ಬುಧವಾರ, ಅಕ್ಟೋಬರ್ 21, 2020
21 °C
ಚನ್ನಡ್ಲು ಗ್ರಾಮಸ್ಥರ ದುಗುಡ

ಕಳಸ: ಅತಿವೃಷ್ಟಿಯಿಂದ ಹಾನಿ; ಬಗೆಹರಿಯದ ಪುನರ್ವಸತಿ ಗೊಂದಲ

ರವಿ ಕೆಳಂಗಡಿ Updated:

ಅಕ್ಷರ ಗಾತ್ರ : | |

Prajavani

ಕಳಸ: ಕಳೆದ ಮಳೆಗಾಲದಲ್ಲಿ ಭೂಕುಸಿತದಿಂದ ಬಹುತೇಕ ಮನೆ, ಕೃಷಿ ನಾಶಗೊಂಡಿದ್ದ ಚನ್ನಡ್ಲು ಗ್ರಾಮದ ನಿವಾಸಿಗಳು ಅವೈಜ್ಞಾನಿಕ ಪುನರ್ವಸತಿ ಬಗ್ಗೆ ಅಪಸ್ವರ ಎತ್ತಿದ್ದಾರೆ.

ಚನ್ನಡ್ಲು ಗ್ರಾಮದ ಎಲ್ಲ 22 ಮನೆಗಳನ್ನು ಸ್ಥಳಾಂತರ ಮಾಡುವ ಬಗ್ಗೆ ಜಿಲ್ಲಾಡಳಿತ ಕಳೆದ ವರ್ಷ ನಿರ್ಧರಿಸಿತ್ತು. ಅದಕ್ಕಾಗಿ ಕಳಸ ಗ್ರಾಮ ಪಂಚಾಯಿತಿಯ ಕುಂಬಳಡಿಕೆಯ ಸರ್ವೆ ನಂಬರ್ 153ರಲ್ಲಿ 5 ಎಕರೆ ಜಮೀನನ್ನು ಮೀಸ ಲಿಡಲಾಗಿತ್ತು. ಆದರೆ, ಕೆಲ ಸಂತ್ರಸ್ತರು ತಮಗೆ ಪುನರ್ವಸತಿ ಬೇಡ ಎಂದು ಆರಂಭದಲ್ಲೇ ಪಟ್ಟು ಹಿಡಿದಿದ್ದರು. ಉಳಿದ ಸಂತ್ರಸ್ತರಿಗೆಂದು ಆ ಪ್ರದೇಶದಲ್ಲಿ ನಿವೇಶನಗಳನ್ನು ಗುರುತಿಸುವ ಕೆಲಸ ಜೂನ್ ವೇಳೆಗೆ ಬಹುತೇಕ ಮುಗಿದಿತ್ತು.

ಚನ್ನಡ್ಲು ಗ್ರಾಮದಿಂದ 15 ಕಿ.ಮೀ ದೂರದ ಕುಂಬಳಡಿಕೆ ಪ್ರದೇಶದಲ್ಲಿ ನಿವೇಶನ ನೀಡುತ್ತಿರುವ ಬಗ್ಗೆ ಮೊದಲಿನಿಂದಲೂ ಸಂತ್ರಸ್ತರಲ್ಲಿ ವಿರೋಧ ಇತ್ತು. ಇದೀಗ ಆ ವಿರೋಧ ಬಲವಾಗಿದ್ದು, ನೆರೆ ನಿರಾಶ್ರಿತರ ಸಮಿತಿ ಎಂಬ ನೋಂದಾಯಿತ ಸಂಘಟನೆ ರೂಪಿಸಲಾಗಿದೆ. ಈ ಸಮಿತಿಯು ಚನ್ನಡಲು ಗ್ರಾಮದ ಎಲ್ಲ ಸಂತ್ರಸ್ತರನ್ನು ಒಗ್ಗೂಡಿಸಿದ್ದು, ಪರ್ಯಾಯ ಜಮೀನಿಗಾಗಿ ಹೋರಾಟ ಆರಂಭಿಸಿದೆ.

‘ಕಳೆದ ವರ್ಷ ಚನ್ನಡ್ಲು ಗ್ರಾಮದ ಭೂಕುಸಿತದ ನಂತರ ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಿರುವ ಕುಟುಂಬಗಳಿಗೆ ಸರ್ಕಾರವು ಈವರೆಗೆ ಬಾಡಿಗೆ ನೀಡಿಲ್ಲ. ಕುಂಬಳಡಿಕೆಯಲ್ಲಿ ಗುರುತಿಸಲಾದ ನಿವೇಶನದಲ್ಲಿ ನೀರು, ರಸ್ತೆ ಮುಂತಾದ ಮೂಲಸೌಲಭ್ಯವೇ ಇಲ್ಲ. ಅಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ಬದುಕುವುದಾದರೂ ಹೇಗೆ’ ಎಂದು ಚನ್ನಡ್ಲಿನ ನಿರಾಶ್ರಿತರು ಆಕ್ರೋಶದಿಂದ ಪ್ರಶ್ನಿಸುತ್ತಾರೆ.

‘ದೂರದ ಮಾವಿನಕೆರೆ ಗ್ರಾಮದ ಬದಲು ಸಮೀಪದ ಇಡಕಿಣಿ ಗ್ರಾಮದ ಸರ್ವೆ ನಂಬರ್ 129ರ ಹಟ್ಲ ಅಥವಾ ಓಡಿನಕುಡಿಗೆ ಪ್ರದೇಶದಲ್ಲಿ ಕಂದಾಯ ಭೂಮಿ ಇದೆ. ಅಲ್ಲೇ ನಿವೇಶನ ನೀಡಬೇಕು. ನಮ್ಮ ಕೃಷಿ ಜಮೀನಿಗೆ ಅದು ಹತ್ತಿರವೂ ಆಗುತ್ತದೆ’ ಎಂದು ಗ್ರಾಮದ ಯುವಕ ಅವಿನಾಶ್ ಒತ್ತಾಯಿಸುತ್ತಾರೆ.

ತಮ್ಮ ಬೇಡಿಕೆ ಈಡೇರಿಸದಿದ್ದರೆ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕಾರ ಹಾಕುವುದಾಗಿಯೂ ಗ್ರಾಮಸ್ಥರು ಎಚ್ಚರಿಸುತ್ತಾರೆ. ಚನ್ನಡ್ಲು ಗ್ರಾಮದ ಸ್ಥಳಾಂತರದ ಬಗ್ಗೆ ಕಂದಾಯ ಇಲಾಖೆ ಸೂಕ್ತ ತೀರ್ಮಾನ ಮಾಡದಿದ್ದರೆ ಆ ಗ್ರಾಮದಲ್ಲಿ ಸರ್ಕಾರದ ವಿರೋಧಿ ಭಾವನೆ ಮೂಡಬಹುದು ಎಂಬ ಗ್ರಾಮಸ್ಥರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು