ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನು ಕೃಷಿಗೆ ಬೇಕು ಉತ್ತೇಜನದ ‘ಟಾನಿಕ್‌’

ಕಾಫಿನಾಡಿನ ಮೀನುಗಾರರ ಬದುಕು– ಬವಣೆ l ಸರ್ಕಾರದ ನೆರವಿಗೆ ಕೋರಿಕೆ
Last Updated 26 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ಇಲ್ಲದಿರುವುದು, ಶೈತ್ಯಾಗಾರದ ಕೊರತೆ, ಮಧ್ಯವರ್ತಿಗಳ ಹಾವಳಿಯಿಂದಾಗಿ ಮೀನುಗಾರರು ಬವಣೆ ಅನುಭವಿಸುವಂತಾಗಿದೆ. ಮೀನುಗಾರಿಕೆಗೆ ಉತ್ತೇಜನದ ‘ಟಾನಿಕ್‌’ ಬೇಕಿದೆ.

ಜಿಲ್ಲೆಯಲ್ಲಿ ಸುಮಾರು ಒಂಬತ್ತು ಸಾವಿರ ಮಂದಿ ಜೀವನೋಪಾಯಕ್ಕೆ ಮೀನುಗಾರಿಕೆ ಅವಲಂಬಿಸಿದ್ದಾರೆ. ಜಲಾಶಯ, ಕೆರೆಕಟ್ಟೆ, ಹೊಳೆ, ಚೆಕ್‌ ಡ್ಯಾಂ, ಕೃಷಿ ಹೊಂಡ ಮೊದಲಾದ ಜಲಮೂಲ ಗಳಲ್ಲಿ ಮೀನು ಕೃಷಿಯಲ್ಲಿ ತೊಡಗಿದ್ದಾರೆ.

ಮೀನು ಸಾಕಾಣಿಕೆಗೆ ಕೆರೆಗಳ ಹರಾಜು ಪ್ರಕ್ರಿಯೆಯಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ದ್ವೇಷ
ರಾಜಕೀಯ ಮಾಡುತ್ತಾರೆ. ಹೆಚ್ಚು ಬೇಡಿಕೆ ಇರುವ ‘ಕಟ್ಲಾ’ ತಳಿ ಮರಿಗಳನ್ನು ಸಾಕಷ್ಟು ಒದಗಿಸುತ್ತಿಲ್ಲ. ದಲ್ಲಾಳಿಗಳು ಮೀನುಗಾರರಿಂದ ಕಡಿಮೆ ದರಕ್ಕೆ ಮೀನುಗಳನ್ನು ಖರೀದಿಸಿ ಹೊರ ರಾಜ್ಯಗಳಿಗೆ ಸಾಗಿಸಿ ಲಾಭ ಮಾಡಿಕೊಳ್ಳುತ್ತಾರೆ. ಇಲ್ಲಿ ವ್ಯವಸ್ಥಿತ ಮಾರುಕಟ್ಟೆ ಇಲ್ಲ. ಲಾಕ್‌ಡೌನ್‌, ಕೋವಿಡ್‌
ಬಿಕ್ಕಟ್ಟಿನಲ್ಲೂ ಸರ್ಕಾರ ಯಾವುದೇ ನೆರವು ನೀಡಿಲ್ಲ ಎಂದು ಮೀನು ಕೃಷಿಕರು ಸಂಕಷ್ಟ ತೋಡಿಕೊಳ್ಳುತ್ತಾರೆ.

‘ಗೌರಿ’, ‘ಕಟ್ಲಾ’, ‘ರೋಹು’, ‘ಮೃಗಾಲ’, ‘ಗೆಂಡೆ’, ‘ಹುಲ್ಲು ಗೆಂಡೆ’, ‘ಬೆಳ್ಳಿ ಗೆಂಡೆ’ ಮೊದಲಾದ ತಳಿ ಮೀನುಗಳನ್ನು ಸಾಕುತ್ತಾರೆ. ಕಾಫಿನಾಡಿನ ಜಲಾಶಯ (ಭದ್ರಾ ಹಿನ್ನೀರು, ಜಂಬದಹಳ್ಳ), ಹೊಳೆ ಮೀನುಗಳಿಗೆ ಬೇಡಿಕೆ ಹೆಚ್ಚು ಇದೆ.

ಚಿಕ್ಕಮಗಳೂರು, ತರೀಕೆರೆ, ಕಡೂರು ತಾಲ್ಲೂಕುಗಳಲ್ಲಿ 7 ಮೀನುಗಾರಿಕೆ ಸಹಕಾರ ಸಂಘಗಳು ಇವೆ. ಈ ಸಂಘಗಳಲ್ಲಿ 4,265 ಸದಸ್ಯರು ಇದ್ದಾರೆ. ಎನ್‌.ಆರ್‌.ಪುರ, ಮೂಡಿಗೆರೆ, ಶೃಂಗೇರಿ, ಕೊಪ್ಪಗದಲ್ಲಿ ಮೀನುಗಾರಿಕೆ ಚಟುವಟಿಕೆಗಳು ಇವೆ. ಸಂಘಗಳು ಇಲ್ಲ. 7 ತಾಲ್ಲೂಕು ಮಟ್ಟದ ಮೀನುಮರಿ ಪಾಲನಾ ಕೇಂದ್ರಗಳು ಇವೆ. ಈ ಕೇಂದ್ರಗಳಲ್ಲಿ 27 ಲಕ್ಷ ಮೀನು ಮರಿಗಳನ್ನು ಪಾಲನೆ
ಮಾಡಿ ಮೀನು ಕೃಷಿಕರಿಗೆ ವಿತರಿಸಲಾಗಿದೆ. ಕೆರೆ, ಜಲಾಶಯ, ಹೊಂಡಗಳಲ್ಲಿ ಬಿಟ್ಟು ಪಾಲನೆ ಮಾಡಲಾಗುತ್ತಿದೆ. ಈ ವರ್ಷ ಜಿಲ್ಲೆಯಲ್ಲಿ ಉತ್ತಮ ವಾಗಿ ಮಳೆಯಾಗಿದೆ. ಬಹುತೇಕ ಜಲಮೂಲಗಳಲ್ಲಿ ನೀರು ಇದೆ. ಮೀನು ಕೃಷಿ ಚಟುವಟಿಕೆ ಚುರುಕುಗೊಂಡಿವೆ.

ಕೆರೆಕಟ್ಟೆ, ಹೊಂಡಗಳಲ್ಲಿ ಹೂಳು ತೆಗೆಸಿ ಮೀನು ಸಾಕಾಣಿಕೆಗೆ ಪೂರಕ
ವಾಗಿಸಬೇಕು. ಮೀನುಗಾರಿಕೆ ಬಗ್ಗೆ ಮೀನುಗಾರರಿಗೆ ತರಬೇತಿ ನೀಡ ಬೇಕು. ಮೀನು ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಉತ್ತೇಜನ ನೀಡಬೇಕು ಎಂಬುದು ಮೀನುಗಾರರ ಕೋರಿಕೆ.

‘ಮೀನು ಮಾರುಕಟ್ಟೆ ಪ್ರಗತಿಯಲ್ಲಿ’

ಜಿಲ್ಲೆಯ ಎನ್‌.ಆರ್‌.ಪುರದಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣ ಹಂತದಲ್ಲಿದೆ. ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಗುರುಚನ್ನ ಬಸವಣ್ಣ ತಿಳಿಸಿದರು.

‘ಮೀನುಗಾರರು ‘ಪ್ರಧಾನ ಮಂತ್ರಿ ಮತ್ಸ ಸಂಪದ ಯೋಜನೆ’ಯಡಿ ನೆರವು ಪಡೆದುಕೊಳ್ಳಲು ಅವಕಾಶ ಇದೆ. ಅಲಂಕಾರಿಕ ಮೀನು ಸಾಕಾಣಿಕೆ ಘಟಕ, ಮೀನುಗಳ ಹ್ಯಾಚರಿ ಕೇಂದ್ರಗಳ ಸ್ಥಾಪನೆ, ಮೀನು ಕೃಷಿ ಕೊಳಗಳ ನಿರ್ಮಾಣ ಮೊದಲಾದವಕ್ಕೆ ನೆರವು ನೀಡಲಾಗುತ್ತದೆ’ ಎಂದು ತಿಳಿಸಿದರು.

‘ಮೀನುಗಾರಿಕೆ ಇಲಾಖೆಯಿಂದ ಜಿಲ್ಲೆಯ ಹಲವು ಮೀನುಗಾರರಿಗೆ ಬಲೆ, ತೆಪ್ಪ, ಹರಿಗೋಲು, ದ್ವಿಚಕ್ರ ವಾಹನಕ್ಕೆ ಸಹಾಯಧನ (₹ 10,000), ಮೀನುಗಾರಿಕೆ ಸಲಕರಣೆ ಕಿಟ್‌ ಮೊದಲಾದವನ್ನು ನೀಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT