಮ ಕೈಗೊಂಡಿಲ್ಲ. ಬಗಲಿನಲ್ಲಿ ಅಪಾಯದ ‘ಗುಮ್ಮ’ನನ್ನು ಇಟ್ಟುಕೊಂಡಂತಾಗಿದೆ.

ಎಂ.ಜಿ ರಸ್ತೆ ಮತ್ತು ಐ.ಜಿ ರಸ್ತೆಗಳು ವಾಣಿಜ್ಯ ವಹಿವಾಟು, ಜನ–ವಾಹನ ಸಂಚಾರ ದಟ್ಟಣೆ ಹೆಚ್ಚು ಇರುತ್ತದೆ. ಈ ರಸ್ತೆಗಳಲ್ಲಿ ಕಟ್ಟಡಗಳು ಒತ್ತೊತ್ತಾಗಿ ಇವೆ. ಕೆಲವು ಅವಸಾನದ ಅಂಚಿನಲ್ಲಿವೆ. ನಡುವೆ ಅಂತರ ಇಲ್ಲ. ಕೆಲವೆಡೆ ಓಣಿಗಳಿವೆ. ಅನೇಕ ಮಳಿಗೆಗಳಲ್ಲಿ ಕಿಟಕಿಗಳೂ ಇಲ್ಲ.

ಐಜಿ ರಸ್ತೆಯ ಟೈರ್‌ ಅಂಗಡಿ, ಎಂ.ಜಿ.ರಸ್ತೆಯ ಬಟ್ಟೆ ಮಳಿಗೆಯಲ್ಲಿ ಈಚೆಗೆ ಅಗ್ನಿ ಅನಾಹುತ ಸಂಭವಿಸಿದೆ. ಅವಘಡದಲ್ಲಿ ವಸ್ತುಗಳು, ಪೀಠೋಪಕರಣ, ಇತ್ಯಾದಿ ಹಾನಿಯಾಗಿವೆ.

‘ಈ ರಸ್ತೆಗಳ ಹಲವಾರು ಕಟ್ಟಡಗಳು ಹಳೆಯವು. ವೈರಿಂಗ್‌ ಮಾಡಿಸಿ ಎಷ್ಟೋ ವರ್ಷಗಳು ಗತಿಸಿವೆ. ವೈರ್‌ ಗೇಜ್‌ ಮೀರಿ ವಿದ್ಯುತ್‌ ಬಳಕೆಯಾದಾಗ ಶಾರ್ಟ್‌ ಸರ್ಕಿಟ್‌, ಒವರ್‌ ಲೋಡ್‌ ಅವಘಡ ಸಂಭವಿಸುತ್ತವೆ’ ಎಂದು ಸಿವಿಲ್‌ ಎಂಜಿನಿಯರ್‌ ಎಂ.ಎ.ನಾಗೇಂದ್ರ ಹೇಳುತ್ತಾರೆ.

‘ನಗರಸಭೆ ಮತ್ತು ಅಗ್ನಿಶಾಮಕ ದಳದವರು ನಗರದಲ್ಲಿ ಐ.ಜಿ ರಸ್ತೆ, ಎಂ.ಜಿ ರಸ್ತೆ , ಮಾರುಕಟ್ಟೆ ರಸ್ತೆ ಮೊದಲಾದ ರಸ್ತೆಗಳ ಕಟ್ಟಡಗಳ ಸಮೀಕ್ಷೆ ಮಾಡಬೇಕು. ಕಟ್ಟಡಗಳ ಮೇಲ್ತೊಟ್ಟಿಯಿಂದ (ಓವರ್‌ಹೆಡ್‌ ಟ್ಯಾಂಕ್‌) ಮಳಿಗೆಗಳಿಗೆ ಪೈಪ್‌ಲೈನ್‌ ಮಾಡುವಂತೆ ಮಾಲೀಕರಿಗೆ ಖಡಕ್‌ ಸೂಚನೆ ನೀಡಬೇಕು. ಶಾರ್ಟ್‌ ಸರ್ಕಿಟ್‌, ಓವರ್‌ ಲೋಡ್‌ ಆಗುವುದನ್ನು ತಪ್ಪಿಸಲು ಸ್ಟಾಬಿಲೈಸಿಂಗ್‌ ಘಟಕ ಅಳವಡಿಸಬೇಕು. ಗುಣಮಟ್ಟ ನಿಗಾಕ್ಕೆ (ಕ್ವಾಲಿಟಿ ಕಂಟ್ರೋಲ್‌) ಕ್ರಮ ವಹಿಸಬೇಕು’ ಎಂದು ಅವರು ಸಲಹೆ ನೀಡುತ್ತಾರೆ.

ಕಟ್ಟಡಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ನಿಯಮ ಪಾಲನೆಯಾಗಿಲ್ಲ. ಕೆಲ ಅಂಗಡಿಗಳಲ್ಲಿ ಅಗ್ನಿ ನಂದಕಗಳನ್ನೂ(ಎಕ್ಸ್‌ಟಿಂಗಿಶರ್‌) ಅಳವಡಿಸಿಲ್ಲ. ನಿಯಮಗಳನ್ನು ಗಾಳಿಗೆ ತೂರಲಾಗಿದೆ.

‘ಈ ರಸ್ತೆಗಳ ಕಟ್ಟಡಗಳಲ್ಲಿ ಮನೆ, ಅಂಗಡಿ ಎರಡೂ ಇರುತ್ತವೆ. ಪ್ರವೇಶ ಬಾಗಿಲು ಬಿಟ್ಟರೆ ಹಿಂದೆ, ನಿರ್ಗಮನಕ್ಕೆ ಬೇರೆ ಕಡೆ ದ್ವಾರವೇ ಇರಲ್ಲ. ಕಿಟಕಿಯೂ ಇರಲ್ಲ. ಮಳಿಗೆಗಳಲ್ಲಿ ಅಲಂಕಾರಿಕ ಲೈಟುಗಳ ಬಳಕೆ ಹೆಚ್ಚಾಗಿದೆ. ವಸ್ತುಗಳನ್ನು ಅತೀವವಾಗಿ ತುಂಬಿರುತ್ತಾರೆ. ಅಗ್ನಿ ಆಕಸ್ಮಿಕಗಳು ಸಂಭವಿಸಿದಾಗ ಕಾರ್ಯಾಚರಣೆ ಮಾಡುವುದೂ ಸವಾಲು’ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕೆ.ಪಿ.ಶಶಿಧರ್‌ ತಿಳಿಸಿದರು.

‘ಬಹುತೇಕ ಕಟ್ಟಡದವರು ಅಗ್ನಿಶಾಮಕ ಇಲಾಖೆ ನಿರಾಕ್ಷೇಪಣೆ ಪತ್ರವನ್ನು (ಎನ್‌ಒಸಿ) ಪಡೆದಿಲ್ಲ. ಈ ಬಗ್ಗೆ ನಗರಸಭೆಗೆ ಎರಡು ಪತ್ರ ಬರೆದಿದ್ದೇವೆ, ಸಮಸ್ಯೆ ಗಮನಕ್ಕೆ ತಂದಿದ್ದೇವೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು