ಗುರುವಾರ , ಮೇ 26, 2022
26 °C
ರಸ್ತೆಯ ಬದಿಯ ರಕ್ಷಣಾ ಗೋಡೆ ಕುಸಿತ; ಬೆಳೆ ಹಾನಿ

ವಿವಿಧೆಡೆ ಮಳೆ: ಚಿಕ್ಕಮಗಳೂರು ಸೇರಿದಂತೆ 13 ಜಿಲ್ಲೆಗಳಲ್ಲಿ ‘ಯೆಲ್ಲೊ ಅಲರ್ಟ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಶುಕ್ರವಾರ ಮಳೆಯಾಗಿದೆ. ಗಿರಿಶ್ರೇಣಿಯ ಕವಿಕಲ್‌ಗಂಡಿ ಸನಿಹದಲ್ಲಿ ರಸ್ತೆಯ ಬದಿಯ ರಕ್ಷಣಾ ಗೋಡೆ ಕುಸಿದಿದೆ.

ಸಂಜೆ ಮತ್ತು ರಾತ್ರಿ ಮಳೆ ಸುರಿಯಿತು. ಗುಡುಗು ಮಿಂಚಿನ ಆರ್ಭಟ ಇತ್ತು. ನಗರದ ರಾಮನಹಳ್ಳಿ, ಹನುಮಂತನಗರದಲ್ಲಿ ಮೋರಿ ನೀರು ರಸ್ತೆಯಲ್ಲಿ ಹರಿದಿದೆ.

ನಗರದ ವಿವಿಧೆಡೆ ಕಾಮಗಾರಿ ರಸ್ತೆ ಅಗೆದು ತಗ್ಗು, ಗುಂಡಿಯಾಗಿರುವ ಜಾಗಗಳಲ್ಲಿ ನೀರು ಆವರಿಸಿದೆ. ಮಣ್ಣಿನ ರಸ್ತೆಗಳು ರಾಡಿಯಾಗಿದೆ. ಓಡಾಟ ಪಡಿಪಾಟಲಾಗಿದೆ.

ಅಲ್ಲಂಪುರ, ಕೈಮರ, ಅತ್ತಿಗುಂಡಿ, ಗಿರಿಶ್ರೇಣಿ ಸಹಿತ ವಿವಿಧೆಡೆಗಳಲ್ಲಿ ಮಳೆಯಾಗಿದೆ. ಝರಿ, ಹಳ್ಳಗಳಲ್ಲಿ ಹರಿವು ತುಸು ಹೆಚ್ಚಾಗಿದೆ.

ಬಿಳ್ಳೂರು– 5.8, ಕೊಟ್ಟಿಗೆಹಾರ– 5.6, ವಸ್ತಾರೆ– 4.9 , ಅತ್ತಿಗುಂಡಿ– 4.8, ಮೂಡಿಗೆರೆ– 4, ಬಸ್ರೀಕಟ್ಟೆ– 2.7, ಚಿಕ್ಕಮಗಳೂರು– 2.2, ಬಾಳೆಹೊನ್ನೂರು 2 ಸೆಂ.ಮೀ ಮಳೆಯಾಗಿದೆ.

ಬಿರುಸಿನ ಮಳೆ

ಕೊಪ್ಪ: ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವೆಡೆ ಶುಕ್ರವಾರ ಗುಡುಗು ಸಹಿತ ಬಿರುಸು ಮಳೆಯಾಗಿದೆ.

ಬೆಳಿಗ್ಗೆಯಿಂದ ಬಿಸಿಲಿನ ವಾತಾವಣ ಇತ್ತು. ಮಧ್ಯಾಹ್ನ 2.30ರ ಹೊತ್ತಿಗೆ ಗುಡುಗು ಪ್ರಾರಂಭವಾಯಿತು, ಅರ್ಧ ತಾಸು ಜೋರಾಗಿ ಮಳೆ ಸುರಿಯಿತು. ಈ ವೇಳೆ ಗ್ರಾಮೀಣ ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗಿತ್ತು.

ಗುರುವಾರ ರಾತ್ರಿ ಹೊತ್ತಿನಲ್ಲಿ ಮಳೆ ಸುರಿದಿತ್ತು. ಪಟ್ಟಣ ಪ್ರದೇಶದಲ್ಲಿ 24 ತಾಸುಗಳಲ್ಲಿ 1.02 ಸೆಂ.ಮೀ. ಮಳೆ ದಾಖಲಾಗಿದೆ. ಅಕಾಲಿಕ ಮಳೆಯಿಂದ ಅಡಿಕೆ ಕೃಷಿಗೆ ಅಡಚಣೆಯಾಗಿದೆ.

ಕೊಟ್ಟಿಗೆಹಾರ: ಬಣಕಲ್ ಹೋಬಳಿಯ ಹಾರ್‍ಗೋಡು ಗ್ರಾಮದಲ್ಲಿ ಶಶಿ ಮತ್ತು ರತ್ನಾ ವಾಸವಿದ್ದ ಮನೆಗೆ ಗುರುವಾರ ಸಂಜೆ ಸಿಡಿಲು ಬಡಿದು ವಿದ್ಯುತ್ ಸಾಧನಗಳು ಹಾಗೂ ಉಪಕರಣಗಳು ಸುಟ್ಟು ಕರಕಲಾಗಿವೆ. ಸಿಡಿಲಿನ ಹೊಡೆತಕ್ಕೆ ಎಲ್ಲಾ ವೈಯರ್‌ ಸುಟ್ಟು ಬೆಂಕಿ ಹೊತ್ತಿಕೊಂಡು ಅಪಾರ ನಷ್ಟ ಸಂಭವಿಸಿದೆ.

ಸ್ಥಳಕ್ಕೆ ಫಲ್ಗುಣಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ನೇತ್ರಾ ಹರೀಶ್, ಸದಸ್ಯರಾದ ಲೋಹಿತ್, ಸತೀಶ್, ರಮ್ಯಾ, ಕೋಮಲ, ಗ್ರಾಮ ಲೆಕ್ಕಾಧಿಕಾರಿ ನಮಿತಾ  ಭೇಟಿ ನೀಡಿದರು.

ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಅ.23 ಮತ್ತು 24ರಂದು ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಮುಂಗಾರು ಮಾರುತ ಗಳ ಪ್ರಭಾವ ತಗ್ಗಲಿದ್ದು, ಅ.26ರಿಂದ ಹಿಂಗಾರು ಪ್ರವೇಶಿಸುವ ಲಕ್ಷಣಗಳು ಕಂಡುಬಂದಿವೆ. ಆದರೆ, ದಕ್ಷಿಣ ಒಳನಾಡಿನಲ್ಲಿ ಮುಂದಿನ ಎರಡು ದಿನ ಮಳೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಇಲಾಖೆ ಮಾಹಿತಿ ನೀಡಿದೆ.

ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಾಮರಾಜನಗರ, ಬೆಂಗಳೂರು ನಗರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳು ಇರುವುದರಿಂದ ‘ಯೆಲ್ಲೊ ಅಲರ್ಟ್‌’ ಘೋಷಿಸಲಾಗಿದೆ.

ಕರಾವಳಿ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಹೆಚ್ಚಾಗಿ ಇರಲಿದ್ದು, ಕೆಲವೆಡೆ ಸಾಧಾರಣ ಮಳೆಯಾಗಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು