ಭಾನುವಾರ, ಸೆಪ್ಟೆಂಬರ್ 27, 2020
28 °C
ಕಾಲು ಜಾರಿ ಹೊಂಡಕ್ಕೆ ಬಿದ್ದು ಒಬ್ಬರು ಸಾವು

ಕಾಫಿನಾಡು: ಮುಂದುವರಿದ ಗಾಳಿ–ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ– ಗಾಳಿ ಮುಂದುವರಿದಿದೆ. ಮೂಡಿಗೆರೆ, ಕಳಸ, ಎನ್‌.ಆರ್‌.ಪುರ, ಶೃಂಗೇರಿ ಭಾಗದಲ್ಲಿ ವೃಕ್ಷಗಳು, ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ. ಕೆಲವೆಡೆ ಸಂಚಾರಕ್ಕೆ ಅಡಚಣೆಯಾಗಿದೆ. ಬಾಳೆಹೊನ್ನೂರು ಬಳಿಯ ಅಂಡವಾನೆ ಗ್ರಾಮದ ಶಂಕರ್‌ (26) ಎಂಬಾತ ಗುರುವಾರ ಬೆಳಿಗ್ಗೆ ಗದ್ದೆ ಬದಿಯಲ್ಲಿ ಸಾಗುವಾಗ ಕಾಲುಜಾರಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ಧಾರೆ. 

ಮೂಡಿಗೆರೆ, ಕೊಪ್ಪ, ನರಸಿಂಹರಾಜಪುರ ಸಹಿತ ವಿವಿಧೆಡೆಗಳಲ್ಲಿ ವಿದ್ಯುತ್‌ ಪೂರೈಕೆ ಕಡಿತವಾಗಿದೆ. ಮಳೆ ಗಾಳಿಗೆ 200ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಮುರಿದು ಬಿದ್ದಿವೆ. ಮರಗಳು ಮನೆ ಮೇಲೆ ಬಿದ್ದು 100ಕ್ಕೂ ಹೆಚ್ಚು ಮನೆಗಳು ಹಾನಿಯಾಗಿವೆ.

ಕೊಪ್ಪ, ಮೂಡಿಗೆರೆ, ನರಸಿಂಹರಾಜಪುರ, ಶೃಂಗೇರಿ, ಭಾಗದಲ್ಲಿ ಹೊಳೆ ನೀರು ನುಗ್ಗಿ ತೋಟಗಳು, ಗದ್ದೆಗಳು ಜಲಾವೃತವಾಗಿವೆ. ಗಾಳಿಗೆ ಅಡಿಕೆ ಮರಗಳು ನೆಲಕ್ಕುರುಳಿವೆ.

ಕೊಟ್ಟಿಗೆಹಾರದಲ್ಲಿ ಒಂದೇ ದಿನ 38.5 ಸೆಂ.ಮೀ ಮಳೆಯಾಗಿದೆ. ಬೀರೂರು ಸಮೀಪ ಗಾಳಿಗೆ ತೆಂಗಿನ ಮರವೊಂದು ವಿದ್ಯುತ್ ಲೇನ್‌ ಮೇಲೆ ಬಿದ್ದು ಐದು ಕಂಬಗಳು ಧರೆಗುರುಳಿವೆ.

ವಿದ್ಯುತ್‌ ಪ್ರವಹಿಸಿ ವ್ಯಕ್ತಿ ಸಾವು: ಕಡೂರು ತಾಲ್ಲೂಕಿನ ಯಗಟಿ ಹೋಬಳಿಯ ಜಕ್ಕನಹಳ್ಳಿಯ ಜಮೀನಿನಲ್ಲಿ ವಿದ್ಯುತ್‌ ತಗುಲಿ ಪರಮೇಶ್ವರಪ್ಪ (38) ಬುಧವಾರ ಮೃತಪಟ್ಟಿದ್ದಾರೆ. ಗಾಳಿಗೆ ವಿದ್ಯುತ್‌ ಲೇನ್‌ ತಂತಿ ತುಂಡಾಗಿ ಬೇಲಿ ಮೇಲೆ ಬಿದ್ದಿದ್ದು, ಆ ಬೇಲಿಯ ತಂತಿ ಸ್ಪರ್ಶಿಸಿದ ಪರಿಣಾಮ ವಿದ್ಯುತ್‌ ಪ್ರವಹಿಸಿ ಸಾವಿಗೀಡಾಗಿದ್ದಾರೆ.

‘ಚಾರ್ಮಾಡಿ–ವಾಹನ ಸಂಚಾರಕ್ಕೆ ಅವಕಾಶ’
ಚಾರ್ಮಾಡಿ ಘಾಟಿ ಮಾರ್ಗದಲ್ಲಿ ಬೆಳಿಗ್ಗೆ 7 ರಿಂದ ರಾತ್ರಿ 7 ಗಂಟೆವರೆಗೆ ವಾಹನ ಸಂಚರಿಸಬಹುದಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಾರ್ಗದಲ್ಲಿ ನಾಲ್ಕೈದು ಕಡೆ ಗುಡ್ಡದ ಮಣ್ಣು ರಸ್ತೆಗೆ ಕುಸಿದಿತ್ತು. ಅದನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಲಾಗಿದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು