ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣಿಝರಿಯಲ್ಲಿ ಗಾಜಿನ ಸೇತುವೆ: ಪ್ರವಾಸೋದ್ಯಮ ಇಲಾಖೆಯಿಂದ ಮಹತ್ವದ ಯೋಜನೆ ಪ್ರಸ್ತಾವ

ಪ್ರವಾಸೋದ್ಯಮ ಇಲಾಖೆಯಿಂದ ಮಹತ್ವದ ಮೊದಲ ಯೋಜನೆಗೆ ಪ್ರಸ್ತಾವ
Published 18 ಆಗಸ್ಟ್ 2023, 23:16 IST
Last Updated 18 ಆಗಸ್ಟ್ 2023, 23:16 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಮುಳ್ಳಯ್ಯನಗಿರಿ ಮೇಲಿನ ಸಂಚಾರ ದಟ್ಟಣೆ ಕಡಿಮೆ ಮಾಡಲು, ಬೇರೆ ಸ್ಥಳಗಳಿಗೂ ಪ್ರವಾಸಿಗರು ಹೋಗುವಂತೆ ಮಾಡಲು ಜಿಲ್ಲಾಡಳಿತ ಹಲವು ಯೋಜನೆಗಳನ್ನು ರೂಪಿಸುತ್ತಿದೆ. ಪಶ್ಚಿಮ ಘಟ್ಟದ ಅಂಚಿನಲ್ಲಿರುವ ರಾಣಿಝರಿ ವ್ಯೂವ್ ಪಾಯಿಂಟ್ ವೀಕ್ಷಿಸಲು ರಾಜ್ಯದಲ್ಲೇ ಮೊದಲ ಗಾಜಿನ ಸೇತುವೆ ನಿರ್ಮಿಸಲು ಪ್ರವಾಸೋದ್ಯಮ ಇಲಾಖೆ ಯೋಜನೆ ರೂಪಿಸಿದೆ.

ಮೂಡಿಗೆರೆ ತಾಲ್ಲೂಕಿನ ಅಂಚಿನಲ್ಲಿರುವ ಈ ಅದ್ಭುತ ಪ್ರವಾಸಿ ತಾಣಕ್ಕೆ ‘ರಾಣಿಝರಿ ಕೊನೆ ಅಂಚು’ ಎಂದೇ ಹೆಸರು. ಸುಂಕಸಾಲೆ ಗ್ರಾಮದ ಸಮೀಪ ಇರುವ ಈ ಜಾಗದಲ್ಲಿನ ಪ್ರಪಾತದ ಮೇಲ್ಭಾಗ ಚಿಕ್ಕಮಗಳೂರು ಜಿಲ್ಲೆಗೆ ಸೇರಿದರೆ, ಕೆಳಭಾಗ ದಕ್ಷಿಣ ಕನ್ನಡ ಜಿಲ್ಲೆಗೆ ಸೇರುತ್ತದೆ. ಪಶ್ಚಿಮಘಟ್ಟ ಆರಂಭದ ಘಟ್ಟವೂ ಇದೇ ಆಗಿದ್ದು, ಕರಾವಳಿ ಕಡೆಯಿಂದ ಬರುವ ಮೋಡಗಳನ್ನು ತಡೆಯುವ ಮೊದಲ ಶಿಖರ ಇದು. ಸುಮಾರು ಒಂದು ಕಿಲೋ ಮೀಟರ್‌ನಷ್ಟು ಪ್ರಪಾತದ ಮೇಲಿರುವ ತುತ್ತ ತುದಿಯಲ್ಲಿ ಪ್ರಕೃತಿಯ ಸೊಬಗು ಹೊದ್ದಿರುವ ರಮಣೀಯವಾದ ಸ್ಥಳ ಇದೆ.

ಸಮೀಪದಲ್ಲೇ ಇರುವ ಬಲ್ಲಾಳರಾಯನದುರ್ಗ ಕೋಟೆ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದರೆ, ರಾಣಿ ಝರಿ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ಆದ್ದರಿಂದ ಅಷ್ಟೇನು ಪ್ರಚಾರಕ್ಕೆ ಬಂದಿಲ್ಲ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಮುಳ್ಳಯ್ಯನಗಿರಿಯಂತೆ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯಬಲ್ಲ ಪ್ರಕೃತಿ ಸೌಂದರ್ಯ ಹೊಂದಿರುವ ಸ್ಥಳ ಇದಾಗಿದೆ. ಕರಾವಳಿ ಕಡೆಯಿಂದ ಬರುವ ಮೋಡಗಳು ಈ ಶಿಖರಕ್ಕೆ ತಗುಲಿ ಮೇಲೆ ಏರುವ ದೃಶ್ಯ ನೋಡುವುದೇ ಸೊಬಗು.

ಈ ಸೊಬಗನ್ನು ಇನ್ನಷ್ಟು ಹತ್ತಿರವಾಗಿಸಲು ‘ರಾಣಿ ಝರಿ’ ವ್ಯೂವ್ ಪಾಯಿಂಟ್‌ ಬಳಿ ಗಾಜಿನ ಸೇತುವೆ ನಿರ್ಮಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. ಈ ಸಂಬಂಧ ಪ್ರಸ್ತಾವ ಸಿದ್ಧಪಡಿಸಿ ಅಧಿಕಾರಿಗಳು ಸರ್ಕಾರಕ್ಕೆ ಕಳುಹಿಸಿದ್ದಾರೆ. ಗಾಜಿನ ಸೇತುವೆ ನಿರ್ಮಿಸುವ ಯೋಜನೆಗೆ ಎಷ್ಟು ವೆಚ್ಚವಾಗಲಿದೆ, ಯಾವ ರೀತಿ ನಿರ್ಮಾಣ ಮಾಡಬಹುದು ಎಂಬುದರ ಸಂಪೂರ್ಣ ವಿವರ ಒಳಗೊಂಡ ಅಂದಾಜು ಪಟ್ಟಿ ತಯಾರಿಸಲು ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಸ್ಥಳೀಯ ಅಧಿಕಾರಿಗಳಿಗೆ ತಿಳಿಸಿದ್ದಾರೆ.

‘ಈ ಯೋಜನೆ ಸಾಕಾರಗೊಂಡರೆ ರಾಣಿ ಝರಿಯು ಚಿಕ್ಕಮಗಳೂರು ಜಿಲ್ಲೆಯ ಮತ್ತೊಂದು ಬಹುಮುಖ್ಯ ಪ್ರವಾಸಿ ತಾಣ ಆಗಲಿದೆ’ ಎಂದು ಅಧಿಕಾರಿಗಳು ವಿವರಿಸುತ್ತಾರೆ.

ಗಾಜಿನ ಸೇತುವೆ ನಿರ್ಮಾಣ ಮಾಡುವುದು ರಾಜ್ಯಕ್ಕೆ ಹೊಸತು. ಕೊಡಗಿನಲ್ಲಿ ಮೊದಲ ಗಾಜಿನ ಸೇತುವೆ ಇದೆ. ಆದರೆ, ಅದು ಖಾಸಗಿ ಜಾಗದಲ್ಲಿದ್ದು, ಖಾಸಗಿ ವ್ಯಕ್ತಿಗಳೇ ನಿರ್ಮಿಸಿಕೊಂಡಿದ್ದಾರೆ. ಕೇರಳದಲ್ಲೂ ಈ ರೀತಿಯ ಸೇತುವೆಗಳಿವೆ. ಇವೆಲ್ಲವನ್ನೂ ಪರಿಶೀಲಿಸಿ ರಾಣಿ ಝರಿಯಲ್ಲಿ ಗಾಜಿನ ಸೇತುವೆ ನಿರ್ಮಿಸಲು ಯೋಚಿಸಲಾಗಿದೆ. ಈ ಸಂಬಂಧ ಅಧ್ಯಯನ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಮೂಡಿಗೆರೆ ತಾಲ್ಲೂಕಿನ ಸುಂಕಸಾಲೆ ಸಮೀಪ ಇರುವ ‘ರಾಣಿ ಝರಿ’ 
ಮೂಡಿಗೆರೆ ತಾಲ್ಲೂಕಿನ ಸುಂಕಸಾಲೆ ಸಮೀಪ ಇರುವ ‘ರಾಣಿ ಝರಿ’ 

ಬಲ್ಲಾಳರಾಯನದುರ್ಗ, ಬಂಡಾಜೆ ಜಲಪಾತಕ್ಕೆ ಸಮೀಪ

ಬಲ್ಲಾಳರಾಯನದುರ್ಗ ಕೋಟೆ ಮತ್ತು ಬಂಡಾಜೆ ಜಲಪಾತಕ್ಕೆ ಸಮೀಪದಲ್ಲೇ ಈ ರಾಣಿ ಝರಿ ಇದೆ. ಚಾರಣ ಹೋಗುವವರು ಬಳ್ಳಾರಾಯನದುರ್ಗದ ಕೋಟೆ ಮೂಲಕ ಬಂಡಾಜೆ ಜಲಪಾತದ ತನಕ ಹೋಗಿ ಬರುತ್ತಾರೆ.ರಾಣಿ ಝರಿಯಲ್ಲಿ ಗಾಜಿನ ಸೇತುವೆ ನಿರ್ಮಾಣವಾದರೆ ಪ್ರವಾಸಿಗರಿಗೆ ಸಮೀಪದಲ್ಲೇ ಮೂರು ಸ್ಥಳಗಳನ್ನು ವೀಕ್ಷಿಸಲು ಅನುಕೂಲ ಆಗಲಿದೆ ಎನ್ನುತ್ತಾರೆ ಸ್ಥಳೀಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT